ನಿಸಾರ್ ಎಂಬ ಬೆಳಗು..

ಇದು ಬರಿ ಬೆಳಗಲ್ಲೋ ಅಣ್ಣ

ಉಷಾ ರೈ 

ರೇಖೆ: ಜೇಮ್ಸ್ ವಾಜ್ 

। ೨೦೦೬ ರಲ್ಲಿ ನಿಸಾರ್ ಕುರಿತ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನ ।

ಸನ್ಮಾನ್ಯ ಶ್ರೀ ಕೆ. ಎಸ್. ನಿಸಾರ್ ಅಹಮದ್ ಅಂದ ಕೂಡಲೇ ನಮ್ಮ ಮನದ ಪರದೆಯಲ್ಲಿ ಮೂಡಿಬರೋದು ಸದಾ ಸೂಟುದಾರಿಯಾದ ನವಿರು ನಗುವಿನ ನವೋಲ್ಲಾಸದ ಕವಿ. ನವ್ಯಕಾಲದ ಸಮನ್ವಯ ಕವಿ. ಅವರಿಗೆ ಎಪ್ಪತ್ತು ಆಯ್ತೆಂದರೆ ನಂಬುವುದು ಸ್ವಲ್ಪ ಕಷ್ಟ. ಅವರನ್ನು ನೋಡುವಾಗ `ಕುರಿಗಳು ಸಾರ್ ಕುರಿಗಳು’ ಎಂದು ಇಡೀ ಸಮಾಜವನ್ನೇ ಗೇಲಿಮಾಡುವ ಚುರುಕುತನ ಈಗಲೂ ಅವರಲ್ಲಿದೆ ಎಂದೇ ಭಾಸವಾಗುತ್ತದೆ. ಅವರ `ನಿತ್ಯೋತ್ಸವ’ವಂತೂ ಎಷ್ಟು ಜನರ ಬಾಯಲ್ಲಿ ನಲಿದು ಹೃದಯವನ್ನು ಕುಣಿಸಿದೆ ಎನ್ನುವುದಕ್ಕೆ ಲೆಕ್ಕವಿಲ್ಲ. ಅವರ ಕವಿತೆಗಳ ಬಗ್ಗೆ ಬರೆಯುವ ಲೇಖನವಿದಲ್ಲವಾದುದರಿಂದ ಅವರ ಕವಿತೆಗಳ ಬಗ್ಗೆ ಹೆಚ್ಚಿಗೆ ಬರೆಯುವುದು ಅಧಿಕಪ್ರಸಂಗವಾದೀತು. ಈ ಲೇಖನ ಬರೆಯುವ ದೃಷ್ಟಿಯಿಂದ ಅವರ ಗದ್ಯಬರಹದ ಕಡೆಗೆ ಗಮನ ಹರಿಸುವ ಅವಕಾಶ ಒದಗಿ ನನಗೆ ನಿಜವಾಗಿಯೂ ಒಂದು ಹೊಸ ಅನುಭವ ಲಭಿಸಿದೆ.

ಸನ್ಮಾನ್ಯ ಶ್ರೀ ಕೆ. ಎಸ್. ನಿಸಾರ್‌ಅಹಮದ್ ಅವರ ಎಪ್ಪತ್ತನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಅವರನ್ನು ಅಭಿನಂದಿಸುವ ಕೆಲಸವನ್ನು ಅವರ ಅಭಿಮಾನಿಗಳು ಆಯೋಜಿಸಿದ್ದಾರೆ. ಅಭಿನಂದನಾ ಗ್ರಂಥಕ್ಕೆ ಅವರ ಯಾವುದಾದರೂ ಗದ್ಯ ಬರಹದ ಬಗ್ಗೆ ಬರೆದುಕೊಡಿ ಎನ್ನುವ ಪತ್ರ ಸಪ್ನಾಬುಕ್ ಹೌಸಿನಿಂದ ಬಂದಾಗ ನಾನು ಬರೆಯುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕಾರು ಅಪಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡು ಮಲಗಿದ್ದಲ್ಲೇ ಇದ್ದುದರಿಂದ ಆ ಪತ್ರವನ್ನು ಮಡಚಿಟ್ಟಿದ್ದೆ. ಏನಾದರೂ ಚಿಕ್ಕ ಲೇಖನ ಬರೆಯಬೇಕೆನ್ನುವ ಬಯಕೆ ಮನದಲ್ಲಿ ಇದ್ದೇ ಇತ್ತು. ಕಾರಣವಿಷ್ಟೇ. ನಾನು ಕವಿತೆಗಳನ್ನು ಬರೆಯಲು ಪ್ರಾರಂಭಿಸಿದ ಹೊಸದರಲ್ಲಿ ಎಲ್ಲರಿಗೂ ಇರುವಂತೆ ನನಗೂ ಒಂದು ಕವನಸಂಕಲನ ಪ್ರಕಟಿಸುವ ಆಸೆ ಉಂಟಾಗಿತ್ತು. ಸುಮಾರು ೧೯೯೧-೯೨ರಲ್ಲಿ ಎಲ್ಲ ಕವನಗಳನ್ನು ಒಟ್ಟು ಸೇರಿಸಿ ಜನಪ್ರಿಯ ಕವಿಯೊಬ್ಬರಿಗೆ ಮುನ್ನುಡಿ ಬರೆಯಲು ಕೊಟ್ಟಾಗ ಅವರು ನಿರಾಕರಿಸಿದ್ದು ಮಾತ್ರವಲ್ಲದೆ ಒಂದು ರೀತಿಯಲ್ಲಿ ಡಿಸ್ಕರೇಜ್ ಮಾಡಿದ್ದರು. ಹೊಸದಾಗಿ ಬರೆಯುವವರಿಗೆ ಇದೆಲ್ಲ ಅನುಭವಗಳು ಸಾಮಾನ್ಯವೇ ಎನ್ನುವ ಸಮಾಧಾನ ಮಾಡಿಕೊಂಡು ನನಗೇನೇನೂ ಪರಿಚಯವಿಲ್ಲದ ಶ್ರಿ ಕೆ. ಎಸ್. ನಿಸಾರ್‌ಅಹಮದ್ ಅವರ ಹತ್ತಿರ ಹೆದರುತ್ತಲೇ ಕೇಳಿದ್ದೆ. ಅವರು ತುಂಬ ಪ್ರೀತಿಯಿಂದ ಮುನ್ನುಡಿ ಬರೆದುಕೊಟ್ಟು ಪ್ರೋತ್ಸಾಹಿಸಿದಲ್ಲದೆ ಬರೆಯಿರಿ ಇನ್ನಷ್ಟು ಬರೆಯಿರಿ ಮುಂದಿನ ಕವನ ಸಂಕಲನ ಇದಕ್ಕಿಂತ ಚೆನ್ನಾಗಿ ಮೂಡಿಬರಲಿ ಎಂದು ಹಾರೈಸಿದ್ದರು. ಅದು ಅವರ ಸಹೃದಯತೆ. ಅವರು ಅಂದು ನೀಡಿದ ಪ್ರೋತ್ಸಾಹವನ್ನು ನಾನೆಂದೂ ಮರೆಯಲಾರೆ. ಆ ನೆನಪಿನಿಂದಲೇ ಕೃತಜ್ಞತಾ ಪೂರ್ವಕವಾಗಿ ಅವರ ಅಭಿನಂದನ ಗ್ರಂಥಕ್ಕೆ ಏನಾದರೂ ಬರೆಯಲೇ ಬೇಕು ಎಂದನಿಸಿತ್ತು. ಇತ್ತೀಚೆಗೆ ಶ್ರೀ ರಾಜಶೇಖರ್ ಎನ್ನುವವರು ಫೋನಿಸಿ ಬರೆದಿರಾ ಮೇಡಂ? ಎಂದು ವಿಚಾರಿಸಿದಾಗ ನಾನು ನನ್ನ ಪರಿಸ್ಥಿತಿ ವಿವರಿಸಿ ಯಾವುದಾದರೂ ಒಂದು ಪುಸ್ತಕದ ಬಗ್ಗೆ ಬರೆಯಬೇಕೆಂದು ನನಗೂ ಇಚ್ಛೆಯಿದೆ. ಆದರೆ ಅವರ ಯಾವ ಗದ್ಯ ಪುಸ್ತಕಗಳೂ ನನ್ನಲ್ಲಿಲ್ಲ ಅಂದಿದ್ದೆ. ಅವರು ಕಳುಹಿಸುವುದಾಗಿ ಹೇಳಿದ್ದರೂ ಕಳುಹಿಸಿರಲಿಲ್ಲ. ಸ್ವಲ್ಪ ಕುಳಿತು ಬರೆಯಲು ಸಾಧ್ಯವಾದಾಗ ನಾನೇ ಶ್ರೀ ನಿಸಾರ್‌ಅಹಮದ್ ಅವರೊಡನೆ ಯಾವುದಾದರೂ ಒಂದು ಗದ್ಯ ಪುಸ್ತಕ ಕಳುಹಿಸಿಕೊಡಿ ಅದರ ಬಗ್ಗೆ ಬರೆದು ಹಿಂದೆ ಕಳುಹಿಸುವುದಾಗಿ ಹೇಳಿದೆ. ಅವರು “ಇದು ಬರಿ ಬೆಳಗಲ್ಲೋ ಅಣ್ಣ” ಎನ್ನುವ ಅವರ ವಿಮರ್ಶಾ ಸಂಕಲನವನ್ನು ಕಳುಹಿಸಿಕೊಟ್ಟರು. ಈ ಪುಸ್ತಕವನ್ನು ನಾನು ಮೊದಲು ಓದಿರಲಿಲ್ಲ. ನಾನು ವಿಮರ್ಶಕಿಯಲ್ಲದ ಕಾರಣ ವಿಮರ್ಶಾ ಲೇಖನಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಬರೆಯುವುದು ಸ್ವಲ್ಪ ಕಷ್ಟವೆನ್ನುವ ಅರಿವಿನಿಂದಲೇ ಈ ಲೇಖನ ಬರೆಯುವ ಸಾಹಸ ಮಾಡುತ್ತಿದ್ದೇನೆ.

ಎಲ್ಲರಿಗೂ ಶ್ರೀ ಕೆ. ಎಸ್. ನಿಸಾರ್ ಅಹಮದ್ ಅವರು ಕವಿಯಾಗಿಯೇ ಹೆಚ್ಚು ಪರಿಚಿತರಾಗಿರುವುದರಿಂದ ಅವರ `ಮನದೊಂದಿಗೆ ಮಾತುಕತೆ ಬಿಟ್ಟರೆ’ ಬೇರೆ ಗದ್ಯ ಬರಹಗಳು ಅವರ ಕವಿತಾ ಸಂಕಲನಗಳಷ್ಟು ಓದುಗರನ್ನು ಸೆಳೆದವುಗಳಲ್ಲ. ೧೯೮೦ರಲ್ಲಿ ಜ್ಯೋತಿ ಪ್ರಕಾಶನದಿಂದ “ಇದು ಬರಿ ಬೆಳಗಲ್ಲೋ ಅಣ್ಣ” ಕೃತಿ ವಿಮರ್ಶಾಸಂಕಲನ ಎನ್ನುವ ಹಣೆಪಟ್ಟಿಯೊಡನೆ ಪ್ರಕಟವಾದರೂ ಇದರಲ್ಲಿ ವಿಮರ್ಶೆಗಳ ಜೊತೆಗೆ ನಿಸಾರ್‌ಅಹಮದ್ ಅವರ ಕೆಲವು ಚಿಂತನೆಗಳೂ ಸೇರಿವೆ; ಕವಿಯಾಗಿ ಅವರ ಕೆಲವು ವೈಯುಕ್ತಿಕ ಅನುಭವಗಳ ಮಾಹಿತಿಗಳೂ ಇಲ್ಲಿ ಲಭ್ಯವಾಗಿವೆ. ಅವರ ಅನುಭವಗಳ, ಅವರು ಕವಿಯಾಗಿ ದಾಟಿರುವ ಹಂತಗಳ ಬಗ್ಗೆ ಮಾಹಿತಿ ನೀಡುವ ಈ ಲೇಖನಗಳು ನನಗಂತೂ ಬಹಳ ಇಷ್ಟವಾಗಿವೆ.

ಈ ಕೃತಿಯಲ್ಲಿರುವ ಹದಿಮೂರು ಲೇಖನಗಳನ್ನು ನಾಲ್ಕು ವಿಭಾಗ ಮಾಡಿ ಅದಕ್ಕೆ ಹೊಂದುವ ಸುಂದರವಾದ ಹೆಸರುಗಳನ್ನಿಟ್ಟಿದ್ದಾರೆ. ಸ್ವಕೀಯ, ಮಂಥನ, ಅವಲೋಕನ ಮತ್ತು ವಿವೇಚನ. ಹೀಗೆ ಅವರ ಶಬ್ಧ ಭಂಡಾರದ ಶ್ರೀಮಂತಿಕೆಯ ಪರಿಚಯ ಪುಸ್ತಕ ತೆರೆಯುವಾಗಲೇ ಆಗುತ್ತದೆ.

‘ಸ್ವಕೀಯ’ದಲ್ಲಿ ಅವರದ್ದೇ ಅನುಭವಗಳ ನಿವೇದನೆಯಿದೆ. `ತನ್ನ ಜಾಯಮಾನ ಹೇಗೋ ಹಾಗೆಯೆ ಸಾಮಾಜಿಕ, ರಾಜಕೀಯ ಒತ್ತಡಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ತನ್ನ ನಿಲುವನ್ನು ಪರಿಷ್ಕರಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ನಿಂತಿರುವ ಇಂದಿನ ಕವಿಯ ಜವಾಬ್ದಾರಿಯುತ ಆಯ್ಕೆಯ ಬಗ್ಗೆ; ಹಿಂದಿನ ಪ್ರಖ್ಯಾತ ಕವಿಗಳ ಆಯ್ಕೆಯ ಹಿನ್ನೆಲೆಯಲ್ಲಿ ಚರ್ಚಿಸುತ್ತಾ ಯಾವುದೇ ಸನ್ನಿವೇಶದಲ್ಲಿ `ಕವಿ ತನ್ನ ಸ್ವಾಭಿಮಾನ, ಸ್ವಾತಂತ್ರ÷್ಯಗಳನ್ನು ಯಾವತ್ತೂ ಕಾಪಾಡಿಕೊಳ್ಳುತ್ತಾ, ಜೊತೆಗೇ ಸಮಾಜದಲ್ಲಿ ಒಬ್ಬನಾದ ತನ್ನ ಹೊಣೆಗಾರಿಕೆಗಳನ್ನು ಸರ್ವದಾ ನೆನೆಯುತ್ತ ತನ್ನ ಹಾಗೂ ಇತರರ ಹಿತಕ್ಕೆ ಸರ್ವತ್ರ ದುಡಿಯುತ್ತಾ ಸಾಗುವುದು’ಹೇಗೆನ್ನುವುದರ ಬಗ್ಗೆ; ಕವಿಯ ಜವಾಬ್ದಾರಿ ಎನ್ನುವ ಕಿವಿಮಾತನ್ನೂ ಹೇಳುವ `ಕನ್ನಡ ಕಾವ್ಯದ ಭವಿಷ್ಯ’ದ ಬಗ್ಗೆ; `ಒಬ್ಬ ಕವಿ ತನ್ನೆಲ್ಲ ಕವನಗಳ ರಚನೆಯ ಸಮಯದಲ್ಲೂ ಒಂದೇ ಮನಸ್ಥಿತಿಯಲ್ಲಿ, ಒಂದೇ ಹದದಲ್ಲಿ ಇರುತ್ತಾನೆಂದು ಹೇಳಲಾಗದು. ಏಕೆಂದರೆ ಮನಸ್ಸು ಸಚಂಚಲ; ಅವನ ತಹಬಂದಿಗೆ ಮೀರಿದ್ದು’ ಎನ್ನುವ ಸತ್ಯದ ಹಿನ್ನೆಲೆಯಲ್ಲಿ ಪದ್ಯರಚನೆಯ ಕೆಲವೊಂದು ಸಮಯದಲ್ಲಿ ಅವರ ಮನಸ್ಥಿತಿ, ಚಡಪಡಿಕೆಗಳು, ಅವರ ಮೇಲೆ ಪ್ರಭಾವ ಬೀರಿದ ನೈಸರ್ಗಿಕ ಸೌಂದರ್ಯ ಹಾಗೂ ಬದುಕಿನ ಘಟನೆಗಳು ಹೇಗೆ ಅವರನ್ನು ಕಾಡಿಸಿ ಕವಿತೆಯಾಗಿ ಮೂಡಿಬಂದುವು ಎನ್ನುವ ವಿವರಗಳು; ಅವರು ನಂಬಿರುವ ಧರ್ಮ, ಹಾಗೂ ಬರೆಯಬೇಕಾಗಿರುವ ಇನ್ನೊಂದು ಸಂಸ್ಕöÈತಿಯ ಭಾಷೆ ಎರಡರ ನಡುವೆ ಸಮನ್ವಯತೆ ತರುವಲ್ಲಿ ಅವರೆದುರಿಸಿರುವ ಒಳತೋಟಿ, ಜಾಗೃತಿ ಹಾಗೂ ಭಯ, ಇವೆಲ್ಲ ಅನುಭವಗಳನ್ನು ಕಾವ್ಯಮಯವಾಗಿ ಹೇಳಿಕೊಳ್ಳುವ `ಕವಿಯಾಗಿ ನನ್ನ ಅನುಭವ’ ಲೇಖನ; ೧೯೮೦ರವರೆಗೆ ಅಂದರೆ ೧೯೫೫ ರಿಂದ ಸುಮಾರು ಇಪ್ಪತ್ತೆöÊದು ವರುಷಗಳಲ್ಲಿ ಅವರು ಬರೆದ ಕವನಗಳನ್ನು ಅವಲೋಕಿಸಿ, ತಾನು ಕವಿಯಾಗಿ ಬೆಳೆದ ವಿವಿಧ ಹಂತಗಳನ್ನು, ಅವರೆದಿರಿಸಿರುವ ಸಂದೇಹ, ಗುಮಾನಿ, ಚಡಪಡಿಕೆಗಳನ್ನು, `ಹುಮ್ಮಸ್ಸು ವೇಗ ಆರ್ಭಟಗಳಿಂದ ಹೊರಟ ತನ್ನ ಕಾವ್ಯ ಕ್ರಮಿಸಿರುವ ದೂರವನ್ನು, ಅನಿರೀಕ್ಷಿತವಾದ ಏರು ತಗ್ಗುಗಳ ಎದಿರು ಮೂಡಿಸಿಕೊಂಡ ಹುಷಾರಿ ಸಮಾಧಾನಗಳನ್ನು, ತಂಗಿದ ಹಂಗಾಮಿ ನಿಲ್ದಾಣಗಳನ್ನು, ಪುನಶ್ಚೇತನಕ್ಕಾಗಿ ಅಲ್ಲೆಲ್ಲ ಮೈ ಹಿಡಿಸಿಕೊಂಡ ಹೊಸಹೊಸ ಸಂವೇದನೆಗಳ ಇಂಧನವನ್ನು, ಹಾಗೆಯೇ ಮುಂದೆ ಅವು ಯಾವ ದಿಕ್ಕಿಗೆ ಹೊರಳಿಕೊಳ್ಳಬಹುದೆ೦ಬ ಅಂದಾಜುಗಳನ್ನು’ ಕಾವ್ಯ ಭಾಷೆಯಲ್ಲಿಯೇ ಹೇಳಿಕೊಂಡಿರುವ `ನಾನು ಮತ್ತು ನನ್ನ ಕಾವ್ಯ’ -ಈ ಲೇಖನಗಳನ್ನೊಳಗೊಂಡ ಸ್ವಕೀಯ ಸ್ವಾನುಭವದ ಲೇಖನಗಳಿಂದ ಮನಸೆಳೆಯುತ್ತವೆ. ಕವಿಯಾಗಿ ಅವರು ಬೆಳೆಯುವಾಗ ದಾಟಿದ ವಿವಿಧ ಹಂತಗಳನ್ನು ಹೃದಯಂಗಮವಾಗಿ ಪರಿಚಯಿಸಿಕೊಡುವ “ನಾನು ಮತ್ತು ನನ್ನ ಕಾವ್ಯ” ತುಂಬ ಇಷ್ಟವಾಗುವ ಲೇಖನ.

ಮಂಥನದಲಿ ಕುವೆಂಪು ಕಾವ್ಯದಲ್ಲಿ ವೈಚಾರಿಕತೆ, ಬೇಂದ್ರೆ ಕಾವ್ಯದಲ್ಲಿ ವೈಚಾರಿಕತೆ, ಪಂಜೆಯವರ ಕವಿತೆಗಳು, ರಾಜರತ್ನಂ ಅವರ ಪದ್ಯಗಳು, ಮತ್ತು ಕುವೆಂಪು ಕಾದಂಬರಿಗಳಲ್ಲಿ ಪ್ರಾದೇಶಿಕತೆ ಎನ್ನುವ ಲೇಖನಗಳಿವೆ.
`ಹಿಂದಿನ ಕಾವ್ಯ ಮಾರ್ಗದಲ್ಲಿ ಕಾವ್ಯಗಳಲ್ಲಿ ವೈಚಾರಿಕತೆ ಅನಿವಾರ್ಯ ಲಕ್ಷಣವಾಗಿರಲಿಲ್ಲ. ಅಲ್ಲಿ ಇರಲಿಲ್ಲವೆಂದಲ್ಲ ಅದರ ಪ್ರಮಾಣ ಅದು ವ್ಯಕ್ತವಾಗುತ್ತಿದ್ದ ರೀತಿ ಬೇರೆಯಾಗಿತ್ತು. ನವೋದಯ ಕಾವ್ಯ ತನ್ನ ಸ್ವರೂಪ ಸತ್ವಗಳಲ್ಲಿ ಮೂಲಭೂತವಾಗಿ ಭಾವನಾತ್ಮಕ ಕಾವ್ಯವಾದ್ದರಿಂದ ವೈಚಾರಿಕತೆಯೂ ಭಾವನಾತಕ ಸ್ವರೂಪದಲ್ಲೇ ವ್ಯಕ್ತವಾಗಬೇಕಿತ್ತು. ವೈಚಾರಿಕತೆಗೂ ವಾಸ್ತವಿಕ ಪ್ರಜ್ಞೆಗೂ ನಿಕಟ ಸಂಬAಧವಿರುವುದರಿAದ ನವೋದಯ ಕಾವ್ಯ ವಾಸ್ತವಿಕತೆಗಿಂತ ಭಾವಾವೇಶಕ್ಕೆ ಹೆಚ್ಚು ಒತ್ತುಕೊಟ್ಟುದರಿಂದ ಸಹಜವಾಗಿಯೇ ವೈಚಾರಿಕ ಅಂಶ ಕಡಿಮೆಯಾಗಿತ್ತು. ಹಾಗಾಗಿ ನವೋದಯ ಕಾವ್ಯದ ವೈಚಾರಿಕತೆ ತನ್ನ ಪರಿಮಿತಾರ್ಥದಲ್ಲಿ ವ್ಯಕ್ತವಾಗುತ್ತದೆ. ಅಲ್ಲದೆ ನವೋದಯ ಕಾವ್ಯ ನಮ್ಮ ಹಳೆಗನ್ನಡ, ನಡುಗನ್ನಡ ಕಾವ್ಯದಂತೆ ಒಂದು ಮತದ, ಧರ್ಮದ ಪ್ರತಿಪಾದನೆಗೆ ಪರೋಕ್ಷವಾಗಿ ತೊಡಗಿಲ್ಲವಾವಾದ್ದರಿಂದ ಕತೆ ನೀತಿಗಳು ಗೌಣವಾಗಿ ವೈಯುಕ್ತಿಕ ಸಂವೇದನೆ, ತನ್ಮಯತೆಗಳಿಗೆ ಅಗ್ರ ಪೂಜೆದೊರೆತದ್ದರಿಂದ ವೈಚಾರಿಕ ಅಂಶ ಅಪ್ರಮುಖವಾಯಿತು.’ ಈ ಪರಿಮಿತತೆಯನ್ನು ಗಮನದಲ್ಲಿಟ್ಟುಕೊಂಡೇ ಆಯಾಕಾಲದ ಕಾವ್ಯಗಳನ್ನು ವಿಮರ್ಶಿಸಬೇಕು ಎನ್ನುವುದಕ್ಕೆ ಒತ್ತುಕೊಟ್ಟು ಕುವೆಂಪುರವರ ಕಾವ್ಯಗಳನ್ನು ವಿಮರ್ಶಿಸುವ ಕೆಲಸವನ್ನು ನಿಸಾರ್‌ಅಹಮದ್ ಅವರು ಪ್ರಾಮಾಣಿಕವಾಗಿ ಮಾಡಿದ್ದಾರೆ. ಕುವೆಂಪುರವರು ಅಂತರ್ಮುಖತೆಯಿAದ ಬಹಿರ್ಮುಖರಾಗಿ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಕವನಗಳಲ್ಲಿ ಹೇಗೆ ವೈಚಾರಿಕತೆಯನ್ನು ಮೆರೆದಿದ್ದಾರೆ ಎನ್ನುವ ವಿಶ್ಲೇಶಣೆ `ಕುವೆಂಪು ಕಾವ್ಯದಲ್ಲಿ ವೈಚಾರಿಕತೆ’ ಲೇಖನದಲ್ಲಿದೆ. `

ನವೋದಯ ಕಾವ್ಯದ ಮೂಲಭೂತ ಸತ್ವವನ್ನು ರಕ್ತಗತ ಮಾಡಿಕೊಂಡು ಆ ಮಾರ್ಗದ ಅತ್ಯುತ್ತಮ ಪ್ರತಿನಿಧಿಯಾಗುವ ಬೇಂದ್ರೆ ಅದರ ಮಿತಿಗೂ ನಿದರ್ಶನವಾಗುತ್ತಾರೆ’ ಎನ್ನುವ ವಿಶ್ಲೇಶಣೆಯೊಂದಿಗೆ ಪ್ರಾರಂಭವಾಗುವ `ಬೇಂದ್ರೆ ಕಾವ್ಯದಲ್ಲಿ ವೈಚಾರಿಕತೆ’ ಲೇಖನದಲ್ಲಿ ಬೇಂದ್ರೆಯವರ ಆಧ್ಯಾತ್ಮಿಕ ಪ್ರೇರಣೆಯಿಂದ ರೂಪಿತವಾದ ಮೂಲ ಕಾವ್ಯದೋರಣೆ ಕಾಲಾನುಕ್ರಮದಲ್ಲಿ ಜಾನಪದ ವೈಶಿಷ್ಟ÷್ಯಗಳನ್ನು ಮೈಗೂಡಿಸಿಕೊಂಡು ಸಮಕಾಲೀನ ತತ್ವಗಳನ್ನು ಶಕ್ತವಾಗಿ ಅರಗಿಸಿಕೊಂಡು ಏರಿರುವ ಎತ್ತರವನ್ನು ಬೇಂದ್ರೆಯವರ ಕವನಗಳನ್ನು ಮುಂದಿಟ್ಟುಕೊAಡು ಸೋಜಿಗದಿಂದಲೇ ವಿಶ್ಲೇಶಿಸಿದ್ದಾರೆ. `

ಪಂಜೆಯವರ ಕವಿತೆಗಳು’ ಲೇಖನದಲ್ಲಿ ಪಂಜೆಯವರು ಅವರ ಸಮಕಾಲೀನ ಕವಿಗಳಿಗಿಂತ ಹೇಗೆ ಭಿನ್ನ ಎನ್ನುವ ವಿಶ್ಲೇಶಣೆಯನ್ನು ಮಾಡಿದ್ದಾರೆ. ಶಿಕ್ಷಕರಾಗಿದ್ದ ಪಂಜೆಯವರ ಮುಖ್ಯ ಉದ್ದೇಶ ಮಕ್ಕಳಲ್ಲಿ ಸಾಹಿತ್ಯಾಭಿರುಚಿಸುವುದನ್ನು ಮೂಡಿಸುವುದರ ಜೊತೆಗೆ ಮಾನಸಿಕ ವಿಕಾಸವನ್ನು ಬೆಳೆಸುವುದು. ಸರಳತೆ, ಲಾಲಿತ್ಯ, ಸುಭಗತೆ ಅವರ ಕವನಗಳಲ್ಲಿ ಕಂಡುಬರುವ ಮೂಲಗುಣ. ಶಿಶುಗೀತೆಗಳು ಹಾಗೂ ಪ್ರೌಢಗೀತೆಗಳ ನಡುವಿನಲ್ಲಿ ಹಾಯುವ ಪಂಜೆಯವರ ಕವನಗಳು ಸರಳವಾಗಿ ವೈಚಾರಿಕತೆಯನ್ನು ಬಿಂಬಿಸಿವೆ. ಸಮಕಾಲೀನ ಪ್ರಜ್ಞೆ ಅವರ ಕವನಗಳ ಜೀವನಾಡಿ. ಜೀವನ ವಿಮುಖಿಯಾದ ಆಧ್ಯಾತ್ಮ ಅವರ ಕವನಗಳಲಿಲ್ಲ. ಗೆಲುವು ಉತ್ಸಾಹ ಜೀವನಾಸಕ್ತಿ ಪಂಜೆಯವರ ಪದ್ಯಗಳಲ್ಲಿ ದಣಿಯದೆ ಕೆಲಸ ಮಾಡುತ್ತವೆ. ಪಂಜೆಯವರದ್ದು ಚಿಕಿತ್ಸಕ ದೃಷ್ಟಿ. ಕಟಕಿ ಸಿನಿಕತನದಲ್ಲ ಎನ್ನುವುದನ್ನು ಉದಾಹರಣೆಕೊಟ್ಟು ವಿಶ್ಲೇಶಿಸಿದ್ದಾರೆ.“

ವಸ್ತು, ಭಾಷೆ ಅಭಿವ್ಯಕ್ತಿಗಳಲ್ಲಿ ಅಲೌಕಿಕ ಗಾಂಭೀರ್ಯ, ನಾದಮಯತೆ, ಅಮೂರ್ತತೆಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ನವೋದಯ ಕಾವ್ಯ ಸಂದರ್ಭದಲ್ಲಿ ನಮ್ಮ ಹಿರಿಯ ಕವಿಗಳು ನಿಸರ್ಗ ಹಾಗು ಸಮಾಜದ ಒಟ್ಟಾರೆ ಬದುಕನ್ನು ಕೇಂದ್ರವಾಗಿಸಿಕೊAಡು ಕಾವ್ಯ ರಚನೆ ಮಾಡುತ್ತಿದ್ದರು. ಆಗ ಬಾಯಿಮಾತು ಅಥವಾ ಪಾಮರರ ಭಾಷೆಯನ್ನು ಬಳಸಿದವರು ಬೇಂದ್ರೆಯವರನ್ನು ಬಿಟ್ಟರೆ ರಾಜರತ್ನಂ ಅವರು. ಈ ಸಂದರ್ಭದಲ್ಲಿ ಲೇವಡಿಗೆ ಸಾಧನವೋ ಗುರಿಯೋ ಆಗಬಹುದಾಗಿದ್ದ ಸಮಾಜದ ಒಂದು ಸ್ತರದ ಬದುಕನ್ನು, ಅವರ `ಪ್ರಾಕೃತ’ ಮಾತುಗಾರಿಕೆಯನ್ನು ಬಳಸಿಕೊಂಡು ಕಾವ್ಯವನ್ನು ಅಮೂರ್ತತೆಯಿಂದ ವಾಸ್ತವದ ಕಡೆಗೆ, ವೈಯುಕ್ತಿಕತೆಯ ವಲಯಕ್ಕೆ ತರಲು ಮೊದಲು ಪ್ರಯೋಗ ನಡೆಸಿದವರು ರಾಜರತ್ನಂ ಅವರು” ಈ ಹಿನ್ನೆಲೆಯಲ್ಲಿ ಮೂಲತ ಗದ್ಯ ಬರಹಗಾರರಾಗಿರುವ ರಾಜರತ್ನಂ ಅವರ ಪದ್ಯಗಳಲ್ಲಿ ವ್ಯಕ್ತವಾಗುತ್ತಿದ್ದ ವೈಚಾರಿಕತೆ ಮತ್ತು ವಿಶ್ಲೇಷಣಾ ಮನೋಭಾವವನ್ನು ಗುರುತಿಸಿಕೊಂಡು ರಾಜರತ್ನಂ ತನವನ್ನು ಹೇಗೆ ಮೆರೆಸಿದ್ದಾರೆ ಎನ್ನುವುದನ್ನು `ರಾಜರತ್ನಂ ಅವರ ಪದ್ಯಗಳು’ ಲೇಖನದಲ್ಲಿ `ನಾಗನ ಪದಗಳು’ ಮತ್ತು ರತ್ನಪದಗಳು ಸಂಗ್ರಹದಿAದ ಆಯ್ದ ಪದ್ಯಗಳನ್ನು ಉದಾಹರಿಸಿಕೊಂಡು ವಿಶ್ಲೇಶಿಸಿದ್ದಾರೆ. `ಕನ್ನಡದ ಲಘು ಸ್ವರೂಪವನ್ನು ಅನಾವರಣಗೊಳಿಸಿ ಪದ್ಯವೆಂದರೆ ಬೆದರಿ ನಿಲ್ಲುವ ಸಾಮಾನ್ಯ ಜನಕ್ಕೂ ಅದರ ನಗುಮೊಗದ ದರ್ಶನ ಮಾಡಿದ ಕೀರ್ತಿ ರಾಜರತ್ನಂ ಅವರಿಗೆ.’ ಎನ್ನುವ ಮಾತಿನೊ೦ದಿಗೆ ಕೊನೆಗೊಳಿಸುವ ಈ ಲೇಖನ ರಾಜರತ್ನಂ ಅವರ ಪದ್ಯಗಳ ಪರಿಚಯ ಮಾಡಿಕೊಡುವಲ್ಲಿ ಸಫಲವಾಗಿದೆ.

ಹಿರಿಯ ಲೇಖಕರ ಕಾವ್ಯದಲ್ಲಿ ವೈಚಾರಿಕತೆಯನ್ನು ಗುರುತಿಸಿದುದರ ಜೊತೆಗೆ ಕುವೆಂಪು ಕಾದಂಬರಿಗಳಲ್ಲಿ ಪ್ರಾದೇಶಿಕತೆಯನ್ನು ಗುರುತಿಸುವ ಕೆಲಸವನ್ನು `ಕುವೆಂಪು ಕಾದಂಬರಿಗಳಲ್ಲಿ ಪ್ರಾದೇಶಿಕತೆ’ ಲೇಖನದಲ್ಲಿ ಮಾಡಿದ್ದಾರೆ. ಪ್ರಾದೇಶಿಕತೆ ಒಂದು ಸ್ಥೂಲ ವಿಶೇಷ ಪರಿಸರವುಳ್ಳ ನೆಲದ ಆತ್ಮವೆನ್ನುವುದನ್ನು ವೇದ್ಯಮಾಡಿಕೊಂಡು ಹೇಗೆ ಕುವೆಂಪುರವರು ಮಲೆನಾಡಿನ ಕಲ್ಲು, ಮಣ್ಣು, ಮರಗಿಡ, ಗುಡ್ಡ ಬೆಟ್ಟ ಪರಿಸರ ಎಲ್ಲಾದಕ್ಕೂ ಸ್ಪಂಧಿಸಿ ಅಲ್ಲಿಯ ಸಮಸ್ತ ಸಾರವಂತಿಗೆಯನ್ನು `ಕಾನೂರು ಹೆಗ್ಗಡಿತಿ’ ಮತ್ತು `ಮಲೆನಾಡಿನ ಮದುಮಗಳು’ ಕಾದಂಬರಿಗಳಲ್ಲಿ ಸೂರೆಗೊಂಡಿದ್ದಾರೆ ಎನ್ನುವುದನ್ನು ಸಮರ್ಥಿಸಿದ್ದಾರೆ. ವಿಮರ್ಶಕರು ಷೇಕ್ಸ್ಪಿಯರ್ ಸಾಹಿತ್ಯ ಕ್ಷೇತ್ರವನ್ನು ಪ್ರತ್ಯೇಕವಾಗಿ `ಷೇಕ್ಸ್ಪಿಯರ್ ಲ್ಯಾಂಡ್’ ಎಂದು ಗುರುತಿಸಿರುವಂತೆ ನಮ್ಮಲ್ಲಿ ಪ್ರಾದೇಶಿಕತೆಯ ಸಮಸ್ತ ಸಾಧ್ಯತೆಗಳನ್ನು ಗುರುತಿಸಿಕೊಂಡು ಸಾಹಿತ್ಯ ರಚಿಸಿದ ಇಬ್ಬರು ಕನ್ನಡದ ಮಹತ್ವದ ಲೇಖಕರನ್ನು ಗುರುತಿಸಿ ಅವರ ಸಾಹಿತ್ಯವನ್ನು `ಕುವೆಂಪುಲ್ಯಾAಡ್’ ಮತ್ತು `ಕಾರಂತಲ್ಯಾAಡ್’ ಎಂದು ಗುರುತಿಸಬಹುದು. ಅವರನ್ನು ಪ್ರತ್ಯೇಕಿಸಿದ್ದು ಸಹ್ಯಾದ್ರಿಶ್ರೇಣಿ ಎನ್ನುವ ಅವರ ಮುಕ್ತಾಯ ಈ ಲೇಖನವನ್ನು ಇನ್ನೂ ಹೆಚ್ಚಿನ ತೌಲನಿಕ ಆಲೋಚನೆಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ.

ಅವಲೋಕನದಲ್ಲಿ ಕೆಲವು ಕೃತಿಗಳ ವಿಮರ್ಶಾ ಲೇಖನಗಳಿವೆ. ಹಿರಿಯ ಕವಿ ಶ್ರಿ ಕೆ. ಎಸ್. ನ ಅವರ `ತೆರೆದ ಬಾಗಿಲು’ ಕವನ ಸಂಕಲನವನ್ನು ಅವರ ಹಿಂದಿನ ಸಂಕಲನಗಳ ಹಿನ್ನೆಲೆಯಲ್ಲಿ ವಿಶ್ಲೇಶಿಸಿ ಅವರು ಭಾವನಾಮತೆಯಿಂದ ವೈಚಾರಿಕತೆಯೆಡೆಗೆ ಬೆಳೆದಿರುವ ರೀತಿಯನ್ನು ವಿಸ್ಮಯದಿಂದ ವಿಶ್ಲೇಶಿಸಿದ್ದಾರೆ. ಸಸ್ಯವಿಜ್ಞಾನಿಯಾದ ಶ್ರೀ ಬಿ. ಜಿ. ಎಲ್. ಸ್ವಾಮಿ ಅವರ ನಾಲ್ಕುನೂರ ಎರಡು ಪುಟಗಳ ಈ ಬೃಹತ್ ಕೃತಿ `ಹಸುರು ಹೊನ್ನು’ ವಿನಲ್ಲಿ ಸ್ನಾತ್ತಕೋತ್ತರ ವಿದ್ಯಾರ್ಥಿಗಳನ್ನು ಸಸ್ಯಾಭ್ಯಾಸಕ್ಕಾಗಿ ಬನ್‌ಕಾಡು, ತಿರುವಾಂಕೂರಿನ ಕೆಲವು ಕಾಡುಗಳು, ಆಗುಂಬೆಯ ಕಾಡುಗಳು, ಕೃಸಾಡಿ ದ್ವೀಪ ಹಾಗೂ ರಾಮೇಶ್ವರದ ಸುಮುತ್ತಲಿನ ಕಾಡುಗಳಲ್ಲಿ ಮಾಡಿದ ಸಸ್ಯಾನ್ವೇಶಣೆಯ ಪ್ರಯಾಣಗಳು ಪ್ರವಾಸಕಥಾನಕಗಳಂತೆ ಮೂಡಿಬಂದಿವೆಯಾದರೂ ಸಸ್ಯವಿಜ್ಞಾನವನ್ನು ಅಲ್ಲಿ ಸಮರ್ಪಕವಾಗಿ ಬಳಸಿ ಅರುವತ್ತೆಂಟಕ್ಕೂ ಹೆಚ್ಚು ಮರಗಳ ವ್ಯಕ್ತಿತ್ವದ ಪರಿಚಯಮಾಡಿ ಒಂದು ಉತ್ತಮವಾದ ಕೃತಿ ರಚಿಸಿ ಓದುಗರ ತಿಳಿವನ್ನು ವಿಸ್ತರಿಸುವಲ್ಲಿ ಹೇಗೆ ಗೆದ್ದಿದ್ದಾರೆ ಎನ್ನುವ ವಿವರಣೆಯಿದೆ. ಶ್ರೀ ಬೇಂದ್ರೆಯವರು ತಮ್ಮ ಹಲವಾರು ಪದ್ಯಗಳಲ್ಲಿ `ಕೌಟುಂಬಿಕ ಜೀವನದ ಅನುಭವಗಳನ್ನು, ಒಲವಿನ ಹಿರಿಮೆಯನ್ನು, ನಯವಂತಿಕೆಯನ್ನು ಮನಸ್ಪರ್ಶಿಯಾಗಿ’ ಚಿತ್ರಿಸಿದ್ದರೆ `ಮನದನ್ನೆ’ ಪದ್ಯದಲ್ಲಿ `ಗಂಡ ಹೆಂಡಿರ ಅಪಾರ್ಥತೆ, ವೈಮನಸ್ಸುಗಳನ್ನು ಕಾಣಿಸಿ ಭಾವಶುದ್ಧಿಯಾಗದೆ, ಹೃದಯ ಸಂವಾದಕ್ಕೆ ಪುಷ್ಟಿ ದೊರಕದೆ, ಪ್ರೇಮದ ಜಗತ್ತು ಪ್ರಕಟವಾಗದೆಂಬ ತಾತ್ವಿಕ ಧೋರಣೆಯನ್ನು ಕಲಾತ್ಮಕವಾಗಿ’ ಹೇಗೆ ಅಭಿವ್ಯಕ್ತಿಸಿದ್ದಾರೆ ಎನ್ನುವ ವಿಮರ್ಶಾತ್ಮಕ ವಿಶ್ಲೇಷಣೆಯಿದೆ. ಹಾಗೇ ಕಡೆಂಗೋಡ್ಲು ಶಂಕರ ಭಟ್ಟರ ಜೀವನ ದರ್ಶನಕ್ಕೆ ಪ್ರಣಾಳಿಕೆಯಂತೆ ಮೂಡಿಬಂದಿರುವ ಮಹಾಭಾರತದ ಒಂದು ಘಟನೆಯಿಂದ ಪ್ರೇರಿತವಾಗಿ ರಚಿಸಿರುವ `ಮಾದ್ರಿಯ ಚಿತೆ’ ಹೇಗೆ ಒಂದು ಉತ್ತಮ ಕವಿತೆಯಾಗಿದೆ ಎನ್ನುವ ಅತಿ ಸ್ಥೂಲವಾದ ವಿಮರ್ಶೆಯಿದೆ.

ಕೊನೆಯಲ್ಲಿ ಬರುವ `ವಿವೇಚನೆ’ಯಲ್ಲಿ ಲ್ಯಾಟಿನ್ ಅಮೇರಿಕಾದ ಸಮಕಾಲೀನ ಕವಿ `ದಾಸ್ಯದಲ್ಲಿರುವ ಮಾನವತೆಯ ಮುಖವಾಣಿ’ ಎಂದು ವಿಮರ್ಶಕರಿಂದ ಗುರುತಿಸಲ್ಪಟ್ಟ ಪಾಬ್ಲೋ ನೆರುಡನ ವ್ಯಕ್ತಿಪರಿಚಯ, ಜೀವನ ಹಾಗೂ ಅವನ ಕಾವ್ಯಗಳ ಪರಿಚಯಾತ್ಮಕ ಲೇಖನವಿದೆ. ನಮಗೆ ಅಪರಿಚಿತನಾಗಿರುವ ಹೊರ ದೇಶದ ಕವಿಯೊಬ್ಬ ನಮಗೆ ಪರಿಚಿತನಾಗಿ ಆತ್ಮೀಯನಾಗುವಷ್ಟು ಪರಿಣಾಮಕಾರಿಯಾಗಿ ಈ ಲೇಖನ ಮೂಡಿಬಂದಿದೆ.`

ಕವಿಯಾಗಿ ನನ್ನ ಅನುಭವ’ ಲೇಖನದಲ್ಲಿ ಅವರೇ ಹೇಳುವಂತೆ `ಮಾತಿನ ಬಳಕೆಯಲ್ಲಿ ಕವಿ ಗದ್ಯಕರ್ತನಿಗಿಂತ ಹೆಚ್ಚು ಸೃಜನಶೀಲ, ಹೊಣೆಗಾರ, ಸಂವೇದನಾಶಾಲಿ. ಕವಿಗೆ ಮಾತು ತಶೀಲು, ಮಾಹಿತಿಗಳನ್ನು ಪೇರಿಸುವ ಅಥವಾ ಅರ್ಥವನ್ನು ಸೂಚಿಸಿ ಪಕ್ಕಕ್ಕೆ ಸರಿದು ನಿಲ್ಲುವ ಸಾಧನವಲ್ಲ: ಗದ್ಯಕಾರನಿಗೆ, ಅದರಲ್ಲೂ ವಿಚಾರ ಸಾಹಿತ್ಯದ ಲೇಖಕನಿಗೆ ಶಬ್ದಗಳು ಗಣಿತಶಾಸ್ತçದ ಚಿಹ್ನೆಗಳಂತೆ ನಿಶ್ಚಿತಾರ್ಥಾ ವಿನೀತ. ಆದರೆ ಕವಿಗೆ ಅವು ಸಜೀವ ವಸ್ತುಗಳು. ಅವುಗಳ ಸಚೇತನ ಸೂಕ್ಷಾಂಶಗಳ, ಬಾಗು ಬಳಕುಗಳ, ಸೆಖೆ ಶೀತಗಳ, ಕುಸುಮತ್ವ ವಜ್ರತ್ವಗಳ ಗುಣಗಳನ್ನು ಗುರುತಿಸುವ, ಇಂಗಿತಕ್ಕೆ ತಕ್ಕಂತೆ ಅವುಗಳನ್ನು ರಸೋಚಿತವಾಗಿ ಉಪಯೋಗಿಸಿಕೊಳ್ಳುವ ರಸಿಕತೆ, ಜಾಣತನ ಕವಿಗೆ ಇರಬೇಕು, ಕವನ ರಚನೆಯ ಕಾಲದಲ್ಲಿ ಆತ ಮಾತಿನ ಬಗ್ಗೆ ತಾಳಬೇಕಾದ ಎಚ್ಚರ, ಗೌರವ ಮಾತಿಗೆ ಮೀರಿದ್ದು.
ನನ್ನ ಕವನಗಳ ಭಾಷೆಯನ್ನು ನಾನು ಬೆವರು ಸುರಿಸಿ ಸಂಪಾದಿಸಿಕೊAಡಿದ್ದೇನೆ. . . . ಒಟ್ಟಿನಲ್ಲಿ ಕವಿ ಭಾಷೆಯ ಜೊತೆ ಚೆಲ್ಲಾಟವಾಡಬೇಕಾಗುತ್ತದೆ, ರಮಿಸಬೇಕಾಗುತ್ತದೆ, ಅದರ ಕಟಾಕ್ಷಕ್ಕೆ ಕಂಬನಿಗರೆಯಬೇಕಾಗುತ್ತದೆ. ಸಮಯಬಂದರೆ ಬಲ ಪ್ರದರ್ಶನ ಮಾಡಬೇಕಾಗುತ್ತದೆ. ಅದರ ಪೊಸೆಸಿವ್‌ನೆಸ್‌ನ್ನು- ಅಂದರೆ ನಿರಾವೇಶತೆಯನ್ನು-ತನ್ನ ಪ್ಯಾಶನ್ ಹಾಗೂ ಲಂಪಟತೆಯಿAದ ಕಾವೇರಿಸಿಸುರತಕ್ಕೆ ಸಿದ್ಧಗೊಳಿಸಬೇಕಾಗುತ್ತದೆ. ಆಗಷ್ಟೇ ಅದು ಫಲವಂತವಾಗಲು ಸಾಧ್ಯ.” ಅವರ ಈ ನಿಲುವು ಗದ್ಯ ಬರಹದಲ್ಲೂ ಪ್ರತಿಫಲಿಸಿ ಭಾಷಾ ಬಳಕೆಯ ಚಾತುರ್ಯವನ್ನು ಮೆರೆಸಿದೆ. ಹೊಸ ಶಬ್ಧಗಳ ಹುಡುಕಾಟದ ಅವರ ಆಸಕ್ತಿ ನಿಜಕ್ಕೂ ಬೆರಗು ಹುಟ್ಟಿಸುವಂತಾದ್ದು.

ಈ ಸಂಕಲನಕ್ಕೆ ಬೇಂದ್ರೆಯವರ ಕವನದ ಒಂದು ಸಾಲನ್ನು ಶೀರ್ಷಿಕೆಯಾಗಿ ಇಟ್ಟು ಹಿರಿಯ ಲೇಖಕರ ಬರಹಗಳನ್ನು `ಇದು ಬರೆ ಬೆಡಗಲ್ಲೋ ಅಣ್ಣ’ ಎನ್ನುವ ವಿಸ್ಮಯದಿಂದಲೇ ವಿಮರ್ಶೆ ಮಾಡಿ ಓದುಗ ವಿಸ್ಮಯದಿಂದಲೇ ಈ ಕೃತಿಯನ್ನು ಓದುವಗತಿಗೆ ಸೆಳೆಯುವಂತೆ ಮಾಡಿರುವುದು ಶ್ರೀ ಕೆ. ಎಸ್. ನಿಸಾರ್‌ಅಹಮದ್ ಅವರ ಹೆಚ್ಚುಗಾರಿಕೆ..

‍ಲೇಖಕರು avadhi

May 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Jayalaxmi Patil

    ಇಲ್ಲಿಯವರೆಗೆ ನಾನು ನಿಸಾರಹಮದ್ ಸರ್ ಕವನಗಳನ್ನು ಮತ್ತು ಕಾವ್ಯದ ಬಗ್ಗೆ ಮಾತ್ರ ಲೇಖನಗಳನ್ನೋದಿದ್ದು. ಅವುಗಳ ನಡುವೆ ಗದ್ಯದ ಕುರಿತ ನಿಮ್ಮ ಈ ಲೇಖನ ಅಪರೂಪ ಎನಿಸಿತು ನನಗೆ.

    ಪ್ರತಿಕ್ರಿಯೆ
  2. usha rai

    ಧನ್ಯವಾದಗಳು ಶರವಣ ಕುಮಾರಿ ಹಾ್ಗೂ ಜಯಲಕ್ಷ್ಮಿ ಪಾಟೀಲ್ ಅವರಿಗೆ. ಇದು ಹಳೆ ಫಾಂಟಿನಲ್ಲಿ ಟೈಪಿಸಿದ್ದ ಲೇಖನ ಸರಿಯಾಗಿ ಹೋಗುವುದೋ ಇಲ್ಲವೋ ಎಂದು ಯೋಚಿಸುತ್ತಿದ್ದೆ. ಅದನ್ನು ಹೊಸ ಫಾಂಟಿಗೆ ಬದಲಾಯಿಸಿ ಪ್ರಕಟಿಸಲು ತೊಂದರೆ್ಯಾಗಿರಬಹುದು. ಪ್ರಕಟಿಸಿದ್ದಕ್ಕೆ ಅವಧಿಗೆ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: