ಅಯ್ಯಪ್ಪನ ಸನ್ನಿಧಿಯಲ್ಲಿ…

ಡಾ. ಜ್ಯೋತಿ

ಉಫ್! ಅಂತೂ ದಕ್ಕಿತು ನಿನ್ನ ದರ್ಶನ ಭಾಗ್ಯ,

ಕಾಯುತ್ತಲೇ ಇದ್ದೆ ಶಬರಿಯಂತೆ,

ಏನೇನೊ ಪ್ರಶ್ನೆಗಳ ಹೊತ್ತು.

ಉತ್ತರ ಸಿಕ್ಕಿಲ್ಲ ಇನ್ನೂ,

ಈಗ ಕೇಳುತ್ತಿರುವೆ, ಉತ್ತರಿಸುವೆಯಾ?

 

ನಿನ್ನ ಜನ್ಮ ಕತೆಯನ್ನು ತಮ್ಮ ವಿಚಾರ ಧಾರೆಗೆ

ಒಗ್ಗಿಸಿ ಹೆಣೆದು,

ನಿನ್ನ ಸ್ತ್ರೀ ವಿರೋಧಿಯೆಂದು ಬಿಂಬಿಸಿದರೂ

ನೀನೇಕೆ ಮೌನವಾಗಿದ್ದೆ?

ಸ್ತ್ರೀ ದರ್ಶನದಿಂದ ನಿನ್ನ ಪಾವಿತ್ರ್ಯತೆ ಹಾಳಾಗುತ್ತಿತ್ತೇ?

ನಿನಗೆ ಧ್ಯಾನಭಗ್ನವಾಗುತ್ತಿತ್ತೇ?

 

ನಿನ್ನ ಸಾಕುತಾಯಿಯ ಮೇಲಿನ ಕೋಪ.

ಎಲ್ಲಾ ಹೆಣ್ಣುಮಕ್ಕಳ ಮೇಲೆ ತೆಗೆದೆಯಲ್ಲ, ಸರಿಯೇ?

ಹೆತ್ತಮಕ್ಕಳು ಚೆನ್ನಾಗಿರಬೇಕೆಂದು ಎಲ್ಲಾ ಹೆತ್ತವರು ಬಯಸುತ್ತಾರೆ,

ತನ್ನ ಕರುಳುಗಿಂತ ನಿನ್ನ ಹೆಚ್ಚು ಪ್ರೀತಿಸಿ, ತ್ಯಾಗಮಯಿಯಾಗಬೇಕೆನ್ನುವ ಅತಿ ನಿರೀಕ್ಷೆ ನಿನ್ನದಾಯಿತಲ್ಲ?

ದಟ್ಟ ಕಾಡಿನ ಮಧ್ಯೆ ಒಂಟಿ ಗುಡಿಯಲ್ಲಿ ಸ್ತ್ರೀಗೆ ಅಭದ್ರತೆಯಿದೆ,

ಕಾಡು ಮೃಗಗಳಿವೆ, ಒಪ್ಪಿಕೊಳ್ಳೊಣ.

ಆದರೆ, ಈಗೆಲ್ಲಿವೇ ಕ್ರೂರಮೃಗಗಳು ಕಾಡಿನಲ್ಲಿ?

ನಾಡಿನಲ್ಲೇ ಬೀಡುಬಿಟ್ಟಿವೆ.

ತನ್ನ ದೇಹದ ಹಸಿವಿಗೆ ಕಂದಮ್ಮಗಳನ್ನೂ ಬಿಡುತ್ತಿಲ್ಲ ಅವು,

ಅವುಗಳ ಮಧ್ಯೆ ಹೆಣಗುತ್ತಿಲ್ಲವೇ, ನಾವುಗಳು?

 

ದೂರ ದೂರುಗಳಿಂದ ನಿನ್ನ ನೋಡಲು ಬರುವ ಮಾತೆಯರನ್ನು

ನೂರಾರು ವರ್ಷಗಳಿಂದ ದೂರವಿಟ್ಟೆಯಲ್ಲಾ.

ಅಂತೂ, ನ್ಯಾಯಾಲಯವೇ ತೆರೆಯಬೇಕಾಯಿತು ನಿನ್ನ ಬಾಗಿಲು,

ನಿನ್ನ ಮನಸ್ಸು ಕರಗಲಿಲ್ಲ ನೋಡು.

ಈಗಲಾದರೂ ಕಣ್ತೆರೆದು ನೋಡುವೆಯಾ?

ಇಲ್ಲ, ಕಣ್ಮುಚ್ಚಿ ನನಗಿದು ಸಂಬಂಧವಿಲ್ಲವೆನ್ನುವೆಯಾ?

 

ಇಷ್ಟು ಕೇಳುವುದಿತ್ತು ನಿನ್ನಲ್ಲಿ.

ಅದಕ್ಕಾಗಿ ಇಷ್ಟು ದೂರ ಬಂದೆ…

ನಿರೀಕ್ಷೆಯಂತೆ, ನೀನು ಉತ್ತರಿಸುತ್ತಿಲ್ಲ.

ಕಣ್ಣುಬಿಟ್ಟು ನೋಡುತ್ತಿಲ್ಲ.

 

ಕೊನೆಯ ಮಾತು …

ಮಹಿಳೆ ದೂರವಿಟ್ಟ ನೀನಾಗಲಿ, ಅಣ್ಣಪ್ಪನಾಗಲಿ,

ಶನಿ ಸಿಂಗನಾಪುರವಾಗಲಿ, ಹಾಜಿ ಅಲಿ ದರ್ಗಾವಾಗಲಿ

ನನಗೇನೂ ದರ್ಶನಕ್ಕೆ ಪ್ರೇರೇಪಿಸುತ್ತಿಲ್ಲ.

ನೋಡಲೇ ಬೇಕೆನ್ನುವ ಹಠವಿಲ್ಲ …

‍ಲೇಖಕರು avadhi

May 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Nagraj Harapanahalli.karwar

    ದೇವರನ್ನು ಪ್ರಶ್ನಿಸುವ ಡಾ.ಜ್ಯೋತಿ‌ ಅವರ ಅಯ್ಯಪ್ಪನ ಸನ್ನಿಧಿಯಲ್ಲಿ ಕವಿತೆ‌ ಚೆನ್ನಾಗಿದೆ.‌ಕನ್ನಡ ಕಾವ್ಯ‌ ಪರಂಪರೆಯ ಮುಂದುವರಿಕೆ ಇದು. ಕೊನೆಯಲ್ಲಿ ‌ನಿನ್ನ ನೋಡಬೇಕೆನ್ನುವ ಹಠವೇನೂ ಇಲ್ಲ ಎಂಬ ಸಾಲು ಕವಿತೆಯ ಶಕ್ತಿ ಹೆಚ್ಚಿಸಿದೆ.‌‌ ಒಂದು ಅಸ್ವಾಭಾವಿಕ ಹೇರಿಕೆಯ ನಿರಾಕರಣೆ ಎಂಬುದು ಮಹಿಳೆಯ ಸಾತ್ವಿಕ ಪ್ರತಿಭಟನೆಯಾಗಿ ಇಲ್ಲಿ ದಾಖಲಾಗಿದೆ‌.

    ಪ್ರತಿಕ್ರಿಯೆ
  2. T S SHRAVANA KUMARI

    ಕಡೆಯ ಸಾಲುಗಳು ಮಾರ್ಮಿಕವಾಗಿವೆ. ಎಲ್ಲ ಪ್ರಬುದ್ಧ ಹೆಂಗಸರ ಮನದ ದೋರಣೆಯೂ ಆಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: