ನಿಲ್ಲುತ್ತಿದೆ ಚುಕುಬುಕು ರೈಲು ಬಂಡಿ

ಅಂತರ್ಜಾಲ ಸಾಹಿತ್ಯ ಪತ್ರಿಕೆ ಚುಕು ಬುಕು ವಿದಾಯ ಹೇಳುತ್ತಿದೆ.

ಅನೇಕ ನೆನಪಿನಲ್ಲುಳಿಯುವ ಲೇಖನಗಳನ್ನು ಕೊಟ್ಟ ಬಂಡಿ ಇದ್ದಕ್ಕಿದ್ದಂತೆ ತನ್ನ ಪಯಣ ನಿಲ್ಲಿಸುತ್ತಿದೆ.

ರೈಲು ವಿದಾಯದ ರೂಪಕ ಅಂದರು ರಘು ಅಪಾರ. ವಿದಾಯದ ನೋವಿನೊಂದಿಗೆ ಈ ಲೇಖನ.

***

ಪಯಣ ಮುಗಿದಿದೆ; ದಾರಿ ಉಳಿದಿದೆ

ಚುಕ್ಕುಬುಕ್ಕು

ಚುಕ್ಕುಬುಕ್ಕು ಇನ್ನು ಪ್ರಕಟವಾಗುವುದಿಲ್ಲ ಎಂಬ ಸುದ್ದಿಯನ್ನು ನಿಮಗೆ ಹೇಳಲು ಬೇಸರವಾಗುತ್ತಿದೆ. ಯಾಕೆ ಎಂದು ನೀವು ಕೇಳುವ ಪ್ರಶ್ನೆಗೆ ಸುಲಭದ ಉತ್ತರಗಳಿದ್ದಿದ್ದರೆ ಒಳ್ಳೆಯದಿತ್ತು. ಮುಂದೆ ಇಂತಹ ಪ್ರಯತ್ನ ಮಾಡುವವರ ಎದೆಗುಂದಿಸುವಂಥ ಮಾತುಗಳನ್ನು ಹೆಚ್ಚು ಆಡದೆ ಈ ಹಾದಿಯಲ್ಲಿ ನಾವು ಮನಗಂಡ ಒಂದೆರಡು ಅಂಶಗಳನ್ನು ನಿಮ್ಮೊಂದಿಗೆ ಮುಕ್ತಾಯದ ಹೊತ್ತಲ್ಲಿ ಹಂಚಿಕೊಳ್ಳಲು ಪ್ರಯತ್ನಿಸುತ್ತೇವೆ.

ಚುಕ್ಕುಬುಕ್ಕು ಹುಟ್ಟಿದ್ದು ಅದು ಈಗಿರುವ ಸಾಹಿತ್ಯ ಪತ್ರಿಕೆಯ ರೂಪ ಅಥವಾ ಉದ್ದೇಶ ಹೊತ್ತಲ್ಲ. ಪ್ರತಿವರ್ಷ ಪ್ರಕಟವಾಗುವ ೭೦೦೦ ಕನ್ನಡ ಪುಸ್ತಕಗಳು ಏಳೇ ಅಂಗಡಿಗಳಲ್ಲಿ ಮಾರಾಟವಾಗಬೇಕಾದ ಅನಿವಾರ‍್ಯತೆಯನ್ನು ತಪ್ಪಿಸಲು ಹಾಗೂ ಹೊಸ ಪುಸ್ತಕಗಳ ಬಗೆಗಿನ ಮಾಹಿತಿಯನ್ನು ಓದುಗರಿಗೆ ಸುಲಭವಾಗಿ ತಿಳಿಸಲೆಂದು ಶುರುವಾದ ಪುಸ್ತಕ ತಾಣವಿದು. ಪ್ರತಿ ಪುಸ್ತಕಕ್ಕೂ ಒಂದು ಮಿನಿ ವೆಬ್‌ಸೈಟ್ ಮಾಡಿಕೊಡುವ ನಮ್ಮ ಐಡಿಯಾ ಹೊಸ ಲೇಖಕರಿಗೆ, ಹಾಗೂ ಹಲವು ಪ್ರಕಾಶಕರಿಗೆ ವರವಾಗುತ್ತದೆಂಬ ನಮ್ಮ ನಿರೀಕ್ಷೆ ನಿಜವಾಗಲಿಲ್ಲ. ಲೈಬ್ರರಿ ಮಾರಾಟವನ್ನೇ ನಂಬಿಕೊಂಡ ಪ್ರಕಾಶನ ಉದ್ಯಮಕ್ಕೆ ಓದುಗರನ್ನು ತಲುಪುವ ಹಪಹಪಿಯೇನೂ ಇದ್ದಂತೆ ನಮಗೆಂದೂ ಅನಿಸಲಿಲ್ಲ.(ಗ್ರಾಹಕನನ್ನು ಒಲಿಸಿಕೊಳ್ಳದೆ ಲಾಭ ಮಾಡುವ ಜಗತ್ತಿನ ಏಕೈಕ ಉತ್ಪನ್ನ ಕನ್ನಡ ಪುಸ್ತಕ!) ಪ್ರತಿ ಪುಸ್ತಕಕ್ಕೆ ಒಂದಷ್ಟು ಸಣ್ಣ ಮೊತ್ತ ವಿಧಿಸುವ ನಮ್ಮ ಆಲೋಚನೆಯನ್ನು ಕಾರ್ಯರೂಪಕ್ಕೆ ತರುವ ಧೈರ್ಯ ನಮಗೆಂದೂ ಬರಲಿಲ್ಲ.
ನಂತರ ಚುಕ್ಕುಬುಕ್ಕುವನ್ನು ಸಾಹಿತ್ಯಪತ್ರಿಕೆಯಾಗಿ ರೂಪಾಂತರಿಸಲು ಪ್ರಯತ್ನಪಟ್ಟೆವು. ಆದಾಯ ಮೂಲಗಳಿಲ್ಲದೆ ಯಾವುದನ್ನೂ ನಿರಂತರವಾಗಿ ನಡೆಸಲು ಅಸಾಧ್ಯವೆಂಬ ಕಹಿಸತ್ಯದ ಕಣ್ತಪ್ಪಿಸಿ ಇಷ್ಟು ದೂರ ನಡೆಯುತ್ತ ಬಂದೆವು. ಇಂಥ ವೆಬ್‌ಸೈಟ್ ನಡೆಸಲು ಬೇಕಾಗುವ ಸಣ್ಣ ಪುಟ್ಟ ಖರ್ಚುಗಳನ್ನು ಕೈಯಿಂದ ಭರಿಸುವುದು ತೀರಾ ಕಷ್ಟವೆನಿಸದಿದ್ದರೂ ಅದಕ್ಕಾಗಿ ಪ್ರತಿದಿನ ವಿನಿಯೋಗಿಸಬೇಕಾದ ಸಮಯ ಹಾಗೂ ಶ್ರಮಗಳು ಬರುಬರುತ್ತಾ ಭಾರವಾಗತೊಡಗಿದವು.
ಮನರಂಜನೆ ಹಾಗೂ ಸುದ್ದಿಗಳೆರೆಡೂ ಗಾಸಿಪ್‌ಗಳಾಗಿ ಪರಿವರ್ತನೆಗೊಂಡಿರುವ ಈ ದಿನಗಳು ಶುದ್ಧ ಉದ್ದೇಶಗಳ, ಗುಣಮಟ್ಟದ ಯಾವ ಸಂಗತಿಗಳಿಗೂ ಸಂಕಟಕರವೇ ಎನ್ನಬಹುದು. ಹಾಗೆ ನೋಡಿದರೆ ಚುಕ್ಕುಬುಕ್ಕು ಅದೃಷ್ಟಶಾಲಿಯೆನ್ನಿಸುವಷ್ಟು ಲೇಖಕರ ಹಾಗೂ ಓದುಗರ ಪ್ರೀತಿಯನ್ನು ಪಡೆದಿದೆ. ಆದರೂ, ಕಷ್ಟಪಟ್ಟು ಸಂಪಾದಿಸಿ ಪ್ರಕಟಿಸಿದ ಲೇಖನಗಳನ್ನು ಕೆಲವೊಮ್ಮೆ ಯಾರೂ ಓದುತ್ತಾ ಇಲ್ಲವೇನೊ ಎಂಬ ಆತಂಕವಾಗುತ್ತಿದ್ದದ್ದೂ ಇತ್ತು. ನೂರಾರು ಲೈಕು ಕಾಮೆಂಟುಗಳ, ದಿಢೀರ್ ಹಾಗೂ ಸ್ವಯಂ ಪ್ರಕಟಣೆಯ ಈ ಫೇಸ್‌ಬುಕ್ ಕಾಲದಲ್ಲಿ ಇಂಥ ಗೊಂದಲ ತುಂಬ ಶಕ್ತಿಶಾಲಿ. ನಮ್ಮ ಉತ್ಸಾಹವನ್ನು ಏರುಪೇರು ಮಾಡುತ್ತಿದ್ದ ಇನ್ನೊಂದು ಸಂಗತಿ ಇದು.
ಚುಕ್ಕುಬುಕ್ಕು ತಾಣವನ್ನು ನಡೆಸಿದ ಅನುಭವ ಆಧರಿಸಿ ಹೇಳುವುದಾದರೆ,ಇಂಥ ಪ್ರಯತ್ನಗಳ ನಿರಂತರತೆಗೆ ನಮಗೆ ಹೊಳೆದ ಒಂದೇ ಉಪಾಯವೆಂದರೆ ‘ಹೊರೆ’ಯನ್ನು ಹಂಚಿಕೊಳ್ಳುವುದು. ಒಬ್ಬರಿಬ್ಬರ ಬದಲು ಎಂಟು ಹತ್ತು ಸಮಾನಮನಸ್ಕರು(ಸುಲಭ ಅಲ್ಲ) ಇಂಥ ಯೋಜನೆಗಳಿಗೆ ಕೈಹಾಕಿದರೆ ಅವರವರ ವೈಯಕ್ತಿಕ ಕೆಲಸಗಳ ನಡುವೆಯೂ ಈ ಕೆಲಸ ಮಾಡುವುದು ಹೊರೆ ಎನಿಸದು.
ಹಾಗೆ ನೋಡಿದರೆ ಸಾಹಿತ್ಯಸಾಹಸ ಎಂಬುದೇ ಒಂಥರಾ ರಿಲೇ ಓಟದ ಹಾಗೆ ಅಲ್ಲವೆ? ಹಿಂದೆಯೂ ಒಳ್ಳೆಯ ಸಾಹಿತ್ಯಪತ್ರಿಕೆಗಳು ಬರುತ್ತಿದ್ದವು. ಕೆಲಕಾಲದ ಬಳಿಕ ನಿಂತವು. ಮುಂದೆ ಇನ್ಯಾರೋ ಇನ್ಯಾವುದೋ ಹೆಸರಲ್ಲಿ ಅದನ್ನು ಮುಂದುವರಿಸಿದರು; ನಾಳೆ ಮತ್ಯಾರೋ ಮುಂದುವರಿಸುತ್ತಾರೆ.
ಎರಡೂ ಮುಕ್ಕಾಲು ವರ್ಷಗಳ ಈ ರಿಲೇ ಓಟ ನಮಗಂತೂ ಖುಷಿ ಕೊಟ್ಟಿದೆ. ನಮ್ಮನ್ನು ಮೊದಲಿಗಿಂತ ಹೆಚ್ಚು ಆರೋಗ್ಯವಂತರನ್ನಾಗಿ ಮಾಡಿದೆ ಎಂಬ ನಂಬಿಕೆ ನಾವು ಮೂವರದ್ದು.
ಈ ಪಯಣದ ಮೂಲಕ ನಮಗೆ ಹಲವು ಸೊಗಸಾದ ಕ್ಷಣಗಳನ್ನು ನೀಡಿದ ಓದುಗರಿಗೆ ನಾವು ಕೃತಜ್ಞರು. ನಮ್ಮಂಥ ಹೊಸಬರ ಕನಸಿಗೆ ಬೆಂಬಲವಾಗಿ ನಿಂತವರು ಹಲವರು. ವಿಶೇಷವಾಗಿ ನೆನೆಯಬೇಕಾದ್ದು ನಮ್ಮ ಕೋರಿಕೆಯ ಮೇರೆಗೆ ಕಳೆದ ಎಂಟು ತಿಂಗಳ ಕಾಲ ಚುಕ್ಕುಬುಕ್ಕುವಿನ ಸಂಪಾದನೆಯ ಹೊಣೆ ಹೊತ್ತುಕೊಂಡ ಎಚ್ ಎಸ್ ವೆಂಕಟೇಶಮೂರ್ತಿಯವರನ್ನು. ಅವರ ಪ್ರೀತಿ ದೊಡ್ಡದು. ಚುಕ್ಕುಬುಕ್ಕು ಶುರುವಾದ ಹೊಸತರಲ್ಲೇ ‘ಒಂದೊಂದೇ’ ಎಂಬ ಹೆಸರಿನಲ್ಲಿ ಕುಮಾರವ್ಯಾಸ ಕಥಾಂತರವನ್ನು ಬರೆದುಕೊಟ್ಟು ಈ ತಾಣವನ್ನು ಹರಸಿದ್ದ ಅವರನ್ನು ನಾವು ಮರೆಯಲಾಗದು.
ಅದೇರೀತಿ ಆರಂಭದಿಂದಲೂ ಲೆಕ್ಕವಿಲ್ಲದಷ್ಟು ಬರಹಗಳನ್ನು ಬರೆದು ಕೊಟ್ಟುದಲ್ಲದೆ, ಉದ್ದಕ್ಕೂ ನಮ್ಮೆಲ್ಲ ಖುಷಿ ಹಾಗೂ ಚಿಂತೆಗಳನ್ನು ಹಂಚಿಕೊಂಡವರು ಜೋಗಿ. ನಮ್ಮ ಚುಕ್ಕುಬುಕ್ಕು ನೆನಪುಗಳಲ್ಲಿ ಅವರೆಂದೂ ಇರುತ್ತಾರೆ.
ಬರಹ, ಮಾತು, ಸೂಚನೆ, ಪ್ರೋತ್ಸಾಹಗಳ ಮೂಲಕ ಚುಕ್ಕುಬುಕ್ಕುವನ್ನು ಸಲಹಿದವರೆಲ್ಲರ ಹೆಸರುಗಳನ್ನು ಇಲ್ಲಿ ನೆನೆಯುವುದು ನಿಜಕ್ಕೂ ಕಷ್ಟ. ಕೇಳಿದಾಗೆಲ್ಲ ಇಲ್ಲವೆನ್ನದೆ ಬರೆದುಕೊಟ್ಟ ಹಲವು ಹಿರಿ ಕಿರಿಯ ಲೇಖಕರು, ಚುಕ್ಕುಬುಕ್ಕುವಿಗೆ ಹಣ ಹೊಂದಿಸಲು ನಮಗಿಂತ ಹೆಚ್ಚು ಆಸ್ಥೆ ತೋರಿದ ಕೆಲವು ಮಿತ್ರರು, ಪರಿಚಯವೇ ಇಲ್ಲದಿದ್ದರೂ ನಿತ್ಯ ಭೇಟಿಕೊಟ್ಟು ತಪ್ಪದೇ ಕಾಮೆಂಟುಗಳನ್ನು ಹಾಕಿ ಸದ್ದಿಲ್ಲದೆ ಸ್ಫೂರ್ತಿ ತುಂಬಿದವರು, ನಮ್ಮ ಹೊಸ ಸಾಹಸಗಳನ್ನು ಮನದುಂಬಿ ಮೆಚ್ಚಿದವರು, ಪತ್ರಿಕೆಗಳಲ್ಲಿ ಅಥವಾ ಗೆಳೆಯರ ಬಳಗದಲ್ಲಿ ಚುಕ್ಕುಬುಕ್ಕು ಬಗ್ಗೆ ಪ್ರಚಾರ ಮಾಡಿದವರೂ- ಎಲ್ಲರೂ ಇದ್ದಾರೆ ನಮ್ಮ ಮನಸಲ್ಲಿ. ಎಲ್ಲರಿಗೂ ಪಾತ್ರವಿದೆ ಚುಕ್ಕುಬುಕ್ಕುವಿನ ಕಥೆಯಲ್ಲಿ. ಅರ್ಧಕ್ಕೇ ಕೊನೆಗೊಳಿಸಬೇಕಾದ ಎರಡು ಧಾರಾವಾಹಿ(ನೆರೂಡನ ನೆನಪುಗಳು ಹಾಗೂ ಅಸೀಮನಗರಿ)ಗಳಿಗಾಗಿ ಓಎಲ್‌ಎನ್ ಹಾಗೂ ಗುರು ನಮ್ಮನ್ನು ಕ್ಷಮಿಸಲಿ.
ಜತೆಗೆ ನಿಮಗೆಲ್ಲರಿಗೂ ನಿರಾಶೆ ಮಾಡಿದ್ದೇವೆ, ಕ್ಷಮಿಸಿ. ಎಷ್ಟು ಖುಷಿಗಳ ಹೊತ್ತು ತಂದರೂ ಇರದು ಒಂದೂ ಜ್ಞಾಪಕ. ರೈಲೆಂಬುದು ಎಂದಿದ್ದರೂ ವಿದಾಯದ ದು:ಖಕೆ ರೂಪಕ.
ಸಾಧ್ಯವಾದರೆ ಮತ್ತೆ ಸಿಗೋಣ, ಮತ್ತೊಂದು ನಿಲ್ದಾಣದಲ್ಲಿ…
– ಚುಕ್ಕುಬುಕ್ಕು ಟೀಮ್(ಸೌಮ್ಯ, ಅಪಾರ, ಸಿದ್ಧಾರ್ಥ್)

***

we shall miss you ಚುಕು ಬುಕು

‍ಲೇಖಕರು G

July 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Vijaya lakshmi S.P.

    ಚುಕ್ಕುಬುಕ್ಕು ಇನ್ನೂ ಮುಂದೆ ಓಡುವುದಿಲ್ಲ ಎನ್ನುವುದು ನಮ್ಮಂಥ ಓದುಗರಿಗೆ ತೀರಾ ನಿರಾಶಾದಾಯಕ .we too miss you “chukkubukku”

    ಪ್ರತಿಕ್ರಿಯೆ
  2. Vijaykumar Kalyan

    Sorry missing a lot. A state of Mercy Killing for Kannada Publishing RIP !!!!!!!!!

    ಪ್ರತಿಕ್ರಿಯೆ
  3. ಲಕ್ಷ್ಮೀಕಾಂತ ಇಟ್ನಾಳ

    ಚುಕು ಬುಕು ರೈಲು ತನ್ನ ಓಟ ನಿಲ್ಲಿಸಲಿರುವ ಸುದ್ದಿ ಕನ್ನಡ ಓದುಗ ಪ್ರಪಂಚಕ್ಕೊಂದು ಶಾಕ್. ಬಲು ಖೇದವೆನಿಸುತ್ತಿದೆ, ಬೆಳೆಯುವ ಚಿಗುರಿಗೆ ನೀರುಣಿಸದಿರುವ ಅಕ್ಷರ ಜಗತ್ತು ಕನ್ನಡಿಯಲ್ಲೊಮ್ಮೆ ಮುಖ ನೋಡಿಕೊಳ್ಳಲಿ…ಕನ್ನಡಮ್ಮನ ಸೇವೆಗೈದ ಅಪಾರ, ಸೌಮ್ಯ, ಸಿದ್ಧಾರ್ಥ ತ್ರಿಮೂರ್ತಿಗಳಿಗೆ ಶರಣು ಶರಣು, ಹೃದಯದಾಳದಿಂದ. ಲಾಂಗ್ ಲಿವ್ ಚುಕು ಬುಕು…

    ಪ್ರತಿಕ್ರಿಯೆ
  4. ಕುಮಾರ್

    ಚುಕ್ಕುಬುಕ್ಕು ಎಂಬ ಒಂದು ವೆಬ್ ಸೈಟ್ ಇರೋದು ಈಗಷ್ಟೇ ತಿಳೀತು, ಅವಧಿಯಿಂದ!

    ಪ್ರತಿಕ್ರಿಯೆ
  5. ಶಿವಕುಮಾರ ಚೆನ್ನಪ್ಪನವರ

    ನಿಜಕ್ಕೂ ಆಘಾತಕರ ಸಂಗತಿ
    ಚುಕ್ಕು ಬುಕ್ಕು ಬಂಡಿಯಲ್ಲಿಯೇ ಪ್ರತಿದಿನ ಒಂದು ತಾಸುವಾದರು ಕುಳಿತು ಓದಿ ಮನತಣಿಸಿಕೊಳ್ಳುತ್ತಿದ್ದ ನನಗಂತೂ ಮೆಚ್ಚಿನ ಗೆಳೆಯನೋಬ್ಬನ ಅಗಲುವಿಕೆಯ ನೊವಾಗಿದೆ.
    ಮತ್ತೆ ಯಾವುದಾದರೂ ನಿಲ್ದಾಣದಲ್ಲಿ ಬೇಗ ಬೇಟಿಯಾಗಿ ………..

    ಪ್ರತಿಕ್ರಿಯೆ
  6. Shrinivas Pandurangi

    thumba nOvina sangathi. nityada e railu prayana nillutiruvudu duguda, vishadad nenapu
    shrinivas Pandurangi

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: