ಶಿವಪ್ಪನಂಥ ಪಾತ್ರವನ್ನು ಸೃಷ್ಟಿಸಿದ ಬೈರಷ್ಪನವರಿಂದ ಇಂಥ ಮಾತುಗಳು??

’ಅನ್ನಭಾಗ್ಯ’ ಮತ್ತು ಅದರ ವಿರುದ್ಧ ಬರುತ್ತಿರುವ ಟೀಕೆಗಳ ಬಗ್ಗೆ ನಿನ್ನೆ ಜಿ ಎನ್ ನಾಗರಾಜ್ ಅವರು ಬರೆದಿದ್ದರು.

ಇಂದು ಅದೇ ವಿಷಯದ ಬಗ್ಗೆ ಅಕ್ಕಿಮಂಗಲ ಮಂಜುನಾಥ್ ಅವರ ಲೇಖನ

***

ಅಕ್ಕಿಮಂಗಲ ಮಂಜುನಾಥ್

9-7-2015 ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬೈರಪ್ಪನವರ ಲೇಖನವನ್ನು ಓದಿದೆ . ಅಲ್ಲಿ ಒಂದು ಕಡೆ ಹೇರ್ ಕಟಿಂಗ್ ಶಾಪಿನ ಯಜಮಾನನ ಕೈಕೆಳಗೆ ದುಡಿಯುವ ಹುಡುಗರ ಬಗ್ಗೆ ಪ್ರಸ್ತಾಪಿಸುತ್ತಾ ‘ಅವರು ಭಾಗ್ಯದ ಅಕ್ಕಿ ದೊರೆತ ಕೂಡಲೇ ತಮ್ಮ ಕಾಯಕ ಮರೆತು ಸೋಮಾರಿಗಳಾಗಿ ಬಿಟ್ಟಿದ್ದಾರೆ ‘ಎಂಬ ಧೋರಣೆಯಲ್ಲಿ ಮಾತನಾಡಿದ್ದಾರೆ. ಅಂದರೆ ಈ ಮಾತಿನ ಅರ್ಥ,ನಾಲ್ಕು ಕೆ.ಜಿ.ಅಕ್ಕಿಯೇ ತಿಂದು ಮಿಕ್ಕಿ ಕಾಳಸಂತೆಯಲ್ಲಿ ಮಾರಿ ಅದರಿಂದ ಬಂದ ಸಂಪತ್ತಿನಿಂದ ತಮ್ಮೆಲ್ಲಾ ಅಗತ್ಯತೆಗಳನ್ನು ಪೂರೈಸಿಕೊಂಡು ಕಾಲಮೇಲೆ ಕಾಲು ಹಾಕಿಕೊಂಡು ಯಾಯಪ್ಪನಿಗೂ ಕ್ಯಾರೇ ಎನ್ನದೆ ರಾಜಾರಷ್ಟಾಗಿ ಬದುಕುತ್ತ ಭೂಮಿಗೆ ಭಾರವಾಗಿಬಿಟ್ಟಿದ್ದಾರೆ ಎಂಬಂತಿದೆ.
ಕೆಲವು ಮನುಷ್ಯರು ಹೀಗೇನೆ.ತಾವು ಯಾವುದೋ ರಂಗದಲ್ಲಿ ಸಾಧನೆ ಮಾಡಿ ಹೆಸರುಗಳಿಸಿದ್ದೇ ತಡ ಪ್ರಪಂಚದೆಲ್ಲ ಜನತೆ ತಮ್ಮ ಮಾತಿಗೆ ಮನ್ನಣೆನೀಡಿ ಅದರಂತೆ ಬದುಕಬೇಕೆಂದು ಆಶಿಸುತ್ತಾರೆ.ಅಂಥವರ ಸಾಲಿನಲ್ಲಿ ನಮ್ಮ ಕನ್ನಡದ ಜ್ಞಾನಪೀಠ ಪಡೆದ ಲೇಖಕರಾದ ಅನಂತಮೂರ್ತಿ ಮತ್ತು ಕಾರ್ನಾಡರು ಸಿದ್ಧಹಸ್ತರು.ಮುಂದಿನ ಜ್ಞಾನಪೀಠವನ್ನು ಕಿತ್ತುಕೊಂಡುಬಿಡುವ ತವಕದಲ್ಲಿರುವ ನಮ್ಮ ಬೈರಪ್ಪನವರು ಒಂದು ಪಕ್ಷವನ್ನು ಓಲೈಕೆ ಮಾಡಿಕೊಂಡು , ಸಮಯ ಸಾದಿಸುವ ಪ್ರಯತ್ನ ಮಾಡುತ್ತಿದ್ದಾರೆಂಬುದು ಬೈರಪ್ಪನವರ ವಿರೋಧಿಗಳ ಮಾತು. ಏನೇ ಆಗಲಿ ಅವರು ಅಂತಹ ಪ್ರಶಸ್ತಿಗೆ ಯೋಗ್ಯವರಾದವರೆಂಬುದು ಅವರ ಸಾಹಿತ್ಯವನ್ನು ಓದಿರುವ ಎಲ್ಲರಿಗೂ ಸರಿ ಎನ್ನಿಸುವ ಮಾತೆ.

ಆದರೆ ನಮ್ಮ ಬೈರಪ್ಪನವರು ಸಣ್ಣ ಗುಳ್ಳೆಯನ್ನು ಗೀರಿ ಗೀರಿ ದೊಡ್ಡ ಗಾಯವನ್ನೇ ಮಾಡುವಂತೆ ಅವರಿಗೆ ಸಂಬಂಧಿಸಿರದ ಅಕ್ಕಿ ವಿಚಾರದಲ್ಲಿ ತಲೆಹಾಕಿ ಸುಮ್ಮನೆ ದೊಡ್ಡದು ಮಾಡುತ್ತಾ ಹೋಗುತ್ತಿದ್ದಾರೆ. ಯೋಚಿಸಿದರೆ , ಇಲ್ಲಿ ನಮ್ಮ ಅರಿವಿಗೆ ಬರುವ ಬಹು ಮುಖ್ಯ ಅಂಶವೆಂದರೆ ಸೋಮಾರಿತನಕ್ಕಿಂತಲೂ ಮುಖ್ಯವಾಗಿ ಕೂಲಿ ಮಾಡುವ (ದುಡಿಯುವ ವರ್ಗ) ಆ ಕೆಲಸದಿಂದ ಹಿಂದೆ ಸರಿದನೆಂದರೆ , ಅವರ ಹೊಟ್ಟೆಗಿಂತಲೂ ಮುಖ್ಯವಾಗಿ ದುಡಿಸಿಕೊಳ್ಳುವವರ ಹೊಟ್ಟೆಗಳು ಒಣಗಿಬಿಡುತ್ತವೆಂಬ ಆತಂಕ ಮತ್ತು ಅಸೂಯೆತನ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.ಯಜಮಾನನಾದವನು ಯಾವತ್ತಿಗೂ ಸಿಂಹಾಸನಾದೀಶನಾಗಿಯೇ, ಸೇವಕನಾದವನು ಆಳಾಗಿಯೇ ದುಡಿಯುತ್ತ ನರಳುತ್ತ ಕೊನೆಗಾಣಬೇಕೆಂಬ ಮನಸ್ಥಿತಿಯೇ ಇರುವಂತಿದೆ.
ಹಿಂದೆ ಕವಿಗಳು ರಾಜನನ್ನು ಆಶ್ರಯಿಸಿ ಅವರೆಲ್ಲ ತಪ್ಪುಗಳನ್ನು ಮುಚ್ಚಿಟ್ಟು, ಕೊಂಡಾಡಿ ಹೊಗಳಿ ಅವರಿಂದ ಬಿರುದು ಬಾವಲಿ ಸಂಪತ್ತುಗಳ ಪಡೆದು ತುಂಬಾ ಸುಬಿಕ್ಷವಾಗಿ ಬದಕುತ್ತಿದ್ದರಂತೆ. ಪ್ರಜಾಪ್ರಭುತ್ವದ ಕಾಲಕ್ಕೆ ಉದಯಿಸಿದ ಲೇಖಕರು ರಾಜಕಾರಣದಿಂದ ದೂರವುಳಿದು ತಮ್ಮದೇ ಆದ ಘನತೆ ಗೌರವದೊಂದಿಗೆ ಬರೆದು ಬದುಕಿ ಜನಮಾನಸದಲ್ಲಿ ನಿಂತರು ಮತ್ತು ಅನೇಕ ಸುಧಾರಣೆಗಳಿಗೂ ಕಾರಣರಾದರು. ಆದರೆ ಬದಲಾದ ಕಾಲಮಾನದಲ್ಲಿ ಬುದ್ಧಿ ಜೀವಿಗಳೆನಿಸಿಕೊಂಡವರು ಮತ್ತು ತಾವೇ ಪ್ರಜ್ಞಾಪೂರ್ವಕ ಜ್ಞಾನವುಳ್ಳವರೆಂದು ವರ್ತಿಸುತ್ತ ಆಳುವವರ ಪುಂಗಿಗಳಾಗಿರುವುದು ಕಂಡರೆ ಇವರು ಎಂತಹ ಸಮಯಸಾಧಕತನಕ್ಕೂ ಸಿದ್ಧ ಎಂಬಂತೆ ವರ್ತಿಸುತ್ತಿರುವುದು ಅರಿವಿಗೆ ಬಂದುಬಿಡುತ್ತದೆ. ಮತ್ತು ರಾಜಕಾರಣಿಗಳೇ ತಮ್ಮ ಯೋಗ್ಯತೆಗಳನ್ನು ಸಮಾಜದ ಮುಂದೆ ಬಿಂಬಿಸಿಕೊಳ್ಳಲು ಬಳಸಿಕೊಳ್ಳುತ್ತಿರುವರೆಂಬ ಅನುಮಾನವೂ ಮೂಡುತ್ತದೆ. ಈಗ ಇಲ್ಲಿ ಬೈರಪ್ಪನವರೂ ಸಹ ಒಂದು ಪಕ್ಷದ ವಕ್ತಾರರಂತೆ ವರ್ತಿಸುತ್ತ ಅವರ ಬಾಲಬಡಕರಾಗಿರುವರೆಂದು ಅವರು ಆಗಾಗ ನುಡಿಯುತ್ತಿರುವ ನುಡಿಗಳಿಂದಲೇ ಗೊತ್ತಾಗುತ್ತದೆ.
ಕೆಲವು ನಾಯಕರು ಜನಕ್ಕೆ ಅನುಕೂಲವಾಲಿ ಎಂದೋ ಅಥವ ತಮ್ಮ ಸ್ವಾರ್ಥಕ್ಕಾಗಿಯೋ ಅಥವ ಒತ್ತಡಗಳಿಗೆ ಮಣಿದೋ ಜಾರಿಗೆ ತಂದ ಕಡಿಮೆ ಬೆಲೆಯ ಅಕ್ಕಿಯಂತಹ ಯೋಜನೆಗಳು ನಾಲ್ಕು ಜನಕ್ಕೆ ಅನುಕೂಲವಾಗುವುದಾದರೆ ಅವುಗಳ ಸಾದಕ ಬಾದಕಗಳ ಬಗ್ಗೆ ಚರ್ಚೆ ಮಾಡಬೇಕೇ ವಿನಃ ಅವನ್ನು ತುಳಿದು ಬಿಡುವ ಕುಟಿಲತನವನ್ನು ಎಂದಿಗೂ ಯಾರೊಬ್ಬರೂ ಮಾಡಬಾರದು.
ಅನ್ನ ಬಾಗ್ಯ ಎಂಬ ಹೆಸರಿನ ಬಿಕ್ಷಾನ್ನವನ್ನು ನೀಡತೊಡಗಿದ್ದೇ ಬಡವರಿಗೆ ವರವಾಗುವ ಬದಲು ಶಾಪವಾದಂತಿದೆ. ಏಕೆಂದರೆ , ತಾವು ಹೇಳಿದ ಕೆಲಸ ಮಾಡಿಕೊಂಡು ಕಾಲಿನ ಕೆರದಂತಿದ್ದವರು ಏಕಾಏಕಿ ಕಾಲಿಗೆ ಚುಚ್ಚುವ ಮುಳ್ಳಿನಂತಾಗಿ ಬಿಟ್ಟರೆ ಸದಾ ದುಡಿಸಿಕೊಂಡೇ ಬದುಕುವ ಅಧಿಕಾರಿವರ್ಗಕ್ಕೆ ಕಷ್ಟವಾಗಿಬಿಡಬಹುದೆಂಬ ಪರಿಕಲ್ಪನೆಯಿಂದ ಅವರ ದೃಷ್ಟಿ ತಾಗಿ ,ಇಂದು ನಿರ್ಗತಿಕನ ಹೊಟ್ಟೆ ತಳಮಳಿಸತೊಡಗಿರುವುದು ಒಂದು ರೀತಿಯ ಶಾಪವೇ ಸರಿ.ಬಡವನಾದವನಿಗೆ ಇಂದು ನಡೆಯುತ್ತಿರುವ ನಾನಾ ರೀತಿಯ ಚರ್ಚೆಗಳು ಏನೆಂಬುದೇ ಅರ್ಥವಾಗದು.ಇವರ ವಿಚಾರಗಳನ್ನು ಕೇಳುವ ಸಮಯವಾಗಲಿ ಅರ್ಥ ಮಾಡಿಕೊಳ್ಳುವ ಬುದ್ಧಿಶಕ್ತಿಯಾಗಲಿ ಅಥವಾ ಇವರನ್ನು ತಲುಪುವ ಮಾದ್ಯಮಗಳಾಗಲಿ ಇಲ್ಲದಿರುವುದು ದುರದೃಷ್ಟಕರ.
ಇಂಥ ಬುದ್ಧಿ ಜೀವಿಗಳಿಗೆ ನಾನೊಂದು ಪ್ರಶ್ನೆ ಕೇಳುತ್ತೇನೆ.ಇವತ್ತು ರೈತನಾದವನು ಲೋಡುಗಟ್ಟಲೆ ತರಕಾರಿ ಬೆಳೆದು ಬೆಲೆ ಸಿಕ್ಕದೆ ಬೀದಿಗಳಲ್ಲಿ ಚೆಲ್ಲಿ ಕುದಿದು ಸಾಲ ತೀರಿಸಲು ಸಾದ್ಯವಾಗದೆ ಸಾವಿಗೆ ಮೊರೆ ಹೋಗುತ್ತಿದ್ದಾನೆ.ವರ್ಷಾನುಗಟ್ಟಲೆ ಬೆಳೆದ ಕಬ್ಬನ್ನು ಕಾರ್ಖಾನೆಗೊಯ್ದು ಒಡೆಯರಿಗೊಪ್ಪಿಸಿ ಬರಿಗೈಲಿ ವಾಪಸ್ಸು ಬಂದು ಇರುವ ಬೆಳೆಗೆ ಬೆಂಕಿ ಹಚ್ಚಿ ಬದುಕಿಗೆ ವಿದಾಯ ಹೇಳುತ್ತಿದ್ದಾನೆ.ಟನ್ನುಗಟ್ಟಲೆ ದಾನ್ಯ ಬೆಳೆದು ಖರ್ಚನ್ನೂ ವಸೂಲಿ ಮಾಡಿಕೊಳ್ಳಲಾಗದೆ ಆಸ್ತಿಯನ್ನೇ ಮಾರಿ ನಿರ್ಗತಿಕನಾಗುತ್ತಿರುವಂತಹ ಸಾವಿರಾರು ಸಮಸ್ಯೆಗಳು ನಿಮ್ಮ ಕಣ್ಣಿಗೆ ಕಾಣದೆ ಕೇವಲ ಒಂದು ರೂ ಅಕ್ಕಿಯದೇ ಒಂದು ಘನಘೋರ ಸಮಸ್ಯೆಯಾಗಿ ನಿಮಗೆ ಕಂಡುಬಿಟ್ಟಿತೇ? ಕುಟಿಲ ಕಣ್ಣಿನ ಕಿಸುರಿಗೆ ಸಿಕ್ಕ ಬಡವನ ಹೊಟ್ಟೆ ತಣ್ಣಗಿರಲು ಸಾದ್ಯವಾದೀತೇ ?
ಸಾಕ್ಷಾತ್ ಬಡವರ ಒಡಲಾಳದ ದನಿಯಾಗಿ ಮಿಡಿದ ಶಿವಪ್ಪ (ಮತದಾನ) ನಂಥ ಪಾತ್ರವನ್ನು ಸೃಷ್ಟಿಸಿದ ಬೈರಷ್ಪನವರ ಮನಸ್ಸಿನಿಂದ ಇಂಥ ಮಾತುಗಳು ಬರುತ್ತಿವೆಯೋ ಅಥವಾ ಇವರ ಬಾಯಿಗೆ ಬೇರೆಯವರು ಚಿಪ್ಪನ್ನು ಜೋಡಿಸಿ ನುಡಿಸುತ್ತಿದ್ದಾರೋ !
 

‍ಲೇಖಕರು G

July 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Anonymous

    mr.soory adu yalli swamy tammntoru adigi kulititiruttiro gottilla. nimge bhashe, padagal tappu bega sikku bidtave. shloka, adu idu anta namma tali tintiri. baredaddannu bembalisi. illa nivadru namge kalisi paa. sumne kaaalu yalibedi. manujnath obba samanya raita ri.

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಥ್ಯಾಂಕ್ಸ್, ಸೂರಿಯವರೇ.
    ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
    ಅಭಿನಂದನೆಗಳು, ಅನಾಮಿಕರೆ.
    ಹೆಸರು ತಿಳಿಸಿದ್ದರೆ ಚೆನ್ನಾಗಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: