ಮೂಲ: ಡಬ್ಲ್ಯೂ.ಎಚ್. ಆಡೆನ್

ಅನುವಾದ: ಪ್ರಮೋದ ಮುತಾಲಿಕ
—–
ಲಕ್ಷಗಟ್ಟಲೆ ಜೀವಿಗಳು ಇವೆ ಈ ನಗರಿಯಲ್ಲಿ
ಅಂದುಕೊ, ಕೆಲವರು ಬಂಗಲೆಗಳಲ್ಲಿ, ಇನ್ನು
ಕೆಲವರು ಗುಡಿಸಲುಗಳಲ್ಲಿ, ಆದರೂ ಮಿತ್ರಾ
ನಮಗಿಲ್ಲ ಒಂಚೂರೂ ಸ್ಥಳ, ನಮಗಿಲ್ಲ.
ಇತ್ತು ನಮಗೂ ಒಮ್ಮೆ ನಮ್ಮ ದೇಶ, ತುಂಬ
ಸುಂದರ ಅಂದುಕೊಂಡಿದ್ದೆವು. ಇದೆ ಇನ್ನೂ :
ನೋಡು ಭೂಪಟದಲ್ಲಿ, ನಾವು ಹೋಗಲಾರೆವಲ್ಲಿ
ಮಿತ್ರಾ, ನಮಗೆ ಹೋಗಲಾಗದಲ್ಲಿಗೆ.
ಇದೆ ದೇವಾಲಯದ ಅಂಗಳದಲ್ಲಿ ಹಳೆಯ
ಮರವೊಂದು, ಚಿಗುರುವುದು ಹೊಸತಾಗಿ
ಪ್ರತಿ ವಸಂತದಲ್ಲೂ, ನಮ್ಮ ಹಳೆಯ ಪಾಸ್ಪೋರ್ಟ್ಗಳು
ಹಾಗಾಗಲಿಲ್ಲ ಮಿತ್ರಾ, ಹಳೆಯ ಪಾಸ್ಪೋರ್ಟ್ ಗಳು.
ಅಧಿಕಾರಿ ಹೇಳಿದ ತನ್ನ ಮುಂದಿದ್ದ ಮೇಜನ್ನು
ಗುದ್ದಿ, ‘ಪಾಸ್ಪೋರ್ಟ್ ಇರದಿದ್ದರೆ ನೀವು ಸತ್ತಂತೆ
ದಾಖಲೆಗಳ ಪ್ರಕಾರ ‘ ಆದರೆ ನಾವಿನ್ನೂ
ಬದುಕಿದ್ದೇವಲ್ಲ ಮಿತ್ರಾ, ಇನ್ನೂ ಬದುಕಿದ್ದೇವೆ.
ಹೋದೆ ಒಂದು ಸಮಿತಿಯೆಡೆಗೆ, ಉಪಚರಿಸಿ
ಕುರ್ಚಿಯನೂ ನೀಡಿದರು. ಹೇಳಿದರು ನಯವಾಗಿ
ಮರುವರ್ಷ ಬರುವಂತೆ. ಆದರೆ ಇಂದೆಲ್ಲಿ ಹೋಗೋಣ
ಮಿತ್ರಾ, ಇಂದೆಲ್ಲಿ ಹೋಗೋಣ?
ದೊಡ್ಡ ಜನ ಸಭೆಗೆ ಬಂದೆ. ಅರಚುತ್ತಿದ್ದ
ಭಾಷಣಕಾರ, ‘ಅವರನ್ನು ಬಿಟ್ಟುಕೊಂಡರೆ ಒಳಗೆ
ಕಸಿಯುತ್ತಾರೆ ನಮ್ಮ ಅನ್ನ ‘ಎಂದು. ನನ್ನ, ನಿನ್ನ
ಕುರಿತು ಮಾತಾಡುತ್ತಿದ್ದ ಮಿತ್ರಾ, ನನ್ನ ನಿನ್ನ ಕುರಿತು.
ಕೇಳಿಸಿತು ಆಕಾಶದಲ್ಲಿ ಗುಡುಗು ಸಿಡಿಲಿನ ಆರ್ಭಟ
ಅಂದುಕೊಂಡರೆ, ಹಿಟ್ಲರನ ಧ್ವನಿಯದು ಯುರೋಪ್
ಉದ್ದಕ್ಕೂ ‘ಅವರು ಸಾಯಬೇಕು ‘ಎಂದು. ನಾವಿದ್ದೆವು
ಆತನ ಮನಸಿನಲಿ, ನಾವಿದ್ದೆವು ಮಿತ್ರಾ.
ನೋಡಿದೆ ಸಿಂಗರಿಸಿದ ಪುಟ್ಟ ನಾಯಿಯೊಂದನ,
ಬಾಗಿಲೊಂದು ತೆರೆದು ಬೆಕ್ಕನ್ನೂ ಬಿಟ್ಟರೊಳಗೆ.
ಆದರವು ಜರ್ಮನ್ ಯಹೂದಿಗಳಾಗಿರಲಿಲ್ಲ
ಮಿತ್ರಾ, ಜರ್ಮನ್ ಯಹೂದಿಗಳಾಗಿರಲಿಲ್ಲ.
ಹೋದೆ ಕೊನೆಗೊಮ್ಮೆ ಬಂದರಿಗೆ, ನಿಂತೆ
ಧಕ್ಕೆಯ ಮೇಲೆ, ಎಷ್ಟೊಂದು ಸ್ವಚ್ಛಂದವಾಗಿ
ಈಜುವ ಮೀನುಗಳ ಕಂಡೆ, ಕೇವಲ ಹತ್ತಡಿ
ದೂರದಿ, ಹತ್ತೇ ಅಡಿ ದೂರ ಮಿತ್ರಾ.
ಓಡಾಡಿದೆ ಕಾಡಿನ ಮಧ್ಯೆ , ಕಂಡೆ ಮರತುಂಬಾ
ಪಕ್ಷಿಗಳ. ಕೇಳಿದೆ ಅವು ಎದೆತುಂಬಿ ಹಾಡುವದ.
ಇರಲಿಲ್ಲ ಅವುಗಳಿಗೆ ರಾಜಕಾರಣಿಗಳು.ಮನುಷ್ಯ
ಜಾತಿಯವು ಅವಲ್ಲ ಮಿತ್ರಾ,ಅಲ್ಲ, ಅಲ್ಲವೇ ಅಲ್ಲ.
ಕನಸೊಂದು ಕಂಡೆ ಈ ಮಧ್ಯೆ : ಬೃಹತ್ ಕಟ್ಟಡ
ಸಾವಿರ ಅಂತಸ್ತುಗಳದ್ದು, ಸಾವಿರ ಕಿಟಕಿಗಳು
ಮತ್ತು ಸಾವಿರ ಬಾಗಿಲುಗಳು ಸಹ ! ನಮಗಾಗಿ
ಒಂದೂ ಅಲ್ಲ ಮಿತ್ರಾ ನಮಗಾಗಿ ಒಂದೂ ಅಲ್ಲ.
ನಿಂತೆ ವಿಶಾಲವಾದ ಮೈದಾನವೊಂದರ ಮಧ್ಯೆ
ಕೊರೆವ ಚಳಿಯಲ್ಲಿ, ನೋಡಿದೆ ಸಾವಿರಾರು
ಸೈನಿಕರು ಓಡಾಡುವದು ಎಲ್ಲಕಡೆ. ಹುಡುಕುತ್ತಿದ್ದರು
ಅವರು ನನ್ನ, ನಿನ್ನ ಮಿತ್ರಾ, ಹೌದು ನನ್ನ, ನಿನ್ನ !






0 Comments