
ಜಸ್ಟ್ ಶಫಿ
ನಾನು
ಒಂದಿಷ್ಟು ಅರ್ಥವಾಗದ್ದನ್ನು ಓದಿ
ವೇದಿಕೆಯಿಂದ ಇಳಿಯುತ್ತೇನೆ
ನೀವು
ಸಿದ್ಧವಾಗಿಸಿದ್ದ ಚಪ್ಪಾಳೆ
ಇಲ್ಲೆಲ್ಲಾ ಆವರಿಸಿಕೊಳ್ಳುತ್ತದೆ
ಹಸಿವು, ಆತಂಕ, ಅನಿಶ್ಚಿತತೆ
ಹೊತ್ತ ಕಣ್ಣುಗಳು
ನಿಮ್ಮ ಚಪ್ಪಾಳೆಯ ನಡುವೆ ಸಿಲುಕಿ
ಅಪ್ಪಚ್ಚಿಯಾಗುವುದನ್ನು;
ಮೋಸ, ಕ್ರೌರ್ಯ, ಅಸಮಾನತೆ
ಉಂಡ ಜೀವಗಳು
ನನ್ನ ಕವಿತೆಯಲ್ಲಿ ಬಳಸಿ ಬಿಸಾಡುವುದನ್ನು
ಸಾಧ್ಯವಾಗಿಸಲು
ಈ ವೇದಿಕೆ ಕಟ್ಟಿರುವುದೆಂದಾದರೆ –
ಲೋಕದ ಸಮಸ್ತ ನೊಂದವರ
ಒಡಲ ಕಿಚ್ಚಿಗೆ
ಇದು ಧಗ್ಗೆಂದು ಹೊತ್ತಿಕೊಳ್ಳಲಿ
ಮತ್ತು,
ಅದು ಮೊದಲಿಗೆ
ನನ್ನನ್ನೇ ಆಹುತಿ ತೆಗೆದುಕೊಳ್ಳಲಿ;
ಮತ್ತು,
ನಿಮ್ಮ ಚಪ್ಪಾಳೆ ತಟ್ಟುವ ಕೈಗಳನ್ನು .
-ಕಂದ





0 Comments