ನಿಮಗೆ ತಿಳಿದಿರಲಿ : ಹೀಗೊಂದು ಕಾಡಿನ ಕಥೆ

ಕಾಂಡಾರ್ಕಿಟೋ

(ಪ್ರಬಂಧ)

photo7

ಆರ್ ವಿಜಯರಾಘವನ್

ಲಿಮಾದ ಬಯಲು ಕಳೆದು ಆಂಡಿಸ್‌ನ ಅಡೆತಡೆ ದಾಟಿದರೆ ಪೆರುವಿನ ಅರ್ಧ ವ್ಯಾಪಿಸಿರುವ ಹಭೆಯಾಡುವ ಹಸಿರು ಅಮೆಝೋನಿಯನ್ ಕಾಡು. ನಾವು ಜನಸಂಖ್ಯೆ ೧೭೩೬೦೦ರಷ್ಟಿರುವ ಈಕ್ವಿಟೋಸ್ ಪಟ್ಟಣದಲ್ಲಿ ಇಳಿದೆವು. ಟೆಕ್ಸಾಸ್‌ನಷ್ಟಿರುವ ಇಡೀ ಪ್ರದೇಶದ ದೊಡ್ಡ ಪಟ್ಟಣ ಅದು. ಅಲ್ಲಿಗೆ ಹೋಗಲು ರಸ್ತೆಗಳಿಲ್ಲ. ಸಮುದ್ರದಲ್ಲಿ ಇಲ್ಲವೇ ವಿಮಾನದಲ್ಲಿ ತಲುಪಬೇಕು. ರಬ್ಬರ್ ಭರಾಟೆ ಹೆಚ್ಚಿಗಿದ್ದಾಗ ಅಂದರೆ ೧೮೮೦ ರಲ್ಲಿ ಈ ಪಟ್ಟಣ ತಲುಪಲು ದಕ್ಷಿಣ ಅಮೆರಿಕದ ಉತ್ತರ ಕರಾವಳಿಯನ್ನು ಪೂರ್ತಿ ಸುತ್ತಬೇಕಾಗಿ ಬರುತ್ತಿತ್ತು. ಅದೂ ಬ್ರೆಝಿಲ್‌ನಲ್ಲಿರುವ ಅಮೆಝಾನ್‌ನ ಮುಖದವರೆಗೆ. ಅಲ್ಲಿಂದ ನದಿಗೆದುರು ಈಕ್ವೆಟೋಸಿಗೆ ಹೋಗಬೇಕಿತ್ತು. ಒಟ್ಟಿಗೆ ೭೦೦೦ಮೈಲಿ ಹಾದಿ. ಈಗ ಅದು ಒಂದೂವರೆ ತಾಸಿನ ಪಯಣ. ೬೪೦ ಮೈಲಿ ವಿಮಾನ ಪ್ರಯಾಣ.
ನಗರದಲ್ಲಿ ರಬ್ಬರ್ ಭರಾಟೆಯ ದಿನಗಳ ಕುರುಹುಗಳು ಇನ್ನೂ ಇವೆ. ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಪ್ಯಾರಿಸ್‌ನ ಐಫೆಲ್ ಟವರ್ ವಿನ್ಯಾಸಗೊಳಿಸಿದ ಅಲೆಕ್ಸಾಂಡರ್ ಗುಸ್ತಾವ್ ಐಫೆಲ್ ವಿನ್ಯಾಸ ಮಾಡಿದ ಎರಡು ಅಂತಸ್ಥುಗಳ ಕಬ್ಬಿಣದ ಪ್ಲೇಟುಗಳಿಗೆ ರಿವೆಟ್ ಹಾಕಿ ನಿರ್ಮಿಸಿದ ಕಟ್ಟಡವಿದೆ. ಇದನ್ನು ಪ್ಯಾರಿಸ್ಸಿನಲ್ಲಿ ೧೮೮೯ರಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ರಬ್ಬರ್ ಬ್ಯಾರನ್ ಒಬ್ಬ ಇದನ್ನು ಕೊಂಡು ಬಿಚ್ಚಿ ಹಡಗಿನಲ್ಲಿ ಈಕ್ವೆಟೋಸ್‌ಗೆ ಸಾಗಿಸಿದ.
ಮೊದಲ ವಿಶ್ವಸಮರ ಕೊನೆಗೊಳ್ಳುವ ಮೊದಲೇ ರಬ್ಬರ್ ಬೂಮ್ ಕೊನೆಗೊಂಡಿತು. ನಂತರದ ಮಾತು ತೈಲದ್ದು. ಈಕ್ವಡಾರಿನ ಗಡಿಯ ಪ್ರದೇಶದಲ್ಲಿ ಹೇರಳ ತೈಲ ನಿಕ್ಷೇಪವಿದೆ. ಆದರೆ ಅದರ ಗುಣಮಟ್ಟ ಕಡಿಮೆ. ಆದ್ದರಿಂದ ಹಲವು ವಿದೇಶೀ ಕಂಪೆನಿಗಳು ವಾಪಸ್ಸು ಹೋದವು. ತೀರ ಪ್ರದೇಶಕ್ಕೆ ಪೈಪ್‌ಲೈನ್ ಹಾಕುವ ಕೆಲಸ ಮುಗಿದು ಮತ್ತಷ್ಟು ಶೋಧಗಳು ನಡೆದು ಹೊಸ ಅನ್ವೇಷಣೆಗಳಿಂದ ಆರ್ಥಿಕ ಪುನಶ್ಚೇತನವಾಗುತ್ತಿದೆ. ಈಕ್ವಿಟೋಸ್‌ನ ಸುತ್ತ ನೂರಾರು ಎಕರೆ ಕಾಡು ಕಡಿಯಲಾಗಿದೆ. ಅಲ್ಲಿದ್ದವರು ಆದಿ ಇಂಡಿಯನ್ನರು. ವಿಶಾಲ ಹಸಿರುಕಾಡುಗಳಲ್ಲಿ ಜೀವಿಸುತ್ತಿದ್ದವರನ್ನು ಮುಖ್ಯವಾಹಿನಿ ಒಳಕ್ಕೆ ಸೇರಿಸಿಕೊಂಡುಬಿಟ್ಟಿದೆ. ಕಾಡಿನಾಳದಲ್ಲಿ ಬದುಕುತ್ತಿದ್ದವರು ಈಕ್ವಿಟೋಸ್ ನಗರ ಸೇರಿದ್ದಾರೆ. ಅವರೊಂದಿಗೆ ಅವರ ಹಳೆಯ ನಂಬಿಕೆಗಳೂ ಪೇಟೆಗೆ ಬಂದಿವೆ. ಅವುಗಳಲ್ಲಿ ಜಂಗಲ್‌ನ ಮಾಟ ಮಂತ್ರ ಕೂಡಾ ಸೇರಿವೆ.
1
ನಾನು ಕುತೂಹಲಕ್ಕಾಗಿ ಅವರಲ್ಲಿ ಇರುವ ಅಂತಹ ಮಂತ್ರವಾದಿಗಳ ಕುರಿತು ವಿಚಾರಿಸಿದೆ. ಅವರು ಯಾವುದೋ ಕಾಡುಬಳ್ಳಿಯ ತೊಗಟೆಯ ಜೊತೆ ಒಂದಿಷ್ಟು ಮೂಲಿಕೆ ಸೇರಿಸಿ ಮತ್ತು, ಭ್ರಮೆ ಉಂಟುಮಾಡುವ ಅಯಾಹುವಾಸ್ಕ ಎಂಬ ಕಷಾಯ ಮಾಡಿ ಕುಡಿದು ಅದರ ಪ್ರಭಾವದಿಂದ ಅತ್ಯಂತ ಪ್ರಬಲ ಕೇಡುಂಟು ಮಾಡುವರೆಂದು ಹೆಸರುಗೊಂಡವರು.
ಎರಡು ಬಗೆಯ ಮಂತ್ರವಾದಿಗಳು ಈ ಕಷಾಯವನ್ನು ಸೇವಿಸುತ್ತಾರೆ. ಅವರಲ್ಲಿ ಒಂದು ಬ್ರಜೋ ಎನ್ನುವ ಹಲಬಗೆಯ ಊಹಿಸಲಸಾಧ್ಯವಾದ ಕೇಡುಂಟು ಮಾಡುವ ಮಾಂತ್ರಿಕರು. ನಾನು ಮಾತನಾಡಿದ ಯಾವೊಬ್ಬನೂ ಒಬ್ಬನಾದರೂ ಬ್ರಜೋನನ್ನು ಕಂಡಿರಲಿಲ್ಲ. ಆದರೆ ಅವರ ಮಾಟಗಳ ಪರಿಣಾಮವನ್ನು ಅನುಭವಿಸುತ್ತಿದ್ದವರನ್ನು ಬಲ್ಲವರಾಗಿದ್ದರು. ಅದರ ಮುಖ್ಯ ಪರಿಣಾಮಗಳು ಸದಾ ದುಃಖಿಯಾಗಿರುವುದು, ನಿರ್ವೀರ‍್ಯತೆ, ಕುರುಡುತನ, ಖಾಯಿಲೆ ಮತ್ತು ಸಾವು ಕೂಡ.
ಬ್ರಜೋನಿಂದ ಕೇಡಿಗೊಳಗಾದವನು ಕುರಾಂಡಿರೋ ಎನ್ನುವ ಮಂತ್ರವೈದ್ಯ ಒಬ್ಬನನ್ನು ಕಂಡುಕೊಳ್ಳಬೇಕಾಗಿತ್ತು. ಕುರಾಂಡಿರೋಗೆ ಕೇಡುಮಾಡಲು ಆಗುತ್ತಿರಲಿಲ್ಲ, ಆದರೆ ಕೇಡಿನ ಮೋಡಿಗೆ ಅಯಾಹುವಾಸ್ಕ ಕಷಾಯದ ಸಹಾಯದಿಂದ ಮದ್ದು ಮಾಡಲು ಆಗುತ್ತಿತ್ತು.
ಈಕ್ವಟೋಸಿನಲ್ಲಿ ಒಬ್ಬ ಕುರಾಂಡಿರೋನ ಭೇಟಿಮಾಡಲು ಸಾಧ್ಯವಾ ಅಂತ ವಿಚಾರಿಸಿದೆ. ಕೇಳಿದವರು ಇಲ್ಲ ಎಂದರು. ಈಗ ಕುರಾಂಡಿರೋಗಳೂ ಇಲ್ಲವೆಂದರು. ಆದರೆ ಒಬ್ಬ ಟ್ಯಾಕ್ಸಿ ಡ್ರೈವರ್ ಮಾತ್ರ ಫಲಾನಾ ಇಂಥವನೊಬ್ಬನಿದ್ದಾನೆಂದು ಸೂಚಿಸಿದ. ಅಲ್ಲಿ ಕಸಾಯಿಖಾನೆಯಲ್ಲಿ ಕೆಲಸ ಮಾಡುವವನು ಒಬ್ಬನಿರುವನೆಂದೂ, ಅವನಿಂದ ನನಗೆ ಪ್ರಯೋಜನವಾಗಬಹುದೆಂದೂ ಹೇಳಿದ. ನಾನು ಆ ಮಾಸ್ಟಿರೋ – ಗುರುವನ್ನು ಭೇಟಿಮಾಡಿದ್ದು ಹಾಗೆ.
ಟ್ಯಾಕ್ಸಿ ಡ್ರೈವರ್ ನನ್ನ ಒಂದು ಕಸಾಯಿಖಾನೆಯ ಹತ್ತಿರದ ಒಂದು ಸಣ್ಣ ಮನೆಗೆ ಕರೆದೊಯ್ದು ಆ ಮನುಷ್ಯ ಕ್ರಿಸ್ಟೋಬಲ್ ಸೋಲಿನ್‌ನ ಪರಿಚಯಮಾಡಿಸಿದ. ಸೋಲಿನ್ ಒಳಗಿನಿಂದ ಕಂದುವರ್ಣದ ನೊರೆಗೂಡಿದ ದ್ರವ ಇದ್ದ ಬಾಟಲಿಯೊಂದನ್ನು ಹೊರತಂದು ದನ್ನು ಅಯಾಹುವಾಸ್ಕ ಅಂದ. ಇದರಿಂದ ಬ್ರಜೋನ ಕೇಡನ್ನು ಪರಿಹಾರ ಮಾಡಬಹುದು; ಆ ಕೇಡು ಬಲವಾದದ್ದು ಅಲ್ಲದಿದ್ದರೆ ಅಂತಲೂ ಹೇಳಿದ.
ಕುರಾಂಡಿರೋ ಸೋಲಿನ್ ಸ್ವಯಂ ತನ್ನ ಬಲಗಣ್ಣಿನತ್ತ ನನ್ನ ಗಮನ ಸೆಳೆದ. ಆ ಕಣ್ಣ ಪಾಪೆ ಒಡೆದುಹೋಗಿತ್ತು.  ಅದು ಮೊಟ್ಟೆಯಲ್ಲಿನ ಯೋಕಿನಂತೆ ತೋರುತ್ತಿತ್ತು. ನಾನು ಇನ್ನೂ ಯುವಕನಾಗಿದ್ದಾಗ ಒಬ್ಬ ಬ್ರಜೋ ಹಾಗೆ ಮಾಡಿದ್ದು. ಕಣ್ಣು ಕಾಣದಾಯಿತು. ಅಸಾಧ್ಯ ನೋವು. ಡಾಕ್ಟರುಗಳಿಂದ ಏನೂ ಉಪಯೋಗವಾಗಲಿಲ್ಲ. ನಾನು ಒಬ್ಬ ಕುರಾಂಡಿರೋನ ಬಳಿಗೆ ಹೋದೆ. ಅವನು ನನ್ನ ಕಣ್ಣ ಸರಿಮಾಡಲು ತಿಂಗಳುಗಳೇ ಶ್ರಮಿಸಿದ. ನೋವು ಹೋಯಿತು, ದೃಷ್ಟಿ ಬರಲೇ ಇಲ್ಲ. ಕುರುಂಡಿರೋ ನನ್ನ ಕೈಲಿ ಇಷ್ಟೇ ಸಾಧ್ಯ. ನಿನಗೆ ಕೇಡು ಮಾಡಿದವನು ಬಲಿಷ್ಟ ಅಂದುಬಿಟ್ಟ. ಅಂದಿನಿಂದಲೇ ನಾನು ಕುರಾಂಡಿರೋಗಳು ಮಾಡದ ಪರಿಣಾಮಗಳನ್ನು ವಾಸಿಮಾಡುವ ವಿಧಾನಗಳನ್ನ ಅಭ್ಯಾಸ ಮಾಡಿದೆ. ಆ ಪ್ರಾಚೀನ ವಿವೇಕವನ್ನ ಅರ್ಥಮಾಡಿಕೊಂಡೆ. ಅಯಾಹುವಾಸ್ಕ ಮಾಡುವ ಬಗೆಯನ್ನು ಕಲಿತುಕೊಂಡೆ. ಈಗ ತೊಂದರೆಗೊಳಗಾದ ಬೇರೆಯವರಿಗೆ ಸಹಾಯ ಮಾಡುತ್ತಿದ್ದೇನೆ. ಪ್ರತಿ ಭಾನುವಾರ ಮೀಟಿಂಗುಗಳಿರುತ್ತವೆ. ಅಲ್ಲಿಗೆ ಕೇಡುಂಟಾದ ಜನ ಪರಿಹಾರಕ್ಕಾಗಿ ಬರುತ್ತಾರೆ ಅಂದ.
ನಾನೂ ಬರಬಹುದಾ? ಕೇಳಿದೆ.
ಅವನು ನನ್ನನ್ನು ತನ್ನ ಚೆನ್ನಾಗಿದ್ದ ಕಣ್ಣಿಂದ ಅಳೆದ ಬಳಿಕ ಹೇಳಿದ, ಆಗಬಹುದು, ಆದರೆ ಎರಡು ಪ್ಯಾಕೆಟ್ ಸಿಗರೇಟು ತರಬೇಕಾಗುತ್ತದೆ.
ಸಿಗರೇಟೇ? ನಾನು ಅವನನ್ನ ಪ್ರಶ್ನಾರ್ಥಕವಾಗಿ ನೋಡಿದೆ.
ಹೌದು, ಸಿಗರೇಟು. ಅವು ಆ ಆಚರಣೆಗೆ ಬೇಕಾಗುತ್ತದೆ ಎಂದ.

***

ಆ ಭಾನುವಾರ ರಾತ್ರಿ ನಾವು ವಾಹನದಲ್ಲಿ ಈಕ್ವಿಟೋಸ್‌ನ ಹೊರವಲಯದಲ್ಲಿದ್ದ, ಉಪಯೋಗದಲ್ಲಿಲ್ಲದ ಒಂದು ಚರ್ಮ ಹದಮಾಡುವ ಕಾರ್ಖಾನೆಯ ಹತ್ತಿರಕ್ಕೆ ಹೋದೆವು. ಕತ್ತಲಲ್ಲಿ ಕೊಳಕು ನೆಲದ ಮೇಲೇ ವೃತ್ತಾಕಾರವಾಗಿ ಕುಳಿತೆವು. ಆ ಕಗ್ಗತ್ತಲಲ್ಲಿ ಒಂದು ಮೇಣದಬತ್ತಿಯನ್ನ ಹಚ್ಚಲಾಯಿತು. ಗುರು ಮತ್ತು ನಾಲ್ವರು ರೋಗಿಗಳು ತಲಾ ಒಂದು ಸಣ್ಣ ಲೋಟ ಅಯಾಹುವಾಸ್ಕ ಕುಡಿದರು. ಕುಡಿದು ಕುಳಿತರು. ಗುರು ಸಿಗರೇಟು ಎತ್ತಿಕೊಂಡ. ಅವನು ಅಲ್ಲಿಂದ ಮುಂದೆ ನಾಲ್ಕುತಾಸು ಬಿಡದೆ ಸಿಗರೇಟು ಸೇದುವವನಿದ್ದ. ಸೇದಿ ಹೊಗೆಯನ್ನು ಬಾಯಿ ಮೂಗಿನಹೊಳ್ಳೆಗಳಿಂದ ಜನರ ತಲೆಯ ಮೇಲೆ ಮುಖದ ಮೇಲೆ ಉಗುಳುವನಿದ್ದ.
ಪ್ರತಿ ರೋಗಿಯೂ ಒಬ್ಬೊಬ್ಬರಾಗಿ ನೆಲದ ಮೇಲೆ ಮಲಗುತ್ತಿದ್ದ. ಗುರು ಒಂದು ಹಿಡಿಯಷ್ಟಿದ್ದ ಕಲ್ಲು ಒಂದನ್ನು ಕೈಲಿ ಹಿಡಿದಿದ್ದ. ಅದು ಹೀರುಗಲ್ಲು. ನೋವಿಗೆ ಕಾರಣವಾದ ವಿಷವನ್ನು ಹೀರಿಕೊಳ್ಳುವ ಕಲ್ಲು. ವಶೀಕರಿಸಲೆಂಬಂತೆ ಮಣಮಣಿಸುತ್ತ ಅವನು ಅವರ ಮೇಲೆ ಬಗ್ಗಿ ಕಲ್ಲನ್ನು ಅವರಿಗೆ ನೋವು ತೋರುತ್ತಿದ್ದ ಪ್ರದೇಶಗಳ ಮೇಲೆ ಇರಿಸುತ್ತಿದ್ದ. ಬಳಿಕ ಜೋರಾದ ಹೀರುವ ಸದ್ದು ಮಾಡಿ ಎಂಜಲನ್ನು ಪಕ್ಕ ನೆಲದ ಮೇಲೆ ಉಗಿಯುತ್ತಿದ್ದ. ಅದು ವಿಷ. ಈ ಸಿಗರೇಟು ಸೇದುವುದು, ಮಂತ್ರ ಹೇಳುವುದು, ವಿಷ ಹೀರಿ ಉಗಿಯುವುದು ಗಂಟೆಗಳ ಕಾಲ ನಡೆಯಿತು. ರೋಗಿ ಜನ ನೋವಿನಿಂದ ನರಳಿದರು, ಗುರು ಅವರ ಮುಂದೆ ಬಾಗಿದಾಗ ನಡುಗಿದರು. ಕೊನೆಗೆ ಗುರು ಮೇಲೆದ್ದ. ಅಷ್ಟೇ ಅಂದ. ನಾನು ಅದನ್ನೇ ನೋಡುತ್ತಿದ್ದೆ. ಗುರು ಹೇಳಿದ, ಪೂರ್ಣ ವಾಸಿಗೆ ಬಹಳ ಸೆಷನ್‌ಗಳೇ ಬೇಕಾಗುತ್ತದೆ. ಇವನನ್ನೇ ತೆಗೆದುಕೊಳ್ಳಿ. ಇವನಿಗೆ ಹೊಟ್ಟೆ ನೋವು. ಇದು ಇವನ ನಾಲ್ಕನೇ ಸೆಷನ್.
ಅವನಿಗೆ ಏನಾದರೂ ಪ್ರಯೋಜನವಾಗಿತ್ತೇ? ವಾಸಿ ಅನ್ನಿಸುತ್ತಿತ್ತೇ? ಇನ್ನೂ ನೋವಿದೆ. ಆದರೆ ಮೊದಲಿನಷ್ಟಲ್ಲ, ಅವನು ಹೊಕ್ಕುಳ ನೀವಿಕೊಳ್ಳುತ್ತ ಹೇಳಿದ.
ಸರಿ ಬ್ರಜೋ ನಿನ್ನ ಮೇಲೆ ಏಕೆ ಕೆಡುಕು ಮಾಡಿದ್ದು ಅಂತ ಕೇಳಿದೆ. ಅವನು ತಲೆ ಆಡಿಸಿದ.
ನಾನು ಎಷ್ಟೋ ಜನ ಕುರಾಂಡೆರೋಗಳು ಬಲು ಹೀನ ಫೇಕ್‌ಗಳು ಎಂದುದ ಕೇಳಿದ್ದೆ. ಆದರೆ ನಿಜವಾಗಲೂ ಫೇಕ್ ಎನ್ನುವುದು ಯಾವುದು. ಈ ಜನ ತಾವು ಮಾಡಿತ್ತಿರುವುದರ ಮೇಲೆ ಅತೀವ ನಂಬಿಕೆ ಇರಿಸಿಕೊಂಡಿದ್ದರು. ಇದೆನು ಧರ್ಮವೇ? ಮ್ಯಾಜಿಕ್ಕೇ, ಪ್ರಾಚೀನ ಆದಿವಾಸಿ ಮದ್ದೇ? ಅರ್ಥಹೀನ ಆಚರಣೆಯೇ? ನಾನು ಅದನ್ನು ನಿರ್ಧರಿಸಲು ಹೋಗಲಾರೆ.

***

ಹೊರಡುವುದಕ್ಕೆ ಮೊದಲು ನಾನು ಗುರುವನ್ನು ಅವನು ಹಾಡುತ್ತಿದ್ದದರಲ್ಲಿ ಒಂದು ನಿರ್ದಿಷ್ಟ ಮಂತ್ರವನ್ನು ರಿಪೀಟ್ ಮಾಡಲು ಕೋರಿದೆ. ಅವನು ನೆಲದ ಮೇಲೆ ಕೂತುಕೊಂಡ. ಒಂದೆರಡು ಕ್ಷಣ ತನ್ನ ತಾನು ನೇರ್ಪಡಿಸಿಕೊಂಡು ಹಾಡಲು ಪ್ರಾರಂಭಿಸಿದ. ಓ ಕಾಂಡಾರ್ಕಿಟೋ, ಕಾಂಡಾರ್ಕಿಟೋ. ಅವನ ಸ್ವರ ಅವನ ಉಸಿರಾಟದಂತೆ ಏರಿಳಿಯುತ್ತಿತ್ತು. ಅವನು ಉಚ್ಚಾರ ಮಾಡಿ ಮುಗಿಸಿದಾಗ ಆ ಅರ್ಧ ಸ್ಪಾನಿಶ್ ಅರ್ಧ ಆದಿವಾಸಿ ಭಾಷೆಯ ಮಾತಿನರ್ಥವೇನೆಂದು ಕೇಳಿದೆ.
ನಾನು ಆ ಪವಿತ್ರ ಪಕ್ಷಿ ಕಾಂಡರ್‌ನ ಕರೆಯುತ್ತಿದ್ದೆ. ಅವನು ದೇವರುಗಳ ದೂತ. ಗೊತ್ತಾ. ನಮಗೆ ಅವನ ಸಹಾಯ ಬೇಕು. ಅವನು ಸರಳವಾಗಿ ಚಲಿಸುವ ಮಾಧುರ್ಯದ ಹಾಗೆ ಹಾಡತೊಡಗಿದ ಓ ಕಾಂಡಾರ್ಕಿಟೋ, ಕಾಂಡಾರ್ಕಿಟೋ. ಸಡನ್ನಾಗಿ ಅವನು ಹಾಡು ನಿಲ್ಲಿಸಿ ಹೇಳಿದ ಕೇಳಿಸಿಕೋ, ಕೇಳಿಸಿಕೋ. ರೆಕ್ಕೆಗಳ ಸದ್ದು ಕೇಳಿಸುತ್ತಿದೆಯಾ? ಅಗೋ ಅಲ್ಲಿ ಕತ್ತಲಿನಲ್ಲಿ.
ನಾನು ಆ ಕಾಡಿನ ಇರುಳ ಸದ್ದುಗಳನ್ನ ಆಲಿಸಲು ಕಾಡಕತ್ತಲಿಗೆ ಕಿವಿ ಕೊಟ್ಟೆ. ಅಲ್ಲಿ ಎಂಥದೋ ಗಾಳಿ ಪಿಸುಗುಡುವಂತಿತ್ತು.
ಗುರು ನನ್ನತ್ತ ಜ್ವರಬಂದವನಂತೆ ನೋಡಿದ. ಕೆಲವೊಮ್ಮೆ ಕಾಂಡರ್‌ನ ಚೇತನ ನಾವು ಕರೆದಾಗ ಬರುತ್ತದೆ. ಮತ್ತೆ ನನ್ನತ್ತ ತಿರುಗಿ, ಗುಟ್ಟು ಹೇಳುವವನಂತೆ ಬಾಗಿ ಹೇಳಿದ: ಕೆಲವು ಸಲ ನಿಜವಾದ ಕಾಂಡರ್ರೇ ಬಂದುಬಿಡುತ್ತದೆ.
ಅವನು ಅದನ್ನು ಅದೆಷ್ಟು ತೀವ್ರತೆಯಿಂದ ಹೇಳಿದನೆಂದರೆ ನಾನು ನಂಬುವೆನೇ ಎಂಬುದು ಅಪ್ರಸ್ತುತವಾಗಿತ್ತು. ಗುರು ಮತ್ತವನ ಶಿಷ್ಯರು ನಂಬಿದ್ದರು. ನಂಬದಿರುವ ನಷ್ಟ ನನ್ನೊಬ್ಬನದೇ ಆಗಿತ್ತು. ಆ ಮುದುಕ ಹಾರ್ಪ್ ನುಡಿಸುವವನಿಗೆ ಇವು ಅರ್ಥವಾಗುತ್ತಿದ್ದವು.
(ದಿ ಟೂ ಸೋಲ್ಸ್ ಆಫ್ ಪೆರು ಲೇಖನದಿಂದ, ನ್ಯಾಶನಲ್ ಜಿಯೋಗ್ರಾಫಿಕ್ ಮಾರ್ಚ್ ೧೯೮೨.)
 

‍ಲೇಖಕರು avadhi-sandhyarani

August 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: