ನಿನಗಿಷ್ಟ ಬಂದದ್ದನ್ನು..ನಿನಗಿಷ್ಟಬಂದಹಾಗೆ…ನಿನಗಿಷ್ಟ ಬಂದಾಗ..

ಕು.ಸ.ಮಧುಸೂದನ ರಂಗೇನಹಳ್ಳಿ
ಕೇಳುಗರೆದೆಯೊಳಗೆ ಪ್ರೇಮ ಹುಟ್ಟಿಸುವ ನಿನ್ನ ದನಿಯ ಕೇಳದೇ
ಅದೆಷ್ಟು ದಿನಗಳಾದವು
ನೀನಾಗೆ ಹೊಲಿದುಕೊಂಡ ತುಟಿಗಳ ಹೊಲಿಗೆ ಬಿಚ್ಚಿ
ಒಮ್ಮೆ ಕಣ್ಣು ಹಾಯಿಸು
ಘನಮೋಡಗಳ ಗರ್ಭಧಾರಣೆಯ ಮುಂಚಿನ ನೀರವ ಮೌನವ
ಬಿಳಿಚಿಕೊಂಡ ಬಾಣಂತಿ ಆಕಾಶದ ಮ್ಲಾನವದನವ.
ನನ್ನ ಗಾಜಿನ ಮಧುಬಟ್ಟಲಿನಲಿ ತೇಲುತಿಹುದೇನು ಬರಿ ಮಂಜುಗಡ್ಡೆಯಲ್ಲ
ನಿನ್ನ ಮೌನದ ಹಿಂದಿರುವ ವಿಷಾದದ ಹರಳುಗಳು ನೆನಪಿಡು.
ಊರಾಚೆಯ ಅಡ್ಡಾದಿಡ್ಡಿ ಗೋರಿಗಳ ನಡುವೆ ಕೂತು ನೆನಪುಗಳ ಮುಕ್ಕಳಿಸುತಿಹ
ನನ್ನ ಗಂಟಲಲ್ಲಿ ಸಿಕ್ಕಿಕೊಂಡಿರುವದೇನು ಮೀನ ಮುಳ್ಳಲ್ಲ
ನಿನ್ನೆದುರು ನಿವೇಧಿಸಲಾಗದ ಮಾತುಗಳು ಗಮನಿಸು.
ಬಿರುಕು ಬಿಟ್ಟ ಗೋಡೆಗಳ ನಡುವೆಯೂ ಮೊಳೆತು
ಬಳ್ಳಿಯಾಗಲು ಕನವರಿಸುತಿಹ
ಹಸಿರು ಜೀವದ ತವಕವ ಹಿಂದಿರುವುದು
ಬದುಕಿನ ಬಯಕೆಯೇ ಹೊರತು
ಸಾವಿನ ಕನವರಿಕೆಯಲ್ಲ
ಸಪ್ತಸಾಗರಗಳ ಸುಪ್ತ ಬಾವಗಳ ಮಾತನಾಡೆಂದು ಕೇಳುವುದಿಲ್ಲ
ನನಗಿಷ್ಟದ ಶಬುದಗಳಿಗೆ ದನಿಯಾಗೆಂದು ಕೇಳುವುದಿಲ್ಲ.
ನಿನಗಿಷ್ಟ ಬಂದದ್ದನ್ನು
ನಿನಗಿಷ್ಟ ಬಂದ ಹಾಗೆ
ನಿನಗಿಷ್ಟ ಬಂದಾಗ
ಹಾಡು ಇಲ್ಲ ಮಾತಾಡು.
ಅದಕೂ ಮುಂಚೆ ನೀನೇ ಹೊಲಿದುಕೊಂಡ ತುಟಿಗಳ ಹೊಲಿಗೆ ಬಿಚ್ಚು
ಬೇಕಿದ್ದರೆ ದೂರವಿಡಲೆನ್ನ ನಿನ್ನ ಹೃದಯಗಳ ಬಾಗಿಲುಗಳ ಮುಚ್ಚು.





Beautiful
ಪೂತಿ೯ ಸ್ವಾತಂತ್ರ್ಯ ಕಟ್ಟಿದ್ದೀರಾ☺
Tumbaa chennagide.
ಅಬ್ಬಾ…ಕವನವೇ, ನಿನೆಷ್ಟು …ಸುಂದ ರ! !!!”