ಅಮ್ಮನ ಹಣೆ

ಚೀಮನಹಳ್ಳಿ ರಮೇಶಬಾಬು
ಮಗುವೆ
ನಿನ್ನ ಹಣೆಗೆ ಮುತ್ತಿಟ್ಟಾಗಲೆಲ್ಲ
ನನಗೆ ಅಮ್ಮನದೇ ನೆನಪಾಗುತ್ತದೆ
ಯಾಕೆಂದರೆ
ಎಂದೂ ಅವಳ ಹಣೆಗೆ ಮುತ್ತಿಟ್ಟ ನೆನಪು
ನಿನ್ನ ಕಂಗಳೊಳಗೆ ಇಣುಕಿದಾಗಲೂ ಎಟಕುತ್ತಿಲ್ಲ
ಆದರೆ
ಅವಳ ನೆನಪಿಗೆ
ಸದಾ ಆ ಹಣೆಯೆ ಮುನ್ನುಡಿ
ನನ್ನ ಕಣ್ಣ ಮುಂದೆ ಸಿನೆಮಾ ಪರದೆಯಂತೆ
ತೇಲುವ ಆ ಹಣೆ
ಅವಳ ಗತವೆಲ್ಲವನ್ನೂ ತೋರಿಸುತ್ತದೆ
‘ಅಮ್ಮನ ಹಣೆ
ನಿನಗೆ ಮನರಂಜನೆಯ ರಂಗವೆ’
ಎಂಬರ್ಥದ ಆ ನಗು…
ಬೇಡ ಮಗು ಹಾಗೆ ನಗಬೇಡ
ವ್ಯಂಗ್ಯ ಯಾವತ್ತೂ ಅವಳ ಸ್ವತ್ತಾಗಿರಲಿಲ್ಲ
ಹಗಲುಗಳ ಎಣಿಸುವ
ರಾತ್ರಿಗಳ ಕೊಲ್ಲುವ ಅವಳ ನಿಟ್ಟುಸಿರುಗಳು
ಏನೆಲ್ಲ ಹೆಣಗಾಡಿ ಹೆಣದಂತಾದರು
ಕೊನೆವರೆಗು ಬಿಡದ ಬಡತನದ ಬಸಿರುಗಳು
ಅವಳು ಹಾಗೇ
ಬಡಗೊಂಡ ದೇಹ ಜಡಗೊಂಡ ಮನಸು
ಕಣ್ಣು ಕಿವಿ ಮೂಗು ಬಾಯಿ ಮೆತ್ತಿದ
ಬಡತನದ ಗೊಂಬೆ
ಒಟ್ಟಿನಲ್ಲಿ ಅವಳು ಕಾಲನ ನೆಚ್ಚಿನ ಚಂದದ ಆಟಿಕೆ
ಇವೆಲ್ಲಕ್ಕೂ ಅವಳ ಆ ಹಣೆಯೆ ಸಾಕ್ಷಿ
ಅಂತಹಾ ಹಣೆ
ಸದಾ ನನ್ನ ನೆಮ್ಮದಿಗೆ ತೊಟ್ಟಿಲಾದದ್ದು ಎಂತಾ ಮಾಯೆ
ನನ್ನ ಬೆಳವಣಿಗೆಗೆ ಮೆಟ್ಟಿಲಾದದ್ದು ಎಂತಾ ಮೋಡಿ
ಬಿಸಿಲಿಗೆ ಬಾಡಿ ಕರಕಲಾದ ಅದು
ನನ್ನ ಹಣೆಯ ಬಿಸಿಗೆ ತಣ್ಣೀರ ಬಟ್ಟಿಯಾದದ್ದಾದರೂ ಹೇಗೆ
ಅವಳ ಬೈತಲೆಯ ಜಲಪಾತದಿಂದ ಜಾರುವ
ಬೆವರ ಹನಿಗಳ ಹೀರುತ್ತಿದ್ದ ಅದು
ಉಪ್ಪಿನ ಖಣಜವಾಗಿ ಅದು ಹೇಗೆ ನನ್ನ ಬಾಳಿನೆಲೆಯ
ರುಚಿಯೇ ಆಗಿ ಹದವಾಗಿ ಹಬೆಯಾಡುತ್ತಿತ್ತು
ಮಗೂ ನಿನ್ನ ಹಣೆಯ ಮೇಲಾಣೆ
ನಿನ್ನ ಹಣೆಗೆ ಮುತ್ತಿಡುವಾಗಲೆಲ್ಲಾ
ನನಗೆ ಅಮ್ಮನದೇ ಹಣೆ ನೆನಪಾಗುತ್ತದೆ
ಅಮ್ಮನ ಹಣೆಯ ಸುಕ್ಕುಗಳ ಗೋಜಲಿನಲ್ಲಿ ಬಂಧಿಯಾಗಿ
ನಿನ್ನನ್ನು ಹಿತವಾಗಿ ಅಪ್ಪಿಕೊಳ್ಳುತ್ತೇನೆ
ಯಾಕೆಂದರೆ
ಅಮ್ಮನ ಹಣೆಗೆ ಮುತ್ತಿಟ್ಟ ನೆನಪೂ ನನ್ನೊಳಗಿಲ್ಲ





ಪದ್ಯ ತುಂಬಾ ಚೆನ್ನಾಗಿದೆ-ಬಾಬು.
padya tumba arthapooranavagide, adare intha kaviteya apthate saakastu baari apiikondante ide. nimma kavitegalu hechu barli
very nice poem.
Sooper sr