ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ವಿಕಿಪೀಡಿಯ ನಗುವಿನ ಹೆಸರಿನಲ್ಲಿದೆ!

ಸೌಮ್ಯ ದಯಾನಂದ

ಸೌಂದರ್ಯ
ಸಂಬಂಧಿತ ಪದಗಳಿಗೆ
ಶಬ್ದಕೋಶ ನೀನು!
ಮುಗ್ಧತೆ
ನಿನ್ನ ಹುಡುಕುವವರಿಗೆ
ಲಿಂಕ್ ವರ್ಡ್!

ನಿನ್ನ ವಿಕಿಪೀಡಿಯ
ನಗುವಿನ ಹೆಸರಿನಲ್ಲಿದೆ!
ವ್ಯೂಸ್ ಗಳ ಲೆಕ್ಕವಿಡಲು
ಗೂಗಲ್ಲೂ ಹೆಣಗುತ್ತಿದೆ!
ಸೈಟೇಷನ್ನಿನ
ಸಂಖ್ಯೆ ತಿಳಿಸಲು
ಕಂಪ್ಯೂಟರ್ರೂ
ತಲೆಕೆಡಿಸಿಕೊಂಡಿದೆ!

ಶೇರ್ ಮಾಡಲಾಗದ
ಚಿತ್ರವಿದ್ದರೆ
ಅದು ನಿನ್ನದೇ..!
ಚಿತ್ರಪಟದ ಮೇಲೂ
ಪೊಸೆಸಿವ್ ನೆಸ್!
ಲೈಕ್
ಮಾಡದ ಬೆರಳಿದ್ದರೆ
ಬೆರಳು ಮಾಡಿ ತೋರಿಸು?!

ಹೆಚ್ಚು ಹೊತ್ತು
ಸ್ಕ್ರೀನ್ ಸರಿಸದೇ
ಹೆಬ್ಬೆರಳಿಗೆ
ವಿಶ್ರಾಂತಿ ನೀಡಿದವಳು
ನೀನೇ..
ಅಕ್ಷರಗಳಿಲ್ಲದ
ವರ್ಣನೆ ನಿನ್ನದೇ…

ನಿನ್ನ
ಕಂಡ ಕ್ಷಣದಲ್ಲೇ
ಇರಬೇಕು
ಕಾಳಿದಾಸ
ಮಾತು
ಕಳೆದುಕೊಂಡದ್ದು!
ಕವಿಯ ಕಿಸೆಯೂ
ಖಾಲಿ ಎನಿಸಿದ್ದು
ಆವಾಗಲೇ..!

ಎಷ್ಟು ಸವಿದರೂ
ಕರಗದ
ಮೂಕನ ಬಾಯಿಯ
ಬೆಲ್ಲ ನೀನು..
ಹೇಳಲಾರದೆ
ಕನ್ನಡ ಮೇಷ್ಟ್ರು
ಸೋತು ಸುಮ್ಮನಾಗುತ್ತಾರೆ!

ನಿನ್ನ ದನಿಗೆ
ಕಿವಿಯಾಗದವನೇ
ಈ ಜಗದಲ್ಲಿ
ನತದೃಷ್ಟ!
ನೀ
ಸುಳಿದಾಡಿದ
ಗಾಳಿಯನು ಉಸಿರಾಡಿದವನೂ
ಅಮರ!

ಸುದ್ದಿಮನೆಯಲ್ಲಿ
ಸದ್ದು ಮಾಡಿದ
ನಿಶ್ಯಬ್ದ ನೀನು..!
ಸದ್ದಿಲ್ಲದೇ
ಸುದ್ದಿ ಮಾಡಿದವಳು!

ಮಾತಿಲ್ಲದೇ
ಸಂದರ್ಶನ ಕೊಟ್ಟು
ಕಣ್ಣಲ್ಲೇ ಕಿಸಕ್ಕನೇ
ನಕ್ಕವಳಲ್ಲವೇ..?!
ಪದಗಳ ತಡಕಾಟ
ವರದಿಗಾರನದ್ದು..!

‍ಲೇಖಕರು Admin

10 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading