ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು .
ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.
ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ ಕೋಪ ಬರುತ್ತಿದೆ.. ಎಂದು ಪ್ರತಿಕ್ರಿಯಿಸಿದರು.
ಮೈಸೂರಿನಿಂದ ಮತ್ತೊಂದು ಪ್ರತಿಕ್ರಿಯೆ ಕವಿತೆ. ಪಿಸುಗುಟ್ಟಿದ ಕತ್ತಲ ಮಾತು.. ನಾಗೇಶ ಮೈಸೂರು
ಈ ಎಲ್ಲಾ ಕವನಗಳಿಗೆ ಕಿಚ್ಚು ಹಚ್ಚುವಂತೆ ಉತ್ತರ ಬಂದಿದ್ದು ಶಮ ನಂದಿಬೆಟ್ಟ ಅವರಿಂದ ಓದಿ

ಅಷ್ಟೇ ಅಲ್ಲ, ಈ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ
ನೀವೂ ಕವಿತೆ ಮುಂದುವರೆಸಿ
ಶಮ ನಂದಿಬೆಟ್ಟ
ಇಲ್ಲ ಕಣೋ ಹುಡುಗಾ
ಮತ್ತೆ ಮತ್ತೆ ಅನಿಸುತ್ತಿದೆ
ನೀ ದೀಪ ಆರಿಸಬಾರದಿತ್ತು
ಕಂಡೂ ಕಾಣದಂಥ ನಿನ್ನ
ಬೆನ್ನ ತಿರುವಿನ ಕಂದು ಮಚ್ಚೆಗೆ
ಮಂದ ಬೆಳಕಿನಲ್ಲಿ
ಬೇರೆಯದೇ ಬಣ್ಣ
ಎದ್ದು ಹೊದ ನಂತರ
‘ಸಮಾಜ’ದಲ್ಲಿ ಸಂಭಾವಿತರಾಗಲು
ನಾವು ಧರಿಸುವ ಹಲವು
ಮುಖವಾಡಗಳ ಹಾಗೆ
ದೀಪವಿಲ್ಲದೇ ತಡಕಾಡುವ
ಕ್ಷಣಗಳಲ್ಲಿ ಮತ್ತದೇ
ಅಪರಿಚಿತ ಭಾವ
ಮೈಯನ್ನಾವರಿಸಿದ ಜೀವ
ಕಣ್ಣಿಗೆ ಕಾಣದಂತೆ
ಮನಸಿಗೂ ದಕ್ಕದಂತೆ
“ಮುಖವಿಲ್ಲದವನ ಜತೆ
ಹಂಚಿಕೊಂಡೆಯಾ ?”
ಮನಸು ಕೇಳಬಾರದಲ್ಲ
ನೋಡಬೇಕಿತ್ತು ನಾನು ತೆಕ್ಕೆಗೆ
ಬಿದ್ದಾಗ ಹೆಬ್ಬುಲಿಯಾಗುವ ನಿನ್ನ
ಪುರುಷಾಹಂಕಾರವನ್ನ
ಗೆದ್ದು ಬಂದವಳನ್ನಿಲ್ಲಿ
ಸೋಲಿಸಿದೆ ಎಂಬ ನಿನ್ನ
ಹೆಮ್ಮೆಯ ಕಾಮನಬಿಲ್ಲನ್ನ
ಬರಿಯ ಬಿದಿರ ಕೋಲಾಗಿದ್ದ
ನನ್ನನ್ನ ಕೊಳಲಾಗಿಸಿದ
ನಿನ್ನ ಕುಸುರಿ ಕಲೆಯ ಅಂದವನ್ನ
ಬೆಳಕಿನ ಮೋದ ಕತ್ತಲಿಗಿಲ್ಲ
ನಿನ್ನ ಕಣ್ಣಲ್ಲಿ ನಾನು ಕಾಣದಾಗ
ಕೆನ್ನೆಯಲಿ ಮೂಡಿದ ಗಾಯಕ್ಕೆ
ಮಾಧುರ್ಯ ಹುಟ್ಟುವುದಿಲ್ಲ
ನಿನ್ನ ಕಪ್ಪು ಬಂಡೆಯಂಥ
ಎದೆಯ ಮೇಲೆ ಕೆನೆ ಬಿಳುಪಿನ
ನನ್ನ ಕೈಗಳ ಬಣ್ಣ ಕಂಡಾಗಲಷ್ಟೇ
ನೀ ಹುಚ್ಚಾಗುತ್ತೀ ಗೊತ್ತು ನನಗೆ
ಆರಿಸದೇ ಬಿಟ್ಟು ಬಿಡು
ದೀಪಗಳಿಗೂ ಕಾಣಲಿ ಬಿಡು
ಮಿಲನದ ಮಹೋತ್ಸವ
ಬೊಬ್ಬರಿದು ಕುಹಕವಾಡಲು
ಅವುಗಳಿಗೆ ಬಾಯಿಯಿಲ್ಲ
ಪ್ರೀತಿಯೆಂದರೆ ಹಂಚುವುದಂತೆ
ಜಗಕ್ಕೆ ಖುಷಿಯನ್ನು
ತಾನೇ ಉರಿದು ಬೆಳಕಾಗುವ
ಸಾರ್ಥಕತೆಯಲ್ಲಿ ಮೀಯಲಿ
ನಮ್ಮ ಮೋಹದ ನೆಪದಲ್ಲಿ





Very Nice.
Kusuma, Thank you
“ನಾವು ಧರಿಸುವ ಮುಖವಾಡಗಳ ಹಾಗೆ” ಅನ್ನುವಾಗ ಅದೆಷ್ಟೋ ಭಾವಗಳು ಒಮ್ಮೆಲೇ ಭೋರ್ಗರೆದು ಉಕ್ಕಿದ ಭಾವ… ಆ ಕ್ಷಣಗಳಿಗೆ ಬೆಳಕಿನ ಮೂಲಕ ಅರ್ಥ ಕೊಟ್ಟಿದ್ದೀಯಲ್ಲಾ, ಅದು ತುಂಬಾನೇ ಇಷ್ಟ ಆಗತ್ತೆ. ಯಾವುದೋ ಒಂದಷ್ಟು ನೆಪಗಳಲ್ಲಾದರೂ ಖುಷಿಯನ್ನ ಹಂಚುವ ಪ್ರೀತಿಯ ರೀತಿ ಸಾರ್ಥಕವಾಗಲಿ ಅಂತ ಕತ್ತಲು ಮತ್ತು ಬೆಳಕು ಮತ್ತೆ ಮತ್ತೆ ಮಾತಾಡುವಂತೆ, ಕಾಡುವಂತೆ ಮಾಡ್ತಿದೀಯಾ ಶಮಕ್ಕಾ.. no more words, just beautiful <3 🙂 🙂 🙂
ಕವನಕ್ಕಿಂತ ನಿನ್ನ ಕಾಮೆಂಟ್ ಹೆಚ್ಚು ಚೆಂದ ಇದೆ ಅನಿಸೋ ಥರ ಮಾಡಿಬಿಟ್ಟೆ ನೀ
chanda ide..
Sandeep Thanks
ಮುಖವಿಲ್ಲದ ಜನರು, ಮುಖವ ಮುಚ್ಚಿಕೊಳ್ಳಲು
ಮುಖವಾಡವನ್ನು ತೊಟ್ಟಿರುವ ಜಗದಲ್ಲಿ
ನೀನು ಸಹ ಮುಖವಾಡದ ಚಿಂತೆಯಲ್ಲಿರುವೆ,
ಬೇಡ ಗೆಳತಿ, ಮುಖವಾಡವಿರದ ಜೀವನ ನಡೆಸೋಣ..
ಸುಕ್ಕು ಹಿಡಿತದ, ಹೂವಿನಂಥ ಹಾಸಿಗೆಯಲ್ಲಿ
ಬೆಳಕು ಸಹ ನಮ್ಮನ್ನು ನೋಡಬಾರದೆಂದು
ದೀಪ ಆರಿಸಿ ನೆಡೆಸಿದೆವು ನಮ್ಮ ಮಿಲನ ಮಹೋತ್ಸವವ
ಹಾಸಿಗೆ ಸುಕ್ಕು ಹಿಡಿದಿತ್ತು, ಬಾಡಿದ ಹೂವಿನಂತಾಗಿತ್ತು
ಚಂದ್ರ ಚಂದನದ ಬೆಳಕಲ್ಲಿ ಜೇನಿನಂಥ ರಸದೌತಣದಲ್ಲಿ
ಬಯಕೆಯಿರದ ನನ್ನ ಮನದಲಿ ನೀ ಬಯಕೆಯ ಹುಟ್ಟಿಸಿದೆ
ನನ್ನ ಬಾಹುಬಂಧನದಲಿ ಗಟ್ಟಿಯಾಗಿ ನಿನ್ನ ನಾ ಚುಂಬಿಸಿದೆ
ನೀನು ನಿನ್ನ ಮೋಹಮೈಮಾಟದ ಪಾಶದಲಿ ನನ್ನ ಬಂಧಿಸಿದೆ
ಪುರುಷ, ಪುರುಷನೆಂದು ದುರಹಂಕಾರಿಯಾದ ನನ್ನನು
ಮಿಲನದ ರುಚಿ ತೋರಿಸಿ, ಹಾಲಿಗಾಗಿ ಅಲೆಯುವ ಬೆಕ್ಕಿನಂತಾಗಿಸಿದೆ
ನೀನೆಂಬ ಮೋಹದಲಿ ಸಿಲುಕಿಸಿದೆ, ಕಾಮದಲಿ ಸೆಳೆದೆ
ನನ್ನನು ಕಣ್ಣಿರುವ ಕುರುಡನನ್ನಾಗಿಸಿದೆ, ಮಾತಾಡುವ ಮೌನಿಯನ್ನಾಗಿಸಿದೆ
ಕಿತ್ತೆಸೆದ ಬಟ್ಟೆಗಳು ಮೈಯಡಿಯಲ್ಲಿ ಸಿಲುಕಿ ಬೈಯುತಿಹವು ನಮ್ಮನು
ವಿರಹದ ಬೇಗೆಯಲ್ಲಿ ಸುಡುತ್ತಿದ್ದ ನಾನು, ರಮಿಸಿ ತಣ್ಣಗಾದೆ ನಿನ್ನನು
ಎಂದೂ ಸಿಗದ ಅವಳನ್ನು ನಿನ್ನಲ್ಲಿ ಕಂಡೆ ನಾನು
ನೀ ಕೊಟ್ಟೆ ಅವಳು ಕೊಡದ ಪ್ರೀತಿಯನ್ನು, ಸುಖವನ್ನು
ಇನ್ನೂ ರಿಂಗಿಸುತ್ತಿದೆ ನನ್ನ ಕಿವಿಯಲ್ಲಿ
ನಮ್ಮಿಬ್ಬರ ಮಿಲನ ಮಹೋತ್ಸವದ ಆಡಂಬರದ ಧ್ವನಿ
ಕಣ್ಣು ಮುಚ್ಚಿದರು ಕಾಣುತ್ತಿದೆ, ಕತ್ತಲಲ್ಲಿ ಅಸ್ಪಷ್ಟ ಕಂಡ
ಬೆವರ ತೊಟ್ಟಿಕ್ಕುತ್ತಿದ್ದ ನಿನ್ನ ದೇಹ ಸಿರಿ
ಕಿತ್ತೆಸೆ ಗೆಳತಿ, ಮುಖವಾಡ ಧರಿಸುವ ನಿನ್ನ ಆಲೋಚನೆಯನ್ನು
ಯಾರಿಗೂ ಅಂಜದೆ ಸೇರಿರುವೆ ನನ್ನ ನೀನು
ನನಗೆಂದು ನೀನಿರುವೆ, ನಿನಗಾಗಿ ನಾನಿರುವೆ
ನಾಚಿಕೆಯಿಲ್ಲದ ಜನ ಮಖವಾಡವ ತೊಟ್ಟಿರುವರಿನ್ನು
ನಮಗೆ ಬೇಕಿಲ್ಲ ಅದರ ಅವಶ್ಯಕತೆಯಿನ್ನು
-ಕೆ.ಕೆ
Super!!
Tumba Chennagide Shams and Kiran Kangokar
ಚಂದದ ಕವಿತೆ. ಅಭಿನಂದನೆಗಳು ಶಮಾರವರೆ
Shama, entha muddada kavana! As sweet and vibrant as you!
– Shyamala Madhav