
ಶ್ರೀದೇವಿ ಕರೆಮನೆ
ಕಣ್ಣಂಚಿಂದ ಜಾರಿದ ಹನಿಯ ಹಿಡಿದಿಡಲಾಗದೆ ಬರೆಯುತ್ತಿದ್ದೇನೆ
ಎದೆಯೊಳಗೆ ಹಚ್ಚಿಟ್ಟ ಪುಟ್ಟ ಹಣತೆ ಆರದಿರಲೆಂದು ಬರೆಯುತ್ತಿದ್ದೇನೆ
ನಿನ್ನ ಪ್ರತಿ ಮಾತಲ್ಲೂ ಗೂಡಾರ್ಥ ಹೆಡೆಯೆತ್ತಿ ತೊನೆಯುತ್ತಿರುವಾಗ
ಎರಡು ಸಾಲುಗಳ ನಡುವಿನ ಅರ್ಥ ಹುಡುಕಲೆಂದು ಬರೆಯುತ್ತಿದ್ದೇನೆ
ಹೊಕ್ಕಳ ಸುಳಿಯಲ್ಲೇ ಎದ್ದೇಳುವ ತಲ್ಲಣದಲ್ಲೊಂದು ತಂಪ ಹುಡುಕುತ್ತ
ಬದುಕು ಗಿರಗಟ್ಟೆ ಆಡಿಸಬಹುದೆಂಬ ಭಯದ ನೆರಳಲ್ಲಿ ಬರೆಯುತ್ತಿದ್ದೇನೆ
ನಿದ್ದೆಯಿಲ್ಲದ ರಾತ್ರಿಯಲ್ಲೂ ಕನವರಿಕೆಗಳು ತಡೆಯಿಲ್ಲದೇ ಸಾಗುವಾಗ
ನಾಳಿನ ಎಲ್ಲಾ ಕನಸುಗಳ ಗುರಿ ನೀನೇ ಆಗಿರಲೆಂಬಂತೆ ಬರೆಯುತ್ತಿದ್ದೇನೆ
ಬರೆದು ಮುಚ್ಚಿಟ್ಟ ಸಾಲುಗಳು ‘ಸಿರಿ’ಯ ಸಾವಿನ ನಂತರವಾದರೂ
ನಿನ್ನೊಳಗೊಂದು ಕೋಲ್ಮಿಂಚು ಹಬ್ಬಿಸುವ ಧನ್ಯತೆಗಾಗಿ ಬರೆಯುತ್ತಿದ್ದೇನೆ





ಬರೆಯುವುದಕ್ಕೊಂದು ಉಪಮೆಗಳ ಸಾಲು ಚೆನ್ನಾಗಿದೆ.
ಒಳ್ಳೆಯ ಕವಿತೆ
ಶ್ರೀದೇವಿ ಕವಿತೆ ನವಿರಾಗಿದೆ