ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ನೋಟ, ಹಾ…

 

 

 

ಸಂಜ್ಯೋತಿ ವಿ ಕೆ 

 

 

 

 

ನಿನ್ನ ನೋಟ,
ಹಾ…

ನಿನ್ನ ನೋಟದ
ಸೂಜಿಗಲ್ಲಿನ ಸೆಳೆತ
ಎದ್ದು ಹೋಗಲಾರದಂತೆ
ಕಟ್ಟಿಹಾಕುತಿತ್ತು
ಅಲ್ಲೇ ಸುತ್ತ ಮುತ್ತ
ಸುಳಿಯುತ್ತ, ಸೆಳೆಯುತ್ತ
ನಿನ್ನ ನೋಟದ ಸ್ಪರ್ಶಕ್ಕೆ
ಕಾತರಿಸುತ್ತ..

ನಿನ್ನ ತೀಕ್ಷ್ಣ ನೋಟ
ಒಮ್ಮೆಗೇ ಆಳಕ್ಕಿಳಿದು
ಚಂದ ಅರಳಿಸಿ,
ಮೋಹ ಉಕ್ಕಿ
ತೊಟ್ಟಿಗಿಳಿದು
ನಿಮಿರು ತುಡಿತದ
ನವಿರು ಸಂಭಾಷಣೆ.
ನಗುವ ಕಂಗಳ
ಉನ್ಮತ್ತ ಮೆಚ್ಚುಗೆಗೆ
ಬಿರಿದು,
ಉಬ್ಬುವ ಸಂಭ್ರಮ..

ನಿನ್ನ ನೋಟ ನೇವರಿಕೆಗೆ
ಅರಳಲೆಂದೇ
ನಿನ್ನ ಬೆರಳ್ತುದಿಯ ಮೋಹಕ್ಕೆ
ಕರಗಲೆಂದೇ
ನಿನ್ನ ಕೈ ಬಟ್ಟಲ
ತುಂಬ ತುಂಬಲೆಂದೇ
ನಿನ್ನ ಸ್ಪರ್ಶಕ್ಕೇ
ಬಿರಿಯಲೆಂದೇ
ನಿನ್ನ ತುಟಿ ಸೋಂಕಿನ ಬಿಸುಪಿಗೆ
ಉಕ್ಕುವ ಮಧುವಾಗಲೆಂದೇ
ಮೂಡಿದ ಹೂಗಳು

ಈಗ..
ನಿನ್ನ ನೋಟದ
ನಿರ್ಲಿಪ್ತತೆಗೆ,
ಸುಮ್ಮನೆ ದಾಟಿ
ಹೋಗುವ ನಿರ್ಮೋಹಕ್ಕೆ
ಸ್ಪರ್ಶವನ್ನೇ ನಿರಾಕರಿಸುವ
ಸಂವೇದಶೂನ್ಯತೆಗೆ
ಯಾವ ನೋವೂ
ದಾಟಲಾರದ ಭಾವರಾಹಿತ್ಯಕ್ಕೆ
ಚೂರಿ ಇರಿತದ ಉರಿ
ಉರಿದು ಬೂದಿಯಾಗಿ
ಇಲ್ಲವಾಗಿ ಬಿಡುವ
ಸುಡು ತುಡಿತ
ಅನಾಥ ಭಾವ

ನಿನಗಾಗಿಯೇ ಅರಳಲೆಂಬಂತೆ
ಮೂಡಿದ ಹೂಗಳು,
ಮುದುಡುತಿವೆ…

‍ಲೇಖಕರು avadhi

30 October, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading