ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ದೇಹದ ಲಿಪಿ ಅನುವಾದಿಸಬೇಕು..

ನೀಲಿ ಹೂವು

ಲಕ್ಷ್ಮಣ್ ವಿ ಎ 

ಹಾಯಿ ಇರದ ದೋಣಿಯೊಳಗೆ
ಕುಳಿತು ಲೋಕ ಸಂಚಾರಕ್ಕೆ ಹೊರಟಿದ್ದೇನೆ
ಉನ್ಮತ್ತ ಕಡಲ ಅಲೆಗಳು
ಮೇಲೆ ಹಾಯುವ ಗಾಳಿಯೊಂದಿಗೆ
ಸಹನೆ ಕಾಯ್ದುಕೊಳ್ಳುವ ಒಪ್ಪಂದಕ್ಕಿಳಿದಿವೆ.

ತೀರದಿಂದಾಚೆಯೆಲ್ಲೋ ಇರುವ ನಿನ್ನ ಪುಟ್ಟ
ದ್ವೀಪದೊಳಗೆ ನೀನೀಗ ನಿನ್ನ ಕಮಲಪಾದಗಳ
ಮೇಲೆ ಬಿದ್ದ ಹೊಂಗಿರಣ ನಿನ್ನ ಪುಟ್ಟ ಕಂಗಳ ನೀಲಿ ಕೊಳದಲಿ ಪ್ರತಿಫಲಿಸುತಿರಬಹುದು.
ಋತುಗಳಿಗೆ ತಕ್ಕಂತೆ ಬದಲಾಗುವ ಹೂ ಘಮ ನಿನ್ನ ಮೈಯ ಹೊಕ್ಕು
ನಿನ್ನ ಉನ್ಮತ್ತಗೊಳಿಸಿರಲೂ ಸಾಕು

ಎಲ್ಲ ಇದೆ ಇಲ್ಲಿ ನಾನಿರುವಲ್ಲಿ
ಹುಣಸೆ ಚಿಗುರು ಮಾವಿನ ಒಗರು
ಕಾಲ ಕಾಲಕ್ಕೆ ಬೆತ್ತಲಾಗುವ ಹೊಂಗೆ
ಮನ್ಸೂನಿನಲಿ ಸೊಕ್ಕಿ ಹರಿಯುವ ತುಂಗೆ
ಆದರೂ
ಆಗಾಗ ಕನಸಿನಲ್ಲಿ ಬಂದು ಕಾಡುವ
ನೀನಿರುವ ಪುಟ್ಟ ದ್ವೀಪದ ನೀಲಿ ಹೂವ
ಸೊಬಗ ಈ ವಸಂತ ಜಾರುವ ಮುನ್ನವೆ
ನನ್ನ ಕಣ್ತುಂಬಿಕೊಳ್ಳಬೇಕು
ಸಂಗಮವರಿ ಕಲ್ಲಿನ
ನಿನ್ನ ಕೆನ್ನೆಯ ಇರಿಜಾರಿನಲ್ಲಿ
ಜಾರು ಬಂಡೆಯಾಟವ ಆಡಿ ಮತ್ತೆ ಮಗುವಾಗಬೇಕು
ಎದೆಯ ಮಿದುವುಗಳಲ್ಲಿ ಮುಖವಿಟ್ಟು
ಬಿಕ್ಕಬೇಕು
ದೈವ ಭಾಷೆಯಲ್ಲಿರುವ ನಿನ್ನ
ದೇಹದ ಲಿಪಿ ಅನುವಾದಿಸಬೇಕು
ನಿನ್ನ ಕೆನ್ನೆಯ ಜೋಡು ಗುಳಿಗಳಿಗೆ
ಹೊಸ ಉಪಮೆ ಹುಡುಕಬೇಕು

ನಿನ್ನ ತಲುಪುವ ಕನಸು ಕಟ್ಟಿಕೊಂಡು
ಹಾಯಿಯಿರದ ದೋಣಿಯೇರಿ ಕುಳಿತಿದ್ದೇನೆ
ಆಗಾಗ ಬಿರುಗಾಳಿ ಬಂದು ನನ್ನ ದೋಣಿಯ
ದಿಕ್ಕು ತಪ್ಪಿಸಿ ನಿಲ್ಲುವ ಗಳಿಗೆಗಳಲ್ಲಿ
ಅಲೆಗಳು ಸಾಂತ್ವನ ಹೇಳುತಿವೆ
ಇದೂ ಮೀರಿದಾಗ
ದೋಣಿ ಗಿರ ಗಿರನೆ ತಿರುಗುತ್ತದೆ
ತಿರುಗುವುದು ನನ್ನ ತಲೆಯೋ
ಅಲೆಯ ಅನುಕಂಪದಲಿ ತೇಲುತಿರುವ ದೋಣಿಯೋ ಅಥವ ಈ ಭೂಮಿಯೋ
ಒಂದೂ
ಪ್ರಜ್ಞೆಗೆ ನಿಲುಕುತಿಲ್ಲ

ಅಸಲು ನೀನಿರುವ ದ್ವೀಪದ ದಿಕ್ಕು
ನನಗೆ ಗೊತ್ತಿಲ್ಲ
ನಿನ್ನ ಕಮಲಪಾದ, ಸಂಗಮವರಿ ಕೆನ್ನೆ ಗುಳಿ
ಮತ್ತು
ಆ ದ್ವೀಪದಲ್ಲಿ ಮಾತ್ರ ಅರಳುವ ನೀಲಿ ಹೂ
ಕಾಣುವ ಆಸೆ ಇನ್ನಿಲ್ಲದಂತೆ ಕಾಡಿದಾಗ
ದೈವದ ಮೇಲೆ
ಭಾರಹಾಕಿ,
ಹಾಯಿರದ ದೋಣಿಯ ಮೇಲೆ ಕುಳಿತು
ಲೋಕಸಂಚಾರ ಹೊರಡುವೆ

ಒಂದಿಲ್ಲೊಂದು ದಿನ
ಬಿರುಗಾಳಿಯೊಡಲಿನಲ್ಲಿ ಕರುಣೆಯ
ಊಟೆಯೊಡೆಯಬಹುದು
ದಿಕ್ಕು ತಪ್ಪಿದ ಅಲೆಗಳಿಗೂ ಒಂದು ದಡ ಇದ್ದೇ ಇದೆ
ದೋಣಿ
ಅಲೆಯ ಅನುಕಂಪದಿಂದ ಬಿಡುಗಡೆಯಾಗಬಹುದು.

 

‍ಲೇಖಕರು avadhi

21 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading