ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಇರುವಿಕೆಯೇ ಇರದ ಇಲ್ಲಿ….

ನಿನ್ನಿಂದಲೇ…..

– ರೂಪಾ ಹಾಸನ್

ನಿನಗಾಗಿ ನಡೆದೇ ಇದೆ

ಅನಾದಿಯಿಂದ ಹುಡುಕಾಟ

ಸುಡುಗಾಡು ಅಗೆವಾಟ

ದಣಿವರಿಯದ ಶೂರಾಂಧರು

ಮಹಾ ಮದೋನ್ಮತ್ತರಿಂದ.

ಸಮರ ಭೂಮಿಯಲಿ

ಈಡಾಡಿ ಬಿದ್ದ ಹಸಿಮಾಂಸದ

ಕಟು ಉಗ್ರ ನಾತ

ರುದ್ರಭೂಮಿಯ ರಕ್ತಾಭಿಷೇಕಕ್ಕೆ

ನೂರಾರು ಧರ್ಮ-ಕರ್ಮದ ಹೊಳೆ

ಅವನ್ಯಾರೋ ಇವನ್ಯಾರೋ ಗುರುತಿಲ್ಲದೇ

ನಿನ್ನ ಹೆಸರಿಗಾಗಿಯೇ

ಅಪ್ಪಿದ್ದಾರೆ ವೀರಮರಣ.

ನೀನೋ ಪತ್ತೆಯೇ ಇಲ್ಲ!

ಸ್ಮಶಾನ ತೋಡಿದಂತೆಲ್ಲ

ಮುಖವೇ ಇಲ್ಲದ ಅಸ್ಥಿಪಂಜರ ರಾಶಿ

ಖಾಲಿ ತಲೆಬುರುಡೆಗಳ ವಿಕಟಾಟ್ಟಹಾಸ

ನೆಲದ ಪದರಗಳಲ್ಲಿ ಅವಿತ ಹೆಣಗಳ

ಸುಖನಿದ್ದೆಯಿಂದೆಬ್ಬಿಸಿ ವಿಷವಿಕ್ಕುವ ಸಾಹಸ!

ನೀನೇ ಇಲ್ಲದೆಯೂ

ದಾಖಲಾಗಿದೆ ನಿನ್ನ ಇತಿಹಾಸ!

ಇನ್ನಷ್ಟು ಆಳಕ್ಕಿಳಿಯುತ್ತದೆ

ಚರಿತ್ರೆಯ ಚೂಪು ಅಲುಗು

ಮಂದಿರ, ಮಸೀದಿ, ಚಚರ್ು……

ಅಡಿಪಾಯವಿರದ ಪೊಳ್ಳು ಬಹುಮಹಡಿ

ಉತ್ತುಂಗ ವಿಜೃಂಭಿತ

ಸತ್ತ ಕಾಲದ ಭಗ್ನಾವಶೇಷ

ಅಲ್ಲಿ ನಿನ್ನ ನೆರಳೂ ಇಲ್ಲ!

ಮುರಿದ ಗೋಪುರ

ಕೆತ್ತನೆಯ ಕಂಬ

ಚಿತ್ತಾರದ ಗೋಡೆ

ಮೇಲ್ಛಾವಣಿ ಶಿಲ್ಪದ

ಮುರುಕಲು ತುಂಡುಗಳ

ಸತ್ತ ಅವಶೇಷಗಳ ಸುತ್ತ

ನಿತ್ಯ ಕಾದಾಟ

ನಿರ್ದಯತೆಯ ಗುರಿ

ಸವೆಸುತ್ತಿದೆ ಖಡ್ಗದ ದಾರಿ

ಅಲ್ಲೆಲ್ಲಿಯೂ ನೀನಿಲ್ಲವೇ ಇಲ್ಲ!

ಚರಿತ್ರೆಯುದ್ದಕ್ಕೂ

ಆತ್ಮೋದ್ಧಾರದ ನೂರು ದಾರಿಗಳು

ನಿನ್ನ ಸಾವಿರ ಹೆಸರಿನ ಬಸಿರಿನ

ಸ್ವರತಿಯಲ್ಲೇ ಗರ್ಭಪಾತಗಳು.

ನಿನ್ನ ಇರುವಿಕೆಯೇ ಇರದ ಇಲ್ಲಿ

ನಿನ್ನ ಬಹುನಾಮ ಚಲಿಸುತ್ತದೆ ಗಾಳಿಯಲ್ಲಿ.

ಅವರನಿವರು ಇರಿವ

ಇವರನವರು ತರಿವ

ಹುಸಿ ಧರ್ಮ ಸಾಮ್ರಾಜ್ಯ ಸ್ಥಾಪನೆಯ

ಪುರುಷಾರ್ಥ ಸಿದ್ಧಿಗೆ

ಬಿದ್ದಿದ್ದಾರವರು ಜಿದ್ದಿಗೆ

ತಾಯೊಡಲು ಸೀಳಿ ಹರಿತವಾಗಿದೆ ಶೋಧ

ನಿನ್ನಿಂದ ಇಡಿಯೆಲ್ಲ ಬಿಡಿಯಾಗಿ ಛಿದ್ರ.

ಟೊಳ್ಳು ತಲೆಬುರುಡೆಗಳ

ಕುಣಿಸಿ ಮಣಿಸುವ

ಅಸ್ತಿತ್ವವೇ ಇಲ್ಲದ ಮಾಟಗಾರ

ನಿನ್ನ ಹುಡುಕುವುದೀಗವರಿಗೆ

ಬರಿಯ ಹಠ. ಚಟ.

 

ಹುಟ್ಟಿಯೂ ಇಲ್ಲದ ಸಾವೂ ಇಲ್ಲದ

ಹೇ ನಿರ್ದಯಿ ಅಪರಂಪಾರ

ನಿನ್ನಿಂದ ಮುಕ್ತಗೊಳದೇ

ಕಟ್ಟಲಾಗದು ನಮ್ಮದೇ

ಶುದ್ಧ ಮನುಷ್ಯ ಇತಿಹಾಸ.

‍ಲೇಖಕರು G

12 October, 2012

4 Comments

  1. Usha Rai

    ರೂಪಾ, ಕವಿತೆ ಚೆನ್ನಾಗಿದೆ.ಒಬ್ಬರನ್ನೊಬ್ಬರು ಇರಿವ ತರಿವ ನೋವು ಕವಿತೆಯೊಳಗೆ ಮಡುಗಟ್ಟಿದೆ.ಇಷ್ಟವಾಯಿತು.

    • rupa hasana

      dhanyavaadagalu madam.-rupa hasana

  2. pragna

    nimmee kavithe artha garbithavaagidhe . Ee nimma kavitheyanna fbnalli hanchi kondiddene dhanyavaada madam

  3. mmshaik

    uttama manamidiyu kavite…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading