ದೇಹವು ದೇಗುಲವಲ್ಲ !

ಆರನಕಟ್ಟೆ ರಂಗನಾಥ
ಆಡಿದ ಮಾತಿಗೆಲ್ಲ ಬಂಧನವ ತೊಡಿಸಿ
ಭಿಕಾರಿಯಾಗಿ ಅಳಲೂ ಬಾರದೆಂದು
ಜೊತೆಗೂಡಿ ನಿಂತಿರುವೆ ಹಟವ ತೊಟ್ಟು
ಮಾಯದ ಗಾಯವು ಸ್ಮಾರಕವಾಗಿರಲು
ಆಡಿದ ಮಾತು ಕೂಡಿದ ಮೈಥುನದಿ
ತಹತಹಸಿದ ಒಡಲು ಒಲೆಯಾಗಿದೆ
ಉರಿಯಲು ನೀನೆ ಕೊಳ್ಳಿ ಇಟ್ಟಿರುವೆ
ಕುದಿಯುತ್ತಿದೆ ಕಣ್ಣೀರು
ಬೇಯುವುದು ದೇಹ ಮಾತ್ರವಲ್ಲ
ದೇಹ ಮೀಮಾಂಸೆಯ ಪಠಣದಿಂದ
ಕಡಲ ಉದ್ದೀಪನವೆ ತಣಿದು ತಣಿಯದೆ
ಆಲಿಂಗದಲ್ಲಿ ಒಡಲತ್ತಿ ಉರಿಯುತ್ತಿದೆ
ಮೈಥುನದ ಮಡುವಿನಲ್ಲಿ ಕೆಡವಿ
ಅಂಗಾಂಗಳ ಕಸಿ ಮಾಡುವ ನಿನಗೆ
ದೇಹವು ದೇಗುಲವಾಗದಿರಲಿ
ಅನುಕೂಲ ಸಿಂಧುವಿನ ಒರತೆಯಾಗಿ
ಉರು ಹಚ್ಚಿದ ಸಿದ್ಧಾಂತಗಳ ಮಂಡಿಸಿ
ಉದ್ದೀಪನಗೊಂಡಾಗಲೆಲ್ಲ
ಶಮನದ ಮಾಹಾ ಮಾರ್ಗವೆಂದೇಳಿ
ಮೈಗಳ ಮಥಿಸಿ
ನೀನೊಂದೊಂದು ಅಣುವ ಹೀರುವಾಗ
ಅಹಿಂಸಾ ಮಾರ್ಗವ ಮುಂದಿರಿಸಿದ್ದೆ ಅಲ್ಲವೆ ?
ನನ್ನ ದೇಹ ನನ್ನ ಹಕ್ಕು ಎಂದ ಘಳಿಗೆ
ಗಾಳಿ ಮಾತಿನ ಬಸಿರಿಗೆ
ಎದೆಯಲಲ್ಲಿನ ಹೆಬ್ಬೆಟ್ಟಿನ ಗುರುತೇ ಆಧಾರವೆಂದು
ಸಂಕಲ್ಪ ಹಿಂಸೆಯಲ್ಲೆ ಕೊಲ್ಲದಿರು
ಅಸಡ್ಡೆಯ ಪರಿಭಾಷೆಗಳಲ್ಲಿ
ಕರುಣಾಳುತನವ ಭೋಧಿಸುವ
ಕಾಮಲತೆಯೆ
ಒಲವಿನ ಋಣ ಭಾರವೆಂದು ಜರಿದು
ಕಾಯದ ಕಸರತ್ತಿಗೆ ಆಹ್ವಾನಿಸುವ ನಿನಗೆ
ದೇಹವು ದೇಗುಲವಾಗದಿರಲಿ
ಕುಣಿ ಬಿಚ್ಚಿ ಕುಣಿದಿರುವ
ದಾಹವಿಂದ ಅಂಡಾಣುವೆ
ಉಸಿರಡಗದಂತೆ ಸ್ರವಿಸು
ಕಡಲ ಬೆಸೆದು ಬಿಸಾಡಲು
ಕರೆಯದಿರು ಒಲವಿನ ಕಣ್ಣೀರ
ಪಸೆಯೊಳಗಿನ ಉಸಿರು
ನಿನ್ನೊಳಗೆ ಮುಳುಗದಿರಲಿ
ದೇಹದ ದಾಹವು ಉಸಿರಿನಂತೆ ಅಂತ
ಪಟ್ಟುಗಳ ಪಳಗಿಸಲು ಒಡಲಸಿದವರ
ಸರದಿಗೆ ಕಾದರೆ
ಕಾಯುವುದು ಕಾಯಕವಾಗದು
ಮೈಥುನದ ನೇಮವು ನೆರವೇರದು
ಕಾಮದ ಕಸುವಿಗೆ
ಶರಣಾದ ಜೀವವೆ ಮುಪ್ಪಡರಿ
ನಿನ್ನ ಈರ್ಷೆಯ ಹೆಣಹೊತ್ತ ದಿನ
ನಿರಾಳ ದರ್ಶನಕ್ಕೆ ಮೊರೆಯಿಡುವಲ್ಲಿ
ದೇಹವು ದೇಗುಲವಾಗದಿರಲಿ





ಚೆಂದ ಸರ್