ಎಚ್ ಕೆ ಶರತ್
ಕೂತು ಬರೆಯಬೇಕೆನಿಸಿತು
ಕನಸುಗಳ ಮುನ್ನುಡಿಯನ್ನು
ಹಾಳೆಯ ಖಾಲಿತನದ ಎದೆ ಗೂಡಲ್ಲಿ
ನಿನ್ನದೇ ನಗುವಿನ ಹಾಜರಿ
ಮಧ್ಯಾಹ್ನದ ಉರಿ ಬಿಸಿಲಲ್ಲೂ
ತಣ್ಣಗೆ ನಗುವ ನಿನ್ನ ಮೊಗದ
ಅಂಚಿನಲ್ಲಿ ನಿಂತು ನಗಬೇಕು
ಅಂದುಕೊಂಡೆ
ನಿನ್ನ ನೋವುಗಳ ಪಾಲಿಗೆ
ನಾನು ಕುರುಡ

ಯಾರೋ ಹೆಣೆದ ನೋವಿನ ಕಥೆಯಲ್ಲಿ
ನೀನೆ ನಾಯಕಿ
ನಾನು ಕೇಳುಗ
ಮೈ ತುಂಬ ಜೀವಂತಿಕೆಯ ಪಸೆ ತುಂಬಿಕೊಂಡ
ನಿನ್ನ ಮನದ ಬೊಗಸೆ
ಕಣ್ಣೀರಿನ ಕೊಳವಾಗಿದೆ ಎಂದು ಯಾರೋ ಅಂದರೂ
ನಂಬಲಾಗುತ್ತಿಲ್ಲ
ನೀನು ಎದುರು ಸುಳಿದಾಗಲೆಲ್ಲ
ನಿನ್ನ ಸರ್ವಾಂಗದ ರೇಖೆಗಳಲ್ಲಿ ನೋವಿನ ಗೀರುಗಳಿಗಾಗಿ
ತಡಕಾಡಿ ನಾನು ಸೋತಿದ್ದೇನೆ
ಸೋತದ್ದು ಅದೊಂದರಲ್ಲಿ ಮಾತ್ರವಲ್ಲ






nice sharat ..keep it up..
ಚೆಂದದ ಸಾಲುಗಳು…