ಆತ್ಮ ರಕ್ಷಕ
-ತೇಜಾವತಿ ಎಚ್ ಡಿ
ನಿನ್ನ ಅರಮನೆಯ ತೋಟದಲ್ಲಿ
ನೀ ಅರಳಿ ನಿಂತ ಆ ರಾತ್ರಿ
ನಭದೊಳಗಿನ ನಕ್ಷತ್ರವಾಗಿ
ನಾ ಬರುವೆ
ನನ್ನೆಲ್ಲ ಭಗ್ನ ಕನಸುಗಳು ನನಸಾಗಿರುವ ಆ ಘಳಿಗೆಯ ಸವಿಯಲು
ನೀನೇಕೆಂದು ಬೇಸರಿಸಬೇಡ
ಆಗೇನೂ ನನ್ನ ಕಾಟವಿರುವುದಿಲ್ಲ
ಆತ್ಮ ರಕ್ಷಕ ನಾನು
ಕಾಲದ ಬಗ್ಗೆ ಚಿಂತಿಸಬೇಡ
ಆಗ
ನಾನೆಂದೂ ನಿನ್ನ ಸಮಯ ಬೇಡುವುದಿಲ್ಲ
ನಿನ್ನೊಳಗಿನ ಅಣತಿ ನಾನು
ಬಂಧಿಯಾಗುವ ಆತಂಕ ಬೇಡ
ಅಲ್ಲಿ ನಿನ್ನ ಸ್ವತಂತ್ರವನ್ನೇನೂ ಕಸಿಯುವುದಿಲ್ಲ
ನಿರ್ಮುಕ್ತ ಬಂಧು ನಾನು
ಹಿಂಬಾಲಿಸುವೆಯೆಂದು ಅಂಜಬೇಡ
ಅಲ್ಲಿ ನನ್ನ ನೆರಳೂ ಸೋಕುವುದಿಲ್ಲ
ಕೇವಲ ಬೆಳಕು ನಾನು
ಅವ್ಯಕ್ತ ಉತ್ತರಗಳಿಗಾಗಿ ತಡಕಾಡಬೇಡ
ನಾನೇನನ್ನೂ ಪ್ರಶ್ನಿಸುವುದಿಲ್ಲ
ನಿನ್ನಿಡೀ ಬದುಕಿನ ಅರ್ಥ ನಾನು






0 Comments