ನಿನ್ನೊಂದಿಗೆ…

ಆಕರ್ಷ ಆರಿಗ

ಪ್ರೀತಿ ಎಂದರೆ ಅದು ಪ್ರೀತಿಯಷ್ಟೇ ಅಲ್ಲ… ಪ್ರೀತಿ ಎಂದರೆ ವ್ಯಾಖ್ಯಾನಕ್ಕೆ ಪದಗಳಿಗೆ ಸಿಗದ ಅನುಭೂತಿ, ವಿವರಣೆಗೆ ದಕ್ಕದ ತಾದಾತ್ಮ್ಯ. ಯಾರಿಗೂ ಗೋಚರಿಸದ ಅಂತರ್ಗತ ಸೆಳೆತವೊಂದು ಎರಡು ಹೃದಯಗಳನ್ನು ಬೆಸೆಯುತ್ತದೆ ಎನ್ನುವುದು ನಮ್ಮ ನಂಬಿಕೆ. 

ಇದ್ದಾಗಲೇ ಸಾಕಷ್ಟು ಸಿನಿಮಾ, ಪತ್ರಿಕೆಗಳಲ್ಲಿ, ಪ್ರೀತಿಯ ಬಗ್ಗೆ ವಿವಿಧ ರೀತಿಯ ಕೇಂದ್ರಗಳನ್ನು ಸಾಕಷ್ಟು ಮಂದಿ ಕೊಟ್ಟಿದ್ದಾರೆ. ನನ್ನ ಪ್ರಕಾರ – ಪ್ರೀತಿ ಅಂದರೆ ಒಂದು ಉತ್ಕಟವಾದ ಭಾವ. ಅದಕ್ಕೆ ಸಾಲಿನ, ಮಾತಿನ ಮಹಿಮೆ ಬೇಕಿಲ್ಲ. ಒಬ್ಬರನ್ನು ಪ್ರೀತಿಸುತ್ತೇನೆ ಅಂದರೆ ಅವರು ಸದಾ ಖುಷಿಯಾಗಿರಲಿ ಅಂತ ಬಯಸುತ್ತೇನೆ ಮತ್ತು ಆ ನಿಟ್ಟಿನಲ್ಲಿ ನನ್ನ ಸಾಮರ್ಥ್ಯ ಮೀರಿ ನಿಲ್ಲುತ್ತೇನೆ ಅಂತರ್ಥ. ಮತ್ತು ಅವರ ಖುಷಿಗೆ ತಾನು ಏನನ್ನಾದರೂ ಮಾಡಲು ಸಿದ್ಧ ಅನ್ನುವ ಭಾವ.

ಕಷ್ಟ ಬಂದಾಗ ಹೆಗಲಾಗಿ ನಿಲ್ಲುವ ಆಶಯ. ಹಾಗಂಥ ಕಟ್ಟಿಹಾಕುವಂಥ ಬಂಧವೇನಲ್ಲ. ನೀನು ನಾನಿಲ್ಲದೆಯೂ ಖುಷಿಯಾಗಿರಬಲ್ಲೆ ಅಂತಾದರೆ- ಅದಾದರೂ ಸೈ. ಅಂದರೆ ನಿಜವಾದ ಪ್ರೀತಿಯಲ್ಲಿ ಜೆಲಸಿ ಬರಬಾರದು. ತಾನು ಪ್ರೀತಿಸುವ ವ್ಯಕ್ತಿ ಆನಂದದಿದ್ದರೆ ಸಾಕು ಅನ್ನುವಂಥ, ಬೇರೆಯವರ ಜೊತೆಯಾದರೂ- ಬೇರೆಲ್ಲೋ ದೂರದಲ್ಲಿ ಇದ್ದಾದರೂ- ಒಟ್ಟಿನಲ್ಲಿ ಸಂತಸವಾಗಿದ್ದರೆ ಸಾಕು ಅನ್ನುವಂಥ ಮನಸ್ಥಿತಿ ಇರಬೇಕು.

ಬಾಂಧವ್ಯ ಅಮೂಲ್ಯವಾದುದು. ಆದರೆ ಮುನಿಸಿಗೊಂದು, ನಗುವಿಗೊಂದು, ಸಾಂಗತ್ಯಕ್ಕೆ ಒಂದು ಹೀಗೆ ಹತ್ತುಹಲವು ಕಾರಣಗಳನ್ನಿರಿಸಿ, ಕೊಡುಗೆ ಕೊಡುವುದು ಮೊದಲಾದಾಗಲೇ ಪ್ರೀತಿ, ಆತ್ಮಸಂಗಾತದ ಹಂತದಿಂದ ಹೊರ ಆವರಣಕ್ಕೆ ಬಂತು. ಪ್ರತಿ ಉಸಿರಿನಲ್ಲೂ ನೆನಪನ್ನೇ ಪುಪ್ಪಸಗಳಲ್ಲಿ ತುಂಬಿಕೊಂಡು, ಒಂಟಿತನವನ್ನು ನಿಶ್ವಾಸದೊಂದಿಗೆ ಹೊರಬಿಡುವಂತೆ ಬದುಕುವ ಕಲೆಯನ್ನೂ ಪ್ರೀತಿ ಹೇಳಿಕೊಡುತ್ತದೆ.

ಪ್ರೀತಿಯೆಂಬುದು ಒಬ್ಬರನ್ನು ಬಯಸುವುದಲ್ಲ, ಪಡೆಯುವುದಲ್ಲ, ಸ್ವಾಮ್ಯತ್ವ ಸಾಧಿಸಲು ಹವಣಿಸುವುದೂ ಅಲ್ಲ. ಪ್ರೀತಿಯೆಂದರೆ ಅರೆಬಿರಿದ ಪಾರಿಜಾತ, ಅರಳುವ ಮುನ್ನ ನಲುಗದಂತೆ ಮುಚ್ಚಟೆಯಿಂದ ಕಾಪಿಡಬೇಕಾದ ಭಾವ ಅದು. ಜೀವನದ ಪ್ರತಿ ಕ್ಷಣದಲ್ಲೂ, ವಿಶೇಷವಾಗಿ ಹತಾಶರಾದಾಗಲೆಲ್ಲ ಬೆರಳ ತುದಿ, ಅವರ ಫೋನ್‌ ನಂಬರ್‌ ಒತ್ತಿರಬೇಕು. 

ಪ್ರೀತಿ, ಮಮತೆ, ಅಸೂಯೆ, ಅಸಹನೆ, ಅಸಮಾಧಾನ, ಅವಲಂಬನೆ, ಸಂಯಮ, ಔದಾರ್ಯ ಎಲ್ಲವನ್ನೂ ಹೇಳಿಕೊಡುವ ಹಂಚಿಕೊಳ್ಳಲು ತಿಳಿಸುವ ಈ ಬಾಂಧವ್ಯಕ್ಕೆ ಒಂದು ದಿನ ಇದೆ ಅಂತ ಗೊತ್ತಾಗಿದ್ದೇ ಜಾಗತೀಕರಣದ ನಂತರ. ಅಲ್ಲಿಯವರೆಗೂ ಅನುದಿನವೂ ನಮ್ಮದೇ ಎಂದು ಸಂಭ್ರಮಿಸುತ್ತಿದ್ದವರು, ಇದ್ದಕ್ಕಿದ್ದಂತೆ ಆರ್ಚಿಸ್‌ ಮಳಿಗೆಗಳನ್ನು ಆವರಿಸಿಕೊಂಡರು. ಕಾರ್ಡು, ಚಾಕಲೇಟು, ಟೆಡ್ಡಿಬೇರ್‌ಗಳ ವಿನಿಮಯ ಸಾಕಷ್ಟಾಯಿತು. ಇಂತಿಪ್ಪ ಕೊಳ್ಳುಬಾಕ ಸಂಸ್ಕೃತಿ ಕೆಂಗುಲಾಬಿಯಿಂದ ವಜ್ರದಾಭರಣದವರೆಗೂ ಉಡುಗೊರೆಯಾಗಿ ಬದಲಾಗಿವೆ. 

ದೇಹಸೌಂದರ್ಯ ವ್ಯಕ್ತಿಗಿಂತ ವ್ಯಕ್ತಿಗಳಲ್ಲಿ ಭಿನ್ನವಾಗಿರುತ್ತದೆ,ಒಂದು ವ್ಯಕ್ತಿಯನ್ನು ಇನ್ನೊಂದು ವ್ಯಕ್ತಿಯ ದೇಹ ಸೌಂದರ್ಯದ ಜೊತೆಗೆ ಹೋಲಿಕೆ ಮಾಡಿದಾಗ ಅದಕ್ಕಿಂತ ಇನ್ನು ಹೆಚ್ಚಿನ ಸೌಂದರ್ಯವನ್ನು ಹೊಂದಿರುವ ವ್ಯಕ್ತಿ ಇನ್ನೊಬ್ಬರು ಇರುತ್ತಾರೆ ಆದ್ದರಿಂದ ಯಾವ ವ್ಯಕ್ತಿಯು ಆಕರ್ಷಣೆಗೆ ಒಳಗಾಗುತ್ತಾನೆ ಅಥವಾ ಒಳಪಟ್ಟಿರುತ್ತಾನೆ ಅವನು ಇನ್ನೊಬ್ಬರ ಮೇಲೆ ಆಕರ್ಷಿತರಾಗಿ ಮೊದಲು ಆಕರ್ಷಣೆಗೆ ಒಳಗಾದಂತಹ ವ್ಯಕ್ತಿಯನ್ನು ಬಿಡಬಹುದು ಆದ್ದರಿಂದ ಆಕರ್ಷಣೆಗೆ ಸಂಬಂಧವಿಲ್ಲ. ಪ್ರೀತಿಯಲ್ಲ ಆದರೆ ನಿಜವಾದ ಪ್ರೀತಿಯಲ್ಲಿ ಸಂಬಂಧವಿರುತ್ತದೆ. ಪ್ರೀತಿಗೆ ಅದರದೇ ಆದ ಸೌಂದರ್ಯವಿದೆ. 

ಒಂದೇ ಒಂದು ಕ್ಷಣ ಜೊತೆಗಿರಲು ಹಾತೊರೆಯುತ್ತಿದ್ದವರು, ಜೀವನಪೂರ್ತಿ ಜೊತೆಗಿದ್ದಾಗ ಮತ್ತದೇ ಒಂದು ಕ್ಷಣಕ್ಕೆ ಕಣ್ಬಾಯಿ ಬಿಡುವಂತಾಗುತ್ತದೆ. ಒಂದಷ್ಟು ಬಿಡುವು ಮಾಡಿಕೊಂಡು, ಮತ್ತೊಮ್ಮೆ ಮನದನ್ನೆಯ, ಸಂಗಾತಿಯ ಕಂಗಳಲ್ಲಿ ಕಳೆದುಹೋಗಲು, ಒಂದಷ್ಟು ಚಂದದ ನೆನಪುಗಳನ್ನು ಕೂಡಿಡಲು, ಮತ್ತದೇ ಸಂಜೆ, ಅದೇ ಏಕಾಂತ ಅಂತ ಹಾಡುಗುನುಗಲು ಇಂಥ ಸಂದರ್ಭಗಳನ್ನು ಕೂಡಿಡಲೇಬೇಕು.

ಅಂತರವೂ ಮುಖ್ಯ 
ಪ್ರೀತಿಸುವುದೆಂದರೆ ಸದಾ ಅಂಟಿಕೊಂಡೇ ಇರುವುದಲ್ಲ. ಅಲ್ಲಿ ಸ್ವಲ್ಪ ಅಂತರವೂ ಮುಖ್ಯ. ಇಬ್ಬರ ಸಂಬಂಧದಲ್ಲಿಯೂ ಬ್ರೀಥಿಂಗ್ ಸ್ಪೇಸ್ ಇರಲಿ. ಇಲ್ಲವಾದಲ್ಲಿ ಪ್ರೀತಿಯೂ ಉಸಿರುಗಟ್ಟಿ ಸತ್ತು ಹೋಗುತ್ತದೆ.

ಚೌಕಟ್ಟುಗಳನ್ನು ಮೀರಿದ ಪ್ರೀತಿ 
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಬೆಳೆಯುತ್ತಾ ಹೋದಂತೆ ಬದಲಾವಣೆಗಳು ಸಹಜ. ಪರಿಸ್ಥಿತಿ, ಸಮಾಜದ ಚೌಕಟ್ಟುಗಳಲ್ಲಿ ಪ್ರೀತಿ ಉಸಿರುಗಟ್ಟಿ ಹೋಗುವುದೂ ಉಂಟು. ಆದರೆ ಅದೇ ಪ್ರೀತಿ ಪ್ರಾಣವಾಯುವೂ ಆಗಬಹುದು. ಎರಡು ಹೈಡ್ರಜನ್ ಅಣು ಮತ್ತು ಎರಡು ಆಕ್ಸಿಜನ್ ಅಣುಗಳು ಸೇರಿದರೆ ಹೈಡ್ರಾಜನ್ ಪೆರಾಕ್ಸೈಡ್ ಆಗಿ ಬಿಡುತ್ತದೆ. ಆದರೆ ಈ ಬೊಂಡಿಂಗ್ ನಲ್ಲಿ ಒಂದು ಆಕ್ಸಿಜನ್ ಅಣು ಕಡಿಮೆಯಾದರೆ ಅಲ್ಲಿ -ನೀರು ಆಗಿ ಬಿಡುತ್ತದೆ. ಯಾವ ಸಂಬಂಧವನ್ನು ಬಿಡಬೇಕು, ಯಾವುದನ್ನು ಉಳಿಸಿಕೊಳ್ಳಬೇಕು ಎಂಬುದು ನಿಮಗೆ ಬಿಟ್ಟದ್ದು. ಕೆಲವೊಂದು ಸಂಬಂಧಗಳನ್ನು ಉಳಿಸಿಕೊಳ್ಳುವುದಕ್ಕೆ ತ್ಯಾಗವನ್ನೂ ಮಾಡಬೇಕಾಗುತ್ತದೆ. 

ಸ್ಕ್ರೀನ್‌ ಮಿನುಗಿದಾಗಲೆಲ್ಲ ತುಟಿ 
ಸಂದೇಶಗಳ ರವಾನೆಯಾಗುತ್ತಿರುವಾಗಲೂ ಮುಗಿಯದ ನಿರೀಕ್ಷೆಯೊಂದು ಸದಾ ಇದ್ದೇ ಇರುತ್ತದೆ. ಸ್ಕ್ರೀನ್‌ ಮಿನುಗಿದಾಗಲೆಲ್ಲ ತುಟಿಯಂಚಿನೊಳು ನಗುವೊಂದು ಲಾಸ್ಯವಾಡುತ್ತದೆ. ಈ ಎಮೊಜಿಗಳ ಹಾವಳಿ ಹೆಚ್ಚಾದಾಗಿನಿಂದ ಮುತ್ತಿಡುವುದೂ ಕಷ್ಟದ ಕೆಲಸವೇನಲ್ಲ, ಕಣ್ಣಲ್ಲೇ ಮುತ್ತಿಡಬಹುದು. ಒಂದು ಸಾಂಗತ್ಯಕ್ಕೆ, ಸಖ್ಯಕ್ಕೆ ಹಾತೊರೆಯುವವರ ಲೋಕವೇ ಹಾಗೆ. ಕನಸು, ಕನವರಿಕೆಗಳೆಲ್ಲ ವ್ಯಕ್ತಿಕೇಂದ್ರೀಕೃತವಾಗಿರುತ್ತವೆ. ಸಂಬಂಧವಿರದಿದ್ದರೂ ಅವರ ಹೆಸರನ್ನು ಸಂಭಾಷಣೆಯಲ್ಲಿ ತುರುವುದು, ನುಸುಳುವಂತೆ ಮಾಡುವ ಕಲೆ ಕಲೀತಾರೆ. ನಿದ್ದೆಯೆಂಬುದು ಹೊನ್ನಕಣಗಳಂತೆ ಕೆಲ ಕ್ಷಣಗಳಲ್ಲಿ ಮುಗಿಸಿಬಿಡುವುದೂ ಹೀಗೆ ಬೆಸೆದಿರಲು ಬಯಸುವುದರಿಂದ. 

ದೈಹಿಕ ಆಕರ್ಷಣೆ ಮುಖ್ಯವಲ್ಲ 
ನಿಜವಾದ ಪ್ರೀತಿ ಎರಡು ಶುದ್ಧ ಮನಸ್ಸು ಗಳ ಮೂಲಕ ಉಂಟಾಗುತ್ತದೆ ನಿಜವಾದ ಪ್ರೀತಿ ಯಾವುದೇ ರೀತಿಯ ಆಕರ್ಷಣೆಗಳಿಗೆ ಒಳಗಾಗುವುದಿಲ್ಲ ಈ ಒಂದು ಪ್ರೀತಿಯಲ್ಲಿ ಕಾಳಜಿ ಪ್ರೀತಿ ಹೆಚ್ಚಾಗಿರುತ್ತದೆ. ಹೇಗೆ ತಾಯಿಗೆ ತನ್ನ ಮಗುವಿನ ಕಾಳಜಿ ಹಾಗೂ ಪ್ರೀತಿಯನ್ನು ಮಾಡುತ್ತಾಳೆ ಅದೇ ರೀತಿಯಲ್ಲಿ ನಿಜವಾದ ಪ್ರೀತಿಯು ಇರುತ್ತದೆ ಎರಡು ಹೃದಯಗಳು ಈ ತರಹದ ಒಂದು ರೀತಿಯಲ್ಲಿ ಕಾಳಜಿಯಲ್ಲಿ ಇರುತ್ತವೆ.

ಇನ್ನೊಬ್ಬರನ್ನು ಪ್ರೀತಿಸುವ ಮುನ್ನ ಸ್ವತಃ ಪ್ರೀತಿಸಿ 
ನೀವು ಯಾರನ್ನಾದರೂ ಪ್ರೀತಿಸಿದರೆ ಆ ವ್ಯಕ್ತಿಯ ಮನಸ್ಸನ್ನು ಮಾತ್ರವಲ್ಲ ಅವರ ಸ್ವಭಾವವನ್ನೂ ಪ್ರೀತಿಸತೊಡಗುತ್ತೀರಿ. ಆ ವ್ಯಕ್ತಿಯಲ್ಲಿ ಒಳ್ಳೆಯ ಹಾಗೂ ಕೆಟ್ಟ ಗುಣ ಎರಡೂ ಇರುತ್ತವೆ. ಒಳ್ಳೆಯ ಗುಣಗಳನ್ನು ಮೆಚ್ಚುತ್ತಲೇ ಕೆಟ್ಟ ಗುಣಗಳನ್ನು ತಿದ್ದಲು ನೋಡಿ. ಆ ವ್ಯಕ್ತಿ ನಿಮ್ಮೊಂದಿಗೆ ಹೇಗೆ ಇರುತ್ತಾನೆ ಎಂಬುದು ಮುಖ್ಯವಾಗಿದ್ದರೂ ತಪ್ಪುಗಳು ಕಂಡು ಬಂದಲ್ಲಿ ತಿದ್ದಿ ಹೇಳಿ. ವೈರುಧ್ಯಗಳನ್ನು ಗೌರವಿಸುತ್ತಾ ಜತೆಯಾಗಿರಿ.

‍ಲೇಖಕರು Admin

January 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: