ನನ್ನ ಮೇಷ್ಟ್ರು ಚಂದ್ರಶೇಖರ ಆಲೂರು ಅವರ ಪ್ರಬಂಧ ಸಾವಿರ ಸಲ ಓದಿ ಅಷ್ಟೇ ಸಲ ಕಣ್ಣೀರಾಗಿದ್ದೇನೆ.. ಇವತ್ತು ಮತ್ತದೇ ಆರ್ಧ್ರತೆಯಲ್ಲಿ ಆಯ್ದ ಭಾಗ ನಿಮ್ಮ ಓದಿಗಾಗಿ..
“ಈಡೇರದ ಆಸೆ ಹೊಸ ಬಗೆಯ ಕಾರು
ಎಂಥಾ! ಮೋಜಿನ ಕುದರಿ…. ಈ ಬಾಳು..!”
ಇದಿಷ್ಟು ಟೈಪಿಸುವ ಸಹಾಯಕ್ಕೆ ಯಾವದೂ ಎದೆಗೆ ಅರ್ಥವಾಗದವನಂತೆ ಡಿಕ್ಟೆಟ್ ಮಾಡಿದ ಮಗನಿಗೆ ಕೃತಜ್ಞತೆ.
-ರಾಜಕುಮಾರ್ ಮಡಿವಾಳರ

ಚಂದ್ರಶೇಖರ ಆಲೂರು
ಬಹುಶಃ ಕಾರು ರಾಮನಗರ ದಾಟಿದ ಮೇಲಿರಬೇಕು.
ನಿದ್ದೆಯಿಂದ ಎಚ್ಚೆತ್ತವರಂತೆ ಯಾವುದೋ ಕನಸಿನಿಂದ ಹೊರಬಂದವರಂತೆ ”ಇಂಥ ಕಾರಿಗೆ ಎಷ್ಟಾಗುತ್ತುಪ್ಪಾ ಚಂದ್ರು? ” ಎಂದರು. “ಅಯ್ಯೋ ಇದು ಅಂಬಾಸಿಡಾರ್ ಕಾರು ಕಣ್ರಪ್ಪಾ ಟ್ಯಾಕ್ಸಿಗೆ ಲಾಯಕ್ಕು. ಇದನ್ನು ಯಾರೂ ತಗಳಲ್ಲ. ಸರ್ಕಾರದವರು ಕೊಂಡುಕೋತಾರೆ ಅಷ್ಟೆ. ಈಗ ಮಾರುತೀಲಿ ಹೈಕ್ಲಾಸ್ ಕಾರುಗಳು ಬಂದಿವೆ. ಏಯ್ಟ್ ಹಂಡ್ರೆಡ್, ಜೆನ್, ಎಸ್ಟೀಮ್ ಮುಂತಾಗಿ. ಬೇರೆ ಕಂಪನಿಗಳು ಕಾರುಗಳು ಸಾಕಷ್ಟು ಬಂದಿವೆ. ಅದು ಸರಿ ಈಗ ಯಾಕೆ ಈ ಕಾರಿನ ಬೆಲೆ ಕೇಳಿದಿರಿ?”
“ಎಲ್ಲಯ್ಯಾ ನೀನು ಕಾರು ತಗೊಳ್ಳಲೇ ಇಲ್ಲ. ನೀನು ಕಾರ್ ತಗೊಂಡಿದ್ರೆ ನಿನ್ನನ್ನು ಕರ್ಕೊಂಡು, ನಿಮ್ಮ ಅಮ್ಮನ ಜೊತೆ ಒಂದು ಸಲ ನಿನ್ನ ತಂಗಿಯರ ಊರಿಗೆಲ್ಲ ಹೋಗಿ, ಹಾಗೆ ನಿಮ್ಮ ಅಮ್ಮನ ತವರಿಗೂ ಹೋಗಿ ಎಲ್ಲರನ್ನೂ ಮಾತಾಡಿಸಿಕೊಂಡು ಬರೋಣ ಅಂದುಕೊಂಡಿದ್ದೆ…”
“ಅಯ್ಯೋ ಅದರಲ್ಲೇನ್ರಪ್ಪ. ಮದ್ದೂರಲ್ಲಿ ಈಗ ಕಣ್ಣಿಗೆ ಬೇಕಾದ ಕಾರು ಸಿಕ್ತವೆ. ನೀವು ಹೇಳಿದ್ರೆ ಒಂದು ಟ್ಯಾಕ್ಸಿ ಮಾಡ್ಕೊಂಡು ಎಲ್ಲಾ ಕಡೆ ಹೋಗಿ ಬರಬಹುದಿತ್ತು”
” ಟ್ಯಾಕ್ಸಿಗೂ ಸ್ವಂತ ಕಾರಿಗೂ ವ್ಯತ್ಯಾಸ ಇಲ್ವೇನಯ್ಯಾ… ನನ್ನ ಮಗನ ಕಾರು ಅಂದ್ರೆ ಅದೇ ಒಂದು ಖದರ್ ಕಣಯ್ಯ…” ಎಂದು ನಗುತ್ತಲೇ ಕೆಮ್ಮಲಾರಂಬಿಸಿದರು.
ಆದರೆ ಅದೇಕೊ ನನಗೆ ತುಂಬಾ ಸಂಕಟವಾಯ್ತು. ಅಂತೆಯೆ ”ಛೇ, ಇದೇನ್ರಪ್ಪಾ ಈಗ ಹೇಳ್ತಿದಿರಿ. ನೀವು ಒಂದು ಮಾತು ಹೇಳಿದ್ರೆ ಯಾವತ್ತೋ ಮನೆ ಮುಂದೆ ಕಾರು ನಿಲ್ಲಿಸುತ್ತಿದ್ದೆ” ಎಂದರೆ, “ಅದಕ್ಕೆನು ಬೇಜಾರು ಮಾಡ್ಕೊಬೇಡ ಕಣ್ರಪ್ಪಾ. ಏನೋ ಅನಿಸಿತು ಹೇಳಿದೆ ಅಷ್ಟೆ…..
.. 25ಕ್ಕೆ ಮುನ್ನ ಆದಷ್ಟು ಬೇಗ ಕಾರು ತೆಗೆದುಕೊಳ್ಳಬೇಕು. ಒಬ್ಬನೆ ನೂರಾರು ಮೈಲಿ ಲಾಂಗ್ ಡ್ರೈವ್ ಹೋಗಬೇಕು. ಅಪ್ಪ-ಅಮ್ಮನನ್ನು ಕರೆದುಕೊಂಡು ಅವರಿಗಿಷ್ಟವಾದ ದೇವಸ್ಥಾನಗಳನೆಲ್ಲ ತೋರಿಸಿಕೊಂಡು ಬರಬೇಕು ಎಂದು ಆಗಾಗ್ಗೆ ಅನಿಸುತಿತ್ತು. ನಮ್ಮ ಆರ್ಥಿಕ ಪರಿಸ್ಥಿತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ ಕ್ರಮೇಣ ಕಾರಿನ ಖಯಾಲಿ ಹೊರಟೇ ಹೋಯ್ತು. ನಂತರದ ದಿನಗಳಲ್ಲಿ ನನಗೆ ಅದೇಕೊ ಕಾರು ಒಂದು ಅತ್ಯಗತ್ಯ ಅನಿಲೇ ಇಲ್ಲ. ಜೊತೆಗೆ ಬೆಂಗಳೂರು ಟ್ರಾಫಿಕ್ ನಲ್ಲಿ ಕಾರಿನಲ್ಲಿ ಬಂಧಿಯಾಗಿರುವದಕ್ಕಿಂತ ಬೈಕಿನಲ್ಲಿ ಓಡಾಡುವುದೆ ಸೊಗಸು, ಅದೊಂದು ಅಪರಿಮಿತ ಸ್ವಾತಂತ್ರ್ಯ ಅನ್ನಿಸಿಬಿಟ್ಟಿತ್ತು.
ಆದರೆ ನನ್ನ ತೊಡೆಯ ಮೇಲೆ ಅಸಹಾಯಕರಾಗಿ ಮಲಗಿದ್ದ ನನ್ನ ತಂದೆಯವರ ಮುಖವನ್ನು ನೋಡಿದಾಗ ಛೇ, ನಾನೆಂತಹ ತಪ್ಪು ಮಾಡಿಬಿಟ್ಟರೆ ಅನಿಸಿತು. ಮೂವತ್ತು ವರ್ಷ ಹೊರಗೆ ಕೇಂದ್ರ ಸರಕಾರದ ನೌಕರಿಯಲ್ಲಿದ್ದು ನಂತರ ಹಳ್ಳಿಯಲ್ಲಿ ನೆಲೆಸಿ ಅಪ್ಪಟ ರೈತನಂತೆ, ರೈತ ಕಾರ್ಮಿಕನಂತೆ ಬದುಕುತ್ತಿದ್ದ
ತಂದೆಯವರ ಮನಸಿನಲ್ಲಿ ನನ್ನ ಮಗ ಕಾರು ತೆಗೆದುಕೊಳ್ಳಲಿ ಎಂಬ ಹಂಬಲ ಇರಬಹುದು ಎನ್ನುವುದು ನನ್ನ ದೊಡ್ಡ ಮನಸ್ಸಿಗೆ ಹೊಳೆಯಲೇ ಇಲ್ಲವಲ್ಲ ಎಂದು ಪರಿತಪಿಸಿದೆ. ” ಇದೊಂದು ಸಲ ಅಣ್ಣಾರು ಹುಷಾರಾಗಿ ಬಿಡಲಿ, ಅವರನ್ನು ಬೆಂಗಳೂರಿನಿಂದ ಸ್ವಂತ ಕಾರಿನಲ್ಲಿಯೇ ಊರಿಗೆ ಕರೆದುಕೊಂಡು ಹೋಗಬೇಕು” ಎಂದು ಆ ಕ್ಷಣದಲ್ಲಿಯೇ ನಿಶ್ಚಯ ಮಾಡಿದೆ.
ಮರುದಿನ ಆಫೀಸಿಗೆ ರಜೆ ಹಾಕಿದ್ದರೂ ತಂದೆಯವರ ಬಳಿ ತಂಗಿಯನ್ನು ಬಿಟ್ಟು ಆಫೀಸಿಗೆ ಹೋಗಿ ಕಾರುಸಾಲಕ್ಕೆ ಅರ್ಜಿ ಸಲ್ಲಿಸಿ ಬಂದೆ. ಆದರೆ ದಿನದಿಂದ ದಿನಕ್ಕೆ ತಂದೆಯವರ ಆರೋಗ್ಯ ಕ್ಷೀಣಿಸುತ್ತ ಹೋಗಿ, ಅಂತಿಮವಾಗಿ ನಮ್ಮೆಲ್ಲರಿಗೂ ವಿದಾಯ ಹೇಳಿ ಹೊರಟೇ ಹೋದರು. ರೇಲ್ವೆ ಸ್ಟೇಶನ್ನಿನಲ್ಲಿ ಮುಂದಿನ ಟ್ರೈನಿಗೆ ಸಿಗ್ನಲ್ ಕೊಡಲು ಹೋಗುವವರಂತೆ..!
ತಂದೆಯವರ ಸಾವಿನ ನಂತರ ಕಾರು ತಗೆದುಕೊಳ್ಳುವದನ್ನು ಮತ್ತೆ ಮುಂದೂಡಿದೆ. ಕಾರಿನ ಬಗ್ಗೆ ಇದ್ದ ಅಳಿದುಳಿದ ವ್ಯಾಮೋಹವೂ ಹೊರಟು ಹೋಗಿತ್ತು. 2002 ರ ಮೇನಲ್ಲಿ ನನ್ನ ಪತ್ನಿ ಈಜಿಪ್ತಿಗೆ ಹೋಗುವ ಮುನ್ನಾ ದಿನ ” ಮಾರುತಿ ಜೆನ್ ಬುಕ್ ಮಾಡಿದ್ದೇನೆ, ಇವತ್ತೇ ಡೆಲಿವರಿ ತೆಗೆದುಕೊಳ್ಳಬೇಕು” ಎಂದಳು. ನಾನು ಒಂದು ಬಗೆಯ ದಿವ್ಯ ನಿರ್ಲಿಪ್ತತೆಯಿಂದ ಅವಳೊಂದಿಗೆ ಹೋದೆ. ಶೋರೂಮಿನಿಂದ ಕಾರ್ ಡ್ರೈವ್ ಮಾಡಿಕೊಂಡು ಬರುವಾಗ ಆಕೆ How do you feel? ಎಂದಳು .
”ನನಗೆ ದೇವರಲ್ಲಿ ನಂಬಿಕೆಯಿಲ್ಲ, ನಿಜ. ಆದರೆ ಸಿನಿಮಾಗಳಲ್ಲಿ, ಕಥೆಗಳಲ್ಲಿ ಆಗುವಂತೆ ಆ ದೇವರೇನಾದರು ಪ್ರತ್ಯಕ್ಷವಾಗಿ ಏನಾದರೂ ವರ ಕೇಳಿಕೊ” ಅಂದ್ರೆ
”ಒಂದೇ ಒಂದು ಸಲ ನನ್ನ ತಂದೆಯವರನ್ನು ಈ ಕಾರಿನಲ್ಲಿ ಕರೆದುಕೊಂಡು ಹೋಗುವಂತೆ ಮಾಡು ಸಾಕು”……
ಪೂರ್ತಿ ಓದಿಗೆ ಓದಿ -ಔಟರ್ ಸಿಗ್ನಲ್.





0 Comments