ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನಲ್ಲಿನ ಪ್ರಿಯಕರನನ್ನು ಬಡಿದೆಬ್ಬಿಸು..

vinate sharma

ವಿನತೆ ಶರ್ಮ

ನಡು ನಡುವೆ ಬರುವ

ಬರಬಡಿದ

ಮಾತಿಗಿಂತಲೂ

ಜೊತೆಯಿರುವ ಗರಬಡಿದಂತಿರುವ

ಈ ದೀರ್ಘ ಮೌನವೇ

ಸಂಗಾತಿ.

*****

sheಸೂರ್ಯ  ಮುಳುಗುತ್ತಿದ್ದಾನೆ

ಆ ಹಳದಿ, ಕೇಸರಿ, ಕೆಂಪಿನ

ಚಿತ್ತಾರದ ಘಳಿಗೆಗೆ ಕನ್ನ ಕೊರೆದು

ಉಯ್ಯಾಲೆಯನ್ನಿಟ್ಟು

ಜೀಕುತ್ತಲೇ ಇರುವ

ಆಸೆಯ ಆಘ್ರಾಣಿಸಿದೆ.

*****

ನೆಲವನ್ನೇ ನೋಡುತ್ತಾ

ನಡೆದಿದ್ದೆ ನಿಧಾನವಾಗಿ ಕಂಡವು

ಹೆದರಿ ಅಡಗಿದ ಹಕ್ಕಿ

ತಲೆಯೆತ್ತಿದ್ದ ಹುಲ್ಲುಕಡ್ಡಿ

ನಾಚಿ ಕುಳಿತ ನೆಲದಲ್ಲಿ

ತಪ್ಪಿಸಿಕೊಂಡ

ಎರೆಹುಳ

ಬಳುಕು ಮೈಯ ಹಳದಿ ಹೂ

ಕಲ್ಲುಗಳ ಸಂತೆ

ಕೆಂಪು ಮಣ್ಣ ಕಂಪು

ಎಲ್ಲಾ

ನೀ ಜೀವಂತವಿದ್ದೀ

ಎಂದವು.

*****

ನಗರದಿಂದಾಚೆ ಬಂದ

ಪ್ರಣಯ ಹಕ್ಕಿಗಳು.

ನದಿದಂಡೆ ಪಕ್ಕ

ಮುತ್ತು ಕೊಟ್ಟು ಅವನೆಂದ

ಈ ಭೂಮಿ ಆಕಾಶಗಳೆರಡೂ

ಅಳೆಯಲಾರವು ನನ್ನ ಪ್ರೀತಿಯ.

ದಡದಾಚೆಯ ಹೊಲದಲ್ಲಿ

ನೇಗಿಲ ಹಿಡಿದ ರೈತ

ಕಳೆ ಕೀಳುತ್ತಿದ್ದ ಹೆಣ್ಣು

ಮರದಡಿ ಮಲಗಿದ್ದ

ಎಳೆಕಂದ ಕಂಡರು

ಯಾಕೋ ಅವನ ಪ್ರೀತಿ

ಸುಳ್ಳೆನಿಸಿಬಿಟ್ಟಿತು.

*****

ಸಪ್ಪಗಾಗಬೇಡ

ಗಂಡನಂತೆ

ರಸ ಹೀರಿದ

ಮಾವಿನಂತೆ

ನಿನ್ನಲ್ಲಿನ ಪ್ರಿಯಕರನನ್ನು

ಬಡಿದೆಬ್ಬಿಸು

ಎಡಬಿಡದೆ ಜಗಿದ

ಕಬ್ಬಿನ ಜಲ್ಲೆಯಲ್ಲೂ

ಮಿಕ್ಕಿರುವ ಸ್ವಲ್ಪ ರಸವನ್ನು

ಸೊರ್ರೆಂದು ಹೀರಿ

ಮನಸೋಚ್ಛೆ ಮತ್ತೆ

ಪ್ರೀತಿ ಮಾಡೋಣ

ಬಾ ಎಂದೆ.
*****

ಜಲಪಾತದಂತೆ

ಬೆಟ್ಟದಿಂದಿಳಿದು ಬರುತ್ತಿದ್ದ

ಕಾರಿನ ಪಕ್ಕ ಇದ್ದಕ್ಕಿದ್ದಂತೆ

ಕಂಡದ್ದು ಅವರಿಬ್ಬರ

ಅಮ್ಮಾ, ಯಜ್ಮಾನ್ರೆ ಎಂಬ ಕೂಗು

ಜೋಡಿಸಿದ್ದ ಆ

ಎರಡು ಜೊತೆ ಕಪ್ಪಿಟ್ಟ

ದೀನ ಕೈಗಳು, ಮುಖದ

ಬಿಸಿಲಿನ ಮಡಿಕೆಗಳು

ನಡುಗಿದ ಒಣತುಟಿಗಳು

ಅವರಿಬ್ಬರ ದೈನ್ಯತೆಯ

ಸುಡು ಕಣ್ಣುಗಳು

ನನ್ನನ್ನು ಇರಿಯುವ

ಎಚ್ಚರಿಕೆ ಗಂಟೆಯಾದವು.

‍ಲೇಖಕರು admin

24 July, 2016

1 Comment

  1. Vasudeva Sharma

    ಅಬ್ಬಾ… ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading