ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನದೊಂದು ಸಂದೇಶಕ್ಕಾಗಿ…

ಡಿ ಎಸ್ ರಾಮಸ್ವಾಮಿ

ನಿನ್ನದೊಂದು ಸಂದೇಶಕ್ಕೆ ಕಾಯುತ್ತೇನೆ,
ಅದು ಬರಿಯ ಮಾತಾಗಲಿ, ಊಟ ತಿಂಡಿಯ ಸಾಮಾನ್ಯ ಮಾತೇ ಆಗಲಿ
ಸದ್ಯ ನೀನು ಮಾತಿಗೆ ಸಿಕ್ಕುತ್ತೀಯಲ್ಲ ಎಂಬ ಸಮಾಧಾನದಿಂದ;

ಆದರೆ,
ಕಾಯುವುದು ಎಂದರೆ ಬಲು ಹಿಂಸೆ
ಕ್ಷಣ ಕಳೆದ ಹಾಗೆ ಆತಂಕ,
ಏನಾಗುತ್ತಿದೆಯೋ ಎನ್ನುವ ಅನಾಥ ಭಾವ
ಸುಮ್ಮನೇ ಹೆಚ್ಚಾಗುವ ವಿಷಾದದ ರಾಗ.

ಆದರೂ ಕಾಯುತ್ತೇನೆ
ನೀನೇ ಬರೆದಿದ್ದ ನಿನ್ನದೇ ಹಳೆಯ ಪತ್ರ ಮತ್ತೆ ಓದುತ್ತ,
ನಮ್ಮ ನಡುವಣ ಸ್ನೇಹ, ಮುನಿಸು ನೆನೆಯುತ್ತ
ಊಹಿಸುತ್ತ ಈಗೇನು ಮಾಡುತ್ತಿರಬಹುದೆನ್ನುವ ಕುತೂಹಲದಿಂದ

ಕಾಯುತ್ತೇನೆ, ಕಾಯುತ್ತಲೇ ಇರುತ್ತೇನೆ.

ಏಕೆಂದರೆ
ಮೊದಲಿನ ಹಾಗೆ ಪಟ್ಟಾಗಿ ಕೂತು ಪತ್ರಿಸುವುದಕ್ಕೆ
ಸಮಯ ಸಿಕ್ಕಾಗಲೆಲ್ಲ ಬಂದು ಕಾಣುವುದಕ್ಕೆ
ಸಿಕ್ಕವರ ಹತ್ತಿರವೆಲ್ಲ ದೂರು ಕೊಡುವುದಕ್ಕೆಲ್ಲ
ಇಲ್ಲವೇ ಇಲ್ಲ ಪುರುಸೊತ್ತು, ಸಮಯ

ಆದರೂ
ಕಾಯುತ್ತೇನೆ ಕಾಯುತ್ತಲೇ ಇರುತ್ತೇನೆ
ನಿನ್ನದೊಂದು ಸಣ್ಣ ವಿಷಾದದ ನಗೆಗೆ
ಕತ್ತಲೆಯಲ್ಲೇ ಕಳೆದು ಹೋಗುತ್ತಿರುವ ಸಂಬಂಧಕ್ಕೆ
ಯಾವತ್ತಾದರೂ ಜ್ಞಾನೋದಯವಾಗಬಹುದೆಂಬ
ಏಕೈಕ ಕಾರಣಕ್ಕೆ
ಹಾಗೇ ಉಳಿದ ನನ್ನಾಳದ ವಿಷದದ ದನಿಗೆ.

‍ಲೇಖಕರು avadhi

21 March, 2019

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading