ರುಜುವಾತು
ಎಸ್ ಸಿ ದಿನೇಶ್ ಕುಮಾರ್

ಕರು ತಾಯ ಮೊಲೆಯನ್ನು
ಗುದ್ದಿ ಗುದ್ದಿ ಹೀರುತ್ತಿದೆ
ತಾಯಿ ಪೂರ್ತಿ ಬಸಿದುಕೊಳ್ಳಬೇಕು
ಪ್ರತಿಹನಿಯನ್ನೂ ಉಣಿಸಬೇಕು
ಏನೂ ಉಳಿಸಿಕೊಳ್ಳದೆ ಅವಳು ಎಲ್ಲ ಕೊಟ್ಟಳೆಂಬುದಕ್ಕೆ
ಕರುವಿಗೆ ರುಜುವಾತು ಬೇಕು
ಹೊತ್ತು ತಂದಿದ್ದು ಸಿಹಿಯನ್ನೇ
ಜೇನು ಹಲ್ಲೆ ಕಟ್ಟಬೇಕು
ಜೀವದಂಟಿನಲ್ಲಿ ಮೈಮುಳುಗಿಸಿಕೊಳ್ಳಬೇಕು
ಜೀವ ಹಿಂಡಿ ಕಟ್ಟಿದ ಹಲ್ಲೆಯನ್ನು ಉಳಿಸಿಕೊಳ್ಳಬೇಕು
ಕಲ್ಲು ಹೊಡೆದವರ ಕಚ್ಚಿ ಗಾಯಗೊಳಿಸಬೇಕು
ತಾನು ತಂದಿದ್ದು ಸಿಹಿಯನ್ನೇ ಎಂಬುದಕ್ಕೆ
ರುಜುವಾತು ಬೇಕು ಜೇನಿಗೆ
ಎದೆ ಬಗೆದು ತೋರುವಂತಿರಬೇಕಿತ್ತು;
ಪ್ರೀತಿ, ಮಮಕಾರ, ನೋವು, ಹುಚ್ಚು, ಬಾಧೆಗಳನ್ನೆಲ್ಲ
ಕಮಲದ ದಳದಳಗಳಂತೆ ಬಿಡಿಸಿ ಬಿಡಿಸಿ ಹರಡುವಂತಿರಬೇಕಿತ್ತು
ಏನ ತೋರುವುದು? ಎಲ್ಲ ಅಮೂರ್ತ
ಎದೆ ಬಗೆದರೆ ಕಾರುವುದು ನೆತ್ತರು ಮಾತ್ರ
ಬರಿಯ ಪ್ರೀತಿಸಿದರಷ್ಟೇ ಸಾಲದು
ರುಜುವಾತು ಮಾಡಬೇಕು
ಅದಕ್ಕೆ ಜೀವವನ್ನೇ ಇಕ್ಕಳಕ್ಕೆ ಒಡ್ಡಬೇಕು
ಕತ್ತರಿಸಿಕೊಳ್ಳಬೇಕು ಒಂದೊಂದೇ ನರವನ್ನು
ಅಗೋ, ಹಸುವಿನ ಮೊಲೆಗಳಲ್ಲಿ ನೋವು
ಮೋಡ ಕಟ್ಟಿ ನೀರಾಗಿ ಹರಿಯುವವರೆಗೆ
ಭೂಮಿಗೆ ಧಾವಂತ, ಧಗಧಗ ಹೊತ್ತುರಿಯುತ್ತದೆ
ಮೋಡಕ್ಕೂ ರುಜುವಾತಿನ ಪ್ರಶ್ನೆ
ಹನಿಹನಿಯಾಗಿ ಜಿನುಗುವರೆಗೆ ಭೂಮಿಯ ಜೀವ ತಣಿಯದು
ನಿನಗೂ ರುಜುವಾತು ಬೇಕು
ಹೇಳು ಏನ ಮಾಡಲಿ?
ಗಂಧದಂತೆ ನನ್ನನ್ನೇ ತೇಯ್ದುಕೊಂಡು
ನಿನ್ನ ಹಣೆಗೆ, ಗಲ್ಲಕ್ಕೆ, ಪಾದಕ್ಕೆ ತೀಡಿಕೊಂಡುಬಿಡಲೇ?
ರಕ್ತ ಜಿನುಗುತ್ತಿದೆ ಹಸುವಿನ ಮೊಲೆಗಳಲ್ಲಿ
ಕರುವಿಗಿನ್ನೂ ಸಮಾಧಾನವಾದಂತಿಲ್ಲ







0 Comments