ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನಗೂ ಈ ಎರಡು ಸಾಲು ಬರೀ ಶಬ್ದಗಳಾಗಿ ಕಂಡರೆ….

ಕೆಲವು ದ್ವಿಪದಿಗಳು

ಬಸವರಾಜ ಸೂಳಿಭಾವಿ

ಲಡಾಯಿ ಪ್ರಕಾಶನ

1.

ಗಾಯಗೊಳ್ಳದಿರುವ ಜಾಗ ಇನ್ನೂ ಸ್ವಲ್ಪ ಉಳಿದಿತ್ತು

ಹೋದವರು ಇರಿದ ಜಾಗವನ್ನೇ ಹೊಸ ಚೂರಿ ಬಯಸಿತು

2.

ಸ್ಮಶಾನದ ಕಡೆ ನೋಡಿದೆ

ಬದುಕಿನ ಧ್ಯಾನ ಮತ್ತಷ್ಟು ಮೊಳೆಯಿತು

3.

ಕೈಗಂಟಿದ್ದು ಹನಿ

ಕುಡಿದರೆ ಅದೇ ಕಡಲ ರುಚಿ

4.

ದೂಳು ಪಲ್ಲಂಗದ ಮೇಲಿತ್ತು

ನೀನೊಮ್ಮೆ ನಾನೊಮ್ಮೆ ಕನ್ನಡಿಯನ್ನು ಒರೆಸಿಟ್ಟುಬಂದೆವು

5.

ಮಹಾತ್ಮ ಪಟ್ಟಕೇರಿ ಎಲ್ಲಡೆ ಮೂರ್ತಿಯಾದವನ ಚಾಳೀಸು ಎದ್ದುಕಂಡಿತು

ಊರ ಬೀದಿಯ ಧೂಳು ಹಾರಿಬಂದು ಚಾಳೀಸಿನ ಮೇಲೆ ಮನೆ ಮಾಡಿತು

6.

ರಾಜಘಾಟ್ ಹಾದಿಯಲಿಂದು ಮುಖವಿಲ್ಲದ ಹೆಜ್ಜೆಗಳ ಸದ್ದಾಯಿತು

ಗೋರಿಯೊಳಗಿನ ಬೆತ್ತಲ ಶವ ಬಟ್ಟೆಯುಟ್ಟು ಮಗ್ಗುಲು ಬದಲಿಸಿತು

7.

ಒಡೆದ ಹಾದಿಗನ್ನಡಿಯ ನೋಡಿ ಒಳಗೆ ಮೂಡಿದ್ದು ಎರಡೇ ಸಾಲು

ಬರೆಯತೊಡಗಿದಾಗ ಕಪ್ಪಗಿದ್ದ ಕೂದಲು ಮುಗಿದಾಗ ಬೆಳ್ಳಗಾಗಿತು

8.

ಧುಮ್ಮಿಕ್ಕುವ ನೀರಿಗೆ ಮೈಯೆಲ್ಲಾ ಗಾಯ

ನಿಂತು ನೋಡುವ ಕಣ್ಣಿಗೆ ಅಹಾ ಸೊಬಗು

9.

ಒರೆಸಲೆಂದು ಮುಂದಾದ ಬೆರಳಿಗೆ ತಾಗಿದ್ದು ಹನಿ ಕಣ್ಣೀರಷ್ಟೇ

ಕೆಂಡ ಮುಟ್ಟಿದನುಭವವಾಯಿತೆಂದು ಹೇಳಲಾರದೇ ಹೋದೆ

10.

ಸುಟ್ಟುಕೊಂಡಾದ ಆವಿಯಲಿ ಕಡಲಿನ ಜೀವದ ಹುಟ್ಟು ಪ್ರಕಟವಾಗುವುದು

ಬೆಂಕಿಯಲಿ ನಡೆವಗಾಲವೇ ಅಕ್ಕಿಗೆ ದಕ್ಕದ ಸುವಾಸನೆ ಕುದ್ದ ಅನ್ನದಲಿ ತೇಲುವುದು

11.

ನಿನ್ನ ಮಡಿಲಿಗೆ ತಲೆ ಚಾಚುವ ಕನಸು ನಾಳೆಗೆ ವಿಸ್ತರಿಸಿತು

ನಾಳೆಯ ಹಾಳೆಯಲಿ ಇಂದಿನ ಹೂ ಕಾಣದೇ ಹೋಯಿತು

12.

ನಡೆವಾಗ ಅಚಾನಕ ಊರುಗೋಲು ತಪ್ಪಿದ ಮನಸು ಮೌನವಾಗುವುದು

ಸುಮ್ಮನಿರಿಸದ ಮೌನ ಕೇಳುತ್ತಿದೆ ತಿರುಗಿ ನನ್ನ ಮನಸನ್ನಾದರೂ ಕೊಡು

13.

ನೇತುಹಾಕಿದ ಚಿತ್ರ ಕಣ್ಣೆದುರಿಗಿತ್ತು

ಮನದ ನಾಲಿಗೆ ಚೌಕಟ್ಟಿನಾಚೆ ಸರಿಯಿತು

14.

ನಿನಗೂ ಈ ಎರಡು ಸಾಲು ಬರೀ ಶಬ್ದಗಳಾಗಿ ಕಂಡರೆ….

ನನ್ನ ಹಾಗೆ ಹಕ್ಕಿ ಹಾರಿಹೋದ ಆಕಾಶವಾಗಿ ಉಳಿದುನೋಡು

15.

ಎದೆಗಾದ ಹುಣ್ಣು ಮಾಯ್ದ ಮೇಲೆ ಬರೆಯುವುದನು ನಿಲಿಸುವೆನೆಂದಿದ್ದೆ

ಬಾಂಧವರೆ ನೀವೇಕೆ ಚಿಂತಿಸುವಿರಿ ನಾನಿನ್ನೂ ಬರೆಯುತ್ತಲೇ ಇದ್ದೇನೆ

16.

ಸ್ವರ್ಗದ ಮಾತುಗಳನ್ನಾಡುವ ಮನವೆ ಈಗಲೂ ನಾ ನೆಲ ನಂಬಿ ನಡೆದಾಡುವನು

ಮಳೆ ಬಿದ್ದ ಮಣ್ಣಿಗೆ ಕೈಯೂರು ನಿನ್ನ ಕನಸಿನ ಬೀಜ ಒಂದಾದರೂ ಮೊಳೆಯುವುದು

17

ಒಲವಿನ ಗಾಳಿಯಲಿ ಗಾಯದ ಗಂಧ ಬೆರತೆ ಇರುವುದು

ಉರಿವಬೆಂಕಿ ಕುದಿವನೀರು ತಾಗಿದಕ್ಕಿ ಅನ್ನವಾಗುವುದು

18

ಕೆಲ ತಪ್ಪುಗಳು ವಯೊಮಾನಕ್ಕನುಗುಣವಾಗಿ ಸಂಭವಿಸಿಯೇ ಬಿಟ್ಟವು

ಕ್ಷಮಿಸು ಮಗಳೆ ನನ್ನ ತಂದೆತನಕೂ ನಿನ್ನಷ್ಟೇ ವಯಸ್ಸು

19.

ಹೇಗಾಗುವುದು ಉದುರಿದ ಹನಿಗಳಿಂದಲೆ ನಿನ್ನ ದುಃಖದ ಮಾಪನ

ಯಾವಾಗಲೂ ಅಖಂಡ ಕಡಲಿನ ಬೊಗಸೆ ನೀರಷ್ಟೇ ದಡಕ್ಕಪ್ಪಳಿಸುವುದು

20.

ಒಮ್ಮೊಮ್ಮೆ ರೆಪ್ಪೆ ಒದ್ದೆಯಾಗುವುದು ನಾಟಕವೆನಿಸುವುದು

ಒಪ್ಪುತ್ತೇನೆ ಆದರದು ನಗುವ ನಾಟಕದಷ್ಟು ಸುಲಭವಲ್ಲ

21.

ಆ ಎದೆಯೊಂದು ಸತ್ಯಗಳ ಶವಗಾರದ ಹಾಗಿತ್ತು

ಒಳಮೂಡಿದ ಸುಳ್ಳು ಉಸಿರಾಡುತ್ತಲೇ ಹೋಯಿತು

22.

ಲೋಕದ ಗಮನವೆಲ್ಲ ನಿನ್ನೆದೆಯಲ್ಲರಳಿದ ಹೂವಿನ ಕಡೆಗಿತ್ತು

ಎದೆಯಲ್ಲಡಗಿದ ಮುಳ್ಳುಗಳು ಯಾರಿಗೂ ಕಾಣದೇ ಹೋದವು

 

‍ಲೇಖಕರು G

25 October, 2012

3 Comments

  1. Vasuki

    Tumbaa channagide!

  2. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

    ತಮ್ಮ ದ್ವಿಪದಿಗಳು :
    ಮನಸ್ಸಿನ ಭಾವನೆಗಳ ನಿಜ ನೆಲೆಯ ಸೆಳಕುಗಳು
    ಬದುಕಿನ ಅನಾವರಣಕ್ಕೆ ಕೆತ್ತಿಟ್ಟ ಶಿಲೆಯ ಉಳಿಯ ಮೊಣಚುಗಳು.

  3. Shwetha Hosabale

    nice lines…ಇಷ್ಟ ಆಯ್ತು 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading