ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿದ್ದೆ ಹತ್ತಿದ್ದ್ರಾ, ಎಮ್ಮಿ ಬಂದು ತಿವೀತು ಅಂದ್ರೂ ಎಚ್ಚರ ಆಗೋದಿಲ್ರಿ..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 18

ಗೋಡ್ಯಾರ್ ಹಾಸ್ಯ ಚಟಾಕಿಗಳು

avadhi-column-rahul bw-edited2

ಬೆಳಗಿನ ಜಾವ ಐದರ ಸುಮಾರಿಗೆ ಗಂಟೆ ಹೊಡೆದು ಎಲ್ಲರನ್ನು ಎಬ್ಬಿಸುತ್ತಿದ್ದರು. ವಿದ್ಯಾರ್ಥಿಗಳೆಲ್ಲಾ ವೇದ ಪಠಣ ಶುರುಮಾಡಿದರು. ಹಾಗೂ ಹೀಗೂ ಒದ್ದಾಡಿ ಏಳು ಗಂಟೆಯ ತನಕ ಸಮಯ ತಳ್ಳಿದೆ. ರಾತ್ರಿ ಸರಿಯಾಗಿ ನಿದ್ರೆಯಾಗದೇ ತಲೆ ಭಾರವಾಗಿತ್ತು. ಮಠದ ವಿದ್ಯಾರ್ಥಿಗಳೆಲ್ಲಾ ತಲೆಗೆ ಬಿಳಿ ಗಾಂಧಿ ಟೋಪಿ, ಬಿಳಿ ಜುಬ್ಬ, ಬಿಳಿ ಪಂಚೆ, ಹಣೆಗೆ ಬಿಳಿ ಪಟ್ಟೆ ಹೊಡೆದು ತರಗತಿಗಳಿಗೆ ಹೊರಟಿದ್ದರು.

ನಿನ್ನೆ ಶಾಲೆಯಲ್ಲಿ ಕೊಟ್ಟಿದ್ದ ಸೇಬನ್ನು ತಿಂದು, ನನ್ನನ್ನು ಹೆದ್ದಾರಿಯ ತನಕ ದಾರಿ ತೋರಿಸುವ ವಾಗ್ದಾನ ಮಾಡಿದ್ದ ಶಾಲೆಯ ವಿದ್ಯಾರ್ಥಿಗಳಿಗೆ ಕಾಯುತ್ತಾ ಕುಳಿತೆ. ನೆನ್ನೆ ಮುನಿಸಿಪಲ್ ಶಾಲೆಗೆ ಹೋಗಿದ್ದಾಗ, ನನ್ನ ಉಪನ್ಯಾಸದ ನಂತರ ಶಾಲೆಯ ಶಿಕ್ಷಕರು ನನ್ನನ್ನು “ಭಾರತ ಜ್ಞಾನ ವಿಜ್ಞಾನ ಸಮಿತಿ – ಕರ್ನಾಟಕ”ಗೆ ಗೌರವ ಸದಸ್ಯತ್ವ ಒದಗಿಸಿ, ನನಗೆ “ಟೀಚರ್” ಶೈಕ್ಷಣಿಕ ಮಾಸಪತ್ರಿಕೆಯ ಒಂದು ಪ್ರತಿಯನ್ನು ಕೊಟ್ಟು ಅಭಿನಂದಿಸಿದ್ದರು.

avadhi- column- rahul- low res- editedಅದರ ನೆನಪಾಗಿ ಕೊಟ್ಟಿದ್ದ ಮಾಸ ಪತ್ರಿಕೆಯ ಪ್ರತಿಯನ್ನು ಓದಲು ಶುರುಮಾಡಿದೆ. ಈ ಮಾಸದ ವಿಶೇಷ “ಪೀಡಕ ಮೂಢನಂಬಿಕೆ”ಗಳ ಬಗ್ಗೆ ಮುದ್ರಿತವಾಗಿತ್ತು. ಇದು ಒಳ್ಳೇ ಬೆಳವಣಿಗೆ ಎನಿಸಿತು. 8-45ರ ತನಕ ಕಾದ ನಂತರವೂ ಹುಡುಗರ ಪತ್ತೆನೇ ಇಲ್ಲ. ಇನ್ನೂ ಕಾದರೆ ಪ್ರಯೋಜನವಿಲ್ಲ ಎಂದು ನಿರ್ಧರಿಸಿ, ಮಠದಿಂದ ಹೊರಟು ಒಂದೆರಡು ರಸ್ತೆ ದಾಟಿದರೆ, ಒಂದು ಕೊಳಗೇರಿ ಸಿಕ್ಕಿತು. ರಸ್ತೆ ಬದಿಯ ಮೋರಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಏನಪ್ಪಾ ಇದು ದುರ್ನಾತ ಎಂದು ಗಮನಿಸಿದರೆ, ಮಳೆನೀರು ಹರಿಯುವಂತೆ ರಕ್ತ ಹರಿಯುತ್ತಿದೆ. ಗಾಬರಿಯಾಗಿ ಜಾಡನ್ನು ಹಿಡಿದು ಹುಡುಕಿಕೊಂಡು ಹೋದರೆ, ದೂರದಲ್ಲಿ ಒಂದಷ್ಟು ಹಂದಿ ಮರಿಗಳು ಗುಂಪಾಗಿ ಏನನ್ನೋ ಮೇಯುತ್ತಿತ್ತು.

ಹತ್ತಿರ ಹೋಗಿ ನೋಡಿದರೆ, ಒಂದು ಕಟ್ಟಡದಿಂದ ರಕ್ತ ಮತ್ತು ಮಾಂಸದ ತುಂಡುಗಳು ಮೋರಿಗೆ ಬೀಳುತ್ತಿತ್ತು. ಅದನ್ನು ತಿನ್ನಲು ಹಂದಿಗಳು ಮುಗಿಬೀಳುತ್ತಿದ್ದವು. ಯಾವ ಕಟ್ಟಡವಿರಬಹುದು ಎಂದು ಹೋಗಿ ನೋಡಿದರೆ, ಅದೊಂದು ಮಾಂಸದ ಮಂಡಿ. ಬೆಳೆಗ್ಗೆಯೇ ರಕ್ತ ನೋಡಿದಂತಾಯಿತು. ಒಂದು ಅಂಗಡಿಯಲ್ಲಿ ಚಹಾ ಕುಡಿದು ದಾರಿ ಕೇಳಿಕೊಂಡು, ಹಾವೇರಿಯ ಮಾರ್ಕೆಟನ್ನು ದಾಟಿ, ಹಳೇ ಪಿ.ಬಿ ರಸ್ತೆಯಲ್ಲಿ ಎಡಕ್ಕೆ ತಿರುಗಿ ಎರಡು ಮೈಲು ನಡೆದು ಹೆದ್ದಾರಿ ಹಿಡಿದೆ. “ಏಲಕ್ಕಿ ನಗರ” ಎಂದೇ ಪ್ರಸಿದ್ಧವಾಗಿರುವ ಹಾವೇರಿಯನ್ನು ದಾಟಿದಂತಾಯಿತು.

ದಾರಿಯಲ್ಲಿ ಮತ್ತೆ ಎರಡು ಮೈಲು ನಡೆದು ಬಲಕ್ಕೆ ತಿರುಗಿದರೆ ನೆಲೋಗಲ್ ಹಳ್ಳಿ. ಹೊಲಕ್ಕೆ ಹೋಗುವವನನ್ನು ಪ್ರೌಢಶಾಲೆಯ ಬಗ್ಗೆ ವಿಚಾರಿಸಿದರೆ, ದೂರದಲ್ಲಿ ಕಾಣುತ್ತಿದ್ದ ಒಂದು ಗುಡ್ಡದ ಮೇಲಿದ್ದ ಕಟ್ಟಡವನ್ನು ತೋರಿಸಿದ. ಅವನ ಹೊಲದ ಮೇಲೇ ನಡೆದು, ಗುಡ್ಡವನ್ನು ಹತ್ತಿ ಶಾಲೆ ತಲುಪಿದೆ. ಒಟ್ಟು ಮೂರು ಗುಡ್ಡಗಳು. ಎರಡು ಗುಡ್ಡಗಳಲ್ಲಿ ಕಲ್ಲಿನ ಗಣಿಗಾರಿಕೆ ಮಾಡಿ, ನಿರ್ನಾಮ ಮಾಡುತ್ತಿದ್ದಾರೆ. ಒಂದು ಗುಡ್ಡವನ್ನು ಒರೆದು ಶಾಲೆ ಕಟ್ಟಿಸಿದ್ದಾರೆ. ಏಕೆ ಶಾಲೆ ಕಟ್ಟಲು ಊರಿನಲ್ಲಿ ಜಾಗವಿಲ್ಲವೇ?

ಬೆಟ್ಟವನ್ನು ಕೊರೆದು ಕಟ್ಟಿಸಿದ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡುವುದು ಹೇಗೆ? ಹಿಂದೆ ಈ ಭಾಗದಲ್ಲಿ ಎಷ್ಟು ಗುಡ್ಡಗಳಿದ್ದವೋ ಕಾಣೆ. ಶಾಲೆಯ ಆವರಣದಲ್ಲಿ ಆಗಲೇ ಬೆಳೆದಿದ್ದ ಐದಾರು ಮರಗಳಿದ್ದು, ವನಮಹೋತ್ಸವ ಅಂಗವಾಗಿ ಹದಿನೈದು ಸಸಿಗಳನ್ನು ನೆಡಿಸಿದ್ದರು. ಶಾಲೆಯ ಆವರಣದಲ್ಲಿ ನಿಂತು ನೋಡಿದರೆ, ಸಾವಿರಾರು ಎಕರೆ ಹೊಲಗಳಲ್ಲಿ, ಪಿಕ್ಕೆಯಿಟ್ಟಂತಹ ಮರಗಳು. ಮಧ್ಯೆ ಒಂದು ಪುಟ್ಟ ಊರು. ಹಾದು ಹೋಗುವ ಹೆದ್ದಾರಿ. ಹೆದ್ದಾರಿಯ ಅಕ್ಕಪಕ್ಕ ಒಂದೂ ಮರವಿಲ್ಲ. ಹೆದ್ದಾರಿಯನ್ನು ಮಾಡಲು ಸಾವಿರಾರು ಮರಗಳ ಹನನವಾಗುತ್ತದೆ.

ಆದರೆ ಹೆದ್ದಾರಿ ನಿರ್ಮಾಣವಾದ ನಂತರ ಮರಗಳನ್ನು ಬೆಳೆಸುವ ಗೋಜಿಗೇ ಹೋಗುವುದಿಲ್ಲ. ಕಡಿದ ಮರಗಳ ಸಂಖ್ಯೆಗಿಂತ ನಾಲ್ಕು ಪಟ್ಟು ಸಸಿಗಳನ್ನು ನೆಟ್ಟು, ಅವುಗಳ ರಕ್ಷಣೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ಮರಗಳ ಹನನ ಮಾಡಿದ ಸಂಸ್ಥೆಗಳ ನಿಬಂಧನೆಯೊಳಗೆ ಸೇರಿಸಬೇಕು. ಇದರ ಬಗ್ಗೆ ನಾವಾಗಲೀ, ಸರ್ಕಾರಗಳಾಗಲಿ ಚಕಾರವೆತ್ತದೇ ಇರುವುದು ಬೇಸರದ ಸಂಗತಿ. ಅಂತದರಲ್ಲೂ ಮಳೆಯ ಅಭಾವದಿಂದ ಬಳಲುತ್ತಿರುವ ಉತ್ತರ ಕರ್ನಾಟಕದ ಜನರೇ ಪರಿಸರ ಬಗ್ಗೆ ಇಷ್ಟು ನಿರ್ಲಕ್ಷಿಸಿ ತಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತಿರುವುದು ಬಹಳ ಖಂಡನೀಯ. ಇನ್ನು ಹತ್ತು ವರ್ಷಗಳಲ್ಲಿ ಈ ಭಾಗದ ಜನರ ದುಸ್ಥಿತಿಯನ್ನು ಊಹಿಸಿಕೊಂಡರೇ ಭಯವಾಗುತ್ತದೆ.

ಪ್ರಾರ್ಥನೆಯಾದ ನಂತರ ನನ್ನ ಉಪನ್ಯಾಸಕ್ಕೆ ಅವಕಾಶ ಸಿಕ್ಕಿತು. ಶಾಲಾ ಪ್ರಾರ್ಥನೆಯಲ್ಲಿ ನಡೆದಿದ್ದ ಕೆಲವು ತಪ್ಪುಗಳನ್ನು ಸರಿಪಡಿಸಿ, ಅವುಗಳ ಉದ್ದೇಶಗಳನ್ನು ಈಡೇರುವಂತೆ ಮಾಡಿ ನನ್ನ ಉಪನ್ಯಾಸ ಮುಗಿಸಿದೆ. ವಿದ್ಯಾರ್ಥಿಗಳು ಬಹಳ ಮಂದ ರೀತಿಯಲ್ಲಿ ಭಾಗವಹಿಸಿದರು. ಆಗ ತಾನೆ ಪದವಿ ಮುಗಿಸಿ ಶಿಕ್ಷಕ ವೃತ್ತಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳೂ ಕೂಡ ನನ್ನ ಉಪನ್ಯಾಸಕ್ಕೆ ಸಾಕ್ಷಿಯಾದರು.

ನನ್ನ ಉಪನ್ಯಾಸವನ್ನು ಮೆಚ್ಚಿ, ಪ್ರೇರಣೆಗೊಂಡು ವನ ಮಹೋತ್ಸವಕ್ಕೆ ದಿಢೀರ್ ಚಾಲನೆ ಕೊಟ್ಟರು. ಎಲ್ಲರೂ ಸೇರಿ ಶಾಲಾ ಆವರಣದಲ್ಲಿ ಕೆಲವು ಸಸಿಗಳನ್ನು ನೆಟ್ಟು, ನೀರೆರೆದು ಸಂತೋಷ ಪಟ್ಟೆವು. ತರಬೇತಿಯ ಕೊನೆಯ ದಿನವಾದ್ದರಿಂದ, ಮಧ್ಯಾಹ್ನದ ಭೋಜನಕ್ಕೆ ಭರ್ಜರಿ ಭಕ್ಷ್ಯಗಳನ್ನು ತಯಾರಿಸಿದ್ದರು. ಊಟ ಮಾಡಿ, ಸಂವಾದ ನಡೆಸಿ, ಮತ್ತೊಮ್ಮೆ ಮಕ್ಕಳನ್ನು ಮಾತನಾಡಿಸಿ ಹೊರಟೆ. ಆ ಗಡಿಬಿಡಿಯಲ್ಲಿ ಶಾಲೆಯಿಂದ ಅಭಿನಂದನಾ ಪತ್ರ ಪಡೆಯಲು ಮರೆತೇ ಹೋಯಿತು.

ಹೊಲಗಳ ದಾಟಿ, ಹೆದ್ದಾರಿ ಹಿಡಿದು ಮೂರು ಮೈಲು ನಡೆದು, ಶಿಬಾರ ಕಟ್ಟಿಯ ಹತ್ತಿರ ಎಡಕ್ಕೆ ತಿರುಗಿ ಒಂದು ಮೈಲು ನಡೆದು ಮಳೆಯಲ್ಲಿ ನೆನೆದು ಗುಂಡೇನಹಳ್ಳಿಯ ಪ್ರೌಢಶಾಲೆ ತಲುಪಿದೆ. ಮುಖ್ಯೋಪಾಧ್ಯಾಯರ ಅನುಪಸ್ಥಿತಿಯಲ್ಲಿ ಮತ್ತೊಬ್ಬ ಶಿಕ್ಷಕ ನನಗೆ ಅವಕಾಶಕೊಡಲು ನಿರಾಕರಿಸಿದರು. ಅದನ್ನು ಗಮನಿಸಿದ ಶಿಕ್ಷಕಿಯು ನನಗೆ ಒತ್ತಾಸೆಯಾಗಿ ನಿಂತು, ನನಗೆ ಅವಕಾಶ ದೊರಕಿಸಿಕೊಟ್ಟರು. ಉಪನ್ಯಾಸ ಅದ್ಭುತವಾಗಿ ನಡೆಯಿತು. ಶಾಲೆಯ ವಿದ್ಯಾರ್ಥಿಗಳು ನಾನು ಕೇಳಿದ ಪ್ರಶ್ನೆಗಳಿಗೆಲ್ಲಾ ಧೃಡ ವಿಶ್ವಾಸದಿಂದ ಉತ್ತರಿಸಿದರು.

ನಂತರ, ನನ್ನ ಉಪನ್ಯಾಸಕ್ಕೆ ಅವಕಾಶ ನಿರಾಕರಿಸಿದ್ದ ಶಿಕ್ಷಕರು ಬಂದು ನನ್ನ ಕ್ಷಮೆ ಕೇಳಿ, ನನಗೆ ಅವಕಾಶ ದೊರೆಯದಿದ್ದಿದ್ದರೆ ತಮ್ಮ ಶಾಲೆಯ ಮಕ್ಕಳು ಉತ್ತಮವಾದ ಉಪನ್ಯಾಸದಿಂದ ವಂಚಿತರಾಗುತ್ತಿದ್ದರು ಎಂದು ಕೊರಗಿದರು. ನನ್ನ ಜೊತೆ ಶಿಕ್ಷಕರು ಸಂವಾದ ನಡೆಸಿ ವಿಚಾರಗಳನ್ನು ತಿಳಿದುಕೊಂಡು, ಶಾಲೆಯ ಆವರಣದಲ್ಲಿ ಹುಡುಗರ ಜೊತೆ ವಾಲಿಬಾಲ್ ಆಟವಾಡಿಕೊಂಡು, ಅದೇ ಊರಿನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ಹುಡುಗರ ಜೊತೆ ತಮಾಷೆ ಮಾತಾಡಿಕೊಂಡು ತಲುಪಿದೆವು.

rahul dayalu mapವಸತಿ ನಿಲಯದ ಪಾಲಕರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು ಉಪಹಾರ ನೀಡಿ ಸತ್ಕರಿಸಿದರು. ನಂತರ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಜೊತೆ ಅವರ ಕೋಣೆ ಸೇರಿಕೊಂಡೆ. ಎಲ್ಲರಿಗೂ ನನ್ನ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ಅವರಲ್ಲಿ ಚೆನ್ನಬಸಪ್ಪ ಅಲಿಯಾಸ್ ಗೋಡ್ಯಾರ್ ಎನ್ನುವ ಹುಡುಗ ತುಂಬಾ ತಮಾಷೆ ಮಾಡುತ್ತಿದ್ದ.

ನಾನು: ಚೆನ್ನಬಸಪ್ಪ, ನಿನಗೆ ಗೋಡ್ಯಾರ್ ಹೆಸರು ಹೇಗೆ ಬಂತು? ಯಾರು ಇಟ್ಟರು?

ಗೋಡ್ಯಾರ್: ಅದು ನಮ್ ಕಾಂದಾನ್ ಅಡ್ಡೆಸರು ರೀ. ನಮ್ಮ ಅಜ್ಜಂಗ ಕೂಡ ಗೋಡ್ಯಾರ್ ಅಂತ ಕರೀತಿದ್ರು. ನಂಗೂ ಕೂಡ ಅದೇ ಹೆಸರು ಬಂತು ರೀ.

ನಾನು: ಸರಿ, ಮಧ್ಯಾಹ್ನ ಏನ್ ನಡೀತು ಗೊತ್ತಾ? ನೆಲೋಗಲ್ ಶಾಲೆಯಲ್ಲಿ ನನ್ನ ಉಪನ್ಯಾಸದ ನಂತರ ನನಗೆ ರಕ್ತದಾನ ಮಾಡಲು ಹೇಳಬಹುದೇ? ನಡೆದು ಸುಸ್ತಾಗಿರುವ ನನಗೇ ಇನ್ನು ಸ್ವಲ್ಪ ದಿನಗಳಲ್ಲಿ ರಕ್ತ ಕೊಡಬೇಕಾಗಬಹುದು.

ಗೋಡ್ಯಾರ್: ಏನ್ರೀ? ರಕ್ತಾನ? ಅವರ್ ಅಪ್ಪ ಕೊಡ್ತಾನಾ ರಕ್ತಾನ? ಅದೇನ್ ಒಂದು ರೂಪಾಯಿನೇನ್ರಿ ಕೊಡಾಕಾ?

ಎಲ್ಲರೂ ಜೋರಾಗಿ ನಕ್ಕೆವು.

ಹರೀಶ್: ನೀವ್ ಇಂಗ್ಲೆಂಡ್‍ನಾಗ ಎಷ್ಟು ವರ್ಷ ಕೆಲ್ಸಾ ಮಾಡಿದ್ರಿ?

ಗೋಡ್ಯಾರ್: ಏನ್ರಿ ನೀವ್ ಇಂಗ್ಲೆಂಡ್‍ನಾಗಿದ್ರ?

ನಾನು: ಹೂಂ ರ್ರೀ. ಯಾಕೆ?

ಗೋಡ್ಯಾರ್: ನೀವ್ ದೊಡ್ಡವ್ರು ಬಿಡ್ರೀಪ್ಪಾ. ನಾನ್ ಇಲ್ಲೇ ಕಾಟೇನಹಳ್ಳಿನೇ ನೋಡಿಲ್ರೀ. ನೀವು ಬ್ರಿಟೀಷ್‍ರಿರೋ ದೇಶ ನೋಡ್ ಬಂದೀರ್ರೀ. ಸರ್ರಾ ಎಷ್ಟ್ ಐತಿ ನಿಮ್ ಆಸ್ತಿ?

ಆ ಪ್ರಶ್ನೆ ಎಲ್ಲರನ್ನೂ ಮತ್ತೆ ನಗೆಗಡಲಿನಲ್ಲಿ ತೇಲಿಸಿತು.

ಹರೀಶ್: ನಿಮ್ಗಾ ಚೆಸ್ ಆಡಾಕ್ ಬರ್ತೈತೇನ್ರೀ?

ಗೋಡ್ಯಾರ್: ಲೇ ಮಂಗ್ಯಾ. ಇಂಗ್ಲೆಂಡ್‍ನಾಗ ಇದ್ದ್ ಬಂದಾರ. ಚೆಸ್ ಆಡಾಕ್ ಬರಂಗಿಲ್ಲೇನು?

ನಾನು: ಸೊಳ್ಳೆ ಐತೇನ್ರಿ ನಿಮ್ಮ ರೂಮಿನಲ್ಲಿ? ನಿನ್ನೆ ರಾತ್ರಿ ಸೊಳ್ಳೆಕಾಟದಿಂದ ನಿದ್ರೆ ಇಲ್ಲ ನನಗೆ.

ಗೋಡ್ಯಾರ್: ಸೊಳ್ಳೆ ಬತ್ತಿ ಹಚ್ತೀವಿ ಬಿಡ್ರಿ ಸರ್ರಾ. ತಲೆ ಕೆಡಿಸ್ಕೋ ಬೇಡಿ. ನೋಡ್ರೀ ಸರ್ರಾ, ನಮ್ಗಾ ಒಂದ್ ಸಲ ನಿದ್ದೆ ಹತ್ತಿದ್ದ್ರಾ, ಎಮ್ಮಿ ಬಂದು ತಿವೀತು ಅಂದ್ರೂ ಎಚ್ಚರ ಆಗೋದಿಲ್ರಿ ಸರ್ರಾ.

footprint2

 

 

 

ನನಗೆ ಅವನ ಪ್ರತೀ ಮಾತಿಗೂ ನಗು ಬರುತ್ತಿತ್ತು. ಮಾತು ಅವರ ಇತ್ತೀಚಿನ ಪ್ರವಾಸದ ಕಡೆಗೆ ತಿರುಗಿತು. ಕೆಲವರು ಪ್ರವಾಸ ಕಥನ ಬರೆದಿದ್ದರು.

ಹರೀಶ್: ತಗ್ಗೊಳ್ಳಿ ಸರ್ರಾ. ನಾನ್ ಬರ್ದಿರೋದನ್ನ ಓದಿ.

ಸ್ವಲ್ಪ ಹೊತ್ತು ಅವನು ಬರೆದ ಪ್ರವಾಸ ಕಥನವನ್ನು ಓದಿದ ನಂತರ ನಾನು ಹೇಳಿದೆ.

ನಾನು: ಲೇ ಹರೀಶ. ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟ ನಂತರ, ಆ ಸ್ಥಳಗಳ ಬಗ್ಗೆ ನಿನ್ನ ಅನಿಸಿಕೆಗಳು ಮತ್ತು ಅನುಭವಗಳನ್ನು ಬರೆಯಬೇಕು. ಸರೀನ?

ಮೋಹನ: ಅವನೇನು ಬರ್ದಿಲ್ರೀ ಸರ್ರಾ. ನಂದನ್ನೆ ಕಾಪಿ ಹೊಡ್ದಾನ.

ಹರೀಶ: ನಿಮ್ ಅವ್ವನಾ, ನಾನ್ ಎಲ್ ಕಾಪಿ ಹೊಡ್ದೆ?

ಮೋಹನ: ನಿಮ್ ಅವ್ವನ ಮೇಲೆ ಆಣೆ ಮಾಡು. ಕಾಪಿ ಹೊಡ್ದಿಲ್ಲ ಅಂತ.

ವಿಷಯ ಅತಿರೇಕಕ್ಕೆ ಹೋಗುತ್ತಿತ್ತು. ಅವರಿಬ್ಬರನ್ನು ಸಮಾಧಾನ ಮಾಡಬೇಕೆನ್ನುವಷ್ಟರಲ್ಲಿ ಗೋಡ್ಯಾರ್ ಮಾತು ತೆಗೆದ.

ಗೋಡ್ಯಾರ್: ಲೇ ಮೋಹನ. ಅವನ್ ಅವ್ವ ಪ್ರವಾಸಕ್ಕೆ ಹೋಗಿದ್ಳೇನು? ಅವಳ್ ಮೇಲೆ ಆಣೆ ಮಾಡಾಕ? ನೀನ್ ಅದುಮ್ಕಂಡ್ ಇರ್ಲೇ.

ಎಂದು ಹೇಳಿ ನಗುವಿನಿಂದಲೇ ಅವರಿಬ್ಬರ ಮಾತಿಗೆ ಬ್ರೇಕ್ ಹಾಕಿದ.

ರಾತ್ರಿಯ ಊಟಕ್ಕೆ ಜೋಳದ ಮುದ್ದೆ, ಸಾಂಬಾರ್ ಮತ್ತು ಬೇಯಿಸಿದ ಮೊಟ್ಟೆ. ಊಟ ಮಾಡಿ ಭಟ್ಟನ ಮೊಬೈಲ್ ಪಡೆದು ಮನೆಯವರಿಗೆ ಕರೆ ಮಾಡಿದೆ. ಅಪ್ಪ ಮಾತನಾಡಿ, ನನಗೆ ಬೇಗ ಮನೆಗೆ ಬಂದು ಬಿಡುವಂತೆ ಒತ್ತಾಯಿಸಿದರು. ನಂತರದ ಪೂಜಾಳ ಕಥೆನೂ ಅದೇನೆ. ನಾನು ಅಂಚೆ ಮಾಡಿದ್ದ ಪುಸ್ತಕವನ್ನು ಓದಿದ ನಂತರವೂ ನಮ್ಮ ಮನೆಯವರಿಗೆ ಬುದ್ಧಿ ಬಂದಂತೆ ಕಾಣಲಿಲ್ಲ. ಅವರ್ಯಾರಿಗೂ ನನ್ನ ಮನಃಸ್ಥಿತಿಯೇ ಅರ್ಥವಾಗುತ್ತಿಲ್ಲವಲ್ಲಾ ಎಂದು ಬೇಜಾರಾಯಿತು. ಯಾವ ಜೀವನದಿಂದ ಬೇಸತ್ತು, ಜಿಗುಪ್ಸೆಗೊಂಡು, ಅಂತಹ ಜೀವನದಿಂದ ದೂರ ಬಂದು ನನಗಿಷ್ಟ ಬಂದಂತೆ ಒಂದು ಹೊಸ ಜೀವನದ ಅನ್ವೇಷಣೆಯಲ್ಲಿ ತೊಡಗಿದ್ದೇನೋ, ಅವರೆಲ್ಲಾ ಸೇರಿಕೊಂಡು ಮತ್ತೆ ಅದೇ ಸ್ವಾರ್ಥ ಜೀವನಕ್ಕೆ ತಳ್ಳಲು ಹಾತೊರೆಯುತ್ತಿದ್ದರು.

ಮಾತಿನ ಅರ್ಧಕ್ಕೆ ಮೊಬೈಲ್‍ನಲ್ಲಿ ಚಾರ್ಜ್ ಇಲ್ಲದ ಕಾರಣ ಕರೆ ನಿಂತಿತು. ಅದೇ ಬೇಜಾರಿನಲ್ಲಿ ಕುಳಿತಿದ್ದವನನ್ನು ಹುಡುಗರು ಕರೆದುಕೊಂಡು ಭಟ್ಟನ ಮುಂದೆ ಚದುರಂಗ ಆಡಲು ಬಿಟ್ಟರು. ಒಂದು ಗಂಟೆ ಸಮಯದ ಆಟದಲ್ಲಿ ನನಗೆ ಸೋಲಾಯಿತು. ನನ್ನ ಮನಸೆಲ್ಲಾ ಮನೆಯವರ ಮಾತಿನ ಕಡೆಗೇ ಇತ್ತು. ಸೊಳ್ಳೆಗಳ ಕಾಟವಿಲ್ಲದಿದ್ದರೂ, ಮೆದುಳಿನಲ್ಲಿ ಯೋಚನೆಗಳು ಗೂಂಯ್‍ಗುಟ್ಟುತ್ತಿತ್ತು. ಬೆಳಗಿನ ಜಾವದವರೆಗೂ ನಿದ್ರೆ ಸೆಳೆಯಲಿಲ್ಲ.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 133 ಮೈಲುಗಳು]

‍ಲೇಖಕರು admin

2 July, 2016

2 Comments

  1. ಸುಮಿತ್ರಾ ಎಲ್ ಸಿ

    nijakku praamanika prayatna .. tumbaa gatti manassu beku..heege maadalu. nimma mundina nadeya kuritu kutuhala.. sumithra.lc

    • ರಾದ

      ಧನ್ಯವಾದಗಳು
      ಹೆಜ್ಜೆ ಹೆಜ್ಜೆಗೂ ನಮ್ಮ ಜೊತೆಯಿದ್ದು ಸಹಕರಿಸಿ. ಹಿಂದಿನ ಮತ್ತು ಮುಂದೆ ಬರುವ ಅಧ್ಯಾಯಗಳನ್ನು ಓದಿ. ಇಷ್ಟಪಟ್ಟರೆ ನಿಮ್ಮ ಸ್ನೇಹಿತರಿಗೂ ತಿಳಿಸಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading