ಖಡಕ್ ನ್ಯೂಸ್, ಜವಾರಿ ಸ್ಟೈಲ್..

ಒಂದು ಗೋಣಿಚೀಲವನ್ನು ಹೆಗಲ ಮ್ಯಾಗ ಹಾಕ್ಕಂಡು ಕರಿಯವ್ವನ ಗುಡಿತಾವ ಬಂದ ಮೈಲವ್ವ ಗುಡಿ ಮುಂದಿನ ಕಟ್ಟಿ ಹತ್ರ ಬರ್ತಿದ್ದಂಗನಾ ಇಕಿ ಮುಂದ ಹಾದು ಹೊಂಟಿದ್ದ ಬನ್ನಿಗೋಳದ ರಾಮಜ್ಜನ ಕರದು ‘ಲೋ ತಮ್ಮಾ, ನೀನು ಜಂಬಜ್ಜನ ಮೊಮ್ಮಗ ಹೌದಿಲ್ಲು ?’ ಅಂತ ಕೇಳಿದ್ಕ ರಾಮಜ್ಜ ಹೌದಬೇ ಯಮ್ಮಾ , ನನಿಗೆ ಅರ್ಜೆಂಟ್ ಕ್ರಿಕೆಟ್ ಆಡಾಕ ಹೋಗಬೇಕು ಏನ್ ಹೇಳು ನಿನ್ ಕಥಿ. ನನಗ ಹೊತ್ತಾಗಕತೈತಿ.’ ಅಂದ.

ರಾಮಜ್ಜನ ಮಾತುಗಳನ್ನ ಕೇಳತಿದ್ದಂಗನಾ ನಮ್ಮ ಮೈಲವ್ವ ‘ ಕ್ವಾ ಈ ಗೋಣಿ ಚೀಲ ತಗಂಡು ಈಟು ತ್ಯಾವ ಆಗಿರೋ ಈ ಕಟ್ಟಿ ಹರಿನ ಒರಸ್ತೀಯಾ ನಮ್ಮಪ್ಪನಾ, ನಿನಗ ಪುಣ್ಯ ಬರತೈತಿ?’ ಅಂದಳು. ಮೈಲವ್ವನ ಮಾತು ಕೇಳಿದ ರಾಮಜ್ಜ ‘ಅಲ್ಲಬೇ ಮುದುಕೀ ರಾತ್ರಿನ್ನೂ ಹಕ್ಕಂಡು ಮಳಿ ಗಾಬು ಇರದೈತಿ ನೀವು shivu poster cut low1ಕುಂದ್ರ ಕಟ್ಟಿಯ  ಈ ಬೇವಿನ ಗಿಡದ ಅರಿಗಳು ಯಾವಾನ್ನ ನಿಮ್ಮ ತಲಿಮ್ಯಾಲ ಬಿದ್ರ ಏನ್ ಮಾಡ್ತೀರಿ.? ಇವತ್ತೊಂದಿನನಾರ ನಿಮ್ ನಿಮ್ ಮನಿಗುಳಾಗ ಮೂಲ್ಯಾಗ ಬೆಚ್ಚಗ ಕುಂದ್ರಾಕ ಬರಾಲ್ಲೇನ್ರಬೇ, ತೀರಾ ತ್ಯಾವ ಒರಿಸ್ಕಂಡು ಕುಂದ್ರವಂಥದ್ದೇನು ಹಕೀಕತ್ತೈನೋವ ? ನಿನ್ ಪುಣ್ಯ ನೀನಾ ಇಟ್ಕ, ಹಾಳಾಗಿ ಹೋಗ್ಲಿ ತಾ ಗೋಣಿಚೀಲನ, ಗಡಾನ ಒರಿಸಿ ನಿನ್ ಹೆಣ ಕುಂದ್ರಿಸಿ ಹೊಕ್ಕೀನಿ.’ ಅಂತ ಮೈಲವ್ವನ ಬುಜದ ಮ್ಯಾಗಿದ್ದ ಗೋಣಿಚೀಲ ತಗೊಂಡ

ಕಟ್ಟಿಯ ಬಂಡೆಯಲ್ಲಿದ್ದ ತೇವವನ್ನು ಗಸಗಸ ತಿಕ್ಕಿ ಅದಾ ಗೋಣಿಚೀಲನ್ನ ಹರಿಗೆ ಹಾಸಿ ‘ಇದ್ರ ಮ್ಯಾಗ ಕುಂದ್ರೋ ನಿಮ್ಮೌನು ಹೊತ್ ಮುಣ್ಗವರಿಗೂ ಊರೆಲ್ಲ ಆಡ್ಕಂಡು ಹಾಳಾಗ್ ಹೋಗ್ರಿ. ದೇವ್ರು ನಿಮಿಗೇನರ ಕಟಿಗಿ ಬಾಯಿ ಕೊಟ್ಟಿದ್ರ ದಿನಕ್ಕೊಂದೊಂದು ಸಿಡದು ಹೊಕ್ಕದ್ವು. ನಿಮಿಗೆ ದಿನಾಲಿ ಬಾಯಿ ಕೆತ್ತಿ ಕೊಟ್ಟು ಕೊಟ್ಟು ಆ ಬಡಿಗ್ಯಾರ ಕೆಂಚಜ್ಜ ನೆಗದು ಬಿದ್ದು ಹೊಕ್ಕದ್ದ. ಚರ್ಮದ ಬಾಯಿ ಆಗಾತ್ಗೆ ತಡಕಂಡೈತಿ  ತಿಳ್ಕಳಬೇ ಮುದುಕಿ. ನನಿಗೆ ಹೊತ್ತಾತು ನಡೆಮ್ಮೋ’ ಅಂತೇಳಿ ಅಲ್ಲಿಂದ ಹೊಂಟಾಬಿಟ್ಟ. ಹಾಸಿದ ಗೋಣಿತಾಟಿನ ಮ್ಯಾಲೆ ಶಿವ ಶಿವ ಅಂದ್ಕೋತ ಕುಂತ್ಗಂಡ್ಳು.

ಕಟ್ಟಿಗೆ ಕುಂತ ಮೈಲವ್ವ ತನ್ನ ನಡುದಾಗ ಸಿಕ್ಕಿಸಿಕಂಡಿದ್ದ ಕುಣಕಿ ಚೀಲನ ಎಳಕಂಡು ಆ ಕುಣಕಿ ಚೀಲದಾಗಿದ್ದ ಒಂದು ರವಷ್ಟು ಅಡಕಿ ಚೂರು ಕೈಗೆ ಹಿಡ್ಕಳಷ್ಟತ್ಗೆ ಕೊಡಬತ್ತ ಮನ್ಯಾಗ ಬಿಟ್ ಬಂದೀನಿ ಅನ್ನೋದು ನೆಪ್ ಮಾಡ್ಕಂಡು ಕೈಯಾಗ ಹಿಡ್ಕಂಡಿದ್ದ ಅಡ್ಕಿ ಚೂರುಗಳನ್ನ ಮತ್ತೆ ಕುಣುಕಿ ಚೀಲದೊಳಗ ಕೈ ಬಿಟ್ಟು ಕರಿಯವ್ವನ ಗುಡಿಕಡಿಗೆ ಮುಖ ತಿರುಗಿಸಿ ‘ಎಂಥಾ ಮರವು ಕೊಟ್ಟೇ ಕರಿಯವ್ವಾ ನನಗ. ಏನ್ ಕಡ್ಮಿ ಮಾಡೀನೇ ನಾ ನಿನಗ ?’ ಅಂತ ಕರಿಯವ್ವನ ಜೊತೆ ಸಲಿಗಿಲೆ ಮಾತಾಡಿ ‘ಈಗ ಯಾರಾನ್ನ ಬರ್ತಾರ ಬುಡು’ ಅಂದ್ಕಂತಿದ್ದಂಗನೇ ಬುಡೇನಜ್ಜ ಕಟ್ಟಿ ಕಡಿಗೆ ನಡದು ಬರಕತ್ತಿದ್ದ.

Shivu Morigere-1 (1)

ಬುಡೇನಜ್ಜನ್ನ ನೋಡಿದ ಕೂಡ್ಲೆ ಮೈಲವ್ವ ಕೂಗಿ ‘ಹೇ ಸಾಬಣ್ಣ ಹಂಗಾ ಅಲ್ಲಿ ನಮ್ ಮನ್ಯಾಗೀಟು ಕೊಡಬತ್ತ ಇಸ್ಕಂಬಾರಪ್ಪೋ’ ಅನ್ನೋದನ್ನ ಕೇಳಿದ ಬುಡೇನಜ್ಜ ಆತುಬುಡು ಅನ್ನಂಗ ತಲಿಯಾಡ್ಸಿ ಮೈಲವ್ವನ ಮನಿ ಒಳಕ ಹೋಗಿ ಕೊಡಬತ್ತ ತಗಂಡು ಬಂದು ಮೈಲವ್ವನ ಮಗ್ಗಲು ಇಟ್ಟು ‘ಮುಂಜ್ ಮುಂಜಾಲೆ ಎಲಿಯಡ್ಕಿ ಅಕ್ಕಣಕತ್ತಿಯಲ್ಲವಾ ಸುಡಗಾಡು ಸಿದ್ದವ್ವಾ ಇವ್ನೆಲ್ಲಿ ರಾಮಣ್ಣ ರಾತ್ರಿ ಹೊಡದಿರಾ ಮಳಿಗೆ ಮುದ್ರಿಕಂಡು ಇನ್ನೂ ಮಕ್ಕಾಂಡಾನಾ ಏನ್ಕತಿ ?’ ಅಂತ ಕೇಳಿದ.

ಬುಡೇನಜ್ಜನ ಮಾತು ಕೇಳಿದ ನಮ್ ಮೈಲವ್ವ ‘ಇವತ್ತು ಮನಿಯಾಗ ಮಂಡಕ್ಕಿ ಒಗ್ಗಣ್ಣಿ ಹಾಕಿದ್ರು, ತುರದ ಕೊಬ್ರಿಚೂರು, ಕೊತ್ತಂಬ್ರಿ ಮುಂದ್ ಮಾಡಿ ಎಣ್ಣಿ ಮ್ಯೇಲ್ ಮಾಡಿ ಮಾಡಿದ್ದನ್ನ ತಿಂದ್ರ ಬೆಳಗಾ ಮುಂಜಾಲೆ ದಮ್ ಕೀಳದಿಲ್ಲೇನು ಬುಡೇನಜ್ಜಾ ? ಅದ್ಕಾ ಎಲಿಯಡ್ಕಿ, ಯಾಲಕ್ಕಿ, ಲವಂಗ, ಕಾಜು, ಪತ್ರಿ ಹಿಂಗ ಒಟ್ ಕುಣ್ಕಿ ಚೀಲದಾಗ ಏನೇನ್ ಐತೋ ಎಲ್ಲಾದನ್ನೂ ಕೊಡಬತ್ತಕ್ಕ ಹಾಕಿ ಕುಟ್ಟಿಗಂಡು ತಿಂದ್ರಾತು ಅಂದ್ಕಂಡೀನಿ ನೋಡು’ ಅಂತೇಳುತ್ತಾ ತನ್ನ ಕುಣಕಿ ಚೀಲದಾಗಿಂದ ಒಂದೊಂದಾ ಐಟಂಗಳನ್ನ ಕೊಡಬತ್ತಕ್ಕ ತುಂಬಾಕ ಹತ್ತಿದ್ಳು.

ಎಲ್ಲಾ ಐಟಂ ಗಳನ್ನೂ ಹಾಕಿ ಸುಣ್ಣವನ್ನೂ ತುಂಬಿ ಕೊಡಬತ್ತದಾಗ ಮೈಲವ್ವ ಅಡಿಕಿ ಎಲಿ ಕುಟ್ಟಿ ಗಿಣ್ಣಂದ ಹದಗೊಂಡ ಅಡಕಿ ಎಲಿನ ಕೊಡಬತ್ತದಿಂದ ತೆಗದು ದವಡಿಗೆ ಸರಿಸಿ ಎಲ್ಡು ಮೂರ್ ಸರ್ತಿ ಜಮಡಿ ಒಮ್ಮಿ ತಮ್ಮ ಬಲಗೈನ ಎರಡು ಬೊಳ್ಳುಗಳನ್ನ ತಮ್ಮ ತುಟಿಮ್ಯಾಗ ಬೀಡಿ ಸೇದೋರ್ ಸ್ಟೈಲಿನಂಗ ಅಡ್ಡ ಹಿಡದು ಪಿಚಕ್ ಅಂತ ಉಗಳತಿದ್ದಂಗನಾ ರಾಮಣ್ಣ ಕಟ್ಟಿಗೆ ಹಾಜರ್.

ಹಿಂದಿಲಿಂದ ಬಂದು ಕುಂತ ರಾಮಣ್ಣನ ಕಡಿಗೆ ತಿರುಗಿ ನೋಡಿದ ಮೈಲವ್ವ ‘ಅಲೆ!, ಯಾವಾಗ ಬಂದುಬಿಟ್ಟಾನಲ್ಲ ಇವ್ನು ಮೂರ್ನೂ ಬಿಟ್ಟೋನು’.ಅಂತಂದ್ಲು. ಮೈಲವ್ವನ ಮಾತಿಗೆ ಏನೋ ಹೇಳಾಕ ಹೊಂಟಿದ್ದ ರಾಮಣ್ಣ ಅಷ್ಟೊತ್ತಿಗೆ ಕಾರಹುಣ್ಮಿಗೆ ಅಂತ ಬಂದು ಮರಿ ಮಂಗಳವಾರಾನೂ ಮುಗಿಸ್ಕಂಡು ಉಡಿಯಕ್ಕಿ ತುಂಬಿಸ್ಕಂಡು ಹೊಸದಾಗಿ ಮದ್ವಿಯಾಗಿರೋ ಬಸಣ್ಣನ ಮಗಳು ಲತಾ ಬುಡೇನಜ್ಜನ ಹತ್ರ ಬಂದು ‘ಯಜ್ಜಾ ನಾ ಊರಿಗೊಂಟೀನಿ ಇಕಳಜ್ಜಾ ಆಶಿರ್ವಾದ ಮಾಡು ಅಂತೇಳಿ ಕಾಲಿಗೆ ಬಿದ್ಲು.

remoteಹಂಗ ಮೈಲವ್ವನ ಕಾಲಿಗೆ ಬಿದ್ದು ಆಮ್ಯಾಲ ತನ್ನ ಹೆತ್ತಿಗಂಡು ಆಡಿಸಿ ಬೆಳಸಿದ ರಾಮಣ್ಣನ  ಕಾಲಿಗೂ ಬಿದ್ದು ಎದ್ದೇಳತ್ಗಿ ಹುಡ್ಗಿಯ ಮಖಾನ ತನ್ನ ಬೊಗಸಿಲೆ ಹಿಡದ ರಾಮಣ್ಣ ‘ಹೋಗಿ ಬಾ ಮಗಳಾ’ ಅಂದ್ಕೋತ ಲೊಚಕನೆ ಒಂದು ಮುತ್ ಕೊಟ್ ಬಿಟ್ಟ.

ರಾಮಣ್ಣ ಮುತ್ತು ಕೊಟ್ಟಿದ್ದನ್ನ ನೋಡಿದ ಹೊಸದಾಗಿ ಮದುವಿಯಾದ ಮದುಮಗ ಜೋರು ನಕ್ಕು ಒಂದಾ ಕಡಿಗೆ ಕೊಡ್ಬ್ಯಾಡೋ ಯಜ್ಜಾ ವಚ್ಚಕ್ಕ ಅಕೈತಿ ಇಕಡಿಗೊಂದು ಕೊಡು ಅಂತಂದ. ಹುಡುಗಿ ಕಣ್ಣು ಹಸಿಯಾಗಿದ್ವು. ಹಿಂದಲೆ ತನ್ನ ಗಂಡನ ಕಡಿಗೆ ತಿರುಗಿದ ಹುಡುಗಿ ‘50 ರುಪಾಯಿ ಕೊಡ್ರಿ ಇಲ್ಲಿ’ ಅಂತ ಪಿಸುಗುಟ್ಟುತ್ತಲೇ ಗಂಡ ಕೊಟ್ಟ ರೊಕ್ಕಾನ ರಾಮಜ್ಜನ ಕೈಗೆ ಇಡ್ತಾ ವಲ್ಲೆ ಅನ್ನಬ್ಯಾಡ ನೋಡ ದೊಡ್ಡಪ್ಪಾ, ಇವತ್ತು ನಿನಿಗೆ ಬೀಡಿ ಚಾ, ಮೈಲವ್ವಗ ಅಡ್ಕಿ ಎಲಿ ನಸೆಪುಡಿ, ಬುಡೇನಜ್ಜಗ ರಾತ್ರಿಗೊಂದು ಕಟ್ಟು ಬೀಡಿ ತಗೋರಿ ಆತಿಲ್ಲು ಅಂತ ಬಲವಂತದಿಂದ ಕೊಟ್ಟು ‘ಬರ್ತೀನ್ರಪ್ಪಾ’ ಅಂತೇಳಿ ಬಸ್ ಸ್ಟ್ಯಾಂಡ್ ಕಡೆ ಹೊಂಟ್ರು.

ಅವರು ಆ ಕಡಿ ಹೋಗ್ತಿದ್ದಂಗನಾ ರಾಮಣ್ಣನ ಕಡಿಗೆ ನೋಡಿದ ಮೈಲವ್ವ ‘ಅಲ್ಲಲೋ ಅಡ್ಬಿಟ್ಟಿ ಮಾಡಿಕಂಡ ಗಂಡನ ಎದ್ರಿಗೆ ಆ ಹುಡ್ಗಿಗೆ ಮುತ್ತು ಕೊಟ್ಟೆಲ್ಲ ನಾಚಿಕಿ ಆಗಲ್ಲೇನು ನಿನಗ ?, ಅಂವ ಏನೋ ದೊಡ್ಡ ಮನಷಾ ಅದಾನ ಅದಕ್ಕಾ ಸುಮ್ಮನದಾನ  ಸೈ. ಅದ್ರ ಬದ್ಲು ಅನುಮಾನ ಪಡೋರಾಗಿದ್ರ ಏನ್ ಇತ್ ನಿನ್ ಗತಿ ?’ ಅಂತ ಕೇಳತಿದ್ದಂಗನಾ ‘ನನ್ ಮೊಮ್ಮಗಳಿಗೆ ನಾನು ಮುತ್ತು ಕೊಟ್ರ ಅವ ಯಾಕ ಅನುಮಾನ ಪಡ್ತಾನಬೇ ಮುದ್ಕಿ’ ಅಂದ.

ರಾಮಣ್ಣನ ಮಾತು ಕೇಳಿದ ಮೈಲವ್ವ ಯಪ್ಪಾ ಪುಣ್ಯಾತ್ಮ ನೀನೇನು ಔರ ಸ್ವಂತ ಅಜ್ಜ ಅದಿಯೇನು ? ಕಾಲ ಕೆಟ್ಟು ಕೆರ ಹಿಡದೈತೋ ರಾಮಣ್ಣಾ, ಮಗಳಾದ್ರೇನು, ಮೊಮ್ಮಗಳಾದ್ರೇನು, ಮುತ್ತು ಕೊಡೋದನ್ನ ಬ್ಯಾರೆ ಥರಾನಾ ನೋಡೋ ಮಂದಿ ಹುಟೈತಿ’ ಅಂತಂದ್ಳು. ಮೈಲವ್ವನ ಮಾತು ಕೇಳಿದ ರಾಮಣ್ಣ ‘ಅನ್ನಾ ತಿನ್ನರಾರೂ ಹಿಂಗ ಆಲೋಚ್ನಿ ಮಾಡಲ್ಲ ಬಿಡಬೇ’ ಅಂದ. ರಾಮಣ್ಣನ ಮಾತು ಕೇಳಿದ ಬುಡೇನಜ್ಜ, ‘ಅಲ್ಲೋ ರಾಮಣ್ಣ ಮನ್ನೆ ಟಿವಿ ಪೇಪರ್ ಗಳನ್ನ ನೋಡಿಲ್ಲೇನು ನಮ್ಮ ಸಿಎಂಗೆ ಅದಾರ ಮಗಳ ಸಮಾನದಾಕಿ ಟೇಜ್ ಮ್ಯಾಲ ಮುತ್ತು ಕೊಟ್ಟದ್ದಕ್ಕ ಏನ್ ಹಾದಿರಂಪಾ ಬೀದಿ ರಂಪಾ ಮಾಡಿಬಿಟ್ರು.

ಅದಕ್ಕಾ ನಾನು ಅವತ್ತು ಟಿವಿನಾ ನೋಡ್ಲಿಲ್ಲ ಮಾರಾಯ’ ಅಂತಂದ. ಬುಡೇನಜ್ಜನ ಮಾತು ಕೇಳಿದ ರಾಮಣ್ಣ ‘ನಿಮ್ಮನಿ ಟಿವಿಗೆ ರಿಮೋಟ್ ಇಲ್ಲೇನು ? ಒಂದಲ್ಲಂದ್ರ ಸೌರ ಟಿವಿಗಳು ಬರ್ತಾವು ಅದ್ರಾಗ ನಿನಿಗೆ ಬೇಕಾದ್ ನಂಬರ್ ನೆಪ್ ಇಟ್ಕಂಡು ರಿಮೋಟ್ ಒತ್ತದನ್ನೂ ನಾನ್ ಹೇಳಿ ಕೊಡಬೇಕೇನು ನಿನಿಗೆ ? ಅಂದ.

ಇಬ್ಬರ ಮಾತಿನ ನಡುವೆ ಬಾಯಿ ಹಾಕಿದ ಮೈಲವ್ವಾ ‘ಅಲ್ಲೋ ರಾಮಣ್ಣಾ ಮನ್ನೆ ಮಾರಾಜ್ರ ಮದ್ವಿ ಏನ್ ಅದ್ಧೂರಿ ಆತಪ್ಪಾ ? ನೋಡಾಕ ಎಲ್ಡು ಕಣ್ಣು ಸಾಲ್ದಾಗಿತ್ತು. ನೀನೂ ನೋಡ್ದೇನು ? ಅಂತ ಕೇಳಿದ್ಲು. ಮೈಲವ್ವನ ಮಾತು ಕೇಳಿದ ರಾಮಣ್ಣ ‘ರಾಜ ? ಯಾರಬೇ ರಾಜ ? ಇವತ್ತಿನ ಕಾಲಕ್ಕ ನನಗ ನಾನಾ ರಾಜ ನಿನಗ ನೀನಾ ರಾಣಿ, ಇಲ್ಲಿ ಯಾರಿಗೆ ಯಾರೂ ರಾಜ್ರೂ ಇಲ್ಲ, ರಾಣೇರೂ ಇಲ್ಲ. ಏನೋ ಮಾಡಾಕ ಬ್ಯಾರೆ ಕೆಲ್ಸ ಇಲ್ಲದೋರು ತೋರಸ್ತಾರಂತ ನೀನು ಅದನ್ನ ನಿನ್ನ ಮೊಮ್ಮಗನ ಮದ್ವೇನೋ ಅನ್ನಂಗ ಬಂದು ವರ್ಣನಾ ಮಾಡಿ ಹೇಳ್ತಾಳಿಲ್ಲಿ ನನ್ನೆದ್ರಿಗೆ’ ಅಂತ ಮಖಾನ ಕೆಂಪಗ ಮಾಡ್ಕಂಡ.

cm kissing‘ಇವನ್ಯಾಕ ದಕ್ಲಾರ ಹಿಂಗಾಡಕತ್ಯಾನ ಇವತ್ತು ?’ ಅಂತ ಮೈಲವ್ವ ಯೋಚ್ನಿ  ಮಾಡತಿದ್ದ ಟೈಮಿಗೆ ಸರಿಯಾಗಿ ಚರಿಗಿ ತಗಂಡು ಹೊಂಟಿದ್ದ ಬಾರಿಕರ ಕಾಯಿಗಡ್ಡಿ ಭರ್ಮವ್ವನ ಕಂಡ ಕೂಡ್ಲೆ ‘ಬಾಬೇ ಬರ್ಮವ್ವಾ ದಿನಾ ದಿನಾ ಚರಿಗಿ ತಗಂಡು ತಿಪ್ಪಿಗೆ ಹೋಗದು ಇದ್ದುದ್ದಾ ಬಾಯಿಲ್ಲಿ’ ಅಂತ ಕರದದ್ದನ್ನ ನೋಡಿದ ಬರ್ಮವ್ವ ಚರಿಗಿ ಸಮೇತ ಕಟ್ಟಿ ಹತ್ರ ಬಂದು ‘ಏನ್ ಹೇಳಬೇ ಮೈಲವ್ವ’ ಅಂದ್ಳು.

ಬರ್ಮವ್ವನ ನೋಡಿದ ಬುಡೇನಜ್ಜ ‘ಈಗ ನೀನು ಕಾಯಿಗಡ್ಡಿ ಮಾರಾದು ಬುಟ್ಟು ಆರೇಳು ವರ್ಷಾತೇನಬೇ ಬರ್ಮವ್ವಾ ?’ ಅಂತ ಕೇಳಿದ. ‘ಯಾಕೋ ಅಜ್ಜಾ ‘? ಅಂತ ಬರ್ಮವ್ವ ಕೇಳಿದ ಪ್ರಶ್ನಿಗೆ ‘ನೀನು ಸುಮ್ಮನಾ ಹತ್ತು ಪೈಸೆ, ಹತ್ತು ರೂಪಾಯಿ ಕಾಲದಾಗ ಊರ್ ತುಂಬಾ ಪುಟ್ಟಿ ಹೊತ್ಗಂಡು ತರಕಾರಿ ಮಾರಿ ಏನೂ ಉಳಸ್ಲಿಲ್ಲ. ಈಗ ನೋಡು ನೀನು ಏನ್ ತಗಂಡ್ರೂ ಮುವತ್ತು ರೂಪಾಯಿ ಮ್ಯಾಗ ಐತಿ. ಉಳ್ಳಾಗಡ್ಡಿ, ಟಮಾಟಣ್ಣು, ಬ್ಯಾಳಿ, ಬೆಲ್ಲ, ಎಲ್ಲಾ, ಎಲ್ಲಾ ಅಂದ್ರ ಎಲ್ಲಾ ಮುಗಲು ಮುಟ್ಟೈತಿ ರೇಟು. ಈಗ ನೀನು ಯಾಪಾರ ಮಾಡಿದ್ರ ಭೇಸಿ ಉಳಸಬೌದಿತ್ತು.’ ಅಂದ.

ಬುಡೇನಜ್ಜನ ಮಾತು ಕೇಳಿದ ರಾಮಣ್ಣ ‘ನಾವು ಅದೇನೋ ಹೊಸಾ ಗೌರ್ಮೆಂಟ್ ಬರ್ತೈತಿ ಏನೋ ಆಟು ಈಟು ಒಳ್ಳೇದಾದೀತು ಅಂದ್ಕಂಡು ಎಲ್ಡು ವರ್ಸನಾ ಮುಳಿಗೋತು ಇನ್ನೂ ಯಾವಾಗ ಒಳ್ಳೇ ದಿನಗುಳು ಬರ್ತಾವೋ ಏನ್ ಕಥಿನೋ?’ ಅಂತಂದ. ರಾಮಣ್ಣನ ಮಾತು ಕೇಳಿದ ಮೈಲವ್ವ, ‘ನಾವು ಓಟ್ ಹಾಕೋ ಟೈಂನಾಗ ‘ಅಚ್ಛೇ ದಿನ್’ ಅಂದಾಗ ಯಾರಿಗೆ ? ಅಂತ ಕೇಳಬೇಕಿತ್ತು ನಾವವಾಗ’. ಅಂತೇಳಿ ಇನ್ನು ಏನೋ ಹೇಳಾಕ ಹೊಂಟಿದ್ಲು ನಡುವೆ ಬಾಯಿ ಹಾಕಿದ ಬರ್ಮವ್ವ ನಾನ್ ಬರ್ತೀನ್ರವ್ವೋ ಅಂತ ತಿಪ್ಪಿಕಡೆ ಹೊಂಟ್ಲು. ಅದಾ ಹೊತ್ತಿಗೆ ಸರಿಯಾಗಿ ಈ ಕಡೆಯಿಂದ ಬಂದ ಮಾಬಮ್ಮ ಬುಡೇನಜ್ಜಗ ಬುಲಾವ್ ತಗಂಡು ಬಂದಿದ್ಳು.

ಮಾಬಮ್ಮನ ನೋಡಿದ ಕೂಡ್ಲೆ ರಾಮಣ್ಣ  ‘ಏನ್ ಮಾಬಮ್ಮಾ ಬುಡೇನಜ್ಜನ್ನ ಹೊತ್ಕಂಡು ಹೋಗಾಕ ಬಂದೇನು ? ಹೌದೂ, ಒಂದು ಸುದ್ದಿ ಕೇಳಿಯೇನ್ ಬೇ ಮಾಬವ್ವಾ ?’ ಅಂತ ಕೇಳಿದ್ಕ ಮಾಬಮ್ಮ ‘ಇಲ್ಲೋ ಯಣ್ಣಾ ಏನ್ ಹೇಳು ?’. ಅಂದ್ಲು. ಮಾಬವ್ವನ ಪ್ರಶ್ನಿ ಕೇಳಿದ ರಾಮಣ್ಣ ‘ಮನ್ನೆ ಅದ್ಯಾರಾ ಹೊಸ ಸನ್ಯಾಸಿ ‘ಕೈಲಾಸದಾಗಿರಾ ಪರಮಾತ್ಮನ್ನ ನಾನಾ ಹಡದಿರಾದು’ ಅಂತ ಹೇಳಾಳಂತ ಮತ್ ನೀ ಬ್ಯಾರೆ ಊರಿಗೆಲ್ಲಾ ಹೆರಿಗಿ ಮಾಡ್ಸಿರಾ ಸೂಲಗಿತ್ತಿ ಅದೀ. ಅದ್ಕಾ ನೀ ಏನರಾ ಅಕಿ ಹೆರಿಗಿ ಮಾಡ್ಸಿದ್ಲೇನೋ ಅಂತ ಕೇಳಿದೆ ಬಿಡಬೇ’ ಅಂತ ಜೋರು ನಕ್ಕ.

ರಾಮಣ್ಣನ ಮಾತು ಕೇಳಿದ ಬುಡೇನಜ್ಜಾ ಇರ್ರಪ್ಪೋ ಒಂದು ನಮ್ಹಾಜ್ ಮುಗಿಸಿಕಂಡು ಬರ್ತೀನಿ ಅಂತ ಮಾಬಮ್ಮನ ಜತಿ ಹೊಂಟ. ಕೈಯಾಗ 50 ರೂಪಾಯಿ ಹಿಡ್ಕಂಡಿದ್ದ ರಾಮಣ್ಣ ‘ತಡಿಬೇ ಮೈಲವ್ವಾ ಸುಬ್ಬಣ್ಣನ ಹೋಟ್ಲಿಗೆ ಹೋಗಿ ಎಲ್ಡು ಖಾರ, ಮಿರ್ಚಿ ತರ್ತೀನಿ ಹೊಡಿಯಾನಂತೆ’ ಅಂತ ಎದ್ದು ಹೋಟ್ಲ ಕಡೆ ಹೊಂಟಿದ್ದ ರಾಮಣ್ಣನಿಗೆ ‘ಉಳ್ಳಾಗಡ್ಡಿ ಜಾಸ್ತಿ ಹಾಕಿಸ್ಕಂಡು ಬಾರಲೋ ಬೀದಿ ಬಸವನಂತೋನ’ ಅಂತ ಚೇಡಿಸಿ ಇವರು ಬರೋ ದಾರಿನ ಕಾಯಕೋತ ಮೈಲವ್ವ ಒಬ್ಬಾಕೆ ಸುಮ್ಮನೆ ಕುಂತ್ಕಂಡ್ಲು.

‍ಲೇಖಕರು admin

July 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: