ನೀರಿನ ಸಮಸ್ಯಿ ನಮ್ ಓಣ್ಯಾಗಷ್ಟಾ ಐತಿ ಏನಬೇ ?

ಈ ಅರಿಬಿ ಹಾವು ಆಡ್ಸೋದು ಬುಡ್ರಿ ನಮ್ಮತ್ರ

ಆಕಳಗಳನ್ನ ಹಿಡ್ಕಂಡು ಕಣದ ಕಡಿಗೆ ಹೊಂಟಿದ್ದ ಅಕ್ಕಿ ದಿವ್ವಗ ಆಚರ್ಯ ಆಗೋತು.

ನಾನು ಯಾಕರ ಈ ಕರಿಯವ್ವನ ಗುಡಿಕಡಿಗೆ ನೋಡಿದ್ನಲೇ ಯಪ್ಪಾ ಅನ್ನಿಸಿಬುಡ್ತು ಮನ್ಸಿಗೆ. ಯಾಕಂದ್ರ ಅದಾ ಕರಿಯವ್ವನ ಗುಡಿ ಮುಂದ್ಲ ಕಟ್ಟಿಗೆ ಸ್ವಲ್ಪ ದಿನ ಗ್ಯಾಪ್ ಕೊಟ್ಟು ಮತ್ತೆ ತಮ್ಮ ತಮ್ಮ ಪೀಠ ಅಲಂಕರಿಸ್ಕಂಡಿದ್ದು ಇದಾ ಮೈಲವ್ವ, ರಾಮಣ್ಣ, ಬುಡೇನಜ್ಜ.

shivu poster cut low1ಈ ಕಟ್ಟಿ ಮ್ಯಾಗ ಈ ಮೂರೂ ಮಂದಿನ ಮತ್ತೆ ನೋಡ್ತಿದ್ದಂಗನ ಅಕ್ಕಿ ದಿವ್ವ ತನಗ ಅರುವಾ ಇಲ್ದಂಗ ಕೇಳೇಬುಟ್ಟ ಮೈಲವ್ವನ್ನ ‘ಎಲ್ಲಿಗೆ ಹೋಗಿದ್ರಬೇ ಯಮ್ಮಾ ಈಸು ದಿಸ ? ಓಣಿ ತಣ್ಣಗ ಇತ್ತು ನೋಡ್ರಬೇ ನಿಮ್ಮ ಕಾಟ ಇಲ್ಲದಂಗಾಗಿದ್ಕ. ಎಲ್ಲಾ ತಣ್ಣಗಾತು ಬುಡು ಅಂದ್ಕಳಷ್ಟತ್ಗೆ ಮತ್ತೆ ಬಂದು ಕುಂತಿರಲ್ಲಬೇ ಕಟ್ಟೀಗೆ, ಮುಗೀತು ಬುಡು ಇನ್ನು, ಹೊಡಿರಿನ್ನು ಕಲ್ಲಾಗ ಬಂಡೀನ. ಹೆಂಗೂ ಬಾಳಾ ದಿನದ ಮಾತು ಉದ್ರಿ ಉಳಾದವಲ್ಲಾ, ಎಲ್ಲವನ್ನೂ ತೀರಿಸ್ಕಂಬುಡ್ರಿ ಇವತ್ತು.’ ಅಂದ.

ದಿವ್ವನ ಮಾತು ಕೇಳಿದ ಮೈಲವ್ವ ‘ಡೈರಿಗೆ ಹಾಲು ಹಾಕಿ ಬಂದಿಲ್ಲಲೋ ತಮ್ಮಾ, ಆಕಳಗಳನ್ನ ಕಣದಾಕ ಕಟ್ಟಿ ನಡಿರಿನ್ನು ಚೆನ್ನಮ್ಮನ ಸರ್ಕಲ್ಲಿಗೆ, ನಮ್ ಹುಸೇನಿ ಹೆಂಗೂ ಕಾದ್ಗಂಡು ಕುಂತಿರ್ತಾನ ನಿಮಿಗೆ ಕೋಳಿ ಅಂಗಡ್ಯಾಗ. ನಮ್ ಮಾತುಕತಿ ಸುದ್ದಿನ ನೀ ಏನ್ ಹಚ್ಗಂಡಿ ನಡಿಯಪ್ಪೋ. ನಿಂದಾ ನಿನಿಗೆ ಕುಂತ್ರ ಕುತ್ಗಿಮಟ ನಿಂತ್ರ ಎದಿಮಟ ಅನ್ನವಷ್ಟು ಕೆಲ್ಸಗುಳು ಅದಾವು ನಡಿ ನಡಿ’ ಅಂತಂದ ಮೈಲವ್ವನ ಮಾತು ಕೇಳಿದ ದಿವ್ವ, ‘ಹೋಗ್ರೋ ನಿಮೌಳು, ಏನರಾ ಹಾಳುಗುಂಡಿ ಬಿದ್ಕೋ ಹೋಗ್ರಿ, ನಿಮಿಗ್ಯಾವನು ಹೇಳ್ತಾನ  ಈ ಊರಾಗ. ಯಾರರ ತಲಿಕೆಟ್ ಸುಳೆಮಕ್ಳು ಹೇಳಬೇಕಷ್ಟ ನಿಮಿಗೆ ಏನರಾ ಹೇಳಿದ್ರ.’ ಅಂತ ಗೊಣಿಕ್ಕೋತ ಕಣದ ಕಡಿಗೆ ಹೊಂಟ.

ಅಕ್ಕಿ ದಿವ್ವ ಆ ಕಡಿಗೆ ಹೋಗ್ತಿದ್ದಂಗನಾ, ರಾಮಣ್ಣನ ಕಡಿಗೆ ತಿರುಗಿದ ಮೈಲವ್ವ, ‘ನೋಡಲೋ ರಾಮಾ, ಏನಾ ಚೌತಿ ಹಬ್ಬ ಐತಿ ಈ ಕರಿಯವ್ವನ ಗುಡಿತಾವಿರಾ ಇದಾ ಕಟ್ಟಿಗೇ ಗೌರಿ ಗಣಪನ ಕುಂದ್ರಿಸಿ ಮೂರು ದಿನ ಜನ ಹಬ್ಬ ಮಾಡ್ತಾರ ಆಮ್ಯಾಕ ಈ ಕಟ್ಟಿನ ಹೆಂಗೂ ನಮಗಾ ಬುಟ್ ಕೊಡ್ತಾರ ಬುಡು ಅಂತಂದು ನಾವು ಸುಮ್ಮ ನಮ್ ನಮ್ ಮನಿಗುಳ ಕಟ್ಟಿ ಮ್ಯಾಲ ಕಾಲ ಕಳದ್ವಿ, ಈಗೇನಾ ಚೂರು ಸಡುವು ಸಿಕ್ತು. ಗಣಪನ್ನ ಇಟ್ಟೋರು ಕಟ್ಟಿ ವಾಣಾ ಮಾಡಿ ಕೊಟ್ರು, ಒಂದು ವಾರ ಬುಟ್ಟು ಸೇರಿವಿ. ಇದಕ್ಕೂ ಒಟ್ಟಿ ಕಿಚ್ಚು ಪಡ್ತೈತಿ ನೋಡು ಈ ಜನ.’ ಅಂತಂದ್ಲು.

Shivu Morigere-1 (1)

ಮೈಲವ್ವನ ಮಾತು ಕೇಳಿದ ರಾಮಣ್ಣ ‘ಅದೆಲ್ಲಾ ಹಾಳಾಗಿ ಹೋಗ್ಲಿ ಬುಡೋ ನಿಮೌನು, ಓಣಿ ಹುಡ್ರು ಹಬ್ಬದಾಗ ಕುಣಿಯಾದು, ಪದ ಹಾಡಾದು ನೋಡ್ದೋ ಏನು, ಕಿವಿಗೆ ಹತ್ತಿ ಹಳ್ಳಿ ತುರುಕ್ಕಂಡು ಗೂಡಿಸ್ಕಂಡು ಮಕ್ಕಂಡಿದ್ದೋ ?.’ ಅಂತ ಕೇಳತಿದ್ದಂಗನ ಹೊಸಾ ಸೀರಿ ಸೆರಗನ್ನ ತಲಿಮ್ಯಾಕ ಹಾಕ್ಕಂತ ನಮ್ ಮೈಲವ್ವ ಏನಾ ಹೇಳಾಕ ಹೊಂಟಿದ್ದ ನಡುಕ ಬಾಯಿ ಹಾಕಿದ ಬುಡೇನಜ್ಜ ‘ನಮ್ ಮೊಮ್ಮಗಳು ಏನ್ ಕುಣ್ತಾ ಕುಣುದ್ಲೋ ರಾಮಣ್ಣ, ಅಕಿ ಕುಣ್ತ ನೋಡಿ ಇಬ್ರೂ ಐವತ್ತು ಐವತ್ತು ರುಪಾಯಿ ಮುಯ್ಯ ಮಾಡ್ಲಿಲ್ಲೇನು ?’ ಅಂತ ಕೇಳ್ದ. ಬುಡೇನಜ್ಜನ ಮಾತು ಕೇಳ್ತಿದ್ದಂಗನಾ ಮೈಲವ್ವ ‘ಲೋ ಸಾಬಣ್ಣ, ನೀವು ಅಷ್ಟತ್ಗಲೆ ಫುಲ್ ಲೋಡ್ ಆಗಿದ್ರಿ, ನಿಮ್ ಮಮ್ಮಗಳಿಗೆ ನಾನೂ ನೂರಾ ಒಂದು ಮುಯ್ಯಿ ಮಾಡೀನಿ, ಮಕ್ಳಿಗೆ ಕೊಟ್ಟಿದ್ನ ಆಡ್ಕಬಾರ್ದು, ಗಣಪ ಬಂದುದ್ದೂ ಆತು ಹೋಗಿದ್ದೂ ಆತು, ಗಣಪ ಹೋದ ಮ್ಯಾಗ ನಮ್ ಬಾರಿಕರ ಹನ್ಮವ್ವ, ಲಕ್ಕನರ ರೇಣ್ಕವ್ವ, ತೂತುಗುಂಡಿ ಗೋಣೆಪ್ಪನ ಸೊಸಿ, ಬಾರಿಕರ ಕಾಯಿಗಡ್ಡಿ ಕಮಲವ್ವ, ಎಲ್ಲಾರು ಜೋಕಪ್ಪನ ತಲಿಮ್ಯಾಲ ಇಟ್ಕಂಡು ಏಳೂರು ಸುತ್ತಿ, ಏಳೂರಿಗೂ ಕಪ್ಪು ಕೊಟ್ಟು ಸುತ್ತೇಳೂರು ಹೊಲಗುಳಿಗೂ ಚರಗಾ ಹೊಡದದ್ದೂ ಆತು. ಅದೆಲ್ಲಾ ಮುಗುದೋದ ಕತಿ ಐತಿ ಮತ್ತೇನರ ಇಸೇಸ ಇದ್ರ ಹೇಳ್ರಿ.’ ಅಂದ್ಲು.

ಮೈಲವ್ವನ ಮಾತು ಕೇಳಿದ ರಾಮಣ್ಣ, ‘ಬೇ ಮೈಲವ್ವ, ನಮ್ ಡಿಸ್ಸಿನ ಸ್ವಾಮಿ ಮನ್ಯ ಯಾದರಾ ಪಿಚ್ಚರ್ ಆಕಿದ್ನೇನಬೇ ಟಿವ್ಯಾಗ?’ ಅಂತ ಕೇಳಿದ. ರಾಮಣ್ಣನ ಕಡಿಗೆ ತಿರುಗಿದ ಮೈಲವ್ವ ‘ಅಲೆ ಈಗಾ ಅರುವು ಮರುವು ಸುರು ಆತೇನ್ ನಿನಿಗ್ಯ?, ಮನಿ ಮಂದೆಲ್ಲಾ ಕುಂತು ನೋಡಾಂತ ಸಿನ್ಮ ಈಗ್ಯಾವು ಅದಾವಲೋ, ಆ ಕಾಲ ಹೋಗಿ ಬಾಳಾ ದಿನ ಆತು ಈಗಿನ ಪಿಚ್ಚರ್ ನಾಗ ಹೆಣ್ಮಕ್ಳು ಅದೆಂತಾ ಬಟ್ಟಿ ಉಡ್ತಾವಲೋ ರಾಮಾ, ಅಂತ ಅಂಗಬಂಗ ನೋಡಿ ಔರು ಮನಿಯಾರು ಹೆಂಗರ ಸುಮ್ನಿರ್ತಾರೇನಪಾ ಮರಯಾ, ನಮ್ಮಂತಾರು ಮನ್ಯಾಗ ಯಾರರಾ ಹಂಗಾಡಿದ್ರ , ತಗತಾ ತಗದು ದವಡಿಗೆಲ್ಡು ಕೊಟ್ಟು ಕಳಸ್ತಿದ್ವಿ. ಅದಕಾ ಅಂತಾ ಪಿಚ್ಚರ್ ಗುಳನ್ನ ನೋಡಿದ್ರೆಷ್ಡು ಬುಟ್ರೆಷ್ಟು ಅಂದ್ಕಂಡು ನಾನಲೇ ಬಾಳ ದಿನ ಆತು ಬುಡು ಸಿನ್ಮಾ ನೋಡಾದು ಬುಟ್ಟು’. ಅಂದ್ಲು.

ಹಿಂಗಾ ಮಾತುಕತಿ ಜೋರು ನಡದಿತ್ತು ಅದಾ ಟೈಂಗೆ ಸರಿಯಾಗಿ ಓಣ್ಯಾಗ ನಲ್ಲಿ ನೀರು ಬುಟ್ರು, ಎಲ್ಲಾರು ಕೊಡ ತಗಂಡು ಔರೋರು ಮನಿ ಮುಂದ್ಲ ನಲ್ಲಿ ಹತ್ರ ಬಂದು ನೀರು ಹಿಡ್ಕಣಾಕತ್ತಿದ್ರು. ಇನ್ನೂ ನಲ್ಲಿ ಹಾಕಿಸ್ಕಣಿಲ್ಲದೋರು ನಲ್ಲಿ ಇದ್ದೋರು ಮನಿ ಮುಂದ ಕೊಡಪಾನ ಹಿಡ್ಕಂಡು ನಿಂತಿದ್ರು. ಇವರು ಕುಂತ ಕಟ್ಟಿಗೆ ಕೂಗಳ್ತಿಯಷ್ಟಿರಾ ಗಡದೆಪ್ಪರ ಹೆಗ್ಗಪ್ಪರ ಮನಿಮುಂದ ಜೋರು ಜೋರು ಬಾಯಿ ಮಾಡಾದ್ನ ಕೇಳಿದ ಬುಡೇನಜ್ಜ ಮೈಲವ್ವನ ಕಡಿಗೆ ತಿರುಗಿ ‘ಬೇ ಮೈಲವ್ವಾ, ಆ ಗಡದೆಪ್ಪರ ರೇಣ್ಕವ್ವ ಯಾಕಬೇ ಹಂಗ ಬಾಯಿ ಮಾಡ್ತಾಳ ? ಏನಾಗೈತಂತೆ ಅಕಿಗೆ ?’ ಅಂತ ಕೇಳಿದ.

ಬುಡೇನಜ್ಜನ ಮಾತು ಕೇಳಿದ ಮೈಲವ್ವ, ‘ಈಗ ಎಲ್ಡು ದಿನ ಆತು ನಲ್ಲಿ ಬುಟ್ಟುದ್ದಿಲ್ಲಲ್ಲ, ಹಂಗಾಗಿ ಮನ್ಯಾಗಿನ ನೀರೆಲ್ಲಾ ಖಾಲಿ ಆಗ್ಯಾವಂತೆ, ಇವತ್ತು ಎಷ್ಟೊತ್ತು ಇರ್ತೈತೋ, ಯಾವಾಗ ನಲ್ಲಿ ನಿಂದ್ರತೈತೋ ಯಾರಿಗೊತ್ತು ? ಅದಕ್ಕಾ ತಡಿರವ್ವಾ ಮದ್ಲು ನಾವು ಕುಡಿಯಾಕ ಹಿಡ್ಕಂಬುಡ್ತೀವಿ, ಆಮ್ಯಾಕ ನಿಮಿಗೆ ಒಂದೊಂದು ಕೊಡ ಹಿಡ್ಕವಂತ್ರಿ, ಆಮ್ಯಾಕ ಬೇಕಿದ್ರ ನಾವು ಬಳಸಾಕ ಹಿಡ್ಕಂತೀವಿ ಅಂದ್ಲಂತೆ. ಅದಕ್ಕಿದ್ದು ನಮ್ ಮಣ್ಣಮ್ಮರ ಗಿರಿಜವ್ವ, ಯಕ್ಕಾ ಕುಡಿಯಾಕ ತಂದೀವಿ ಬಟ್ಟಿ ನೆನೆ ಇಟ್ಟೀನಿ ಒಂದು ಕೊಡಾ ಕೊಡೇ ಅಂತ ಕೇಳಿದ್ಲಂತೆ. ಅದ್ಕಾ ರೇಣ್ಕವ್ವಗ ಸಿಟ್ ಬಂದೈತಿ. ನಾವಿಲ್ಲಿ ಕುಡಿಯಾಕ ನೀರಿಲ್ಲಪ್ಪಾ ಮೈಲಾರ ಲಿಂಗಪ್ಪಾ ಅಂತ ನಾವು ಅನ್ನಾಕತ್ತಿವಿ, ಅಂತಾದ್ರಾಗ ಇಕಿಗ್ಯ ಬಟ್ಟಿ ಹೊಗಿಯಾಕ ನೀರು ಕೊಡಾಕಂತೆ . ನಿಂತ್ರ ನಿಂದ್ರು ಇಲ್ಲಾಂದ್ರ ಮುಂದ್ಲ ನಲ್ಲಿಗೆ ಹೋಗಬೇ ಸಾಕು ದೊಡ್ಡಕಿ ಅದಿ ನೀನು. ಅಂತ ಹಾಕ್ಯಾಡಿದ್ಕ ನಮ್ ಗಿರ್ಜವ್ವ ಸೆಟಗಂಡು ಬಾಯಿ ಬಾಯಿ ಮಾಡಾಕತ್ಯಾಳ ನೋಡು.’ ಅಂದ್ಲು.

‘ಇವನೌನು ಈ ನೀರಿನ ಸಮಸ್ಯಿ ನಮ್ ಓಣ್ಯಾಗಷ್ಟಾ ಐತಿ ಅನ್ಕಂಡೀರಿ ಏನಬೇ ? ಅರುವುಗೇಡಿಗುಳಾ, ಅಲ್ಲಿ ಕಾವೇರಿ ಕಾಲಾಗ ಇಡೀ ರಾಜ್ಯನಾ ಹೊಡದಾಡಕತೈತಿ, ಈ ಜಯಲಲಿತ ಗೆದ್ಲು ಅಂದ್ರ ನಮಿಗೆ ಕಾವೇರಿ ಇಚಾರಕ್ಕ ಕಾಲು ಕೆದ್ರಾದು ಗ್ಯಾರಂಟಿ ಅಂದ್ಕಬುಡಾಕು ನೋಡ್ರಬೇ ಮೈಲವ್ವ. ಅಜ್ಯೋ ಏನ್ ಹತ್ಗಂಡು ಉರುದು ಬುಡ್ತಬೇ ಬೆಂಗ್ಳೂರು ! ಜಗಳಾ ಹತ್ತಿಕ್ಕಾಕ ಸೈನ್ಯ riverತರಿಸೈತಿ ನೋಡು ಗೌರ್ಮೆಂಟು. ನಾಳೆ ಇಪ್ಪತ್ತಕ್ಕ ಅದೇನಾ ಇತ್ಯರ್ಥ ಅಕೈತಂತೆ ಕೋರ್ಟ್ನಾಗ ಅವತ್ತೇನಾ ಜಡ್ಜು ತೀರ್ಪು ಕೊಡ್ತಾರಂತೆ. ತೀರ್ಪು ಏನ್ಕೇನರಾ ಆಗಿ ಮತ್ಯ ಇನ್ನೂ ನೀರ್ ಬುಡ್ರಪ್ಪಾ ಪಾಪ ಹೆಣ್ಮಗ್ಳು ಕೇಳಾಕತ್ಯಾಳ ಅಂತ ಹೇಳಿಬುಟ್ರ, ನಮ್ ಮಂದಿ ಸುಮ್ಮನಿರತೈತೇನು ? ಯಾಕ ಬೇಕು ಇಲ್ಲದ ಉಸಾಬ್ರಿ ಅದೊಂದು ತೀರ್ಪು ಮುಗಿಯವರಿಗೂ ಬೆಂಗ್ಳೂರಾಗಾ ಇರ್ರೆಪ್ಪೋ ಸೈನಿಕ್ರಾ ಅಂತ ಮ್ಯಾಗ್ಳ ಗೌರ್ಮೆಂಟು ಹೇಳೈತಂತ, ಅದಕ್ಕಾ ಔರಿನ್ನೂ ಬೆಂಗ್ಳೂರಾಗ ಅದಾರ ನೋಡು.’ ಅಂತಂದ ರಾಮಣ್ಣ.

ರಾಮಣ್ಣನ ಮಾತು ಕೇಳಿದ ಬುಡೇನಜ್ಜ ‘ಅಲ್ಲೋ ರಾಮಣ್ಣಾ, ಆ ತೀರ್ಪೇನರಾ ನಮಿಗೆ ಹಿಡಸ್ಲಿಲ್ಲಾಂದ್ರ ನಾನಂತೂ ನೀರಿನ ಗೇಟ್ ತೆಗಿಯಲ್ಲಪ್ಪಾ, ಅದೇನ್ ಮಾಡ್ಕಂತೀರಾ ಮಾಡ್ಕಳ್ರಿ. ಅಮ್ಮಮ್ಮಾ ಅಂದ್ರ ನೀವು ನಮ್ ಗೌರ್ಮೆಂಟ್ ಕಿತ್ ಹೊಗಿತೀರಿ ಹೌದಿಲ್ಲು ? ಬೇಕ್ಕಾದ್ ಮಾಡ್ಕಳ್ರಿ. ನನಿಗ್ಯ ನಮ್ ಜನಕ್ಕಿಂತ ಕುರ್ಚಿ ದೊಡ್ಡದಲ್ಲ, ಬೇಕಾರ ನೀವು ಮಿಲ್ಟ್ರಿ ಕುಟಾಗ ಆಳಿಕಿ ಮಾಡಿಸ್ರಿ, ನಾವು ಜನದ ಹತ್ರ ಹೊಕ್ಕೀವಿ ಮತ್ಯ ಬೇಕಾರ ಎಲೆಕ್ಷನ್ ಎದ್ರಸಾಕ ನಮಿಗೇನು ಹೆದ್ರಿಕಿ ಇಲ್ಲ, ಈ ಅರಿಬಿ ಹಾವು ಆಡ್ಸೋದು ಬುಡ್ರಿ ನಮ್ಮತ್ರ ಅಂತ ನಮ್ ಸಿಎಂ ಸಿಟ್ಟಿಲೇ ಹೇಳ್ಯಾರಂತಲ್ಲೋ ಹೌದೇನು ?. ಅಂತ ತನ್ನ ಪ್ರಶ್ನಿ ಕೇಳಿದ.

ಬುಡೇನಜ್ಜನ ಮಾತು ಕೇಳಿದ ಮೈಲವ್ವ, ‘ಹೌದು ಬುಡು ಸಾಬಣ್ಣಾ, ಇವ್ರು ಆಡಾ ಆಟಕ್ಕ ಎಂಥಾ ಒಳ್ಳೇ ಮನಿಷರಿಗಾದ್ರೂ ಸಿಟ್ ಬರ್ತೈತಿ. ಹಂಗ್ ಮಾಡ್ತಾವ್ ಅವು. ಅವು ಒಂದು ನಮೂನಿ ಆಟ ಹಚ್ಚಿದ್ರ ಇತ್ಲಾಗ ಟಿಬಿಗುಳಾರು ಒಂದು ಆಟ ಹಚ್ತಾರ. ಅದೇನಾ ಬರ್ತೈತಂತಪಾ ಔರಿಗೆ ಅದು ಬಂದ್ರ ಕಿರೀಟ ಬಂದಂಗಂತೆ ಅದ್ಕಾ ಬಾಯಿಗೆ ಬಂದದ್ನ ಹೇಳಿಬುಟ್ವು. ನೋಡ್ಬೇಕಿತ್ತು ಬುಡು ನೀನು ಎಂತೆಂತಾ ನಾಟ್ಕ ಮಾಡಿದ್ವು ಅಂದ್ರ, ಸಿವ ಸಿವ ಪರಮಾತ್ಮಾ …..’ ಅಂತ ಇನ್ನೂ ಏನಾ ಹೇಳಾಕ ಹೊಂಟಿದ್ಲು, ನಡುಕ ಬಾಯಿ ಹಾಕಿದ ರಾಮಣ್ಣ ‘ಬೇ ಮೈಲವ್ವಾ ಅಂತಾದ್ರೆಲ್ಲಾ ಮಾತಾಡಿ ನಾಲ್ಗಿ ಯಾಕ್ ಹೊಲುಸು ಮಾಡ್ಕಂತೀ, ಇವನೌನು ನಮ್ ಮನ್ಯಾಗಿನ ಟಿಬಿನ ತಗಂಡೋಗಿ ಕೆರಿಗೆ ಹೊಗದು ಬರಬೇಕು ಅನ್ನಂಗಾಕೈತಿ, ಆದ್ರ ಧಾರ್ವಾಯಿ ನೋಡಾಕ ಇರ್ಲಿ ಅನ್ಸಿ ಸುಮ್ನಗೀನಿ ನೋಡು. ಆಮ್ಯಾಲೆ ನಂದ ಮುಂದಾ ಹಣತಿ ಜೋರು ಉರಿಯಾದಂತೆ ಆಗಾದ್ನೆಲ್ಲಾ ನೋಡ್ಕಂತ ಹೋಗಾನು ಸುಮ್ನಿರು.’ಅಂದ.

ಇಬ್ರೂ ಸುಮ್ನ ಕುಂತಿದ್ದು ನೋಡಿದ ಬುಡೇನಜ್ಜ ‘ಯಾಕ್ರೋ ನಿಮೌಳು ನಿಮ್ ಗಂಟ್ಲಾಗ ಕರಿಯವ್ವ ಕುಂತ್ಗಂಡು ಮಾತಾಡಬ್ಯಾಡ್ರಿ ಅಂತ ಹೇಳಾಕತ್ಯಾಳೇನು’ ಅಂದ. ‘ನಿಂದೇನೋ ಮಾರಾಯಾ ?’ ಅಂತ ರಾಮಣ್ಣ ಕೇಳಿದ್ಕ ‘ಈಗ ನಮ್ ದೇಸದ ಮ್ಯಾಗ್ಲ ಸೀಮ್ಯಾಗ ನಮ್ ಮೈಲವ್ವನ ಮಂದಿ ಸ್ಟ್ರೈಕ್ ಮಾಡಾಕತ್ಯಾರಲ್ಲ, ಅಂತದ್ದಾ ಒಂದು ಅದೇನಾ ನಮ್ ರಾಜ್ಯದಾಗೂ ಅಕೈತಂತೆಲ್ಲೋ ಗೊತೇನು ನಿನಿಗ್ಯ ?’ ಅಂತ ಕೇಳಿದ. ಬುಡೇನಜ್ಜನ ಮಾತು ಕೇಳಿದ ಮೈಲವ್ವ ‘ಊನಪ್ಪೋ ಅದೇನಾ ಊನಾ ಮಾದ್ರಿ ಅಂತಿದ್ರಪ್ಪ, ದೊಡ್ಡ ಮಟ್ಟದಾಗ ಅಕೈತಂತೆ. ಸದುವು ಸಿಕ್ರ ನಾವೂ ಓಗಾನೇನು ?.’ ಅಂತ ಕೇಳಿದ್ಲು.

ಮೈಲವ್ವನ ಮಾತು ಕೇಳಿದ ರಾಮಣ್ಣ, ‘ಬೇ ಮೈಲವ್ವಾ, ಹರೇದ್ ಮಂದಿ, ಭಾಳ ಓದ್ಕಂಡಾರು ಏನಾ ಒಂದು ಮಾಡ್ತಾರ ಮಾಡ್ಲಿ ಬುಡು ಕಣ್ ತುಂಬ್ಕಣಾನು, ಇಲ್ಲಿಂದಲೇ ಔರಿಗೆ ಗೆಲುವು ಕೊಡವ್ವಾ ಅಂತ ನಮ್ ಕರಿಯವ್ವನ ಕೇಳ್ಕಂಡ್ರಾತಿಲ್ಲು ?.’ ಅಂತ ಹೇಳ್ಕಂತ ಬುಡೇನಜ್ಜನ ಕಡಿಗೆ ತಿರುಗಿದ್ರ, ಬುಡೇನಜ್ಜ ಅಲೆ ಕೈಯ್ಯಾಗ ಎಲ್ಡು ಬೀಡಿ ಹಿಡ್ಕಂಡಿದ್ದ. ಒಂದು ಬೀಡಿ ತಗಂಡ ರಾಮಣ್ಣ ಏನೂ ಮಾತಾಡ್ದ ಹಚ್ಗಂಡ ಮೈಲವ್ವ ಕರಿಯವ್ವನ ಗುಡಿ ಬಾಗ್ಲಕಡಿ ನೋಡಿ ಕೈ ಮುಗುದು ಏನಾ ಬೇಡ್ಕಣಾಕತ್ತಿದ್ಲು.

‍ಲೇಖಕರು Admin

September 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: