ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿತ್ಯವೂ ಸಾಯುತ್ತಲೇ ಇರುತ್ತಾಳೆ, ಆದರೂ ಜೀವಂತವಾಗಿದ್ದಾಳೆ…

ಅಮ್ಮ ಮತ್ತು ಸಾವು

-ವಿಜಯಕಾಂತ ಪಾಟೀಲ

ಅಮ್ಮ ನಿತ್ಯವೂ ಸಾಯುತ್ತಲೇ ಇರುತ್ತಾಳೆ;
ಆದರೂ ಜೀವಂತವಾಗಿದ್ದಾಳೆ..!
 
ಕ್ಷಣಕ್ಷಣಕ್ಕು ಚಿಗುರುತ್ತಾಳೆ, ಕೊನರುತ್ತಾಳೆ,
ಆಳಕ್ಕಿಳಿಯುತ್ತಾಳೆ, ಉದ್ದುದ್ದ ಬೆಳೆಯುತ್ತಾಳೆ,
ಉಡಿ ತುಂಬಿ ತುಂಬಿ ಕೊಡುತ್ತಾಳೆ, ಹೊಟ್ಟೆ ಬಿರಿಯೇ ಉಣಿಸುತ್ತಾಳೆ;
ಜೀವಂತಿಕೆಯನ್ನು ಸಾಬೀತು ಪಡಿಸುವ ಯಾವ
ದರ್ದೂ ಅವಳಿಗಿಲ್ಲ,
ಹೀಗಾಗಿಯೇ ಅವಳು ಅಮ್ಮ..!
 
ಅವಳನ್ನು ಹೆದರಿಸುತ್ತೇವೆ ಬೆದರಿಸುತ್ತೇವೆ
ಸುಲಿಯುತ್ತೇವೆ ಹರಿಯುತ್ತೇವೆ ಸೆಳೆಯುತ್ತೇವೆ
ಕ್ಷಣಕ್ಷಣಕ್ಕು ಕೊಲ್ಲುತ್ತೇವೆ;
ಅವಳು ಹರಿಯುತ್ತಲೇ ಇರುತ್ತಾಳೆ ಸತತ,
ಸವೆದೆನೆಂದು ಎಂದೂ ಹೇಳುವುದಿಲ್ಲ;
ಎಷ್ಟೆಲ್ಲ ನಡೆ-ನುಡಿದಾಡಿದರೂ ಎಡವುವುದೂ ಇಲ್ಲ..!
ಸತ್ತಂತಿದ್ದರೂ ಪೊರೆಯುವುದು ಅವಳ ಕರ್ಮ;
ತರಿದು ಬಾಚಿ ಉಂಬಿ ತೇಗುವುದೇ ಈ ಜಗದ ಧರ್ಮ..!
 
ದೇವಾನುದೇವತೆಗಳಂತೆ ಅವಳಿಗು
ನೂರೆಂಟು ಹೆಸರುಗಳು,
ನೋವೇ ಅವುಗಳಲ್ಲಿ ಅವಳ ಮೊದಲ ನಾಮ!
ಏನೇ ಉಂಡರೂ ಹಸಿರನ್ನೇ ಹೆರುವ
ಅವಳಿಗೆ ಭೂಮಿ ಹೂ ಹಣ್ಣು ತಾರೆ ಬೆಳುದಿಂಗಳು
ಹಾಲು ನೀರು ಅನ್ನ ಗಿನ್ನ ಅಂತಲೂ ಕರೆದು
`ಅಮ್ಮಂದಿರ ದಿನ’ ಆಚರಿಸುತ್ತಾರೆ;
ಅಂದು ಉಡಿಸಿದ ಸೀರೆಯನ್ನು ಜೀವಮಾನದುದ್ದಕ್ಕು
ಮುಟ್ಟಿ ಮುಟ್ಟಿ ನೋಡುತ್ತ ಉಡುತ್ತ
ಸುಖಿಸುತ್ತಲೇ ಇರುತ್ತಾಳೆ,
ಆ ಸುಖದ ಮುಂದೆ ಬಂಗಾರವೇ ಹಿಂದೆ..!

(2)
ತಪ್ಪು ಮಾಡಿದಾಗ ಗುಮ್ಮನಂತೇ ಕಾಡುವ ಅಮ್ಮ
ಒಪ್ಪು ಓರಣವೆಂತೆನಿಸಿದಾಗ ಒಳಗೊಳಗೆ ಅರಳುವ ಅಮ್ಮ
ಜಗದುದ್ದದ ಬದುಕಿಗು ಚಿರ-ಸ್ಥಿರ ಸ್ವತ್ತು ಎಂದರಷ್ಟೇ ಸಾಲದು;
ಅವಳ ಒಂದೊಂದು ಕೈ ತುತ್ತಲ್ಲೂ
ಕಾರುಣ್ಯದ ಮತ್ತು..!
ಬೇಕೇ ಬೇರೆ ನಶೆ,ಇರುವಾಗ ಅಮ್ಮನೆಂಬ ಸೀಸೆ..!
 
ಅಮ್ಮ,
ನೀ ಸತ್ತರೆ ಅದು ನನ್ನ ಸೋಲು;
ಗೆಲಬೇಕು,ಇರು ಸದಾ ಒಡನೆ;
ಗೆಲುವೆಲ್ಲವೂ ನಿಜಕು ನಿನ್ನ ಪಾಲು..!
 
(ಅವಧಿಯಲ್ಲಿನ ಉದಯ್ ಇಟಗಿ ಅವರ ನಿನ್ನೆಯ `ಅವ್ವ ನಿನ್ನೆ ಸತ್ತಿದ್ದಾಳೆ’ ಬರಹದ ಪ್ರೇರಣೆಯಿಂದ)
 
 
 
 
 
 
 
 
 
 

‍ಲೇಖಕರು G

9 June, 2014

1 Comment

  1. mmshaik

    nice..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading