ನಿಜ ಭಾರತಕ್ಕೆ ಹಿಡಿದ ಕೈಗನ್ನಡಿ 'ಈ ಪರಿಯ ಸೊಬಗು'

ನಿಜ ಭಾರತಕ್ಕೆ ಹಿಡಿದ ಕೈಗನ್ನಡಿ

‘ಈ ಪರಿಯ ಸೊಬಗು’

jagadish koppa reading room

ಡಾ.ಎನ್.ಜಗದೀಶ್ ಕೊಪ್ಪ

ಜಗತ್ ಪ್ರಸಿದ್ಧ ನಾಟಕಕಾರ ಜಾರ್ಜ್ ಬರ್ನಾಡ್ ಷಾ ಅವರ ಮಾತೊಂದಿದೆ. “ನೀನು ಹಿಡಿದಿರುವ ಕೆಲಸ ಅಥವಾ ವೃತ್ತಿ ನಿನಗೆ ಯಶಸ್ಸು ಅಥವಾ ಕೀರ್ತಿಯನ್ನು ತಂದು ಕೊಡದಿರಬಹುದು ಆದರೆ, ಆತ್ಮ ತೃಪ್ತಿಯನ್ನು ತಂದುಕೊಡುತ್ತದೆ”  ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಂತೆ ಬದುಕುತ್ತಿರುವ ದೇಶದ ಪ್ರಸಿದ್ಧ ಪತ್ರಕರ್ತ ಮತ್ತು ಚಿಂತಕ  ಪಿ. ಸಾಯಿನಾಥ್ ರವರ ಮಾತುಗಳನ್ನು ಕೇಳುವಾಗ ಅಥವಾ ಅವರ ಬರಹಗಳನ್ನು ಓದುವಾಗಲೆಲ್ಲಾ ಬರ್ನಾಡ್ ಶಾ ರವರ ಮಾತು ನೆನಪಿಗೆ ಬರುತ್ತದೆ.

ಇದು ಕೆಲವರಿಗೆ ಅತಿಶಯದ ಮಾತಿನಂತೆ ಇಲ್ಲವೆ, ಸಿನಿಕ ಮಾತಿನಂತೆ ತೋರಬಹುದು. ಈ ಭಾರತವೆಂಬ ದೇಶದ ನಿಜವಾದ ಅಂತಃಶಕ್ತಿಯನ್ನು ಮೊದಲು ಗ್ರಹಿಸಿದವರು ಮಹಾತ್ಮ ಗಾಂಧೀಜಿ. ಆನಂತರ ನನಗೆ ಕಾಣಬರುವ ವ್ಯಕ್ತಿಯೆಂದರೆ ಪಿ.ಸಾಯಿನಾಥ್ ಮಾತ್ರ. ಅವರೆಂದೂ ಗಾಜಿನ ಮನೆಯ ಹವಾನಿಯಂತ್ರಣ ಕೊಠಡಿಯಲ್ಲಿ ಕುಳಿತು ಭಾರತವನ್ನು ಗ್ರಹಿಸಲಿಲ್ಲ ಅಥವಾ ಆ ಕುರಿತು ಬರೆಯಲಿಲ್ಲ.

p sainath reading ee pariಗಾಂಧೀಜಿಯವರಂತೆ ಬಿಸಿಲು, ಮಳೆ, ಗಾಳಿ, ದೂಳು ಎನ್ನದೆ  ದೇಶದುದ್ದಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿದರು. ಈ ಕಾರಣಕ್ಕಾಗಿ ಅವರ ಗ್ರಾಮೀಣ ಭಾರತದ ಅನುಭವಕ್ಕೆ ಶ್ರೀಮಂತಿಕೆ ದಕ್ಕಿದೆ. ಅವರು ಮಂಡಿಸುವ ವಾದಗಳಲ್ಲಿ, ಬರೆಯುವ ಪ್ರತಿ ಅಕ್ಷರದಲ್ಲಿ ನಾವೆಂದೂ ಕಾಣದ, ಕೇಳದ ನೈಜ ಭಾರತದ ಕಟು ವಾಸ್ತವಗಳು ತುಂಬಿವೆ.

ಉಳ್ಳವರ ಹೂಸನ್ನು ಪರಿಮಳವೆಂದು ಬಣ್ಣಿಸುವಲ್ಲಿ ತಮ್ಮ ಆಯಸ್ಸನ್ನು ಕಳೆಯುತ್ತಿರುವ  ಭಾರತದ ಮಾಧ್ಯಮಗಳು ಮತ್ತು ಪತ್ರಕರ್ತರ ನಡುವೆ ಪಿ.ಸಾಯಿನಾಥ್  ನಮಗೆಲ್ಲಾ ಭಿನ್ನವಾಗಿ ಕಾಣುವುದು ಈ ಕಾರಣಕ್ಕಾಗಿ. ಅವರ ವೃತ್ತಿ ಬದುಕಿನಲ್ಲಿ ಅವರೆಂದೂ ಉಳ್ಳವರ ಭಾರತದ ಶ್ರೀಮಂತರ ಮನೆಯ ಅದ್ದೂರಿ ವಿವಾಹ ಅಥವಾ ವಿಚ್ಛೇಧನ ಇಲ್ಲವೆ ಸಿನಿಮಾ ನಟರು, ಕ್ರೀಡಾಪಟುಗಳು, ಕಾರ್ಪೊರೇಟ್ ಜಗತ್ತಿನ ಉದ್ಯಮಿಗಳ ಕುರಿತು ಮಾತನಾಡಲಿಲ್ಲ, ಯಾರೋ ಒಬ್ಬ ಸಿನಿಮಾ ನಟಿ ಅಥವಾ ನಟನ ದಾಂಪತ್ಯದ ಬಿರುಕನ್ನು ಈ ನಾಡಿನ ಜ್ವಲಂತ ಸಮಸ್ಯೆ ಎಂದು ಬಿಂಬಿಸಲಿಲ್ಲ. ಕ್ರೀಡಾಪಟುಗಳ ಪ್ರೇಮ, ಪ್ರೀತಿ ಕುರಿತು ಬಣ್ಣಿಸಲಿಲ್ಲ.

ಪಿ.ಸಾಯಿನಾಥ್ ತಮ್ಮ ವೃತ್ತಿ ಬದುಕಿನುದ್ದಕ್ಕೂ ನರಳುವ ಭಾರತದ ನತದೃಷ್ಟರ ಕುರಿತು ಚಿಂತಿಸಿದರು ಮತ್ತು ಆ ಕುರಿತು ಬರೆಯುತ್ತಲೇ ಬರೆದರು. ಅವರ ಚಿಂತನೆಗಳ ತುಂಬಾ, ಆಧುನಿಕ ಭಾರತದ ಅಭಿವೃದ್ಧಿಯ ರಥವೆಂಬ ಗಾಲಿಯಡಿ ನಿಲುಕಿ ನಲುಗಿ ಹೋದವರ ಕಥೆಗಳು ಮಾತ್ರ ಕಾಣುತ್ತವೆ. ಇಂತಹ ನತದೃಷ್ಟರು ಮತ್ತು ಅವರು ಉಳಿಸಿಕೊಂಡು ಬಂದಿರುವ  ಕಾಯಕದ ಮಹತ್ವ ಮತ್ತು ಭಾರತದ ಬಹುಮುಖಿ ಸಂಸ್ಕೃತಿಯ ಗುಣವನ್ನು ರಕ್ಷಿಸಿಕೊಂಡು ಅವರ ವೃತ್ತಿ ಬದುಕಿಗೆ ಇಲ್ಲವೆ ಕುಲ ಕಸುಬಿಗೆ ಘನತೆ ತಂದು ಕೊಡುವ ನಿಟ್ಟಿನಲ್ಲಿ  ಹಗಲಿರಳು ಶ್ರಮಿಸುತ್ತಿರುವ ಸಾಯಿನಾಥ್ ನನ್ನ ತಲೆ ಮಾರಿನ ಪತ್ರಕರ್ತರಿಗೆ ಮಾತ್ರವಲ್ಲದೆ ಇಂದಿನ ಯುವ ತಲೆಮಾರಿಗೆ ಆದರ್ಶಪ್ರಾಯವಾಗಿದ್ದಾರೆ.

ಇತ್ತೀಚೆಗೆ ತಾನೇ ಹಿರಿಯ ಪತ್ರಕರ್ತರು ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪಿ.ಸಾಯಿನಾಥ್ ರವರು “ ತಾವು ಕಂಡಿರುವ ಬಹು ಭಾಷೆ ಮತ್ತು ಬಹುಸಂಸ್ಕೃತಿಯ ಭಾರತವನ್ನು ನಮ್ಮ ಮುಂದೆ ತೆರದಿಟ್ಟರು. ಜೊತೆಗೆ ತಮ್ಮ ಮುಂದಿನ ಕನಸು ಹಾಗೂ ಯೋಜನೆಗಳನ್ನು  ಹಂಚಿಕೊಂಡರು. “ಪರಿ” (ಪೀಪಲ್ಸ್ ಆರ್ಚಿವ್ ಆಫ್ ರೂರಲ್ ಇಂಡಿಯ) ಸಂಸ್ಥೆಯೊಂದನ್ನು ಸ್ಥಾಪಿಸಿರುವ ಅವರು, ಈ ಸಂಸ್ಥೆಯನ್ನು ಸಮಗ್ರ ಭಾರತದ ಎಲ್ಲಾ ಸಂಸ್ಕೃತಿಗಳ ಕಣಜವನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ನಿಷ್ಟಾವಂತ, ಜಾತ್ಯಾತೀತ ಮತ್ತು ಧರ್ಮಾತೀತ ನಾಗರಿಕರಿಗೆ ತೆರದಿಟ್ಟಿದ್ದಾರೆ.

ಈ ನಿಟ್ಟಿನಲ್ಲಿ ಈ ಸಮಾಜದಲ್ಲಿ ನಗಣ್ಯ ಎಂದು ಪರಿಗಣಿಸಿ ಅವಗಣನೆಗೆ ತುತ್ತಾಗಿರುವ ಕೆಲವು ವೃತ್ತಿಗಳಲ್ಲಿ ಬದುಕು ಕಟ್ಟಿಕೊಂಡ ಅನಾಮಿಕ ಸಾಧಕರ ಜೀವನ ಕ್ರಮವನ್ನು ಎಲ್ಲಾ ವಿಧದಲ್ಲಿ ಅಂದರೆ, ಸಾಕ್ಷ್ಯ ಚಿತ್ರ, ಛಾಯಾ ಚಿತ್ರ ಮತ್ತು ಪಠ್ಯಗಳ ಮೂಲಕ ದಾಖಲಿಸುವ ಕಾರ್ಯ ಈಗಾಗಲೇ ಜಾರಿಯಲ್ಲಿದೆ. ಅಂತಹ ಸಾಧಕರ ಬದುಕನ್ನು ಕಟ್ಟಿಕೊಡುವ ಹಾಗೂ ಪತ್ರಕರ್ತ ಗೆಳೆಯ ಜಿ.ಎನ್. ಮೋಹನ್ ಸಂಪಾದಕತ್ವದಲ್ಲಿ ಬಂದಿರುವ ಈ ಕೃತಿ “ ಈ ಪರಿಯ ಸೊಬಗು”  ಕೇವಲ ಯುವ ತಲೆಮಾರಿನ ಜನತೆಗೆ ಮಾತ್ರವಲ್ಲದೆ, ಪತ್ರಿಕೋದ್ಯಮ ಪ್ರವೇಶಿಸುವ ವಿದ್ಯಾರ್ಥಿಗಳಿಗೆ  ವಿಶ್ವವಿದ್ಯಾನಿಲಯಗಳಲ್ಲಿ ಕಡ್ಡಾಯವಾಗಿ ಪಠ್ಯವಾಗಬೇಕಿದೆ.

ಈಗಾಗಲೇ ಪಿ.ಸಾಯಿನಾಥ್ ರವರ “ ಬರ ಅಂದ್ರೆ ಎಲ್ಲರಿಗೂ ಇಷ್ಟ” ಎನ್ನುವ ಮಹತ್ವದ ಕೃತಿಯನ್ನ ಕನ್ನಡಕ್ಕೆ ತರುವುದರ ಮೂಲಕ ಪಿ.ಸಾಯಿನಾಥ್ ರವರ ಮಾನವೀಯ ಮುಖವುಳ್ಳ ಜೀವಪರ ಕಾಳಜಿಯನ್ನು ಕನ್ನಡಿಗರಿಗೆ ಹಂಚುತ್ತಿರುವ ಜಿ.ಎನ್. ಮೋಹನ್ ಇದೀಗ ಅವರ ಜೊತೆ ಕೈಜೊಡಿಸಿರುವುದು ಕನ್ನಡದ ಭಾಗ್ಯ ಎಂದು ಹೇಳಬಹುದು. ಏಕೆಂದರೆ, ಈ ದೇಶದ ನೆಲ, ಜಲ, ಕೃಷಿ, ಪರಿಸರ, ಹಾಗೂ ಎಂದಿಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲಾರದೆ ಅರಣ್ಯದಲ್ಲಿ ಅನಾಮಿಕರಂತೆ, ಅನಾಥರಂತೆ ಬದುಕುತ್ತಿರುವ ಆದಿವಾಸಿಗಳ ಕುರಿತು ನಿರಂತರ ಬರೆಯುತ್ತಿರುವ, ಮಾತನಾಡುತ್ತಿರುವ ಪಿ.ಸಾಯಿನಾಥ್ ರವರ ಚಿಂತನೆಗಳು ಕನ್ನಡ ಮಾತ್ರವಲ್ಲದೆ, ಭಾರತದ ಎಲ್ಲಾ ಭಾಷೆಗಳಿಗೆ ಅನುವಾದಗೊಳ್ಳುವ ಅವಶ್ಯಕತೆಯಿದೆ.

ಜಾಗತೀಕರಣದ ಅಬ್ಬರದ ಅಲೆಯಲ್ಲಿ ಮಿಂದು ಏಳುತ್ತಿರುವ ಆಧುನಿಕ ಜಗತ್ತು ಎಲ್ಲವನ್ನೂ ಸರಕುಗಳಂತೆ ನೋಡುವ ಕ್ರಮದಿಂದಾಗಿ, ಈ ನೆಲದ ನಿಜ ಕಾಳಜಿಗಳಾಗಬೇಕಿದ್ದ ಜಾತಿ ಪದ್ಧತಿ, ಮೌಡ್ಯ, ಲಿಂಗ ಅಸಮಾನತೆ, ಪರಿಸರ ನಾಶ ಎಲ್ಲವೂ ನೇಪಥ್ಯಕ್ಕೆ ಸರಿಯುತ್ತಿವೆ. ಅವುಗಳನ್ನು ತುರ್ತಾಗಿ ಮುನ್ನೆಲೆಗೆ ತಂದು ಚರ್ಚಿಸುವ ಅಗತ್ಯತೆಯನ್ನು ಪ್ರತಿಪಾದಿಸುವ “ ಈ ಪರಿಯ ಸೊಬಗು” ಕೃತಿಯ ಲೇಖನಗಳು ಜಿಡ್ಡುಗಟ್ಟಿದ ನಮ್ಮ ಗ್ರಹಿಕೆಯ ನೆಲೆಗಟ್ಟನ್ನು ಅಲುಗಾಡಿಸುವಷ್ಟು ಸಶಕ್ತವಾಗಿವೆ. ಇವುಗಳನ್ನು ಅನುವಾದಿಸಿರುವ ಪ್ರಸಾದ್ ನಾಯ್ಕ್, ರಾಜಾರಾಂ ತಲ್ಲೂರ್, ಸಂದ್ಯಾರಾಣಿ, ಸಂತಾ, ಶಮ ನಂದಿಬೆಟ್ಟ, ಇವರೆಲ್ಲರೂ ನಿಜಕ್ಕೂ ಅಭಿನಂದಾರ್ಹರು.

p sainath and g n mohanರಾಜಾಸ್ತಾನದಲ್ಲಿ ದೇಶಿ ಬೀಜ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಚಿಮ್ನಿಬಾಯಿ , ಪುಣೆನಗರದಲ್ಲಿ ಚಪ್ಪಲಿ ಹೊಲಿಯುವ ಕಾಯಕದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಬಾಮಾಬಾಯಿ ಮಸ್ತೂದ್, ದೆಹಲಿ ಹೊರವಲಯದಲ್ಲಿ ವಾಹನಗಳ ಮೆಕಾನಿಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಿ ದೇವಿ ಇಂತಹ ಅನನ್ಯ ಸಾಧಕಿಯರ ಸಾಹಸಗಾಥೆಗಳು ಬದುಕಿನ ಭರವಸೆ ಕಳೆದುಕೊಂಡಿರುವವರಿಗೆ ಪ್ರೇರಣೆಯಾಗಲಿದೆ.

ಇವುಗಳ ಜೊತೆಗೆ ಒರಿಸ್ಸಾ ರಾಜ್ಯದ ಕಲ್ಲಿದ್ದಲ ಗಣಿಗಾರಿಕೆ, ಅರಣ್ಯ ನಾಶ ಮತ್ತು ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ನೋವಿನ ಕಥೆ, ಕುಡಿಯುವ ನೀರಿನ ಅಭಾವದಲ್ಲಿಯೂ ಹಣದ ಮಳೆ ಸುರಿಸುತ್ತಿರುವ ಟ್ಯಾಂಕರ್ ಮಾಲೀಕರ ಕಥೆಗಳು, ಕೃಷ್ಣ ನದಿಯ ಸಮಸ್ಯೆ, ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಸಂತಾಲ್ ಬುಡಕಟ್ಟು ಜನಾಂಗದ ಮಹಿಳೆಯ ಸ್ವಾವಲಂಬನೆಯ ಬದುಕು ಹೀಗೆ ಅನೇಕ ವಿಷಯಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿನ ಲೇಖನಗಳನ್ನು ಪಿ.ಸಾಯಿನಾಥ್, ಅನನ್ಯಾ ಮುಖರ್ಜಿ, ಮೃದುಲಾ ಮುಖರ್ಜಿ, ಚಿತ್ರಾಂಗದ ಚೌಧರಿ, ನಮಿತಾ ವಾಯಿಕರ್ ವಿದ್ವತ್ ಪೂರ್ಣವಾಗಿ ಮತ್ತು ಆಳವಾದ ಅಧ್ಯಯನಗಳ ಮೂಲಕ ಮಂಡಿಸಿದ್ದಾರೆ.

ಈ ಕೃತಿಯನ್ನು ಓದಿ ಮುಗಿಸಿದ ನಂತರವೂ ಇಲ್ಲಿನ ವ್ಯಕ್ತಿಗಳು ನಮ್ಮನ್ನು ಕಾಡುತ್ತಾರೆ. ಹೌದು, ನಾವು ನೋಡಿದ ಸಿನಿಮಾ, ನಾಟಕ, ಹಾಡು, ಕೃತಿ ನಮ್ಮನ್ನು ಕಾಡದಿದ್ದರೆ, ಅದು ಪರಿಪೂರ್ಣತೆಯನ್ನು ಒಳಗೊಂಡಿಲ್ಲ ಎಂದರ್ಥ. ಇಂತಹದ್ದೊಂದು ಅಪೂರ್ವ ಕೃತಿಯನ್ನು ಕನ್ನಡಕ್ಕೆ ಕೊಟ್ಟಿರುವ ಮೋಹನ್ ಮತ್ತು ಸಂಗಡಿಗರಿಗೆ ಧನ್ಯವಾದಗಳು.

‍ಲೇಖಕರು Admin

September 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: