ನಿಂತು ಕೇಳುವ ಕಿವಿಗಳಿಗೆ ಕಾಲು ನೋಯಬಾರದಷ್ಟೇ..

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.

ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಸ್ವಾತಂತ್ರ್ಯ ಹಬ್ಬದಂದು ಇಸ್ತ್ರಿ ಹಾಕದ ಮುದ್ದೆ ಸಮವಸ್ತ್ರ ಧರಿಸಿಕೊಂಡು ಬಂದ ದೀಪಕನಿಗೆ ನಾನು ಏನೂ ಅನ್ನುವಂತಿರಲಿಲ್ಲ ಕಾರಣ ಅಗಸ್ಟ್ ಹದಿನಾಲ್ಕರಂದು ಅವನ “ಏನಾದರೂ ಹೇಳುವ ” ಅವಧಿಯಲ್ಲಿ ಅವನು ತನ್ನ ‘ಯುನಿಫಾರಮ್ಮನ್ನು’ ಹೇಗೆ ಇಷ್ಟು ದಿನಗಳಿಂದ ತಾನು ಮತ್ತು ತನ್ನ ಮನೆಯವರು ಇಲಿಗಳಿಂದ ಬಚಾವು ಮಾಡಿಕೊಂಡು ಬರುತ್ತಿದ್ದೇವೆ ಎಂಬ ಕಥೆಯನ್ನು ಹೇಳಿಯಾಗಿತ್ತು. ಹಾಗಾಗಿ ಉಳಿದ ಮಕ್ಕಳು ಕೂಡ ‘ಟೀಚರ್ರು ನಮಗೆ ಮಾತ್ರ ಬಯ್ತಾರೆ ಅವನಿಗೆ ಏನೂ ಹೇಳಲ್ಲ’ ಅನ್ನುವ ಹಾಗೂ ಇರಲಿಲ್ಲ.

ಅಪರಿಚಿತರು, ಅಧಿಕಾರಿ ವರ್ಗದವರು ಬಂದರೆ ಮಕ್ಕಳು ಬಾಯಿಬಿಡಲ್ಲ ಎಂಬುದು ಶಾಲೆಗಳಲ್ಲಿ ಚಾಲ್ತಿಯಲ್ಲಿರುವ ಮಾತು.. ಕುಶಾಲಿನ ನಾಕು ಮಾತು ಆಡುತ್ತ ಹತ್ತಿರ ಕರೆದು ಸಲಿಗೆ ಮಾಡಿದರೆ ಮಾತ್ರ ಅವರು ತೆರೆದುಕೊಳ್ಳಬಲ್ಲರು.. ಹಾಗಾಗಿ ವಾರದಲ್ಲಿ ಎರಡುದಿನ ಅವರಿಗೆ ಯಾವ ವಿಷಯವನ್ನಾದರೂ ನಿರ್ಭಿಡೆಯಿಂದ, ಧೈರ್ಯದಿಂದ ಹೇಳಲು ಈ “ಹೇಳುವ, ಕೇಳುವ” ಅವಧಿ..

ಅವರಿಗಿಷ್ಟದ ಏನನ್ನಾದರೂ ಅವರು ಒಂದು ಕುರ್ಚಿಯ ಮೇಲೆ ಕುಳಿತು ಹೇಳಬಹುದು. ಅತ್ಯದ್ಭುತವಾದ, ನಮಗೆ ಗೊತ್ತಿಲ್ಲದ ಸಂಗತಿಯೊಂದನ್ನು ಕೇಳುತ್ತಿರುವಂತೆ ಓ.. ಹೌದಾ.. ! ಮುಂದೇನಾಯ್ತು ? ಉತ್ತಮ ಕೆಲ್ಸ ಮಾಡಿದೆ ! ಮುಂದೆ ಹೀಗೆ ಮಾಡಿ ನೋಡು… ಮುಂತಾದ ಮೋಟಿವ್ ಮಾತುಗಳನ್ನು ಆಡುತ್ತ ನಾವು ಅವರನ್ನು ಆಲಿಸುತ್ತೇವೆ…

ಮನೆ, ಅಜ್ಜಿಮನೆ, ಊರುಕೇರಿ, ಬೆಟ್ಟ, ಪ್ರಾಣಿ ಹೀಗೆ ಎಲ್ಲದರ ಕುರಿತಾದ ಸಂಗತಿಗಳನ್ನು ಹಾವಭಾವದಲ್ಲಿ ಕುಳಿತ ಕುರ್ಚಿಯು ಬಿದ್ದು ಹೋಗುವಂತೆ ಸರಿಸಾಡುತ್ತ ಅಬ್ಬರದಿಂದ, ಉಮೇದಿಯಿಂದ, ನಗುತ್ತ, ಸಿಟ್ಟಾಗುತ್ತ ಅವರು ಹೇಳುವ ಹೊತ್ತಿನಲ್ಲಿ ಉಳಿದ ಮಕ್ಕಳು ಕೂಡ ಯಾರೂ ಆ ಕ್ಷಣದ ಆನಂದಕ್ಕಾಗಿ ಬಿಟ್ಟರೆ ಅಪಹಾಸ್ಯಕ್ಕಾಗಿ ನಗರು..

ಕಾರಣ ಎಲ್ಲರ ಮನೆಯ ಕಾವಲಿಯೂ ತೂತು ಅಲ್ಲಿ.. ಇಂತಹ ತೂತಿನೊಂದಿಗೆ ಹೊಂದಿಕೊಂಡು ಬಾಳುತ್ತ ಖುಷಿ, ಕುತೂಹಲದ ಬಣ್ಣದ ಬಲೂನನ್ನು ಸೀಮಿತ ಪರಿಧಿಯಲ್ಲೇ ಸೃಜಿಸಿಕೊಳ್ಳುವ ಮಕ್ಕಳು ಎಲ್ಲಾ ಇದ್ದೂ ಕುಸಿದು ಹೋಗುವ ಹಿರಿಯ ಮನಸ್ಸುಗಳಿಗೂ ಕೂಡ ಶಕ್ತಿಮದ್ದುಗಳು.. 

ದೀಪಕನ ಅಪ್ಪ ಅಂಕೋಲೆಯ ಶೆಟ್ಟರ ಅಂಗಡಿಗೆ ಸಾಮಾನು ಕಟ್ಟಲು ಹೋಗುತ್ತಿದ್ದನಂತೆ. ಈಗೆರಡು ವರ್ಷದಿಂದ ಇಲ್ಲ ಅವನು.. ಯಾರದ್ದೋ ಆಕಳಕರು ರಸ್ತೆಯಲ್ಲಿ ಲಾರಿಗೆ ಸಿಕ್ಕುತ್ತಿದೆಯೆಂದು ತಪ್ಪಿಸಲು ಹೋದವ ಅದೇ ಲಾರಿಯಡಿಗಾದ.. ಬಿಡಿ ಆ ವಿಷಯ.. ಕೆಲ ನೆನಪುಗಳು ಭೀಕರ.. ವಿಷಯ ನಿಮಗೆ ಗೊತ್ತಿರಲಿ ಅಂತ ಚುಟುಕಾಗಿ ಹೇಳಿದೆ ಅಷ್ಟೇ..

ದೀಪಕನ ಅಮ್ಮ ದೂರದ ನಾಯಕರ ಮನೆಗೆ ಮನೆಗೆಲಸಕ್ಕೆ ಹೋಗುತ್ತಾಳಂತೆ. ಅವಳನ್ನು ನಾನು ನೋಡಿದ್ದಿಲ್ಲ.. ಪಾಲಕರ ಸಭೆ, ಫಲಿತಾಂಶ ಹೀಗೆ ಯಾವ ದಿನವೂ ಅವಳು ಬಂದದ್ದಿಲ್ಲ. ಚಿಕ್ಕಪ್ಪನೋ ಇನ್ಯಾರೋ ಬಂದು ಒಂದು ಸಹಿ ಹಾಕಿ ಹೋಗುತ್ತಾರಷ್ಟೇ.. ದೀಪಕನಿಗೊಬ್ಬ ಅಣ್ಣ ದಿಲೀಪ.. ಒಂಭತ್ತನೇ ವರ್ಗ.

ಹೀಗೆ ಅಂದು ‘ಹೇಳುವ ಅವಧಿ’ಯಲ್ಲಿ ಕುಳಿತು ದೀಪಕ  ” ಬಾಯಲ್ಲೇ ಹೇಳು ಸಾಕು.. ನಂಗೆ ಗುತ್ತಾಗ್ತದೆ” ಎಂದರೂ ಕೇಳದೇ “ಟೀಚರ್ ತಡೀರಿ.. ನಿಮ್ಗೆ ಏನೂ ಗುತ್ತಾಗುದಿಲ್ಲ.. ನಾನು ತೋರ್ಸೇ ಬಿಡ್ತಿ ನಿಮ್ಗೆ” ಎನ್ನುತ್ತ ಕಿಂದರಿಜೋಗಿಯ ಬೆನ್ನಿಗೆ ಗಚ್ಚಾಗಿಚ್ಚಿಯಾಗಿ ಹಳ್ಳದದಾರಿ ಹಿಡಿದ ಇಲಿಗಳ ಚಿತ್ರವಿರುವ ಪುಸ್ತಕ ತಂದು ‘ಇದರಷ್ಟಿವೆ ನೋಡಿ ನಮ್ಮನೇಲಿ ಇಲಿಗಳು’ ಅಂತ ತೋರಿಸಿ ಸೊಂಟದ ಮೇಲೆ ಕೈಯಿಟ್ಟು “ನಿಮ್ಮನೇಲಿ ಇಷ್ಟೇ ಇಲಿ ಇದ್ರೆ ನೀವು ಏನ್ ಮಾಡ್ತಿದ್ರಿ ಹೇಳಿ ನಂಗೆ ಈಗೇಯಾ” ಅಂತ ಪ್ರಶ್ನೆ ಮಾಡಿ ನಿಂತಾಗಿತ್ತು ..

ಅವನ ಅಂಗಿಕಾಭಿನಯ ,ಉತ್ತರ ಬೇಡುವ ಮುಖಭಾವ ನನಗೆ ನಗುವನ್ನು ಉಕ್ಕುಕ್ಕಿ ತರಿಸುತ್ತಿತ್ತಾದರೂ ಕಟ್ಟಿಕೊಂಡು ಸುಮ್ಮನಿದ್ದೆ..’ಬೆಕ್ಕು ಸಾಕಿ ಒಂದು’ ಎಂದರೆ ಅವನಿಂದ “ಎಂಥಕೆ ? ಅನ್ನ ಸಾರು ಮಡಿಕೆ ಹೊಯ್ಡುಕಾ?” ಅನ್ನೋ ಪ್ರಶ್ನೆಯ ಅಪಾಯವಿದ್ದರಿಂದ ಅದನ್ನೂ ಹೇಳದೇ ತೆಪ್ಪಗೆ ಇನ್ನೂ ಬೇಕಷ್ಟಿದೆ ನೀನು ಹೇಳಬೇಕಾದುದು.. ಹೇಳು ಕೇಳುವೆ ಎಂಬಂತೆ ನೋಡುತ್ತ ಕುಳಿತಿದ್ದೆ.

ಅವನು ಹೇಳಿದ ಪ್ರಕಾರ 

ಎರಡು ಪಕ್ಕೆಯ ಅವನ ಮಣ್ಣಿನ ಮನೆಯಲ್ಲಿ ಒಂದು ಕಡೆಯ ಕೋಳ್ಗಂಬ ಜಾರಿ ಅದಕ್ಕೆ ಅಕೇಶಿಯಾ ಕಂಬ ಕೊಟ್ಟುಕೊಂಡು ಮನೆ ಬಚಾವ್ ಮಾಡಿಕೊಂಡಿದ್ದಾಳೆ ಅವನಮ್ಮ.. ಬರುವ ವರ್ಷ ಮಳೆಗಾಲದಲ್ಲಿ ಆ ಮನೆಯೂ ಅವರ ಕೈಗೆ ಸಿಗುವುದಿಲ್ಲ ಆ ನಮೂನಿ ಪರಿಸ್ಥಿತಿ ಇದೆ.. ನೆಲಗೋಡೆಯ ತುಂಬ ಇಲಿ ಒಟ್ಟೆಗಳು.. ಅದರ ತುಂಬ ಹಲವಾರು ಇಲಿ ಸಂಸಾರಗಳು..

ರಾತ್ರಿ ಲೈಟ್ ಬಂದ್ ಮಾಡಿದ ಒಡನೆ ಇಡೀ ಕೋಣೆತುಂಬ ಹರಿದಾಡುವ ಅವು ಹಲ್ಲಿಗೆ ಸಿಕ್ಕಿದ ಏನನ್ನೂ ಗರಗೆಡಿಸದೆ ಬಿಡವು.. ನೆಲ, ವಸ್ತು, ಬಟ್ಟೆ, ಅಮ್ಮನ ಜಡೆ, ಇವರ ಮೋಟುಗೂದಲು, ಪ್ಲ್ಯಾಸ್ಟಿಕ್‌ನ ಕೊಡ, ಬಕೀಟು, ಡಬ್ಬಗಳು.. ಅಷ್ಟೇ ಯಾಕೆ ಅವರಜ್ಜಿಯ ಒರಟಾದ ಕಾಲಹಿಮ್ಮಡಿಯ ತುಂಡು ಹೀಗೆ ಎಲ್ಲವನ್ನೂ ನುಂಗಿ ನೀರುಕುಡಿದಿವೆ ಅವು..

ಕೋಳಿ ಮುಚ್ಚುವ ಬುಟ್ಟಿಯನ್ನೂ ಬಿಡದೆ ಚಕ್ಕಣಾ ಚೂರು ಮಾಡಿ ನಿಕಾಲಿ ಮಾಡಿದ ಕಾರಣಕ್ಕೆ ಒಂದು ಹುಂಜ ಎರಡು ಹೇಂಟೆಯನ್ನು ಅಣ್ಣತಮ್ಮಂದಿರು ರಾತ್ರಿ ತಮ್ಮ ರಟ್ಟೆಯೊಳಗೇ  ಮಲಗಿಸಿಕೊಳ್ಳುತ್ತಿದ್ದಾರೆ.. ಅಲ್ಲಿಯಾದರೂ ಅವನ್ನು ಬಿಟ್ರೆ ತಾನೆ ಇವು..? ರೆಕ್ಕೆಪುಕ್ಕದ ಗರಿ ತುಂಡರಿಸಿ, ಕೆಂಪುಚರ್ಮ ಎಬ್ಬಿಸಿ, ಕಾಳು ಹೆಕ್ಕುವ ಕೊಕ್ಕನ್ನೂ.. ಕೆದರುವ ಮೂರೇ ಮೂರು ಉಗುರನ್ನೂ ಅಲ್ಲಲ್ಲಿ ತಿಂದು ಆಯ್ಕೊಂಡು ತಿನ್ನಲಾಗದ ಹಾಗಾದ ಅವನ್ನು ಹಗಲೊತ್ತಿನಲ್ಲಿ ಕಂಡವರು ಬೆಚ್ಚಿ ” ಇದ್ಯಾವನಮನಿ ಕೋಳಿ” ಎಂದು ನಿಂತು ನೋಡುವ ಹಾಗೆ ಮಾಡಿಬಿಟ್ಟಿವೆ ದರಿದ್ರ ಇಲಿಗಳು..

ಹಾಳಾಗಲಿ ಕೋಳಿ ಕಥೆ..

ಇರುವ ಒಂದು ಹಳೆಯ ಟ್ರಂಕಿನಲ್ಲಿ ಅಕ್ಕಿ ದಿನಸಿ ಇಟ್ಟುಕೊಂಡ ಇವರು ಬಟ್ಟೆ, ಸಮವಸ್ತ್ರ,  ಪಾಟಿಚೀಲ , ಪುಸ್ತಕ ಮುಂತಾದವನ್ನೆಲ್ಲ ರಾತ್ರಿ ಮಲಗುವಾಗ ಒಂದು ದೊಡ್ಡ ರಟ್ಟಿನಬಾಕ್ಸಿನಲ್ಲಿ ತುಂಬುತ್ತಾರೆ.. ಇಲಿಗೆ ರಟ್ಟಿನ ಬಾಕ್ಸೆಂದರೆ ಬಹಳೇ ಪ್ರೀತಿ.. ಎಲ್ಲರಿಗೂ ಗೊತ್ತಿರುವಂಥದ್ದೇ…. ಬೇರೆ ಉಪಾಯವಿಲ್ಲ.. ಮತ್ತೆ ಹೇಗೆ..? ಎಂಬುದು ನನ್ನ ಹಾಗೆ ನಿಮ್ಮದೂ ಪ್ರಶ್ನೆ ಅಂತ ಗೊತ್ತು.. ಹೇಳುವೆ ಇರಿ..

ಸಕಲ ಸಾಮಗ್ರಿಗಳು ತುಂಬಿದ ಅದನ್ನು ಕೋಣೆಯ ಮಧ್ಯದಲ್ಲಿಟ್ಟು ಅದರ ನಾಲ್ಕು ಬದಿಗೆ ಒಬ್ಬೊಬ್ಬರು ಅದಕ್ಕೆ ಅಂಟಿಕೊಂಡು (ಅಮ್ಮ ಅಜ್ಜಿ ದೀಪಕ ದಿಲೀಪ) ಮಲಗುತ್ತಾರೆ.. ಎಚ್ಚರಿರುವಷ್ಟು ಹೊತ್ತು ಕೈಯೋ ಕಾಲಲ್ಲೋ ಬಾಕ್ಸಿಗೆ ಕುಟ್ಟುತ್ತಿರೋದು..( ಇವರ ಕುಟ್ಟುವಿಕೆಗೆಲ್ಲ ಹೆದರಿದರೆ ಇಲಿಗಳು ಸಂಸಾರ ಮಾಡಲು ಸಾಧ್ಯವೇ.. ಅಥವಾ ದಿನ ದಿನವೂ ಬೆಳೆಯುವ ತಮ್ಮ ಹಲ್ಲನ್ನು ಟ್ರಿಮ್ ಮಾಡಿಕೊಳ್ಳಲು ಸಾಧ್ಯವೇ..)

ಇವರಿಬ್ಬರು ಮಲಗಿದರೂ ಅಜ್ಜಿ, ಅಮ್ಮನಿಗೆ ಬೆಳಗಾಗುವ ತನಕವೂ ಸದಾ ಅರೆಮಂಪರೇ.. ಇಬ್ಬರ ಕೈಯಲ್ಲೂ ಒಂದೊಂದು ಉದ್ದ ಸೆಳೆಕೋಲು.. ಮೂತ್ರಕ್ಕೆದ್ದಾಗಲೋ.. ತಿರುವಿ ಮಲಗುವಾಗಲೋ ಹೀಗೆ ಸದಾ ಕಾಲಕ್ಕೂ ಆ ರಟ್ಟಿನ ಬಾಕ್ಸನ್ನು ಕೋಲಿನಿಂದ ಬಡಿದು ಅವರಿಬ್ಬರು ಇಲಿ ಓಡಿಸುವ ಕಾಯಕದಲ್ಲಿ ಬಸವಳಿಯುತ್ತಾರೆ..  

ಬೇರೆ ಯಾವ ಬಟ್ಟೆ ತಿಂದರೂ ಅಡ್ಡಿಲ್ಲ ಅವು.. ನಾಡವರ ಕೇರಿಯ ಒಂದೇ ಒಂದು ಮನೆಗೆ ಹೋಗಿ ಮಗನಿಗೊಂದು ಹಳೆ ಅಂಗಿ ಕೊಡಿ ಅಂದರೆ ನಾಕಾರು ಜೋಡಿ ತರಬಹುದು.. ಬಂಗಾರ ಹಾಕದಿದ್ದರೂ ಈಗಿನ ಉಳ್ಳವರ ಮನೆ ಹುಡುಗರು ಬೇಕಷ್ಟು ಬಟ್ಟೆ ಹಾಕುತ್ತಾರೆ.. ನಾಕು ದಿನ ಹಾಕಿ ತಮ್ಮ ಮನೆಯಾಳುಗಳಿಗೆ ಕೊಟ್ಟೂಬಿಡುತ್ತಾರೆ..

ಆದರೆ ಈ “ಇನಿಫಾರಂ” ಹಾಗಲ್ಲ .. ಸರ್ಕಾರ ವರ್ಷಕ್ಕೊಂದೋ ಎರಡೋ ಕೊಡೋದು.. ಅದಿಲ್ಲದಿದ್ದರೆ ವಾರದ ನಾಲ್ಕು ಕಂಪಲ್ಸರಿ ಸಮವಸ್ತ್ರದ ದಿನಗಳಲ್ಲಿ ದಿನಾ ಬಯ್ಸಿಕೊಳ್ಳುವ ಪರಿಸ್ಥಿತಿ ಬಂದುಬಿಡುತ್ತದೆ.. ಹಾಗಾಗಿ ಈಪರಿ ಜೋಪಾನ ಸಾಗಿರುತ್ತದೆ ಬಹುತೇಕ ಮೂವತ್ತರಿಂದ ಎಂಭತ್ತು ಶೇಕಡಾ ಮನೆಗಳಲ್ಲಿ.. 

ಇವೆಲ್ಲವನ್ನು ಕೇಳಿದ ಮೂರುದಿನ ನಾನು ಈ ಘಟನೆಯ ಸುತ್ತಲೇ ನಿಂತುಬಿಟ್ಟಿದ್ದೆ.. ಪರ್ಸಲ್ಲಿ ಐದಾರು ಕಾರ್ಡಿಟ್ಟುಕೊಂಡು ಉಜ್ಜುತ್ತ ಸಾವಿರ, ಲಕ್ಷ ರೂಪಾಯಿ ಹೀಗೆಹೋಗಿ ಹಾಗೆ ಬರುವಲ್ಲೆಲ್ಲ ಹುಡಿಮಾಡುವ, ವರ್ಷಕ್ಕೊಂದು ಕಾರು ಬದಲಿಸುವ ಜನಕ್ಕೆಲ್ಲ ಬದುಕಿನ ಈ ಮಜಲನ್ನು ಕಾಣುವ ಅಥವಾ ಅರಿಯುವ ಕಣ್ಣು ಇದೆಯೇ.. ಇದ್ದರೂ ನಿನ್ನದು ನಿನಗೆ.. ನನ್ನದು ನನಗೆ ಎಂಬ ಕರುಳು ಮಿಡುಕದ ಅಲಕ್ಷ್ಯದ ಕಾಲವೇ ಮುಂದುವರಿಯುತ್ತಿದೆಯೇ…

ಇಂತಹುದ್ಯಾವುದಾರೊಂದು ಸಂಗತಿಗಳನ್ನು ಮಕ್ಕಳು ಸದಾ ನನ್ನೊಂದಿಗೆ ಒಟಗುಟ್ಟುತ್ತಲೇ ಇರುತ್ತಾರೆ.. ಹೇಳಿಕೊಳ್ಳಬಹುದಾದ/ಬಾರದ ಸಂಗತಿಗಳು ಅನ್ನೋ ಭಾಗಾಕಾರ ಅವರಲ್ಲಿನ್ನೂ ಆಗಿಲ್ಲ.. ಆಗಬೇಕಾಗಿಯೂ ಇಲ್ಲ.. ಇದ್ದ ವಿಷಯವನ್ನು ಹೇಳಿಕೊಳ್ಳುತ್ತಲೇ.., ಮುಂದೆ ಅವರು ವಿದ್ಯೆ ಕಲಿತು ಏನಾದೊಂದು ಸಾಧಿಸಿದರೆ ಮಾತ್ರ ಇವಕ್ಕೆಲ್ಲ ಹೇಗೆ ಪರಿಹಾರ ಸಿಗಬಲ್ಲದು ಎಂಬುದನ್ನು ಕೂಡ ಅವರು ಆಲಿಸಿ ಅರಿಯುತ್ತಾರೆ..

ನನ್ನ ಕುಮ್ಮಕ್ಕಿನಿಂದ ಇಷ್ಟು ದಿನ ಅಂಗಡಿಯಿಂದ ಹೊಗೆಸೊಪ್ಪು ,ಗುಟಕಾ,ಬೀಡಿ ಮುಂತಾದವನ್ನು ತಮ್ಮ ಕೈಲಿಂದ ತರಿಸುತ್ತಿದ್ದ ಪಾಲಕರನ್ನು ವಿರೋಧಿಸುತ್ತಾರೆ.. ಈ ವಿರೋಧವೇ ಮುಂದೆ ಪಾಲಕರಿಗೂ ಕೂಡ ತಾವು ಮಕ್ಕಳಿರದ ಮರೆಯಲ್ಲೇ ಬೀಡಿ ಗುಟಕಾ ತಂಬಾಕು ಚಟ ಮುಗಿಸಿ ಹೋಗಬೇಕು ಎಂಬ ಚಿಟಿಕೆ ಪ್ರಜ್ಞೆಯನ್ನಾದರೂ ಮೂಡಿಸುತ್ತದೆ..

ಎಷ್ಟೂ ಇಲ್ಲದಿದ್ದರೂ ಮಕ್ಕಳು ಬೆಳೆಯುತ್ತಾರೆ.. ಪ್ರತಿಭಾಕಾರಂಜಿಯಲ್ಲಿ ಖಾಸಗೀಶಾಲೆಯ ಮಕ್ಕಳೊಂದಿಗೆ ಪೈಪೋಟಿಗೆ ಬಿದ್ದು ಬಹುಮಾನ ಹೊತ್ತು ಆತ್ಮವಿಶ್ವಾಸದ ನಗುವಿನಲ್ಲಿ ಬರುತ್ತಾರೆ… ರಾಷ್ಟ್ರೀಯ ಹಬ್ಬಕ್ಕೆ ತಿಂಗಳಿರೋವಾಗಲೇ ಭಾಷಣ ಬರೆಸಿಕೊಂಡು ಧ್ವಜಾರೋಹಣ ಮುಗಿದು ಮೂರ್ನಾಲ್ಕು ತಾಸಿನವರೆಗೂ ಸರದಿ ಪ್ರಕಾರ ಭಾಷಣ ಮಾಡುತ್ತಾರೆ..

ನಿಂತು ಕೇಳುವ ಕಿವಿಗಳಿಗೆ ಕಾಲು ನೋಯಬಾರದಷ್ಟೇ…

October 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ರೇಣುಕಾ,, ಮಾತೇ ಹೊರಡಲ್ಲ.

    ಪ್ರತಿಕ್ರಿಯೆ
  2. Shwetha nayak

    Very heart churning essay…since I belong to the same place studied in same schools I know that its not an exaggerated version…
    Even in those situations people are so no self pitiable..
    Some where this article is instigating me to do some thing for them!!

    ಪ್ರತಿಕ್ರಿಯೆ
  3. ರೇಣುಕಾ ರಮಾನಂದ

    ಲಲಿತಾ ಅಕ್ಕ. ನಿಮ್ಮ ಓದಿಗೆ ಶರಣು

    ಪ್ರತಿಕ್ರಿಯೆ
  4. ರೇಣುಕಾ ರಮಾನಂದ

    ನಿಜ ಶ್ವೇತಾ..ಈಗಲೂ ಪರಿಸ್ಥಿತಿ ಬದಲಾಗಿಲ್ಲ.. ನೈಜ ಸಂಗತಿಗಳನ್ನು ಮಾತ್ರ ಬರೆಯಲು ಎತ್ತಿಕೊಳ್ಳುವೆ ನಾನು.. ಥ್ಯಾಂಕ್ಯೂ ನಿನ್ನ ಓದಿಗೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: