ನೆಲ-ಮುಗಿಲು
ಅಕ್ಕಿಮಂಗಲ ಮಂಜುನಾಥ
ಬಯಲಲ್ಲಾಕೆ ಬಾಗಿದ್ದಾಳೆ
ಸೆರಗನು ಸೊಂಟಕೆ ಸಿಗಿಸಿ
ಸೊಪ್ಪು ಸೆದೆಯನು ಕಿತ್ತಿದ್ದಾಳೆ
ಯಾವುದೋ ಸಿಹಿಯನು ನೆನಸಿ
***
ದಿಟ್ಟಿಸಿ ನೋಡಿ ನೊಂದಿದ್ದಾನೆ
ಮನದಲ್ಲಾಕೆಯನಿಟ್ಟು
ಮಾತನಾಡಿಸಲು ಸಾಲದು ಧೈರ್ಯ
ಕೊರಗುತ ನಿಟ್ಟುಸಿರಿಟ್ಟು
***
ಆಕೆಯ ಪಾಡಿಗೆ ಆಕೆ ಹೋದಳು
ಯಾವುದೋ ಯೋಚನೆಯಲ್ಲಿ
ನಿಂತಲ್ಲೇ ಇವ ನಿಂತಿದ್ದಾನೆ
ಪ್ರೀತಿಯ ಯಾಚನೆಯಲ್ಲಿ
***
ಸರಿದು ಹೋಯಿತು ಬಾನಲ್ಲಿ ಮುಗಿಲು
ಕೇವಲ ಮಿಂಚನು ಹರಿಸಿ
ಕಾದು ಗಾರಾದ ನೆಲದೆದೆಯಲ್ಲಿ
ಮಳೆಯ ಹಂಬಲವ ಉಳಿಸಿ







nice..
chennagide 🙂
ಹೇಮಾ ಮತ್ತು ಷೇಕ್ ರವರಿಗೆ ಅಭಿನಂದನೆಗಳು.