ಅವಿಜ್ಞಾನಿ ಮಂಗಳೂರು
ನಾ ಸಾಯುವ ದಿನ
ನನ್ನಿಷ್ಟದ ಕವಿತೆ ಓದಿರಿ
ಯಾವುದು ಸಾವ
ಕುರಿತು ನೋವು ತರಿಸುವುದಿಲ್ಲವೋ
ಅದು
ಆಳಿದವರೇ ಮುಖ ಮರೆಸಿಕೊಳ್ಳಿ
ನನ್ನ ದೇಹದಲ್ಲೆಲ್ಲಾ
ನೀವಿಟ್ಟ ಗೀರುಗಳಿವೆ
ನಿಶ್ಚಲ ದೇಹ ಹಾಗೆಯೇ
ಉಸಿರಾಡಲಿ ಆಳಿದ
ಗಾಳಿಯೂ ಸೋಕದೆ
ಅಳುವವರ ಗುಂಪು
ಮರುಕಪಡುವವರ ಗುಂಪು
ಕಳೆದೇಹೋದನಲ್ಲವೇಂಬೋರು
ಕೊಂಚ ದೂರ ನಿಲ್ಲಲಿ
ಎಟುಕದ ತುದಿ ಬದುಕು
ಉಗುರಕೊನೆಗೆ
ಭಾರ ಹಾಕಲಿ
ಇದ್ದಾಗ ದಕ್ಕಿಸಿಕೊಂಡವರು
ಯಾರೋ ನಗುತ್ತಿರಲಿ
ಎಂದಿಗೂ ಅಗಲದ ನೆನಪು
ಜೋಳಿಗೆಗೆ ಸುರಿದಿದ್ದೆನಲ್ಲ
ಹಾಗಾಗೀ
ಉಸಿರ ಒರತೆಯಿಲ್ಲದ
ಜಡ ತುಂಬಾ ಕಲ್ಲುಮಣ್ಣುಗಳಿವೆ
ಹಾಗೆಯೇ
ಶತಮಾನದ ಪಾದಕ್ಕೆ
ಹೊಡೆದಿಟ್ಟ ನಂಜಿನ
ಮೊಳೆಕೀಳುವ ಮುಹೂರ್ತಕೆ
ನಗುವಿನೆಸಳ ಚೆಲ್ಲಿರಿ
ನಾ ಸಾಯುವ ದಿನ
ನನ್ನಿಷ್ಟದ ಕವಿತೆ ಓದಿರಿ
ಯಾವುದು ಸತ್ತ ತರುವಾಯ
ನೋವು ತರಿಸುವುದಿಲ್ಲವೋ
ಅದು…!






0 Comments