ಡಾ ನಾ ಮೊಗಸಾಲೆ
ಆಕಾಶಕ್ಕೆ ಇದ್ದರೆ ಕಣ್ಣು
ಹಕ್ಕಿಗಳಾಗಬಾರದೇಕೆ ಅದಕ್ಕೆ ರೆಪ್ಪೆ ?
ಸೂರ‍್ಯ ಚಂದ್ರರು ಕಾಣುವುದು
ಕಣ್ಣಿರುವುದರಿಂದ ತಾನೇ ನಮಗೆ ?
ಕವಿತೆ ಕವಿತೆಯಾಗುವುದು
ಶಬ್ದ ಅಲಂಕಾರಗಳನ್ನು ಪ್ರೀತಿಸಿ !
ನಿಶ್ಯಬ್ದವು ಶಬ್ದವಾಗುವುದು
ತನ್ನೊಳಗಿನ ಅರ್ಥವನ್ನು ಭೇದಿಸಿ !

ನೀನು ಎನ್ನುವುದು ನಾನಾಗುವುದು
ನಾನಿರುವುದರಿಂದ ನಿನಗೆ !
ನಾನು ಎನ್ನುವುದು ನೀನಾಗುವುದು
ನಕ್ಷತ್ರ ಇದ್ದಂತೆ ನಭಕೆ !
ಇಲ್ಲ ಎನ್ನುವುದು ಇಲ್ಲವಾಗುವುದು
ಇದೆ ಎನ್ನುವುದರಿಂದ !
ಇದೆ ಎನ್ನುವುದು ಅಸ್ತಿತ್ವ ಪಡೆಯವುದು
ಇಲ್ಲ ಶಬ್ದದಿಂದ !

ಹೂವು ಅರಳುವುದು ಗಿಡದಿಂದ ಅಲ್ಲ
ಗಿಡವೆ ಹೂವಾಗಿ ಅರಳಿ !
ಸಾವು ಎನ್ನುವುದು ಜೀವದಲ್ಲೇ ಇದ್ದು
ತಾನೆ ಸಾಯುವುದು ನಮಗಾಗಿ !
ಇದ್ದರೂ ಚಿಂತೆ ಎನ್ನುವುದು ಸುಳ್ಳೆ ?
ಸತ್ಯ ಇದ್ದೂ ಇಲ್ಲದಾಗಿ ?
ಎಲ್ಲವೂ ಸಹಜ, ಅಸಹಜವೂ ಹೌದು
ಬದುಕು ಇರಲು ಬದುಕಾಗಿ !






0 Comments