ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ ಹೊಸ ಕವಿತೆ- ಎಲ್ಲ ಸೋತಿರುವಾಗ…

ನಾ ದಿವಾಕರ

ಬಯಲೆಂದು ಭಾವಿಸಿದೆ,
ಮರುಭೂಮಿ, !!! ಹಸಿರೊಣಗಿ ಜಲಬತ್ತಿ ನೆಲಶುಷ್ಕವಾಗಿರುವ ಹೊತ್ತಿನಲೊಂದು
ಎಳೆ ಚಿಗುರು ಇಣುಕಿದರೆ ಸಾಕು
ಭಗೀರಥನಾಗಿಬಿಡುವೆ ಮೊಳಕೆಗೆ
ಹನಿ ಹನಿ ತನಿ ಎರೆಯಲು ;

ಇದ್ದವಲ್ಲವೇ ವಟಗುಟ್ಟುವ ಜೀವಗಳು
ಕೂತಲ್ಲಿ ನಿಂತಲ್ಲಿ ಹೊತ್ತಲ್ಲದ
ಹೊತ್ತಿನಲಿ, ಏಕೆ ಏನು ಎತ್ತ ಹೇಗೆ
ಬಿಟ್ಟ ಬಾಣಗಳು ಕಿತ್ತೊಗೆಯುತಿದ್ದವಲ್ಲವೇ
ಫಸಲಿನೊಡಲಿನ ಕಳೆಯ
ಧ್ವನಿಸುವ ಮಾತ ಹಂದರದಡಿ
ಹುಲುಸಾಗಿ ಬೆಳೆದ ಹುಲ್ಲುಗಾವಲುಗಳೆತ್ತ
ಮಾಯವಾದವೋ !!!!

ಇವನಾರವನಿವನಾರವ ಎಂಬುವರಂಬುಧಿಯಲಿ
ಜಲಜೀವಚರಗಳ ನಿನಾದ
ಝುಳುಝುಳು ಸದ್ದನಡಗಿಸಿ ಮಾನವತೆಯ
ಶಿಖರದಿಂ ಭೋರ್ಗರೆಯುತಿದ್ದ ನೆನಪು ;
ಹನಿಹನಿ ತೊಟ್ಟಿಕ್ಕುತಿದೆ ಕಿರುಬಂಡೆಗಳ
ಕೊರಕಲುಗಳಿಂದ, ಕ್ಷೀಣಿಸಿದ ಧ್ವನಿ
ಕೊರಳಿಲ್ಲದ ಹಕ್ಕಿಗಳ ಚಿಲಿಪಿಲಿಯಂತೆ
ಮುಗಿಲತ್ತ ನೋಡುತಿವೆ ಹೊಸಮಳೆಯ
ನಿರೀಕ್ಷೆಯಲಿ ;

ಬಿತ್ತವರೆಲ್ಲಡಗಿಹರು ಚಿತ್ತಗಳನಪಹರಿಸಿ ?
ಕಳೆಕಳೆಯ ನಡುವೆ ಪಾಷಾಣದ ಫಸಲು
ಸಡಿಲ ಬೇರುಗಳಲಿ ಗೆದ್ದಲುಗಳ ಮೆರವಣಿಗೆ
ನೆಲದ ನರನಾಡಿಯಲಿ ಪ್ರವಹಿಸಿದೆ
ಜಡ ಚೇತನದ ಪಳೆಯುಳಿಕೆಗಳು ;
ದೂರದ ಹೊಂಗಿರಣದಲಿ ಆಶಯದ ಕಿಡಿ
ಬುದ್ಧನೋ ಬಸವನೋ ದೂರತೀರದ
ಮಾರ್ಕ್ಸನೋ, ಬಡಿದೆಬ್ಬಿಸವವರಾರು
ಸತ್ತಂತಿಹರನು, ಹೆಜ್ಜೆಗೂಡಿಸ ಬನ್ನಿ
ಹೆಗಲಜೋಡಿಸಲೆನ್ನಿ ಕವಾಟಗಳಿಂದ
ಹೊರತನ್ನಿ ಅಂಬೇಡ್ಕರಾದಿಗಳನು
ಅಲ್ಲೊಂದು ಪ್ರಣತಿ ಇದೆ,
ಅನಿಕೇತನವಾಗಿ !

‍ಲೇಖಕರು Admin

2 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading