ನಾ ದಿವಾಕರ ನೋಡಿದ ‘ಗೊರೂರು’

ರಂಗದ ಮೇಲೆ ಗೊರೂರು – ಅಪರೂಪದ ಪ್ರಯೋಗ

ನವೋದಯ ಕತೆಗಳನ್ನು ರಂಗಭೂಮಿಗೆ ಅಳವಡಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದ ನಿರಂತರ ತಂಡ

ಇದೇ ಶನಿವಾರ 9 ಸೆಪ್ಟಂಬರ್‌ 2023 ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ಪ್ರದರ್ಶನವಾಗುತ್ತಿದೆ.

ನಾ ದಿವಾಕರ

ಸಾಹಿತ್ಯಕ ದೃಷ್ಟಿಯಿಂದ ನೋಡಿದಾಗ ರಂಗಭೂಮಿ ಒಂದು ಸೃಜನಶೀಲ ಪ್ರಯೋಗಶಾಲೆ. ಸಾಂಸ್ಕೃತಿಕ ನೆಲೆಯಲ್ಲಿ ಅದು ಸಮಕಾಲೀನ ಪ್ರಾತ್ಯಕ್ಷಿಕೆಯೂ ಆಗುತ್ತದೆ. ಸಾಮಾಜಿಕ ಮುನ್ನೋಟದೊಂದಿಗೆ ನೋಡಿದಾಗ ರಂಗಭೂಮಿ ಸಮಾಜದಲ್ಲಿ ಸಂವೇದನೆ ಮತ್ತು ಸೂಕ್ಷ್ಮತೆಗಳನ್ನು ಹೆಚ್ಚಿಸುವ ಒಂದು ಸೃಜನಾತ್ಮಕ ಸೇತುವೆಯಾಗಿ ಕಾಣುತ್ತದೆ. ರಂಗಭೂಮಿಯ ಪ್ರಯೋಗಗಳಲ್ಲಿ ನಾಟಕಕಾರ ಮತ್ತು ನಿರ್ದೇಶಕರಾದವರು ತಮ್ಮ ಹೆಗಲ ಮೇಲೆ ಇರುವ ನೊಗವನ್ನು ಗಮನಿಸುತ್ತಲೇ ಇರಬೇಕಾಗುತ್ತದೆ. ಏಕೆಂದರೆ ಈ ನೊಗ ಕೇವಲ ಹೊರೆ ಅಥವಾ ಜವಾಬ್ದಾರಿಯಾಗಿ ಇರುವುದಿಲ್ಲ. ಸಮಾಜವನ್ನು ಬೌದ್ಧಿಕವಾಗಿ ಸಾಂಸ್ಕೃತಿಕವಾಗಿ ಮುಂದೊಯ್ಯುವ ಒಂದು ಅಭಿವ್ಯಕ್ತಿ ಸೇತುವೆಯಾಗಿ ಈ ನೊಗವನ್ನು ಹೊರುವುದು ರಂಗಭೂಮಿಯ ಸದುದ್ದೇಶ ಹಾಗೂ ಆದ್ಯತೆಯಾಗಿರುವುದು ಸಹಜ.

ವಿಭಿನ್ನ ಕಾಲಘಟ್ಟಗಳಲ್ಲಿ ರಚಿತವಾಗಿರುವ ಸಾಹಿತ್ಯ ಕೃತಿಗಳನ್ನು ರಂಗಭೂಮಿಗೆ ಅಳವಡಿಸುವಾಗಲೂ ರಂಗ ನಿರ್ದೇಶಕರು ಹಾಗೂ ನಾಟಕಕಾರರು ಆ ಕೃತಿಯೊಳಗಿನ ಮನುಜ ಸೂಕ್ಷ್ಮತೆಯ ತಂತುಗಳನ್ನು ಸಮಕಾಲೀನ ಸ್ಥಿತ್ಯಂತರಗಳಿಗೆ ಪೂರಕವಾಗಿ ಬೆಸೆದು ಭವಿಷ್ಯದ ಸಮಾಜಕ್ಕೆ ಒಂದು ಸಕಾರಾತ್ಮಕ-ಸಕಾಲಿಕ ಸಂದೇಶವನ್ನು ನೀಡುವ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆಗಿಹೋದ ಚಾರಿತ್ರಿಕ ವ್ಯಕ್ತಿತ್ವಗಳನ್ನು ವಿಕೃತಗೊಳಿಸಿ ವರ್ತಮಾನದ ಸಾಮಾಜಿಕ ತಿಳುವಳಿಕೆಯನ್ನು ಕಲುಷಿತಗೊಳಿಸುವ ಹಲವು ಪ್ರಯತ್ನಗಳು ನಡೆಯುತ್ತಿರುವಾಗಲೇ ಕನ್ನಡ ರಂಗಭೂಮಿಯಲ್ಲಿ ಚರಿತ್ರೆಯಲ್ಲಿ ದಾಖಲಾಗಿರುವ ಕಥನಗಳನ್ನು, ಸಾಹಿತ್ಯ ಕೃತಿಗಳನ್ನು ವರ್ತಮಾನದ ಸಮಾಜದ ಬೌದ್ಧಿಕ ಉನ್ನತಿಗಾಗಿ ಅಳವಡಿಸಿಕೊಳ್ಳುವ ಪರಂಪರೆಯೂ ಗಟ್ಟಿಯಾಗುತ್ತಲೇ ಬಂದಿದೆ. ಕನ್ನಡ ರಂಗಭೂಮಿಯ ಈ ಭವ್ಯ ಪರಂಪರೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಸಾಂಸ್ಕೃತಿಕ ಮನಸುಗಳ ಮೇಲಿರುವಷ್ಟೇ ವಿಶಾಲ ಸಮಾಜದ ಮೇಲೂ ಇದೆ.

ಗೊರೂರರ ರಂಗಪ್ರವೇಶ

ಇಂತಹ ಒಂದು ಪ್ರಯತ್ನವನ್ನು ಮೈಸೂರಿನ ನಿರಂತರ ಫೌಂಡೇಷನ್‌, ನಿರಂತರ ರಂಗತಂಡದ ಮೂಲಕ ಮಾಡುತ್ತಲೇ ಬಂದಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇಂದಿಗೂ ತನ್ನ ವೈಶಿಷ್ಟ್ಯ ಹಾಗೂ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿರುವ ನವೋದಯ ಕಾಲದ ಕಥಾ ಸಾಹಿತ್ಯವನ್ನು 21ನೆಯ ಶತಮಾನದ ಯುವಪೀಳಿಗೆಗೆ ಪರಿಚಯಿಸುವುದು ಅತ್ಯವಶ್ಯವಾಗಿರುವ ಹೊತ್ತಿನಲ್ಲೇ ನಿರಂತರ ತಂಡ ಗೊರೂರು ರಾಮಸ್ವಾಮಿ ಐಯ್ಯಂಗಾರರ “ ನಮ್ಮ ಊರಿನ ರಸಿಕರು ” ಹಾಗೂ ಇತರ ಕತೆಗಳನ್ನು ಆಧರಿಸಿ ರಂಗಭೂಮಿಯ ಮೇಲೆ ಗೊರೂರರನ್ನು ತಂದಿರುವುದು ಪ್ರಶಂಸನಾರ್ಹ . ನವೋದಯ ಕಾಲದ ಕಥಾಸಾಹಿತ್ಯದಲ್ಲಿ ತಮ್ಮ ಮನುಜ ಸೂಕ್ಷ್ಮ ಸಂವೇದನೆಗಳನ್ನು ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಅಭಿವ್ಯಕ್ತಪಡಿಸಿದ ಮಾಸ್ತಿ, ಗೊರೂರು, ಶ್ರೀರಂಗ, ಕಾರಂತ ಮುಂತಾದವರ ಕತೆಗಳನ್ನು ರಂಗಭೂಮಿಗೆ ಅಳವಡಿಸುವ ಮೂಲಕವೇ ವರ್ತಮಾನದ ಸಮಾಜ ಕಳೆದುಕೊಳ್ಳುತ್ತಿರುವ ಸಂವೇದನಾಶೀಲತೆಯನ್ನು ಮರಳಿ ಪಡೆಯಲು ಸಾಧ್ಯವಾಗಬಹುದು.

ವಸಾಹತು ಕಾಲದ ಭಾರತದಲ್ಲಿ ಸಮಾಜ ಸುಧಾರಣೆಯ ಕೂಗು ಒಂದೆಡೆ ಹೆಚ್ಚಾಗುತ್ತಿದ್ದಂತೆಯೇ ಮತ್ತೊಂದು ಬದಿಯಲ್ಲಿ ಪ್ರಾಚೀನ ಸಾಮಾಜಿಕ ಮೌಲ್ಯಗಳನ್ನು ಸಂರಕ್ಷಿಸುವ ಪ್ರಯತ್ನಗಳೂ ನಡೆದಿದ್ದವು. ಭಾರತೀಯ ಸಮಾಜವನ್ನು ಸತತವಾಗಿ ಕಾಡುತ್ತಿದ್ದ ಅಸ್ಪೃಶ್ಯತೆ, ಜಾತೀಯತೆ, ಮತಭೇದ, ಜಾತಿ ಶ್ರೇಷ್ಠತೆ ಇವುಗಳನ್ನ ವಿರೋಧಿಸುವ ತಾತ್ವಿಕ ನೆಲೆಗಳು ವಿಸ್ತರಿಸುತ್ತಿದ್ದಂತೆಯೇ, ಇದೇ ಸಾಮಾಜಿಕ ಚೌಕಟ್ಟಿನೊಳಗೇ ಇದ್ದುಕೊಂಡು, ತಮ್ಮ ಅಸ್ಮಿತೆ-ಅಸ್ತಿತ್ವವನ್ನು ಉಳಿಸಿಕೊಂಡು ಪ್ರತಿರೋಧದ ಧ್ವನಿಯನ್ನು ದಾಖಲಿಸಿದ ಪರಂಪರೆಯನ್ನು ನವೋದಯದ ಕಥಾ ಸಾಹಿತ್ಯದಲ್ಲೂ ಗುರುತಿಸಬಹುದು. ಗೊರೂರು ರಾಮಸ್ವಾಮಿ ಐಯ್ಯಂಗಾರರ ಹೇಮಾವತಿ ಮತ್ತಿತರ ಕತೆಗಳಲ್ಲಿ ಈ ಧ್ವನಿಯನ್ನು ಸ್ಪಷ್ಟವಾಗಿ ಗುರುತಿಸಬಹುದು.

ಮಂಜುನಾಥ್‌ ಬಡಿಗೇರ್‌ ನಿರ್ದೇಶನದಲ್ಲಿ ನಿರಂತರ ತಂಡವು ಗೊರೂರರ ಕತೆಗಳನ್ನು ಆಧರಿಸಿ ಹೆಣೆದಿರುವ “ಗೊರೂರು” ರಂಗರೂಪ ಈ ಧ್ವನಿಯನ್ನು ಹಾಸ್ಯಮಿಶ್ರಿತ ಧಾಟಿಯಲ್ಲಿ, ತಾತ್ವಿಕ ಗಾಂಭೀರ್ಯವನು ಉಳಿಸಿಕೊಂಡೇ, ಸ್ವಾತಂತ್ರ್ಯಪೂರ್ವ ಭಾರತದಲ್ಲಿದ್ದ ಇಂದಿಗೂ ಜೀವಂತಿಕೆಯಿಂದಿರುವ ಸಾಮಾಜಿಕ ಅನಿಷ್ಟಗಳ ವಿರುದ್ಧ ಒಂದು ಸೂಕ್ಷ್ಮ ಸಂವೇದನೆಯ ಸಂದೇಶವನ್ನು ಪ್ರತಿಧ್ವನಿಸುತ್ತದೆ. ಒಂದು ಕಾಲಘಟ್ಟದ ಸಾಮಾಜಿಕ-ಸಾಂಸ್ಕೃತಿಕ ಚಿಂತನಾಕ್ರಮಗಳು ತನ್ನ ಪ್ರಾಚೀನ ಬೇರುಗಳಲ್ಲೇ ಹುದುಗಿಹೋಗದೆ, ಶತಮಾನಗಳ ನಂತರ ಪ್ರಸ್ತುತವಾಗಬಹುದಾದ ಆಧುನಿಕ ಚಿಂತನೆಗಳವರೆಗೂ ವಿಸ್ತರಿಸುವ ಒಂದು ಎಳೆಯನ್ನು ಗೊರೂರರ ಕತೆಗಳಲ್ಲಿ ಸಾಮಾನ್ಯವಾಗಿ ಕಾಣಬಹುದು. ಗೊರೂರು ನಾಟಕ ಪ್ರಯೋಗದಲ್ಲೂ ಈ ಎಳೆಯನ್ನೇ ಮತ್ತಷ್ಟು ಹಿಗ್ಗಿಸುವ ಮೂಲಕ ಸಮಕಾಲೀನ ಸಂದರ್ಭಕ್ಕೆ ಅತ್ಯವಶ್ಯ ಎನಿಸುವ ಸಂದೇಶವನ್ನು ನೀಡುವುದರಲ್ಲಿ ಬಡಿಗೇರ್‌ ನಿರ್ದೇಶನದ “ಗೊರೂರು” ಯಶಸ್ವಿಯಾಗುತ್ತದೆ. ನವೋದಯ ಕಥಾ ಸಾಹಿತ್ಯವನ್ನು ರಂಗಭೂಮಿಗೆ ಪರಿಚಯಿಸಬೇಕಾದ ಅನಿವಾರ್ಯತೆಯನ್ನೂ ಈ ನಾಟಕ ಒತ್ತಿ ಹೇಳುತ್ತದೆ.

ಕಥಾ ಹಂದರದ ವಿಸ್ತರಣೆ

ಶವ ಸಂಸ್ಕಾರ ಎನ್ನುವ ಒಂದು ಸಾಮಾಜಿಕ ಪ್ರಕ್ರಿಯೆ ಭಾರತದ ಜಾತಿ ವ್ಯವಸ್ಥೆಯ ಸೋಂಕಿನಿಂದ ತನ್ನದೇ ಆದ ಅಸ್ಮಿತೆಯ ಸಂಕೋಲೆಗಳಲ್ಲಿ ಸಿಲುಕಿ, ಸತ್ಯ ವ್ಯಕ್ತಿಯೂ ಅನಾಥ ಭಾವವನ್ನು ಎದುರಿಸುವ ಒಂದು ವಿಷಮ ಸನ್ನಿವೇಶ ಇಂದಿಗೂ ನಮಗೆ ಎದುರಾಗುತ್ತಲೇ ಇದೆ. ಅತ್ಯಾಚಾರ, ದೌರ್ಜನ್ಯ, ಚಿತ್ರಹಿಂಸೆಗೆ ಅಡ್ಡಿಯಾಗದ ಜಾತಿ ಶ್ರೇಷ್ಠತೆಯ ಸ್ಪೃಶ್ಯಾಸ್ಪೃಶ್ಯತೆಯ ಸೋಂಕು ಒಂದು ಶವದ ಸುತ್ತ ಆವರಿಸಿಕೊಳ್ಳುವ ವರ್ತಮಾನದ ಸಾಮಾಜಿಕ ಸನ್ನಿವೇಶಗಳ ನಡುವೆ ಈ ನಾಟಕದ ಆರಂಭದ ದೃಶ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಲಕ್ಷ್ಮೀಪತಿಭಟ್ಟರ ಅಸಹಜ ಸಾವು ಅಂತ್ಯಸಂಸ್ಕಾರಕ್ಕೆ ಸಂಪ್ರದಾಯಸ್ಥರ ನಿರಾಕರಣೆ,  ರಾಮಸ್ವಾಮಿ ಮತ್ತು ಗೆಳೆಯರಿಂದ ಸಂಪ್ರದಾಯವನ್ನು ಧಿಕ್ಕರಿಸಿ ನಡೆಸುವ ಶವಸಂಸ್ಕಾರ ತದನಂತರ ಭಟ್ಟರ ಪತ್ನಿ-ಪುತ್ರಿಯ ಆತ್ಮಹತ್ಯೆ ಈ ಇಡೀ ಪ್ರಸಂಗ ಜಾತಿ ವ್ಯವಸ್ಥೆ ಸೃಷ್ಟಿಸಬಹುದಾದ ಕ್ರೌರ್ಯಕ್ಕೆ ಕನ್ನಡಿ ಹಿಡಿದಂತೆ ಕಾಣುತ್ತದೆ.

ಗೊರೂರರ ಕಥಾ ಪ್ರಸಂಗಗಳನ್ನು ರಂಗರೂಪಕ್ಕೆ ಅಳವಡಿಸಿಕೊಳ್ಳುವಾಗ ನಿರ್ದೇಶಕರು ತಮ್ಮದೇ ಆದ ಸೃಜನಶೀಲತೆಯನ್ನೂ ಪ್ರದರ್ಶಿಸಿದ್ದು, ಹಾಸ್ಯದ ನಡುವೆಯೇ ನೋವು ಮತ್ತು ದುಃಖವನ್ನೂ ಅಭಿವ್ಯಕ್ತಗೊಳಿಸುವ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.  ಹಾಸ್ಯ ಸನ್ನಿವೇಶಗಳು  ಕೆಲವೆಡೆ ಅತಿರೇಕ ಎನಿಸಿದರೂ ಒಟ್ಟಾರೆ ನಾಟಕಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸಿರುವುದನ್ನೂ ಗುರುತಿಸಬಹುದು. ಹೆಂಗಸರ ಹರಟೆಕಟ್ಟೆ, ಬ್ರಾಹ್ಮಣರ ಮನೆಯ ಎಮ್ಮೆ ಸಾಯುವ ಪ್ರಸಂಗ ಮತ್ತು ಎಮ್ಮೆಯ ಶವಸಂಸ್ಕಾರ ಮುಂತಾದ ದೃಶ್ಯಗಳು ಗೊರೂರರ ಮೂಲ ಕೃತಿಗೆ ಚ್ಯುತಿ ಬಾರದಂತೆ ಅಳವಡಿಸಿರುವುದು ನಿರ್ದೇಶಕರ ರಂಗ ಸೂಕ್ಷ್ಮತೆಯನ್ನೂ ತೋರಿಸುವಂತಿದೆ. ಸ್ವತಃ ತಾನೇ ತನ್ನ ಬೀದಿಯ ಕಸ ಗುಡಿಸುವ, ಸತ್ತ ಎಮ್ಮೆಯನ್ನು ಹೊರುವ ಶೀನಪ್ಪ ಸಾಂಪ್ರದಾಯಿಕ ಕರ್ಮಠತೆಯನ್ನು ಧಿಕ್ಕರಿಸುವ ಒಬ್ಬ ವ್ಯಕ್ತಿಯಾಗಿ ನಾಟಕದುದ್ದಕ್ಕೂ ಕಾಣಿಸಿಕೊಳ್ಳುತ್ತಾನೆ. ಅವನಿಗೆ ಒತ್ತಾಸೆಯಾಗಿ ನಿಲ್ಲುವ ರಾಮಸ್ವಾಮಿ ಜಾತಿ ಚೌಕಟ್ಟುಗಳನ್ನು ಮೀರಿ ಮಾನವೀಯತೆಯತ್ತ ಸಾಗಬೇಕಾದ ಅಭಿವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.

ನಾಟಕದ ನಡುವೆ ದೆವ್ವಗಳ ಒಂದು ದೃಶ್ಯ ನುಸುಳಿ ಬರುತ್ತದೆ. ಜಡೆಮುನಿ, ಬೇತಾಳ, ಉರಿಸಿಂಗ, ಮುನ್ನುಗ ಮತ್ತು ಅಗಸರ ನರಸಿ ಈ ಐದು ದೆವ್ವಗಳ ಮೂಲಕ ನಿರೂಪಕ ರಾಮಸ್ವಾಮಿ ತಮ್ಮ ಗ್ರಾಮದ ಸಮಾಜದ ಅಂತರಂಗದಲ್ಲೇ ಸಾಂಪ್ರದಾಯಿಕವಾಗಿ ಬೇರೂರಿರಬಹುದಾದ ಮನುಷ್ಯನ ವಿವಿಧ ಗುಣಾವಗುಣಗಳನ್ನು ಸೂಚಿಸುತ್ತಾರೆ. ಹೆಣ್ಣುಮಕ್ಕಳಿಗೆ ಚೇಷ್ಠೆ ಮಾಡುವ, ಭಯ ಹುಟ್ಟಿಸುವ, ತೊಂದರೆ ಕೊಡುವ ದೆವ್ವಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಈ ದೃಶ್ಯದ ಕೊನೆಯಲ್ಲಿ ನಿರೂಪಕ ರಾಮಸ್ವಾಮಿ “ ನಮ್ಮೂರಿನ ಜನರು ದೆವ್ವಗಳೊಂದಿಗೂ ಸಹಬಾಳ್ವೆ ನಡೆಸುತ್ತಾರೆ, ಆದರೆ ದೇವರ ದಯೆಯಿಂದ ಈವರೆಗೂ ನಮ್ಮೂರಲ್ಲಿ ಜಾತಿ ಧರ್ಮಗಳ ದೆವ್ವಗಳು ಹುಟ್ಟಲಿಲ್ಲ ” ಎಂದು ಹೇಳುವುದು ಗೊರೂರರ ವ್ಯಕ್ತಿಗತ ಬದುಕಿನ ಸಾತ್ವಿಕ ಅಭಿವ್ಯಕ್ತಿ ಹಾಗೂ ಸಮನ್ವಯ-ಸಹಬಾಳ್ವೆಯ ತಾತ್ವಿಕ ನಿಲುವುಗಳನ್ನು ಎತ್ತಿತೋರಿಸುತ್ತದೆ. ಈ ದೃಶ್ಯವನ್ನು ಆರಂಭದಲ್ಲೇ ಅಳವಡಿಸಿ, ಕಥಾ ಹಂದರವನ್ನು ಫ್ಲ್ಯಾಷ್‌ಬ್ಯಾಕ್‌ನಲ್ಲಿ ಬಿಚ್ಚಿಕೊಳ್ಳುವಂತೆ ತೋರಿಸಿದ್ದರೆ ಬಹುಶಃ ವಿಭಿನ್ನವಾಗಿರಬಹುದಿತ್ತು.

ದನ ಮೇಯಿಸುವ ತೂರ ಪ್ಲೇಗ್‌ ಕಾಯಿಲೆಯಿಂದ ಅಸ್ವಸ್ಥನಾಗಿ ಮಲಗಿದಾಗ, ಊರಿನಲ್ಲಿ ಉಂಟಾಗುವ ಪ್ರಕ್ಷುಬ್ಧತೆ, ಗೊಂದಲ ಕಾಯಕ ಜೀವಿಗಳ ಅಸ್ತಿತ್ವ, ಪ್ರಸ್ತುತತೆ ಮತ್ತು ಭೌತಿಕ ಮೌಲ್ಯವನ್ನೂ ತೋರುತ್ತದೆ. ಗೋವುಗಳನ್ನು ಸಾಕುತ್ತಿದ್ದರೂ ಎಂದಿಗೂ ಮೇಯಿಸಲು ಒಯ್ಯದ ಸಂಪ್ರದಾಯಸ್ಥ ಬ್ರಾಹ್ಮಣರಿಗೆ ತೂರನ ಅನಾರೋಗ್ಯ ತಂದೊಡ್ಡುವ ಸಂದಿಗ್ಧ ಪರಿಸ್ಥಿತಿಯ ಚಿತ್ರಣ ಸಮಕಾಲೀನ ಸಮಾಜದಲ್ಲಿ ಎದುರಾಗಬಹುದಾದ ಜಟಿಲ ಸಾಮಾಜಿಕ ಸಿಕ್ಕುಗಳನ್ನೂ ತೆರೆದಿಡುವಂತಿದೆ. ತೂರ ಅನಾರೋಗ್ಯದ ನಡುವೆಯೂ ಮತ್ತೆ ತನ್ನ ದನ ಮೇಯಿಸುವ ಕಾಯಕದಲ್ಲಿ ತೊಡಗಿದಾಗ ಊರಿನಲ್ಲಿ ಕಂಡುಬರುವ ಮೇಲ್ಜಾತಿಯವರ ನಿಟ್ಟುಸಿರು ಈ ಸಿಕ್ಕುಗಳಿಗೆ ಉತ್ತರವನ್ನೂ ನೀಡುವಂತಿದೆ. ನಿನ್ನ ಹೆಸರೇನು ಎಂದು ಕೇಳಿದಾಗ ತೂರ “ ಗೊತ್ತಿಲ್ಲ ಬುದ್ಧಿ ,,, ಕೇಳ್ಕಂಡ್‌ ಬಂದ್‌ ಹೇಳ್ತೀನಿ ” ಎಂದು ಹೇಳುವುದು, ಶ್ರಮಿಕರಿಗೆ ಶ್ರಮಶಕ್ತಿಯೊಂದೇ ಅಸ್ಮಿತೆಯಾಗಿ ತನ್ನ ಇತರ ಪೊರೆಗಳನ್ನೂ ಕಳಚಿಕೊಳ್ಳುವ ಒಂದು ಸೂಕ್ಷ್ಮತೆಯನ್ನು ಸೂಚಿಸುತ್ತದೆ.

ನಾಟಕದ ಕೊನೆಯಲ್ಲಿ ಬರುವ ಬಯಲಾಟದ ಪ್ರಸಂಗ ಭಾರತದ ಬಹುತ್ವ ಸಂಸ್ಕೃತಿ ಹಾಗೂ ಜಾತ್ಯತೀತತೆಯನ್ನು ಸಾಂಸ್ಕೃತಿಕವಾಗಿ ಹೇಗೆ ಕಟ್ಟಿಕೊಡಬಹುದು ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ. ಬಯಲಾಟ ಪ್ರಸಂಗದಲ್ಲಿ ತಮ್ಮ ವ್ಯಕ್ತಿಗತ ಬದುಕಿನ ಜಾತಿ/ಮತ ಅಸ್ಮಿತೆಗಳನ್ನು ದಾಟಿ ಪಾತ್ರಧಾರಿಗಳಾಗಿ ರಾಮಾಯಣದ ಸುಂದರ ಕಾಂಡವನ್ನು ಪ್ರಸ್ತುತಪಡಿಸುವುದು ಇವತ್ತಿನ ಸಮಾಜಕ್ಕೂ ಸಹ ಒಂದು ಸಕಾರಾತ್ಮಕ ಸಂದೇಶವನ್ನು ಸಾರುತ್ತದೆ. ಇದು ಗೊರೂರರ ವೈಯುಕ್ತಿಕ ನಂಬಿಕೆಯೂ ಆಗಿತ್ತು ಎನ್ನುವುದು ಗಮನಾರ್ಹ ಸಂಗತಿ. ಬಯಲಾಟ ಪ್ರಸಂಗವು ಹಾಸ್ಯಮಯವಾಗಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದಾದರೂ, ಈ ದೃಶ್ಯದ ಮುನ್ನ ಬರುವ ತೂರನ ಮರುಹುಟ್ಟು ಸೃಷ್ಟಿಸುವ ಗಂಭೀರತೆಯನ್ನು ಕೊಂಚಮಟ್ಟಿಗೆ ಮಸುಕಾಗಿಸುವ ಸಾಧ್ಯತೆಗಳು ತೋರುತ್ತವೆ. ಹಾಸ್ಯಮಿಶ್ರಿತವೇ ಆದರೂ ಮೂಲತಃ ನಮ್ಮ ಸಮಾಜವನ್ನು ಇಂದಿಗೂ ಕಾಡುತ್ತಿರುವ ಜಾತಿ ದ್ವೇಷ, ಮತಭೇದ ಮತ್ತು ಸಾಮಾಜಿಕ ಅಸ್ಮಿತೆಗಳ ತೊಡಕುಗಳನ್ನು ಎದುರಿಸಿ ನಿಲ್ಲುವ, ನಿವಾರಿಸುವ ಒಂದು ಸ್ಥಾಯಿ ಭಾವ ಇಡೀ “ ಗೊರೂರು ” ನಾಟಕದಲ್ಲಿ ಕಾಣುವುದರಿಂದ, ತೂರನ ಮರುಪ್ರವೇಶದ ಮೂಲಕವೇ ಅಂಕದ ಪರದೆಯನ್ನು ಇಳಿಸುವ ಯೋಚನೆಯನ್ನೂ ನಿರ್ದೇಶಕರು ಮಾಡಬಹುದು ಎನಿಸುತ್ತದೆ.

ಸ್ಥಾಯಿಭಾವದ ʼನಿರಂತರʼತೆ

ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಗೊರೂರು ಮತ್ತವರ ಸಾಹಿತ್ಯಕ ಪ್ರಯತ್ನಗಳು ರಂಗಪ್ರಯೋಗಕ್ಕೊಳಗಾಗಿರುವುದು ಸ್ವಾಗತಾರ್ಹವಾದ ಹೆಜ್ಜೆ. ಸಂಪ್ರದಾಯಸ್ಥ ಸಮಾಜದಲ್ಲೇ ಹುಟ್ಟಿ ಬೆಳೆದು ತಮ್ಮ ಬದುಕು ರೂಪಿಸಿಕೊಂಡ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ತಮ್ಮ ಕಾಲಘಟ್ಟದ ಸ್ಥಾಪಿತ ನಂಬಿಕೆಗಳನ್ನೂ ಮೀರಿ ನಿಲ್ಲುವುದನ್ನು ಅವರ ಇತರ ಹೇಮಾವತಿ, ಭೂತಯ್ಯನಮಗ ಅಯ್ಯು ಮುಂತಾದ ಕತೆಗಳಲ್ಲೂ ಗುರುತಿಸಬಹುದು. ವ್ಯಕ್ತಿಗತ ಬದುಕಿನಲ್ಲಿ ಗೊರೂರರು ಸಾಂಪ್ರದಾಯಿಕ ಆಚರಣೆಗಳನ್ನು ಧಿಕ್ಕರಿಸಿದ್ದರೋ ಎಲ್ಲವೋ ಎನ್ನುವುದಕ್ಕಿಂತಲೂ, ಒಂದು ಆರೋಗ್ಯಕರ ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಸಾಮಾಜಿಕ ಅನಿಷ್ಠಗಳನ್ನು ತೊಡೆದುಹಾಕುವ ಮನಸ್ಥಿತಿಯನ್ನು ಹೊಂದಿದ್ದರು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ವಸಾಹತು ಕಾಲದ ಸಾಮಾಜಿಕ ಪರಿಸರದಲ್ಲೂ ಇಂತಹ ಉದಾತ್ತ ಚಿಂತನೆಯ ಬೀಜಗಳನ್ನು ಬಿತ್ತಿದ ಗೊರೂರು ಮುಂತಾದ ನವೋದಯದ ಕತೆಗಾರರನ್ನು ಭವಿಷ್ಯದ ತಲೆಮಾರಿಗೆ ಪರಿಚಯಿಸುವ ಜವಾಬ್ದಾರಿಯನ್ನು ನಿರಂತರ ತಂಡ “ ಗೊರೂರು ” ರಂಗ ಪ್ರಯೋಗದ ಮೂಲಕ ನಿಭಾಯಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.

“ ಗೊರೂರು ” ನಾಟಕದ ಎಲ್ಲ ಪಾತ್ರಧಾರಿಗಳ ಮನಮುಟ್ಟುವ ಸಂವಹನ, ಆಂಗಿಕ ಅಭಿನಯ ಮತ್ತು ಭಾವಾಭಿವ್ಯಕ್ತಿ ಪ್ರೇಕ್ಷಕರ ಮನ ಗೆಲ್ಲುತ್ತದೆ. ಉತ್ತಮ ನಿರ್ದೇಶನ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ ಮತ್ತು ಹಿಂಬದಿಯ ಗ್ರಾಮೀಣ ಬದುಕಿನ ಚಿತ್ರಣ ಇಡೀ ಕಥಾಹಂದರಕ್ಕೆ ಪೂರಕವಾಗಿದ್ದು, ಎಲ್ಲ ನಟರ ಅಭಿನಯ ಮನಮುಟ್ಟುವಂತಿದೆ. ಹಾಸ್ಯಪ್ರಸಂಗಗಳನ್ನು ಒಂದಿಷ್ಟು ತಿಳಿಗೊಳಿಸಿ, ಬಯಲಾಟದ ಪ್ರಸಂಗವನ್ನು ಕೊಂಚ ಮಟ್ಟಿಗೆ ಪರಿಷ್ಕರಿಸಿ, ನಾಟಕವನ್ನು ದುಃಖಾಂತ್ಯವಲ್ಲದಿದ್ದರೂ, ಕತೆಯ ಸ್ಥಾಯಿಭಾವಕ್ಕೆ ಅನುಗುಣವಾಗಿ ಪ್ರೇಕ್ಷಕರ ಮನಸಿನಲ್ಲಿ ನಾಟುವಂತೆ ಗಂಭೀರತೆಯೊಂದಿಗೆ ಅಂತ್ಯಗೊಳಿಸುವುದರ ಬಗ್ಗೆ ನಿರ್ದೇಶಕರು ಆಲೋಚನೆ ಮಾಡಬಹುದು ಎನಿಸುತ್ತದೆ. ನಿರೂಪಕ ರಾಮಸ್ವಾಮಿಯನ್ನೂ ಸೇರಿದಂತೆ ಎಲ್ಲ ಪಾತ್ರಗಳು ಅಚ್ಚಳಿಯದೆ ಮನಸಿನಲ್ಲಿ ಉಳಿಯುವ ರೀತಿಯಲ್ಲಿ ಸರಾಗವಾಗಿ ಸಾಗುವ “ ಗೊರೂರು ” ಎರಡು ಕಾರಣಗಳಿಗಾಗಿ ಮೆಚ್ಚುಗೆ ಗಳಿಸುತ್ತದೆ. ಮೊದಲನೆಯದು ಗೊರೂರರ ಬರಹಗಳನ್ನು ರಂಗಪ್ರಯೋಗಕ್ಕೊಳಪಡಿಸಿ ಯಶಸ್ವಿಯಾಗಿರುವುದಕ್ಕಾಗಿ. ಎರಡನೆಯ ಕಾರಣ ಎಂದರೆ ಗೊರೂರರ ಕತೆಗಳನ್ನು ಕಟ್ಟಿಕೊಡುವುದರೊಂದಿಗೇ ಅವರ ವ್ಯಕ್ತಿತ್ವ ಮತ್ತು ಆಲೋಚನೆಗಳನ್ನೂ, ತಾತ್ವಿಕ ನಿಲುಮೆಗಳನ್ನೂ ವರ್ತಮಾನದ-ಭವಿಷ್ಯದ ಸಮಾಜಕ್ಕೆ ಪರಿಚಯಿಸಿರುವುದಕ್ಕಾಗಿ.

ಎಲ್ಲರೂ ನೋಡಲೇಬೇಕಾದ ಒಂದು ಉತ್ತಮ, ಅಪೂರ್ವ ರಂಗಪ್ರಯೋಗವನ್ನು ಯಶಸ್ವಿಯಾಗಿ ನಿರ್ವಹಿಸಿರುವ ನಿರಂತರ ಫೌಂಡೇಷನ್‌ ಮತ್ತು ನಿರ್ದೇಶಕ ಮಂಜುನಾಥ ಬಡಿಗೇರ್‌ ಹಾಗೂ ಇಡೀ ನಿರಂತರ ತಂಡ ಅಭಿನಂದನೆಗೆ ಅರ್ಹ.

‍ಲೇಖಕರು avadhi

September 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: