ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ ಕಾಲಂ : ಧಾರವಾಡ ಸ್ವ-ಹಿತ ಸಂಭ್ರಮದ ಸುತ್ತ

ಧಾರವಾಡದಲ್ಲಿ  ಜನವರಿ 25 ರಿಂದ 27ರವರೆಗೆ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕುರಿತಂತೆ ಲಡಾಯಿ ಬಸು ಎಚ್ಚರಿಕೆಯ ನೋಟಿಸ್ ನೀಡಿರುವುದು ಸ್ತುತ್ಯಾರ್ಹ.  ಸಾಹಿತ್ಯ ಲೋಕ ಪ್ರತಿರೋಧದ ದನಿಗಳನ್ನು ಲೆಕ್ಕಿಸುವುದೋ ಇಲ್ಲವೋ ಆದರೆ ಕಳೆದ ವರ್ಷ ಜೈಪುರದಲ್ಲಿ ನಡೆದ ಐಷಾರಾಮಿ ಸಮ್ಮೇಳನದ ಛಾಯೆಯಲ್ಲೇ ಧಾರವಾಡದಲ್ಲೂ ಏರ್ಪಡಿಸಲಾಗಿರುವ ಈ ಸಾಹಿತ್ಯ ಸಮ್ಮೇಳನದ ರೂಪು ರೇಷೆಗಳನ್ನು ವಿಮರ್ಶಿಸಿ , ಪರಾಮರ್ಶಿಸಿ ಖಂಡಿಸುವ ಹಕ್ಕು ಈ ರಾಜ್ಯದ ನಾಗರಿಕರಿಗಂತೂ ಇದ್ದೇ ಇದೆ. ಪ್ರತಿರೋಧದ ದನಿಗಳಿಗೆ ಮಣಿದು  ಸಮ್ಮೇಳನದ ಆಯೋಜಕರು ಶುಲ್ಕವನ್ನು ಕಡಿಮೆ ಮಾಡಬಹುದು ಅಥವಾ ರದ್ದುಪಡಿಸಲೂಬಹುದು. ಉಚಿತ ಪ್ರವೇಶ ನೀಡಲೂ ಸಾಧ್ಯ. ಆದರೆ ಗಿರಡ್ಡಿ ಗೋವಿಂದರಾಜ ಮತ್ತು ಅವರ ಸಂಗಡಿಗರು ಜೈಪುರ ಸಾಹಿತ್ಯ ಸಂಭ್ರಮದಿಂದ ಪ್ರೇರಿತರಾಗಿ , ಕರ್ನಾಟಕದ ಸಾಹಿತ್ಯದ ಕೇಂದ್ರ ಬಿಂದು ಎಂದೇ ಪರಿಗಣಿಸಲ್ಪಟ್ಟಿರುವ ಧಾರವಾಡದಲ್ಲಿ ಅಂತಹುದೇ ಶೈಲಿಯ ಸಾಹಿತ್ಯ ಸಂಭ್ರಮವನ್ನು ಆಯೋಜಿಸಿರುವುದು  ಕನ್ನಡ-ಸಾಹಿತ್ಯ-ಸಾಹಿತ್ಯಕ ವಿಮರ್ಶೆ-ಜನಪರ ಧೋರಣೆ ಮತ್ತು ಸಾಹಿತ್ಯ ಲೋಕದ ಸ್ವಹಿತಗಳ ಸ್ಥೂಲ ಪರಿಚಯ ನೀಡುವಂತಿದೆ. ಈ ಸಾಹಿತ್ಯ ಸಂಭ್ರಮದ ನಿಯಮಾವಳಿಗಳು ಏನೇ ಇದ್ದರೂ ಅದು ಎರಡು ಆಯಾಮಗಳನ್ನು ಸ್ಪಷ್ಟಪಡಿಸುತ್ತದೆ.
ಮೊದಲನೆಯದಾಗಿ ನವ ಉದಾರವಾದದ ಧೋರಣೆ ಈ ದೇಶದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಲೋಕವನ್ನು ಸ್ವಾಹ ಮಾಡಿರುವಂತೆಯೇ ಸಾಹಿತ್ಯ ಲೋಕವನ್ನೂ ತನ್ನ ಕಬಂಧ ಬಾಹುಗಳಲ್ಲಿ ಬಳಸಿ ನಿಂತಿದೆ.  ಕನ್ನಡದಲ್ಲಿ ಎಂತಹ ಸಾಹಿತ್ಯ ಮೂಡಿಬರುತ್ತಿದೆ ಎನ್ನುವುದಕ್ಕಿಂತಲೂ ಮೂಡಿಬರುತ್ತಿರುವ ಸಾಹಿತ್ಯವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ ಎಂಬ ಪ್ರಶ್ನೆ ಇಲ್ಲಿ ಪ್ರಧಾನವಾಗಿ ಕಾಣುತ್ತದೆ. ಆಳುವ ವರ್ಗಗಳು ಮತ್ತು ಪ್ರಭುತ್ವದ ಶಕ್ತಿಗಳು ಇತರ ಎಲ್ಲಾ ಕ್ಷೇತ್ರಗಳ ಪ್ರಾತಿನಿಧಿತ್ವವನ್ನು ಹೈಜಾಕ್ ಮಾಡಿದಂತೆಯೇ ಸಾಹಿತ್ಯ ಲೋಕವನ್ನೂ ಹೈಜಾಕ್ ಮಾಡಿರುವುದು ಸ್ಪಷ್ಟ.  ರಾಜ್ಯ ಸರ್ಕಾರದ ಕೃಪೆಯಿಂದಲೇ ನಡೆಯುವ ವಾರ್ಷಿಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಇದರ ಒಂದು ಛಾಯೆಯನ್ನು ಕಾಣಬಹುದು. ಸೂಕ್ಷ್ಮವಾಗಿ ಇಣುಕಿ ನೋಡಬೇಕಾದೀತಷ್ಟೆ.
ನವ ಉದಾರವಾದ ಪೋಷಿಸುವ ಕಾರ್ಪೋರೇಟ್ ಸಂಸ್ಕೃತಿಯ ನರನಾಡಿಗಳಲ್ಲಿ ಹರಿಯುವುದು ಹಣಕಾಸಿನ ಹೊಳೆಯೇ ಹೊರತು ಜನಪರ ಕಾಳಜಿಯಲ್ಲ. ತನ್ನ ಆರ್ಥಿಕ ಪ್ರಾಬಲ್ಯದಿಂದ ಮತ್ತು ರಾಜಕೀಯ ಅಸ್ತಿತ್ವದ ಬಲದಿಂದ ಸಾಂಸ್ಕೃತಿಕ ಸಂಕಥನಗಳನ್ನೇ ಖರೀದಿಸುವ ಈ ಸಂಸ್ಕೃತಿಯ ಮೂಲ ಉದ್ದೇಶ ಪ್ರಭುತ್ವದ ಸಂರಕ್ಷಣೆ ಮತ್ತು ಆಳುವ ವರ್ಗಗಳ ಸಮರ್ಥನೆ.  ಹಾಗಾಗಿ ಈ ಎರಡೂ ವರ್ಗಗಳನ್ನು ಪ್ರಶ್ನಿಸುವ ಯಾವುದೇ ಸಾಂಸ್ಕೃತಿಕ ಚಿಂತನೆಗಳನ್ನು ಮೂಲೆಗುಂಪು ಮಾಡುವ ಉದ್ದೇಶ ಜಾಗತೀಕರಣದ ಮೂಲ ಉದ್ದೇಶಗಳಲ್ಲಿ ಒಂದಾಗಿರುತ್ತದೆ. ಆದರೆ ಭಾರತದಂತಹ ಬಹುಮುಖೀ ಸಂಸ್ಕೃತಿಯ ದೇಶದಲ್ಲಿ ಜನಪರ ಚಿಂತನೆಯುಳ್ಳ ಯಾವುದೇ ಚಿಂತನೆಯನ್ನು, ಧೋರಣೆಯನ್ನು ಮತ್ತು ಕಲಾ-ಸಾಹಿತ್ಯ ಪ್ರಕಾರಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಪ್ರತಿರೋಧದ ದನಿಗಳು ಭೂ ಒಡಲಿನೊಳಗಿಂದ ಮೂಡಿ ಬರುತ್ತವೆ.  ಪ್ರಭುತ್ವ ತನ್ನೆಲ್ಲಾ ಅಸ್ತ್ರ ಶಸ್ತ್ರಗಳನ್ನು ಬಳಸಿದರೂ ಈ ದನಿಗಳನ್ನು ಮಟ್ಟ ಹಾಕುವುದು ಕಷ್ಟಸಾಧ್ಯ ಎಂದು ಆಳುವ ವರ್ಗಗಳಿಗೆ, ಪ್ರಭುತ್ವ ಕೃಪಾಪೋಷಿತ ಕಾರ್ಪೊರೇಟ್ ಶಕ್ತಿಗಳಿಗೆ ತಿಳಿದಿದೆ. ಹಾಗಾಗಿ ಧಾರವಾಡ ಸಂಭ್ರಮದಂತಹ ವಾಮ ಮಾರ್ಗಗಳು ಅನುಸರಿಸಲ್ಪಡುತ್ತವೆ.
ಈಗಾಗಲೇ ಪ್ರಭುತ್ವ ಅನೇಕ ಸಾಹಿತಿಗಳನ್ನು, ಕಲಾವಿದರನ್ನು ಪ್ರಶಸ್ತಿಗಳ ಮೂಲಕ, ಪದವಿ ಹುದ್ದೆಗಳ ಮೂಲಕ,  ಪ್ರಶಂಸೆಯ ಮೂಲಕ ಮತ್ತು ಉನ್ನತ ಸ್ಥಾನಮಾನಗಳ ಮೂಲಕ ತನ್ನ ಬಾಹುಗಳಲ್ಲಿ ಬಂಧಿಸಿರುವುದು ಕಣ್ಣೆದುರಿನ ಸತ್ಯ.  ಮೂರು ನಾಲ್ಕು ದಶಕಗಳ ಹಿಂದೆ ಕೇಳಿಬರುತ್ತಿದ್ದ ಸಿಂಹ ಗರ್ಜನೆಗಳು ಇಂದು ಮಿಯಾಂವ್ ಮಿಯಾಂವ್ ಎನ್ನುತ್ತಿರುವುದೂ ವಾಸ್ತವ. ಇಲ್ಲಿ ಪ್ರಭುತ್ವದ ಅಸ್ತಿತ್ವದ ಪ್ರಶ್ನೆಯಷ್ಟೇ ಗಂಭೀರವಾದುದು ಸಾಹಿತಿ-ಕಲಾವಿದರ ಅಸ್ತಿತ್ವದ ಪ್ರಶ್ನೆ. ಇದರ ಒಂದು ಆಯಾಮವನ್ನು ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಕಾಣುತ್ತಿದ್ದೇವೆ. ಇಲ್ಲಿ ವ್ಯಕ್ತವಾಗುತ್ತಿರುವ ಪ್ರತಿರೋಧದ ಹಿಂದೆ ಅಚ್ಚರಿ ಕಂಡುಬಂದರೆ ಅದು ನಮ್ಮ ವಾಸ್ತವತೆಗಳ ಗ್ರಹಿಕೆಯ ದೋಷವಷ್ಟೆ. ಧಾರವಾಡದ ಸಂಭ್ರಮ ಪ್ರಸ್ತುತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಷ್ಟೆ.
ಎರಡನೆಯ ಆಯಾಮವೆಂದರೆ ಸಾಹಿತ್ಯ-ಸಾಹಿತಿ-ಜನಪರ ಕಾಳಜಿ ಮತ್ತು ಸಾರ್ವಭೌಮ ಪ್ರಜೆಗಳ ನಡುವಿನ ಸೂಕ್ಷ್ಮ ಸಂಬಂಧಗಳು. ವಿದ್ಯುನ್ಮಾನ ಮಾಧ್ಯಮಗಳ ಆಧುನೀಕರಣ ಮತ್ತು ಮುದ್ರಣ ಮಾಧ್ಯಮಗಳ ತಾಂತ್ರಿಕ ಪ್ರಗತಿಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಏನಾದರೂ ಉಜ್ವಲ ಭವಿಷ್ಯ ನಿರ್ಮಾಣವಾಗಿದೆಯೇ ಎಂದು ಅವಲೋಕಿಸಿದಾಗ ನಿರಾಸೆಯ ಕಾರ್ಮೋಡ ಕವಿದಂತೆ ಕಾಣುತ್ತದೆ. ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ಆಯ್ಕೆಯಾಗುವ ಕವಿಗಳು, ದಸರಾ ಮಹೋತ್ಸವದ ಸಂದರ್ಭದಲ್ಲಿ ಕವಿಗೋಷ್ಠಿಯಲ್ಲಿ ಕೇಳಿಬರುವ ಕಾವ್ಯ ಲಹರಿ, ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಚರ್ಚೆಗಳು ಮತ್ತು ತದನಂತರ ನಡೆಯುವ ಸಂಕಥನಗಳು ಇವೆಲ್ಲವೂ ಸಾಹಿತ್ಯ ಲೋಕದ ಭೌದ್ಧಿಕ ದೀವಾಳಿತನವನ್ನು ಪ್ರದರ್ಶಿಸುವಂತಿರುತ್ತವೆ. ಇಂದು ಜ್ಞಾನಪೀಠವಾಗಲಿ, ಸಾಹಿತ್ಯ ಅಕಾಡೆಮಿಯಾಗಲಿ, ರಾಜ್ಯೋತ್ಸವ ಪ್ರಶಸ್ತಿಯಾಗಲಿ ಅರ್ಜಿ ಸಲ್ಲಿಸದೆ ಲಭಿಸುವುದಿಲ್ಲ ಎನ್ನುವುದು ಸರ್ವವೇದ್ಯ ರಹಸ್ಯ.  ಇದೇ ಪರಂಪರೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಚುನಾವಣೆಗಳಲ್ಲೂ ಕಾಣುತ್ತದೆ.
ಸಾಹಿತ್ಯವನ್ನು ಸಾಹಿತ್ಯಾಭಿಮಾನಿಗಳು, ಸಾರ್ವಜನಿಕರು ಗುರುತಿಸುವ ಪ್ರವೃತ್ತಿಗಿಂತಲೂ ಗುರುತಿಸುವಂತಹ ಪರಿಸರ ನಿರ್ಮಾಣ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.  ಹಾಗಾಗಿ ಒಂದು ರೀತಿಯಲ್ಲಿ ವಂಧಿಮಾಗದ ಸಂಸ್ಕೃತಿ ಎಲ್ಲೋ ಒಂದೆಡೆ ನೆಲೆಗಾಣುತ್ತಿದೆ. ಸಾಹಿತ್ಯವನ್ನು ಸಾಹಿತ್ಯವನ್ನಾಗಿ ರಚಿಸದೆ ಕೆಲವು ನಿರ್ದಿಷ್ಟ ಸೈದ್ಧಾಂತಿಕ ಪ್ರತಿಪಾದನೆಗಳ ನೆಲೆಯಲ್ಲಿ ರಚಿಸುತ್ತಿರುವುದು ಒಂದೆಡೆಯಾದರೆ, ಜನಪರ ಸಾಹಿತ್ಯವನ್ನು ದಮನಿತ ಜನಸಮುದಾಯಗಳ ನೆಲೆಯಲ್ಲಿ ನಿಂತು ನೋಡದೆ ಸಮಷ್ಟಿ ಪ್ರಜ್ಞೆಯ ನೆಪದಲ್ಲಿ ತುಚ್ಚವಾಗಿ ಕಾಣುವ ಪರಂಪರೆಯೂ ಮತ್ತೊಂದೆಡೆ ವೃದ್ಧಿಸುತ್ತಿದೆ. ಹಾಗಾಗಿ ಜನಪರ ಎಂದು ಭಾವಿಸಲಾಗುವ ಸಾಹಿತ್ಯವನ್ನು ಮತ್ತು ಕೆಲವೊಮ್ಮೆ ಸಾಹಿತಿಗಳನ್ನು ಸಾರ್ವತ್ರಿಕ ಸಂಕಥನಗಳಿಂದಲೇ ದೂರ ಇಡುವ ಪ್ರಯತ್ನ ನಡೆಯುತ್ತಿದೆ. ಈ ಒಂದು ಪ್ರಕ್ರಿಯೆಯಲ್ಲಿ ಸಾಹಿತ್ಯ ಲೋಕದ ಪಾತ್ರ ಇರುವಷ್ಟೇ ಜಾಗತೀಕೃತ ಮಾಧ್ಯಮ ಲೋಕದ ಪಾತ್ರವೂ ಇದೆ. ಪ್ರಭುತ್ವದ ಸೂತ್ರಧಾರನ ಪಾತ್ರದ ಉಲ್ಲೇಖ ಅಗತ್ಯವಿಲ್ಲ.
ಕನ್ನಡ ಸಾಹಿತ್ಯ ಲೋಕದ ದಿಗ್ಗಜರನ್ನು ಅಸ್ಮಿತೆಗಳ ಲೋಕದಲ್ಲಿ ಬಂಧಿಸಿ, ಜಾತಿ -ಸಾಮುದಾಯಿಕ ಅಸ್ಮಿತೆಗಳಿಗೆ ಒಳಪಡಿಸಿ ಸಾಹಿತಿಗಳ ಸಾಹಿತ್ಯಕ್ಕಿಂತಲೂ ವ್ಯಕ್ತಿಗತ ವೈಭವೀಕರಣದಲ್ಲಿ ತೊಡಗುವ ಒಂದು ಪರಂಪರೆಯನ್ನೂ ಈ ಸಂದರ್ಭದಲ್ಲಿ ವಿಮರ್ಶಿಸುವುದು ಅಗತ್ಯ ಎನಿಸುತ್ತದೆ.  ಈ ಒಂದು ಪ್ರವೃತ್ತಿಯನ್ನು, ಧೋರಣೆಯನ್ನು ಕಾರ್ಪೋರೇಟ್ ಜಗತ್ತು ತನ್ನದೇ ಆದ ರೀತಿಯಲ್ಲಿ ಬಳಸಿಕೊಳ್ಳುತ್ತದೆ ಎನ್ನಲು ಜೈಪುರ ಸಾಹಿತ್ಯ ಸಂಭ್ರಮವೇ ಸಾಕ್ಷಿ. ಈಗ ಧಾರವಾಡದ ಸಂಭ್ರಮ ಮತ್ತೊಂದು ಕೊಂಡಿಯಾಗಬಹುದು. ವಿದ್ಯುನ್ಮಾನ ಮಾಧ್ಯಮ ಸೃಷ್ಟಿಸಿರುವ ಭ್ರಮಾಲೋಕದಲ್ಲಿ ಸಾಹಿತಿ ಕಲಾವಿದರೂ ವಿಹರಿಸುತ್ತಿರುವುದು ಗುಟ್ಟಿನ ಮಾತೇನಲ್ಲ. ಇದು ನವ ಉದಾರವಾದ ಎಂಬ ಸಾಂಕ್ರಾಮಿಕ ರೋಗದ ಸೂಚನೆಯಷ್ಟೆ. ಧಾರವಾಡ ಸಂಭ್ರಮವನ್ನು ಬಹಿಷ್ಕರಿಸುವುದು ಈ ರೋಗಕ್ಕೆ ನೀಡಬಹುದಾದ ಲಸಿಕೆ. ಪರಿಣಾಮ ಏನಾಗುವುದೋ ನೋಡೋಣ. ಪ್ರತಿರೋಧದ ದನಿಯನ್ನು ಪ್ರಚುರಪಡಿಸಲು ಹಿಂಜರಿಕೆ ಬೇಡ. ಸಂವೇದನೆ ಇದ್ದಲ್ಲಿ.

‍ಲೇಖಕರು avadhi-sandhyarani

20 January, 2013

1 Comment

  1. Lingaraju bs

    ದಿಕ್ಕು ತಪ್ಪುತ್ತಿರುವ ಸಾಹಿತ್ಯವನ್ನು ಮತ್ತೆ ಹಳಿಗೆ ತರಬೇಕಾದ ಅಗತ್ಯ ಇದೆ. ಜೈಪುರ ಸಾಹಿತ್ಯ ಸಂಭ್ರಮದ ಮಾದರಿ ಎಂಬುದು ಒಂದು ಸಂಸ್ಕೃತಿಯ ಯಥಾವತ್ ನಕಲು ರೂಪ. ಆದು ಎಲ್ಲಿಂದ ಕಡ ತಂದಿದ್ದು ಎನ್ನುವುದರ ಚಚರ್ೆ ಇಲ್ಲಿ ಅವಶ್ಯಕವಲ್ಲ. ಅದರೆ ಆ ನಕಲು ನಮ್ಮ ಅಂದರೆ ಜನರ ಮೇಲೆ ಭವಿಷ್ಯದಲ್ಲಿ ಮಾಡಬಹುದಾದ ಪರಿಣಾಮಗಳ ಬಗ್ಗೆ ಇಲ್ಲಿ(ಮಾಧ್ಯಮ) ಜತೆಗೆ ಬಹಿರಂಗವಾಗಿಯೂ ಚಚರ್ೆ ನಡೆಯುವುದು ಅಗತ್ಯ.
    ಜಾಗತೀಕರಣವು ದೇಶದೊಳಕ್ಕೆ ಕಾಲಿಟ್ಟಾಗ ಅದನ್ನು ವಿರೋಧಿಸಿದವರೆಲ್ಲರೂ ಅಂದಿನ ಸಕರ್ಾರದ ಕಣ್ಣಿಗೆ ಹಾಗೂ ಅದರ ಆಸ್ಥಾನದಲ್ಲಿ ವಿರಾಜಮಾನರಾದವರ ಪೆನ್ನಿನಲ್ಲಿ ಅಸ್ಪೃಶ್ಯರಂತೆ ಕಾಣಿಸಿಕೊಂಡರು. ನಂತರ ಆವರು ವಂದಿಮಾಗಧರಾಗಿ ಇನ್ನೂ ಆಸ್ಥಾನ ವಿದ್ವಾಂಸರಾಗಿ ತಮ್ಮ ಕೃತಿಗಳನ್ನು ಅಪರ್ಿಸುತ್ತಾ ಬದುಕುತ್ತಿದ್ದಾರೆ. ಇರಲಿ, ನರಿಗಳೆಂದೂ ರಾಜನಾಗುವುದು ಅಸಂಭವ.
    ಆದರೆ ಒಂದು ಪ್ರತಿರೋಧಕ್ಕೆ ಸುಮ್ಮನಾಗುವ ಜಾಯಮಾನ ಕಾಪರ್ೋರೇಟ್ ಜಗತ್ತಿನದು ಖಂಡಿತ ಅಲ್ಲ. ಅದು ಇನ್ನೊಂದು ರೂಪದಲ್ಲಿ ಮತ್ತಷ್ಟು ಎಚ್ಚರಿಕೆಯಲ್ಲಿ ಮತ್ತೆ ಮೇಲೆರಗುತ್ತದೆ. ತನ್ನ ಅಸ್ತಿತ್ವಕ್ಕಾಗಿ ಅದು ಮತ್ತಷ್ಟು ಜನಪರ ಸೋಗಿನಲ್ಲಿ, ಉದಾರತೆಯಿಂದ, ಬಂಡಾಯವನ್ನೇ ರಕ್ತಗತಗೊಳಿಸಿಕೊಂಡಂತೆ ಬರುತ್ತದೆ. ಹಾಗಾಗಿ ನಾವು ಮತ್ತಷ್ಟು ಶಕ್ತಿಯುತವಾಗಿ ಬಹು ಎಚ್ಚರಿಕೆಯಿಂದ ಅದನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಇನ್ನಷ್ಟು ಸಿದ್ಧತೆ ಅಗಬೇಕಿದೆ ಎನ್ನುವುದು ನನ್ನ ಭಾವನೆ.
    ಧಾಸಸಂ ಉದ್ದೇಶ ಏನೇ ಇದ್ದರೂ ಅದು ಮಾಡಿದ ಒಂದು ಕೆಲಸಕ್ಕೆ ನಾನು ಅಭಾರಿಯಾಗಿದ್ದೇನೆ. ಇತ್ತೀಚೆಗೆ ವಿಜೃಂಭಿಸುತ್ತಿದ್ದ ತಾಮಸ ಶಕ್ತಿಗಳ ನಡುವೆ ಕ್ಷೀಣವಾಗಿದ್ದ ಜನಪರ ಸಾಹಿತಿಗಳ ಧ್ವನಿ ಇನ್ನಷ್ಟು ದೊಡ್ಡದಾಗಿ ಕೇಳಿಸುವಂತೆ ಮಾಡಿದ್ದಕ್ಕಾಗಿ ಒಂದು ಕೃತಜ್ಞತೆ ಸಲ್ಲಿಸಬೇಕಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading