ಗೋಪಾಲ ವಾಜಪೇಯಿ ಕಾಲಂ : 'ನಂದಭೂಪತಿ'ಯ ನೋವು-ನಲಿವುಗಳು!

ಸುಮ್ಮನೇ ನೆನಪುಗಳು – 32

1984ರ ಚಳಿಗಾಲದ ಒಂದು ಬೆಳಿಗ್ಗೆ. ಹುಬ್ಬಳ್ಳಿಯಲ್ಲಿ ಅಂದು ಅಪರೂಪಕ್ಕೆ ಇಬ್ಬನಿ. ಕಿಟಕಿಯಿಂದಾಚೆ ದಟ್ಟ ಮಂಜಿನ ತೆರೆ. ಎಲ್ಲವೂ ಮಸುಮಸುಕು. ಅಂಥ   ಮುಂಜಾವಿನಲ್ಲಿ ನಾನಿನ್ನೂ ಮೊದಲನೆಯ ಚಹ ಹೀರುತ್ತ, ದೇಶದ ‘ಆಗುಮಾನ-ಹೋಗುಮಾನ’ಗಳ ಮೇಲೆ ಕಣ್ಣಾಡಿಸುತ್ತ ಕೂತಿದ್ದೆ. ಹೌದು, ಅಂದಿನ ತನಕದ ‘ಆಗುಮಾನ-ಹೋಗುಮಾನ’ಗಳ ಮೇಲೆ… ಅದನ್ನು ಆಧರಿಸಿ ನಾನು ಆಕಾಶವಾಣಿಗೆ ವಾರದ ಚರ್ಚೆ ಬರೆಯಬೇಕು. ಅವತ್ತೇ ನನಗೆ ಡೆಡ್ ಲೈನ್. ಆ ಸಾಪ್ತಾಹಿಕ ಕಾರ್ಯಕ್ರಮದ ಶೀರ್ಷಿಕೆ ‘ಮನೆಮನೆಯಲ್ಲಿ’… ಅದು ಕಟ್ಟೆಯ ಮೇಲೆ ಕೂತು ಹೊಡೆಯುವ ಹರಟೆ ಮಾದರಿಯ ಚರ್ಚೆ. ಒಂದು ಮನೆ : ಗಂಡ-ಹೆಂಡತಿ ಮತ್ತು ಆತನ ಆತ್ಮೀಯ ಗೆಳೆಯ ಈ ಮೂರೇ  ಪಾತ್ರಗಳು. ಸರಸ ಸಂಭಾಷಣೆಗಳೇ ಅದರ ಜೀವಾಳ.  ಹೆಂಡತಿಯನ್ನು ಗಂಡ, ಆತನನ್ನು ಗೆಳೆಯ ಛೇಡಿಸುತ್ತಲೇ ನಗು-ನಗುತ್ತ ಊರು, ರಾಜ್ಯ, ದೇಶದ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.  ಆಯಾ ವಾರದ ವಿದ್ಯಮಾನಗಳನ್ನೆಲ್ಲ ಒಳಗೊಂಡ ಕಾಲು ಗಂಟೆ ಅವಧಿಯ ಒಂದು ಸ್ಕ್ರಿಪ್ಟ್ ಅದು. ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಅದನ್ನು ಬರೆದು ಮುಗಿಸಬೇಕು. ನನ್ನ ಕೈಬರಹದಲ್ಲಿ ಒಂಬತ್ತು ಪುಟಗಳು. ಅಷ್ಟಾದರೆ ಆಯಿತು. ನೇರ ಆಫೀಸಿಗೆ. ಅಲ್ಲಿ ಹೋಗಿ, ಬರೆದದ್ದನ್ನು ಒಮ್ಮೆ ಓದಿ, ತಿದ್ದಿ, ಕಾರ್ಬನ್ ಇಟ್ಟು ಮೂರು ಪ್ರತಿ ಮಾಡಬೇಕು. ಆಗ ಈಗಿನಂತೆ ಓಣಿಗೊಂದು ಜೆರಾಕ್ಸ್ ಅಂಗಡಿ ಇರಲಿಲ್ಲ. ಎಲ್ಲೋ ದೂರದಲ್ಲೊಂದು ಇದ್ದರೂ ಬಲು ತುಟ್ಟಿ. ಅಷ್ಟು ಖರ್ಚು ಮಾಡಲು ನನಗೆ ಸಾಧ್ಯವಿರಲಿಲ್ಲ. ಅಂದು ಮಧ್ಯಾಹ್ನ ಅದು ಧಾರವಾಡ ಆಕಾಶವಾಣಿಯಲ್ಲಿ ರೆಕಾರ್ಡ್ ಆಗಬೇಕು. ಅಂದೇ ರಾತ್ರಿ 9.15ರಿಂದ 9.30ರ ತನಕ ಅದರ ಪ್ರಸಾರ. ಅದಕ್ಕೇ ನಿಧಾನವಾಗಿ ಮೂರೂ ಪ್ರತಿಗಳಲ್ಲಿ ಮೂಡುವ ಹಾಗೆ ಕಡ್ಡಿ ಪೆನ್ನನ್ನು (ರೀಫಿಲ್ ನಮ್ಮ ಮಟ್ಟಿಗೆ ಪೆನ್ನಿನ ಕಡ್ಡಿ) ಒತ್ತಿ ಒತ್ತಿ ಬರೆಯುತ್ತಿದ್ದೆ. ಹಾಗೆ ಬರೆಬರೆದು ಬಲಗೈ ಹೆಬ್ಬೆರಳು-ತೋರುಬೆರಳು ಮತ್ತು ಮಣಿಕಟ್ಟು ನೋಯಲಾರಂಭಿಸುತ್ತಿತ್ತು.
.
ನಾನು ಕೆಲಸ ಮಾಡುತ್ತಿದ್ದದ್ದು ‘ಮಾಸಪತ್ರಿಕೆ.’ ದೈನಿಕದಲ್ಲಿರುವ ಧಾವಂತ ಅಲ್ಲಿರುತ್ತಿರಲಿಲ್ಲ. ಅಷ್ಟಲ್ಲದೇ ಒಮ್ಮೊಮ್ಮೆ ಲೇಖನಗಳ ಫೈಲನ್ನು ಮನೆಗೇ ಹೊತ್ತೊಯ್ದು ರಾತ್ರಿಯಿಡೀ ಕೂತು ತಿದ್ದಿಕೊಂಡು, ಸಂಪಾದಿಸಿಕೊಂಡು, ಇಲ್ಲವೇ ಪುನರ್ಲೇಖಿಸಿಕೊಂಡು ಬರುತ್ತಿದ್ದೆವಲ್ಲ… ಜವಾಬ್ದಾರಿಯ ಅರಿವು ನಮಗಿದ್ದುದ್ದರಿಂದ, ಇಂಥ ವೈಯಕ್ತಿಕ ಕೆಲಸವನ್ನು ಮಾಡಿಕೊಂಡರೆ ಯಾರೂ ಪ್ರಶ್ನಿಸುತ್ತಿರಲಿಲ್ಲ.
.
ಸ್ಕ್ರಿಪ್ಟ್  ಸಿದ್ಧಪಡಿಸಿಟ್ಟುಕೊಂಡು ನಾನು ಕಾಯುತ್ತ ಕೂತಿರುತ್ತಿದ್ದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ‘ಆಕೆ’ ಅಥವಾ ‘ಆತ’ ಇಬ್ಬರಲ್ಲಿ ಒಬ್ಬರು ಸ್ಕ್ರಿಪ್ಟ್ ತಗೊಂಡು ಹೋಗಲು ಸರಿಯಾಗಿ ಮಧ್ಯಾಹ್ನ 12.00 ಗಂಟೆಗೆ  ನಮ್ಮ ಕಚೇರಿಗೆ ಬರುತ್ತಿದ್ದರು. ಅವರ ಕೈಗೆ ಸ್ಕ್ರಿಪ್ಟ್ ಕೊಟ್ಟರೆ ಮುಗಿಯಿತು ನನ್ನ ಜವಾಬ್ದಾರಿ. ಉಳಿದವರಿಗಾದರೆ ಆಕಾಶವಾಣಿಯ ಆ ವಿಭಾಗದವರು ಹಿಂದಿನ ಮಧ್ಯಾಹ್ನವೇ ಸ್ಕ್ರಿಪ್ಟು ತಲಪಿಸಲು ಹೇಳಿರುತ್ತಿದ್ದರು. ನನ್ನ ಮೇಲೆ ಆ ಕಾರ್ಯಕ್ರಮದ ನಿರ್ಮಾಪಕರಿಗೆ ಇದ್ದ ವಿಶ್ವಾಸ ದೊಡ್ಡದು. ಅದಕ್ಕೆ ನನಗೆ ಒಂದು ದಿನದ ಕನ್ಸೆಶನ್. ”ಅಂದಂದಿನ ವಿದ್ಯಮಾನವನ್ನೂ ಒಳಗೊಳ್ಳುತ್ತಿದ್ದುದರಿಂದ ನಿಮ್ಮ ಸ್ಕ್ರಿಪ್ಟಿಗೆ ಬೇರೆಯದೇ ಆದ ವಿಶೇಷತೆ ಇರುತ್ತದೆ,” ಅಂತ ಅವರು ಹೇಳುತ್ತಿದ್ದರು. ಶ್ರೋತೃಗಳ ಅಭಿಪ್ರಾಯದಿಂದ ನನಗದು ಸಾಬೀತಾಗುತ್ತಿತ್ತು.
.
-೦-೦-೦-೦-೦-
.
ಹಾಂ… ಅಂದು ಮಂಜಿನ ಮುಂಜಾನೆಯ ಹೊತ್ತಿನಲ್ಲಿ, ‘ಸ್ಕ್ರಿಪ್ಟ್’ಗೆ ಹೊಳಹು ಹಾಕುತ್ತ ಕೂತಿದ್ದೆನಲ್ಲ… ಆಗ ಯಾರೋ ಬಾಗಿಲು ಬಡಿದರು. ‘ಸ್ಕ್ರಿಪ್ಟ್’ಗೆ ಹೊಳಹು ಹಾಕುತ್ತ ಕೂತಿರುವ ಸಂದರ್ಭದಲ್ಲಿ ಹಾಗೆ ಯಾರಾದರೂ ಬಾಗಿಲು ಬಡಿದರೆ, ಹತ್ತಿರ ಬಂದರೆ ನನಗೆ ಎಲ್ಲಿಲ್ಲದ ಸಿಟ್ಟು. ಇನ್ನು ವಟವಟ ಹಚ್ಚಿದರೋ, ಅವರ ಕೆನ್ನೆಗೆ ಪಟಪಟ ಬಾರಿಸಿಬಿಡಬೇಕು ಅನಿಸುತ್ತಿತ್ತು ಆಗೆಲ್ಲ. ನಾನು ಹಾಗೆ ಸಿಡಿಮಿಡಿಗೊಳ್ಳುತ್ತಿದ್ದುದರ ಕಾರಣ ನಮ್ಮ ಅವ್ವನಿಗೆ ಗೊತ್ತಿದ್ದುದರಿಂದ, ನನ್ನೆರಡು ‘ಚಿಲ್ಟು’ಗಳನ್ನು ಕಟ್ಟಿಕೊಂಡು, ಹೊರಗೆ ಕಟ್ಟೆಗೆ ಹೋಗಿ ಕೂತುಬಿಡುತ್ತಿದ್ದಳು.  ಈಗಲೂ ಅಷ್ಟೇ. ಇಲ್ಲಿ ಬೆಂಗಳೂರಿನ ಈ ಮನೆಯಲ್ಲಿ ಯಾವುದೋ ‘ಧ್ಯಾನ’ದಲ್ಲಿ ನಾನು ಮನೆತುಂಬ ತಿರುಗುತ್ತಿರುತ್ತೇನಲ್ಲ… ಆಗ, ನಾನು ಏನೋ ‘ಹೊಳಹು’ ಹಾಕುತ್ತಿದ್ದೇನೆಂಬುದು ನಮ್ಮ ಅವ್ವನಿಗೆ ಗೊತ್ತಾಗಿಬಿಡುತ್ತದೆ. ಒಂದು ವೇಳೆ ತಲೆತಗ್ಗಿಸಿ ಬರೆಯಲು ಕೂತಿದ್ದರೆ, ಆಗಾಗ ಸದ್ದಾಗದಂತೆ ಬಂದು ಚಹದ ಲೋಟವನ್ನು ನನ್ನ ಟೇಬಲ್ಲಿನ ಮೇಲಿಟ್ಟು ಸರಿದುಬಿಡುತ್ತಾಳೆ. ಅವತ್ತು ಮಂಜಿನ ಮುಂಜಾನೆಯ ಹೊತ್ತಿನಲ್ಲಿ ಯಾರೋ ಬಾಗಿಲು ಬಡಿದರಲ್ಲ… ಫಡಕಿನ ಸಂದಿಯಿಂದ ನೋಡಿ, ಬಾಗಿಲು ತೆರೆಯುತ್ತಿದ್ದಂತೆಯೇ ನಗೆ ಬೀರಿದಾತ  ಜಯತೀರ್ಥ ಜೋಶಿ. ”ಬರ್ರಿ,” ಅಂತ ನಾನನ್ನುತ್ತಿದ್ದರೆ ಆತ, ನನ್ನೆದುರು ಪುಸ್ತಕವೊಂದನ್ನು ಚಾಚಿ, ”ಇದು ಅರ್ಜಂಟ್ ‘ನಮ್ಮ’ ಕನ್ನಡಕ್ಕ ರೂಪಾಂತರ ಆಗಬೇಕು. ಸಂಜಿಕೆ ಸನ್ಮಾನಕ್ಕ ಬರ್ರಿ, ಇಬ್ಬರೂ ಕೂಡಿ  ಓದೂಣಂತ…” ಎಂದು ಒಂದೇ ಉಸುರಿನಲ್ಲಿ ಹೇಳಿ, ಹಳೆಯ ಪುಸ್ತಕವೊಂದನ್ನು ಕೈಗೆ ತುರುಕಿ, ಅತ್ತಿಂದತ್ತಲೇ  ನಡೆದುಬಿಟ್ಟರು.
.
ಅದು ಜೋಶಿಯ ಸ್ವಭಾವ. ಮಹಾರಾಯ… ಎಲ್ಲೋ ಹೋಗುತ್ತಿರುತ್ತಾರೆ, ಮಾರ್ಗ ಮಧ್ಯೆ ಇನ್ನೊಂದು ಯಾವುದೋ ಕೆಲಸವನ್ನಿಟ್ಟುಕೊಂಡಿರುತ್ತಾರೆ. ಆ ಕೆಲಸ ಮುಗಿಸಿ ಬಂದು ಈ ಕೆಲಸಕ್ಕೆ ನಿಲ್ಲುತ್ತಾರೆ… ನನ್ನ ಕೈಗೆ ಪುಸ್ತಕ ತುರುಕಿದವನೇ ಜೋಶಿ ಮಹಾಶಯ ಅದೆಲ್ಲಿಗೆ, ಯಾರ ಭೇಟಿಗೆ ಹೋದರೋ…? ನಾನು ಮೊದಲು ಆಕಾಶವಾಣಿಯ ಸ್ಕ್ರಿಪ್ಟಿಗೆ ‘ಹೊಳಹು’ ಹಾಕಿ ಮುಗಿಸಬೇಕಿತ್ತಲ್ಲ… ಹೀಗಾಗಿ, ಜೋಶಿ ಕೊಟ್ಟು ಹೋದ ಪುಸ್ತಕದತ್ತ ಗಮನಕೊಡಲಿಲ್ಲ…
.
-೦-೦-೦-೦-೦-
.
ಆಫೀಸಿನಲ್ಲಿ ಮಧ್ಯಾಹ್ನದ ಬಿಡುವು ಮುಗಿದ ಮೇಲೆ ಅದ್ಯಾಕೋ ಜೋಶಿ ಕೊಟ್ಟು ಹೋದ ಪುಸ್ತಕ ಥಟ್ಟಂತ ನೆನಪಿಗೆ ಬಂತು. ಬಗಲು ಚೀಲದಿಂದ ಹೊರ ತೆಗೆದೆ. ಅದು ಮಹಾಕವಿ  ಶೇಕ್ಸ್ ಪಿಯರನ ‘ಕಿಂಗ್ ಲಿಯರ್’ ನಾಟಕ… ಮಾಸ್ತಿಯವರೇ ಮೊದಲಾಗಿ ಅನೇಕರು ಅದಾಗಲೇ ಕನ್ನಡಕ್ಕೆ ತಂದಿದ್ದ ದುರಂತ ನಾಟಕ… ನಾನು ನಡುಗಿ ಹೋದೆ. ಅದನ್ನು ನಾನು ರೂಪಾಂತರಿಸಬಲ್ಲೆನೇ ಎಂಬ ಸಂಶಯ ನನ್ನನ್ನು ಕಾಡತೊಡಗಿತು. ”ಆಗೋದಿಲ್ಲ…” ಅಂತ ಹೇಳಿ, ಪುಸ್ತಕವನ್ನು ವಾಪಸ್ ಕೊಟ್ಟುಬಿಡೋದೇ ವಾಸಿ ಎಂದುಕೊಂಡೆ.
.
ಆ ಸಂಜೆ ‘ಸನ್ಮಾನ’ಕ್ಕೆ (ಅದು ಹುಬ್ಬಳ್ಳಿಯ ಒಂದು ಲಾಡ್ಜ್) ಹೋದರೆ ಜೋಶಿ ಇರಲಿಲ್ಲ. ಕೌಂಟರಿನಲ್ಲಿ ವಿಚಾರಿಸಿದೆ. ನನ್ನ ಹೆಸರನ್ನು ಕೇಳಿ ತಿಳಿದ ಲಾಡ್ಜಿನಾತ, ”ಒಂದು ರೂಮ್ ಬುಕ್ ಆಗಿದೆ… ನೀವು ಬಂದರೆ ಕೀ ಕೊಡಲು ಹೇಳಿದ್ದಾರೆ,” ಅಂತ, ಹುಡುಗನೊಬ್ಬನ ಜೊತೆ ನನ್ನನ್ನು ಕೋಣೆಗೆ ಕಳಿಸಿದ.  ಅದೊಂದು ಡಬಲ್ ಬೆಡ್ ರೂಂ. ಯಾರೋ ಇದ್ದು, ಖಾಲಿ ಮಾಡಿ ಹೋದ ಕುರುಹುಗಳು ಇನ್ನೂ ಹಾಗೇ ಇದ್ದವು. ಅಸ್ತವ್ಯಸ್ತವಾದ ಮೇಲು ಹಾಸಿಗೆಗಳು. ಹೇಗೆ ಹೇಗೋ ಬಿದ್ದುಕೊಂಡ ಹೊದ್ದಿಕೆಗಳು. ಅಲ್ಲಿ ಮೂಲೆಯಲ್ಲೊಂದು ಮುದುಡಿ ಬಿದ್ದಿದ್ದ ಮಾಲೆ. ಎದುರಿನ ನಿಲುವುಗನ್ನಡಿಗೆ ಅಂಟಿಸಲ್ಪಟ್ಟ  ಬಿಂದಿ. ಟೀಪಾಯ್ ಮೇಲೆ ಮುಖ ಒಣಗಿಸಿಕೊಂಡು ಕೂತ ಊಟದ ತಾಟುಗಳು, ತಿಂಡಿಯ ಪ್ಲೇಟುಗಳು, ಟೀ ಕಪ್ಪುಗಳು. ರೂಮು ತುಂಬಾ ಅದೇನೋ ವಾಸನೆ…
ಈ ಜೋಶಿ ಯಾಕೆ ಜೋಡು ಹಾಸಿಗೆಯ ರೂಮ್ ಬುಕ್ ಮಾಡಿದ್ದು ಎಂಬ ಯೋಚನೆ ಒಮ್ಮೆ ಬಂದು ಹೋಯಿತು.
.
”ಜರಾ ತಡ್ರಿ ಸರ್… ಕಿಲೀನ್ ಮಾಡಿಸಿ ಕೊಟ್ ಬಿಡ್ತೀನಿ,” ಎಂದು ರೂಮ್  ಬಾಯ್ ಹೇಳುತ್ತಿದ್ದರೆ ನನ್ನ ಮನಸ್ಸು ಏನನ್ನೋ ಧೇನಿಸುತ್ತಿತ್ತು.  ನಿಮಗೆ ನೆನಪಿದೆಯೇನು ‘ನಾಗಮಂಡಲ’ ಚಿತ್ರದಲ್ಲಿಯ ಆ ಹಾಡು…
.
ಜೋಡು ಹಾಸಿಗಿ ಯಾಕ…?
ಜೋಡು ಹೊದ್ದಿಕಿ ಯಾಕ…?
ನೋಡಿಕಿಯ ಮುಡಿಯೆಲ್ಲ ಸರಿಯಿತ್ಯಾಕ…?
ಮಾಡಿನೊಳಗಿನ ದೀಪ ಉರಿಯಿತ್ಯಾಕ…?
.
ಹಾಲು ಬಟ್ಟಲದಾಗ –
ಪಾಲು ಪಡದವರ್ಯಾರ…?
ಮಾಲಿ ಮುದುಡಿ ಮೂಲಿ ಸೇರಿತ್ಯಾಕ…?
ನಿಲುವುಗನ್ನಡಿ ನಗಿಯ ತೋರಿತ್ಯಾಕ…?
.
-ಈ ಹಾಡಿಗೆ ಅಂದು ನಾನು ‘ಸನ್ಮಾನ’ದ ರೂಮಿನಲ್ಲಿ ನೋಡಿದ ಆ ದೃಶ್ಯವೇ ಪ್ರೇರಣೆ.
.
-೦-೦-೦-೦-೦-
.
ಅರ್ಧ ಗಂಟೆಯ ನಂತರ ಬಂದ ಜೋಶಿ ಒಂದು ನಗೆ ಬೀರಿದರು. ತುಂಟ ನಗೆ… ಎಂಥ ಸಿಟ್ಟನ್ನೂ ಅರೆಗಳಿಗೆಯಲ್ಲಿ ಮರೆಮಾಡಿಬಿಡಬಲ್ಲ ಮೋಹಕ ನಗೆ… ತಡವಾಗಿ ಬಂದದ್ದನ್ನೂ ಮರೆಸಿಬಿಡುವ ಉಲಕೋಚಿ ನಗೆ… ”ಓದೀದ್ರೀ… ಏನನಿಸ್ತ್ಯು..?” ಬಂದ ಏಟಿಗೆ ಮಹರಾಯನ ಮೊದಲನೆಯ ಪ್ರಶ್ನೆ ಅದು.
.
”ಇದು ನನ್ನ ಕಡಿಯಿಂದ ಸಾಧ್ಯ ಆಗೋ ಮಾತಲ್ಲಾ… ನೀವು ಬ್ಯಾರೆ ಯಾರನಾರೆ ಕೇಳ್ರಿ… ಬೇಕಿದ್ರ ಹಾಡು ಬರದುಕೊಡತೀನಿ… ನಾ ಇನ್ನ ಬರತೀನಿ…” ಎಂದೆಲ್ಲ ಪಟಪಟನೆ ಹೇಳಿ, ಪುಸ್ತಕವನ್ನು ಆತನ ಕೈಗೆ ತುರುಕಿ ಎದ್ದು ನಿಂತೆ.
.
”ಕೂ…ಡ್ರಿ ಮದ್ಲs… ಕೂತು ಮಾತಾಡ್ರಿ… ನಾನೂ ಈಗ ಬಂದೀನಿ… ಒಂದ್ ಕಪ್ಪು ಛಾ ಕುಡಕೋತ ಮಾತಾಡೂಣಂತ…” ಎಂದವರೇ ರೂಮ್ ಸರ್ವಿಸ್ ಗೆ ಫೋನ್ ಮಾಡಿದರು. ಈತ ಗೋಳುಹುಯ್ದುಕೊಳ್ಳುವುದು ಗ್ಯಾರಂಟಿ ಅನಿಸಿಬಿಟ್ಟಿತು ನನಗೆ. ಅಷ್ಟರಲ್ಲೇ ಚಹ ಬಂತು.
.
”ನೋಡ್ರೀ… ಯಾರು ಯಾವ ಕೆಲಸಾ ಮಾಡಬಲ್ರು ಅನ್ನೋದನ್ನ ಲೆಕ್ಕಾ ಹಾಕೇ ಮುಂದುವರಿಯೋ ಮನಶಾ ನಾ… ನಿಮ್ಮಿಂದ ಇದು ಆಗೇ ಆಗ್ತದ ಅಂತ ಪೂರ್ಣ ವಿಶ್ವಾಸ ನಂದು. ಅದಕ್ಕs ಈ  ಕೆಲಸಾ ನಿಮಗ ಒಪ್ಪಿಸಿದ್ದು.”
.
”ಅಲ್ಲಾ… ನನಗ… ಊಂ…”
.
”… ನಿಮಗ ಬೇಕಾದಷ್ಟು ತ್ರಾಸಿರಲಿ… ಇನ್ನ ಹದಿನೈದು ದಿವಸಕ್ಕ ಸ್ಕ್ರಿಪ್ಟು ಬೇಕು ಅಂದ್ರ ಬೇಕು… ಇದನ್ನೂ ಕಿತ್ತೂರಿನ ‘ಗ್ರಾಮೀಣ ರಂಗಚೇತನ’ತಂಡಕ್ಕs ಮಾಡಸ್ತೀನಿ… ‘ಧರ್ಮಪುರಿಯ ಶ್ವೇತವೃತ್ತ’ ನಾಟಕದಕಿಂತಾ ಛೊಲೊ ಆಗಬೇಕು…” ಅಂತ ಅಪ್ಪಣೆ ಕೊಡಿಸಿಬಿಟ್ಟರು ಜೋಶಿ.
.
‘ಹೂಂ’ ಅನ್ನಲೂ ಆಗದು, ‘ಊಹೂಂ’ ಅನ್ನಲೂ ಆಗದು… ಬಿಸಿ ತುಪ್ಪ… ಈ ರಂಗ ನಿರ್ದೇಶಕರುಗಳೆಲ್ಲ ಹೀಗೆಯೇ… ಬರೆಯುವವರಿಗೆ ಯೋಚಿಸುವುದಕ್ಕೂ ಅವಕಾಶ ಕೊಡುವುದಿಲ್ಲ. ಜೋಶಿಯಂತೂ ‘ಚತುರೋಪಾಯಪ್ರಯೋಗಪರಿಣಿತ.’ ನಾನು ‘ಹೂಂ’ ಅನ್ನದೇ ವಿಧಿ ಇರಲಿಲ್ಲ. ”ಇವತ್ತ ನಾಟಕಾ ಓದೂಣು… ನಾಳೆ ಇದರ ಬಗ್ಗೆ ಚರ್ಚಾ ಮಾಡೂಣು… ಅದಕ್ಕಂತs ಈ  ಡಬಲ್ ಬೆಡ್ ರೂಂ ಹಿಡದದ್ದು… ನಾಳೆ ರಾತ್ರಿ ನಿಮ್ಮ ವಾಸ್ತವ್ಯ ಇಲ್ಲೇ… ನಾಡದ ಸಂಡೇ. ಅಷ್ಟರೊಳಗs ಕಥಿಯ ಸ್ವರೂಪ ನಮ್ಮ ಹಿಡತಕ್ಕ ಬಂದಿರತದ…” ಅಂತ ‘ಲಿಯರ್ ಪ್ರವಚನ’ ಶುರು ಮಾಡಿದರು ಜೋಶಿ.
.
ನಾಟಕ ವಾಚನದ ಆತನ ಶೈಲಿ ತುಂಬ ಪ್ರಭಾವಶಾಲಿ. ‘ಕಿಂಗ್ ಲಿಯರ್’ನನ್ನು ಆತ ಓದುತ್ತ ಹೋಗುತ್ತಿದ್ದಂತೆ ನನಗೆ ನಾಟಕದ ಸ್ಪಷ್ಟ ಚಿತ್ರ ಬರತೊಡಗಿತು. ಲಿಯರ್ ಮತ್ತು ಆತನ ಮೂವರೂ ಹೆಣ್ಣು ಮಕ್ಕಳು ನಮ್ಮ ಮಣ್ಣಿನ ಮಕ್ಕಳೇ ಅನಿಸತೊಡಗಿದರು. ‘ನಿನ್ನಂಥ ಅಪ್ಪ ಇಲ್ಲಾ…’ ಅಂದಂಥ ಮಕ್ಕಳೇ ಮುಂದೊಮ್ಮೆ ಅದೇ ಅಪ್ಪನನ್ನು ‘ತೊಲಗಿ ಹೋಗೋ ಲೇ…’ ಅನ್ನುವ ಮಟ್ಟಕ್ಕೆ ಮುಟ್ಟುವುದೇನು ನಮಗೆ ಹೊಸ ವಿದ್ಯಮಾನವೇ?
.
ಓದು ಮುಗಿಯಿತು. ನಡುನಡುವೆ ಖಾರಾ ಮಂಡಕ್ಕಿ ಮಿರ್ಚಿ ಕಾಂದಾ ಬಜಿಗಳನ್ನು ಕುರುಕುವುದರ ಜೊತೆ ನಾನೊಂದಷ್ಟು ನೋಟ್ಸ್ ಮಾಡಿಟ್ಟುಕೊಂಡಿದ್ದೆ. ಆ ಟಿಪ್ಪಣಿಗಳ ಆಧಾರದ ಮೇಲೆ ಜೋಶಿಯ ಜೊತೆ ಕಥೆಯ ಕುರಿತು ಚರ್ಚೆ. ಪಾತ್ರಗಳ ಬಗ್ಗೆ ಚರ್ಚೆ. ನಿರೂಪಣಾ ಶೈಲಿಯ ಬಗ್ಗೆ ಚರ್ಚೆ. ಹೀಗೆ ಚರ್ಚೆಯ ಮೇಲೆ ಚರ್ಚೆ. ಈ ಪ್ರಕ್ರಿಯೆಯಲ್ಲಿ ಕಥೆ ರೂಪ ಪಡೆದುಕೊಳ್ಳತೊಡಗಿತು.
”ಒಬ್ಬ ನಿರೂಪಕನ ಮೂಲಕ ಕಥೆ ಮುಂದುವರಿಯುತ್ತ ಹೋಗಬೇಕು. ಸಾಕಷ್ಟು ಹಾಡುಗಳನ್ನು ಹಾಕಬೇಕು. ಓಡುವ ನದಿಯಂತೆ ಕಥೆ ಸಾಗಬೇಕು. ಒಟ್ಟಿನಲ್ಲಿ ಇದು ನಮ್ಮದೇ ನಾಡಿನ ಕಥೆ ಎನಿಸಬೇಕು…” -ಇದು ನಾವಿಬ್ಬರೂ ಒಡಂಬಟ್ಟ ಅಂಶ.
.
ಒಮ್ಮೆ ಕಥೆಯ ಸ್ವರೂಪ ನಿರ್ಧಾರವಾದ ಮೇಲೆ ಮುಗಿಯಿತು.  ನನ್ನ ಪಾಡಿಗೆ ನಾನು ಒಬ್ಬನೇ ಕೂತು ರೂಪಾಂತರ ಕಾರ್ಯಕ್ಕೆ ತೊಡಗುವುದು… ಹಾಗೆ ಕಳೆದಂಥ ನಂತರದ ‘ಹನ್ನೆರಡು ರಾತ್ರಿ’ಗಳಿವೆಯಲ್ಲ…  ಅವು ನಾನೆಂದೂ ಮರೆಯಲಾರದಂಥವು. ಕಥೆಯ ಬಗ್ಗೆ ಸ್ಪಷ್ಟ ಕಲ್ಪನೆ ಇದ್ದದ್ದರಿಂದ ಬರವಣಿಗೆ ಸುಲಲಿತವಾಗಿ ಸಾಗಿತು. ಅದ್ಯಾಕೋ ಗೊತ್ತಿಲ್ಲ, ಎಲ್ಲೆಲ್ಲಿ ಹಾಡುಗಳು ಬೇಕೋ ಅಲ್ಲೆಲ್ಲ, ಕೆಲವು ಸಲ, ಅವು ತಂತಾವೇ ಬಂದು ಕೂತು ನಗತೊಡಗುತ್ತಿದ್ದವು. ಇನ್ನು ಕೆಲವು ಸಲ ಮಾತ್ರ ಬೆಳಗಿನ ನಾಲ್ಕರ ತನಕ ಹಾಡಿನ ಒಂದೇ ಒಂದು ಸಾಲೂ ಸಮೀಪ ಸುಳಿಯದೇ  ಕಾಡುತ್ತಿದ್ದವು.  ಹೀಗೆ ಹಾಡು ಮತ್ತು ನಿರೂಪಣೆಗಳ ಮೂಲಕ ಕಥೆ ಓಡತೊಡಗಿದ್ದರಿಂದ, ಈ ನಾಟಕವನ್ನು ದೃಶ್ಯಗಳಾಗಿ ವಿಂಗಡಿಸುವ ಪ್ರಮೇಯವೇ ಬರಲಿಲ್ಲ. ಅಂತೂ ಜೋಶಿ ಕೊಟ್ಟಿದ್ದ
ಗಡುವಿನೊಳಗೇ ‘ನಂದಭೂಪತಿ’ಯ ಪಕ್ಕಾ ಪ್ರತಿ ಸಿದ್ಧಪಡಿಸಿ ಕೊಟ್ಟು ನಿಟ್ಟುಸಿರು ಬಿಟ್ಟೆ.
.
-೦-೦-೦-೦-೦-
.
ಮುಂದೊಮ್ಮೆ ಹುಬ್ಬಳ್ಳಿಯ ಹಿರಿಯ ರಂಗ ನಿರ್ದೇಶಕ ಚಿತ್ತರಂಜನ ಚಟರ್ಜೀ ಸಿಕ್ಕರು. ಅವರು ಸಿಕ್ಕಾಗಲೆಲ್ಲ ನಮ್ಮ ಮಾತು ನಾಟಕಗಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.
”ಮತ್ತೇನು ಬರದೀ…?” ಅಂತ ಅವರು.
.
”…’ನಂದಭೂಪತಿ’…” ಅಂತ ನಾನು.
.
”…’ನೊಂದೊಭೂಪೊತಿ’…?” ಅಂತ ಅವರು ಕೇಳುತ್ತಿದ್ದರೆ ನನಗೆ ಒಳಗೊಳಗೇ ನಗೆ. ಈ ಬಂಗಾಲಿಗಳ ಬಾಯಲ್ಲಿ ‘ಭಜನ್’ ಇದ್ದದ್ದು ‘ಭೊಜನ್’ ಆಗಿಬಿಡುತ್ತದಲ್ಲ… ಹಾಗೆ ನನ್ನ ‘ನಂದಭೂಪತಿ’ ಚಟರ್ಜೀಯ ಬಾಯಲ್ಲಿ ‘ನೊಂದಭೂಪತಿ’ಯಾಗಿದ್ದ… ಹೌದು. ಅವನು ‘ನೊಂದಭೂಪತಿ’ಯೇ. ಯಾಕಂದರೆ, ತಾನು ನೊಂದದ್ದಲ್ಲದೇ ನನ್ನನ್ನೂ ನೋಯಿಸಿದಾತ ಈ ‘ನೊಂದಭೂಪತಿ’…
ಅಷ್ಟೆಲ್ಲ ನಿದ್ದೆಗೆಟ್ಟು ಕೈ ಮರಗಟ್ಟಿಸಿಕೊಂಡು ಬರೆದಿದ್ದೆನಲ್ಲ  ಈ ನಾಟಕವನ್ನು… ತೆರೆಯ ಮರೆಯಲ್ಲಿ ಅದೇನೇನು ನಡೆಯಿತೋ, ಭೂಪತಿಯೇ ಬಲ್ಲ… ಜೋಶಿ ಕಿತ್ತೂರಿನ ತಂಡಕ್ಕೆ ಈ ನಾಟಕವನ್ನು ಮಾಡಿಸಲೇ ಇಲ್ಲ. ಸಹಜವಾಗಿಯೇ ನನಗೆ ಬೇಸರವಾಯಿತು. ಯಾಕಂದರೆ, ಈ ನಾಟಕವನ್ನು ನಾನು ‘ಆ’ ಮಣ್ಣಿನ ಸತ್ವವನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದೆ. ಅದರ ಹಾಡುಗಳಂತೂ ಬೈಲೂರಿನ ಬಸಲಿಂಗಯ್ಯನ ಕಂಠಕ್ಕೆ ಹೇಳಿ ಮಾಡಿಸಿದ್ದಂಥವು…
.
ಇದು ಮಂಗಳಾವತಿ…
ದೊರಿ ನಂದಭೂಪತಿ…
ಬಾಗ್ಯಾಡೂ ಬಾಳಿಗಿಡಾ ತೂಗ್ಯಾಡೂ ತೆಂಗ
ಕೂಗ್ಯಾಡೂ ಕೋಗೀಲಿ ಹಾರಾಡೂ ಹಂಗ…
ಯಾಲಕ್ಕಿ ಗೊನಿ ಕಡಿಯೋ ಗಿಳಿ ಗೊರವಂಕಾ
ಹಾಲಕ್ಕಿ ನುಡಿತಾವ ಶಕನಾ ಬೆಳತಂಕಾ…
ಒಂಬತ್ತು ಗುಡ್ಡಾ ಎಂಬತ್ತು ಹಳ್ಳಾ –
ತೊಂಬತ್ತು ಜಾತಿ ಮೃಗಾ ನೂರಾರು ಕೊಳ್ಳಾ
ಇದ್ದರಿರಬೇಕಪ್ಪಾ ಇಂಥಾ ಸುಂದರ ನಾಡ –
ಸುದ್ದ ಸೊರಗಿದು ಇಲ್ಲೇ ಬಾಳು ಸುಕದ್ಹಾಡ…
.
-ಅಂತ ಶುರುವಾದರೆ ಗಳಿಗೆ ಗಳಿಗೆಗೆ ಹಾಡು ಈ ನಾಟಕದಲ್ಲಿ.
.
ಆ ದೊರೆಯಾದರೂ ಎಂಥವನು? ‘ತುಂಬಿದ ಕೊಡದ ಮ್ಯಾಗ ಕಲಶ ಕುಂತಂಗ’ ಶೋಭಿಸುವವನು. ಅಷ್ಟೇ ಅಲ್ಲ, ಆತ –
ಮಕ್ಕಳಂತ ಮನಸಿನ ಬೂಪಾ
ಅರಿಯಾ ಸೊಕ್ಕು ಕ್ವಾಪಾ-ಗೀಪಾ…
.
ಇಂಥ ಭೂಪನಿಗೀಗ ಮುದಿ ವಯಸ್ಸು. ತನ್ನ ಮಕ್ಕಳಿಗೆ ರಾಜ್ಯವನ್ನು ಹಂಚಿ ಕೊಟ್ಟು, ಶೇಷಾಯುಷ್ಯವನ್ನು ಅವರ ಮನೆಯಲ್ಲಿ ಸುಖವಾಗಿ ಕಳೆಯಬೇಕೆಂಬ ಕನಸು ಆತನದು. ಅವನೊಬ್ಬನೇ ಆದರೆ ಹೇಗಾದರೂ ಸಾಕಬಹುದು. ಜೊತೆಗೆ ಆತನ ನೂರು ಆಳುಗಳಿದ್ದರೆ? ಯಾರು ತಾನೇ ಸಹಿಸುತ್ತಾರೆ ಹೇಳಿ… ‘ನಿಷ್ಕರುಣಿ’ಗಳಿಗೆ ಎಲ್ಲಿಯ ಕರುಳು, ಎಲ್ಲಿಯ ಸಂಬಂದ?
.
ಮುದಿ ಎತ್ತಿಗ್ಯಾರಾರ ಮೇವ್ಹಾಕ್ಕಾರೇನs…?
ಕಟಕರ ಮನೀಗೆ ಅಟ್ಟತಾರಲ್ಲ…
.
-ಎಂಬ ಸತ್ಯ ಮುದಿ ದೊರೆಗೆ ಗೊತ್ತಾಗುತ್ತದೆ.
ನಾಡಿನ ದೊರೆ ಅಕ್ಷರಶಃ ಕಾಡುಪಾಲಾಗುತ್ತಾನೆ. ಅದೇ ದುಃಖದಲ್ಲಿ ಹುಚ್ಚನಾಗುತ್ತಾನೆ. ಹೆಣ್ಣು ಮಕ್ಕಳಿಬ್ಬರೂ ಒಳಗೊಳಗೇ ಒಬ್ಬರಿನ್ನೊಬ್ಬರ ಮೇಲೆ ಕತ್ತಿ ಮಸೆಯತೊಡಗುತ್ತಾರೆ. ಯಾವ ನಾಡಿನಲ್ಲಿ ಬಾಳು ‘ಸುಕದ ಹಾಡು’ ಅನಿಸಿತ್ತೋ ಅಲ್ಲೀಗ ಕಾದಾಟ ಸುರುವಾಗುತ್ತದೆ.
.
ಏಟು ದಿನದಿಂದ ಕಾದಿತ್ತೋ ಈ ಬೂಮಿ
ಮಟ್ಟ ಮದಲನೆ ಬ್ಯಾರಿ ಬಿತ್ತು ನೆತ್ತರ ಬೀಜ..
ಆತ ನಡಿ ಇನ್ನಾತ ಆಯುದಕ ಕೆಲಸಾತ
ಬಿಟ್ಟು ಬಿಡದಂಗಿನ್ನ ಈ ದೇಸ ಉರದೀತ…
.
ಇಂಥ ನಾಟಕ ಅದಾಗಲೇ ರಂಗವನ್ನೇರಿ ಸಂಭ್ರಮಿಸಬೇಕಾಗಿತ್ತಲ್ಲ… ಯಾರದೋ ಕಾರಣಕ್ಕೆ ಹಾಗೇ ಉಳಿದುಬಿಟ್ಟಿತಲ್ಲ… ನೋವಾಗದೇ ಇದ್ದೀತೆ…?
.
-೦-೦-೦-೦-೦-
.
ಅಂತೂ ‘ವಸಂತಾಗಮನ’ವಾಯಿತು… 1985ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ನಮ್ಮ ತಂಡಕ್ಕೆ ಒಂದು ರಂಗತರಬೇತಿ ಶಿಬಿರವನ್ನು ಮಂಜೂರು ಮಾಡಿತು. ಹಿರಿಯ ನಾಟಕಕಾರ ಡಾ. ಚಂದ್ರಶೇಖರ ಕಂಬಾರರು ಆಗ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ. ಈ  ಶಿಬಿರದ ಅವಕಾಶ ನಮಗೆ ಒದಗಿದ್ದರ ಹಿಂದೆ ಖಂಡಿತವಾಗಿಯೂ ಜಯತೀರ್ಥ ಜೋಶಿಯ ಪರಿಶ್ರಮವಿತ್ತು. ಇದನ್ನೊಂದು ‘ಪರಿಪೂರ್ಣ ಶಿಬಿರ’ವನ್ನಾಗಿ ಮಾಡುವ ಉತ್ಸಾಹ ಜೋಶಿಗೆ. ಅದರ ರೂಪರೇಷೆಗಳನ್ನು ಆತ ವಿವರಿಸಿದಾಗ ನಾವೆಲ್ಲ ಖುಶಿಗೊಂಡೆವು. ಅದು ಹುಬ್ಬಳ್ಳಿಯ ರಂಗಭೂಮಿ ಇತಿಹಾಸದಲ್ಲಿ ‘ಮೊಟ್ಟ ಮೊದಲ’ ಪರಿಪೂರ್ಣ ರಂಗ ಶಿಬಿರ. ಶಿಬಿರದ ಅವಧಿ ಆರು ವಾರ. ಶಿಬಿರಾರ್ಥಿಗಳಾಗಿ ಆಯ್ಕೆಯಾದವರು 40 ಜನ. ಅವರೆಲ್ಲರನ್ನೂ ನಾಟಕದಲ್ಲಿ ತೊಡಗಿಸಿಕೊಳ್ಳಬೇಕು.
ಶಿಬಿರ ಉದ್ಘಾಟನೆ ಆದದ್ದು 1985ರ ಮಾರ್ಚ್ 27ರಂದು. ಅಂದು ‘ವಿಶ್ವರಂಗಭೂಮಿ ದಿನ.’
.
(ಅಲ್ಲಿ ಹುಬ್ಬಳ್ಳಿಯಲ್ಲಿ ಶಿಬಿರ ಉದ್ಘಾಟನೆಯಾಗುತ್ತಿದ್ದ ಹೊತ್ತಿನಲ್ಲೇ ನಾನಿಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ದೊಡ್ಡಪ್ಪ’ ನಾಟಕಕ್ಕೆ ಪ್ರಶಸ್ತಿ ಸ್ವೀಕರಿಸುತ್ತಲಿದ್ದೆ.)
.
”…’ನಂದಭೂಪತಿ’ ಈ  ಶಿಬಿರದ ಪ್ರೊಡಕ್ಶನ್ನು…” ಅಂತ ಜೋಶಿ ಹೇಳಿದಾಗ ವೈಯಕ್ತಿಕವಾಗಿ ನನಗೆ ತುಂಬಾ ಖುಷಿ ಆಯಿತಾದರೂ, ತಂಡದ ಒಬ್ಬ ಜವಾಬ್ದಾರಿಯುತ ಪದಾಧಿಕಾರಿಯಾಗಿ ಎದೆ ನಡುಗಿತು. ಯಾಕಂದರೆ, ಅಕಾಡೆಮಿ ನಮಗೆ ನೀಡುವ ಮೊತ್ತ ಅತ್ಯಲ್ಪ. ಅದು ನಾಮಮಾತ್ರ ಎನ್ನಲು ಅಡ್ಡಿಯಿಲ್ಲ. ಉಳಿದಂತೆ ಹಣಕಾಸಿನ ವ್ಯವಸ್ಥೆಯನ್ನು ನಾವೇ ಮಾಡಿಕೊಳ್ಳಬೇಕು.
ಅದು ಯಾವುದೋ ಕಾಲದ ರಾಜನ ಕಥೆ. ಪೋಷಾಕು, ಆಯುಧಗಳು, ಲಾಂಛನಗಳು ಇತ್ಯಾದಿಗಳಿಗೇ ಆ ಕಾಲದಲ್ಲಿ ನಾವು ಖರ್ಚು ಮಾಡಿದ್ದು 7000/- ರೂಪಾಯಿಗಳು. ಇನ್ನುಳಿದಂತೆ ಅತಿಥಿ ಉಪನ್ಯಾಸಕರ ಖರ್ಚು, ಮುದ್ರಣ, ನಾಟಕದ ತಯಾರಿ ಮುಂತಾದವುಗಳಿಗೆ 25000/- ರೂಪಾಯಿಗಳು…! ಇನ್ನಿತರ ವೆಚ್ಚ ಮತ್ತೆ  8000/- ರೂಪಾಯಿಗಳು. ಒಟ್ಟು 40,000/- ರೂಪಾಯಿಗಳ ದೊಡ್ಡ ಮೊತ್ತ.
.
ಸರಿ, ಜೋಳಿಗೆ ಹೆಗಲೇರಿತು… ಕಾಲ ಚಪ್ಪಲಿ ಸವೆಯಿತು… ಹಣ ತರುವುದರಲ್ಲೇ ನಾವು ಹೆಣವಾದೆವು. ಆದರೆ, ಸಮಾಧಾನದ ವಿಷಯವೆಂದರೆ ನಮ್ಮ ಶಿಬಿರದ ವೇಳೆಗೆ ಸರಿಯಾಗಿ ಭೋಪಾಲ ‘ರಂಗಮಂಡಲ’ದ ನಾಟಕಗಳೊಂದಿಗೆ ಬಿ.ವಿ. ಕಾರಂತರು ಹುಬ್ಬಳ್ಳಿಗೆ ಬಂದದ್ದು. ಮತ್ತು ಆ ನಾಟಕಗಳನ್ನು ನೋಡಲು ಸುತ್ತಮುತ್ತಲಿನ ನೂರು ಕಿಲೋಮೀಟರು ಅಂತರದಲ್ಲಿರುವ ರಂಗ ತಜ್ಞರು ಹುಬ್ಬಳ್ಳಿಗೆ ಧಾವಿಸಿದ್ದು. ನಮ್ಮ ಶಿಬಿರಾರ್ಥಿಗಳಿಗೆ ಶ್ರೇಷ್ಠ ನಾಟಕಕಾರರ ನಾಟಕಗಳು ಮತ್ತು ಶ್ರೇಷ್ಠ ಅಭಿನಯಪಟುಗಳ ನಟನೆಯನ್ನು ನೋಡುವ, ಆ ಕಲಾವಿದರೊಂದಿಗೆ ವಿಚಾರ-ವಿನಿಮಯ ನಡೆಸುವ ಸುವರ್ಣಾವಕಾಶ. ಕೆ.ವಿ. ಸುಬ್ಬಣ್ಣ, ಟಿ.ಪಿ. ಅಶೋಕ ಮುಂತಾದವರು ಶಿಬಿರಾರ್ಥಿಗಳಿಗೆ ಪಾಠ ಮಾಡಿದರು. ಕಾರಂತರು ಮೂರು ದಿನ ‘ನಾಟಕಗಳಲ್ಲಿ ಸಂಗೀತ ಮತ್ತು ನಾದ’ ಎಂಬ ವಿಷಯವಾಗಿ ಪ್ರಾತ್ಯಕ್ಷಿಕೆ ಸಹಿತ ಉಪನ್ಯಾಸ ನೀಡಿದರು. ಪ್ರಸಾಧನ, ಪರಿಕರ ತಯಾರಿ, ಪೋಷಾಕು ನಿರ್ವಹಣೆ ಮುಂತಾಗಿ ನೇಪಥ್ಯದ ವಿಚಾರಗಳನ್ನೂ ಶಿಬಿರಾರ್ಥಿಗಳು ಅರಿತುಕೊಂಡರು.
ನಾಟಕದ ತಾಲೀಮು ಶುರುವಾಯಿತು. ಆದರೆ ವಾರ ಕಳೆಯುವ ವೇಳೆಗೆ ‘ನಂದಭೂಪತಿ’ಯ ಪಾತ್ರ ಮಾಡಬೇಕಾಗಿದ್ದ ಶಿಬಿರಾರ್ಥಿಯ ಆರೋಗ್ಯ ಕೈಕೊಟ್ಟಿತು.  ಕಾರಣ ಜಯತೀರ್ಥ ಜೋಶಿಯೇ ಆ ಪಾತ್ರ ವಹಿಸಬೇಕಾಯಿತು.
ಮೊದಲ ಪ್ರಯೋಗದ ಒಂದು ಚಿತ್ರ… ನಂದಭೂಪತಿಯಾಗಿ ಜಯತೀರ್ಥ ಜೋಶಿ
.
ಒಮ್ಮೆ ಕಾರಂತರು ಶಿಷ್ಯ ಮಾಡಿಸುತ್ತಿದ್ದ ನಾಟಕದ ತಾಲೀಮನ್ನು ನೋಡಲು ಬಂದರು. ‘ನಂದಭೂಪತಿ’ಯ ಹಸ್ತಪ್ರತಿ ಅವರ ಕಣ್ಣಿಗೆ ಬಿಟ್ಟು. ಅದನ್ನೆತ್ತಿಕೊಂಡು ಕೂತು ಒಂದೇ ಏಟಿಗೆ ಓದಿ ಮುಗಿಸಿದರು. ರೂಪಾಂತರವನ್ನು ಮೆಚ್ಚಿಕೊಂಡರು, ಹಾಡುಗಳ ಬಗ್ಗೆ ವಿಶೇಷ ಒಲವು ತೋರಿಸಿದರು. ”ಒಂದು ವಾರ ಬಿಡುವಿದ್ದರೆ ನಾನೇ ಟ್ಯೂನ್ ಮಾಡಿಕೊಡುತ್ತಿದ್ದೆ…” ಎಂದು ಪೇಚಾಡಿಕೊಂಡರು. ಅಷ್ಟು ಹೊತ್ತಿಗೆ ಇದರಲ್ಲಿಯ ಬಹುತೇಕ ಹಾಡುಗಳಿಗೆ ಹುಬ್ಬಳ್ಳಿಯ ಹಿರಿಯ ಸಿತಾರ ವಾದಕ ಮಿತ್ರ ಶ್ರೀನಿವಾಸ ಜೋಶಿ ರಾಗಸಂಯೋಜನೆ ಮಾಡಿಯಾಗಿತ್ತು.
ಮಜದ ಸಂಗತಿ ಎಂದರೆ, ಕರ್ನಾಟಕದ ರಂಗಯಾತ್ರೆ ಮುಗಿಸಿ, ಭೋಪಾಲಕ್ಕೆ ಹೋದ ಕಾರಂತರು ಈ ನಾಟಕದ ಪ್ರದರ್ಶನ ಇನ್ನು ಒಂದು ವಾರ ಇದೆ ಎಂದಾಗ, ತಾವು ಇಂತಿಂಥ ದಿನ ಬೆಳಗಾವಿಗೆ ಬರುತ್ತಿರುವುದಾಗಿಯೂ, ಅಲ್ಲಿಂದ ಹುಬ್ಬಳ್ಳಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಬೇಕೆಂದೂ ತಂತಿ ಸಂದೇಶ ಕಳಿಸಿದರು.
.
ಹುಬ್ಬಳ್ಳಿಗೆ ಬಂದ ಅವರು, ಒಂದು ಸಾಧಾರಣ ಹೋಟಲಿನಲ್ಲಿಯೇ ನಾಲ್ಕು ದಿನ ಉಳಿದು, ಒಂದೆರಡು ಹಾಡುಗಳಿಗೆ ಅದ್ಭುತ ಎಂಬಂಥ ಟ್ಯೂನ್ ಗಳನ್ನು ಹಾಕಿದರು. ಹುಡುಗರೊಡನೆ ಹುಡುಗರಾಗಿ, ತಾಲೀಮಿನ ವೇಳೆಯಲ್ಲಿ ಹಾಜರಿದ್ದು, ಹಾಡುಗಳಿಗೆ ಅಲ್ಲಲ್ಲಿ ಕುಸುರಿ ಕೆಲಸಗಳನ್ನೂ ಮಾಡಿದರು.
.
1985ರ ಮೇ  12ರಂದು ಶಿಬಿರದ ಸಮಾರೋಪ ಸಮಾರಂಭ. ನಟರೂ ನಾಟಕಕಾರರೂ ಆಗಿದ್ದ ಕರ್ನಾಟಕ ಸರಕಾರದ ಆಗಿನ ಸಂಸ್ಕೃತಿ ಸಚಿವ ಶ್ರೀ ಎಂ. ಪಿ. ಪ್ರಕಾಶ್ ಅವರು ಅಂದಿನ ಮುಖ್ಯ ಅತಿಥಿ. ನಾವು ಬಿ.ವಿ. ಕಾರಂತರಂಥ ಘಟಾನುಘಟಿಯನ್ನು ಆ ಸಭೆಗೆ ಕರೆತಂದುದರ ಬಗೆಗೆ ಪ್ರಕಾಶ್ ಅವರಿಗೆ ಅಚ್ಚರಿ. ಸಂಜೆ ‘ನಂದಭೂಪತಿ’ ನಾಟಕ ಪ್ರದರ್ಶನವಿರುವ ವಿಚಾರವನ್ನೂ, ಅದರ ಕೆಲವು ಹಾಡುಗಳಿಗೆ ಕಾರಂತರು ಟ್ಯೂನ್ ಮಾಡಿರುವ ವಿಚಾರವನ್ನೂ ತಿಳಿದ ಮೇಲಂತೂ ಅವರು ಆ ಸಂಜೆಯ ತಮ್ಮ ರಾಜಕೀಯ ಸಭೆಯನ್ನು ರದ್ದುಗೊಳಿಸಿ, ನಾಟಕ ನೋಡಲು ಬಂದರು. ತಾವು ಟಿಕೆಟ್ಟು ಕೊಂಡದ್ದಲ್ಲದೆ, ತಮ್ಮೊಂದಿಗೆ ಬಂದಿದ್ದವರಿಗೆಲ್ಲ, ”ಟಿಕೆಟ್ಟು ತೊಗೊಂಡು ನಾಟಕ ನೋಡ್ರಿ,” ಅಂತ ತಾಕೀತು ಮಾಡಿದರು.
.
ಅಂದಿನ ಪ್ರದರ್ಶನವನ್ನು ನಾಟಕಕಾರ ಜಿ.ಬಿ. ಜೋಶಿ, ವಿಮರ್ಶಕ ಕೀರ್ತಿನಾಥ ಕುರ್ತಕೋಟಿ, ಜಾನಪದ ತಜ್ಞ ಮುದೇನೂರ ಸಂಗಣ್ಣ, ರಂಗ ನಿರ್ದೇಶಕ ಆರ್. ನಾಗೇಶ್ ಮುಂತಾದ ಹಿರಿಯರೆಲ್ಲ ನೋಡಿ ರೂಪಾಂತರದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
.
ಮುಂದೆ, ಸಿಕ್ಕಾಗಲೆಲ್ಲ ಮುದೇನೂರ ಸಂಗಣ್ಣನವರು ನಾನು ಬಳಸಿದ ಭಾಷೆಯ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತನಾಡುತ್ತ, ”ನಿಮ್ಮ ಸಂಭಾಷಣೆಗಳಲ್ಲಿಯ ಜಾನಪದೀಯ ಭಾಷೆ ಮೋಡಿ ಮಾಡುತ್ತದೆ…” ಅನ್ನುತ್ತಿದ್ದರು. ”ಲೀಲಾವತಿ-ಶೀಲಾವತಿ ಮುಂತಾಗಿ ದೇಸಿ ಪಾತ್ರಗಳು… ಚೆನ್ನಾಗಿದೆ ನಿಮ್ಮ ರೂಪಾಂತರ, ನಿಮ್ಮ ಹಾಡುಗಳು… ಬರೀತಾ ಇರಿ, ಬಿಡಬೇಡಿ,” ಅಂತ ಮೆಚ್ಚುನುಡಿ ಆಡುತ್ತಲೇ ಇದ್ದರು.
.
ಕಾರಂತರು ಹುಬ್ಬಳ್ಳಿಗೆ ಬಂದು ನಾಲ್ಕಾರು ದಿನ ನಮ್ಮೊಂದಿಗಿದ್ದರಲ್ಲ… ಅದಕ್ಕಾಗಿ ಒಂದೇ ಒಂದು ರೂಪಾಯಿ ಗೌರವಧನವನ್ನೂ ಬಯಸಲಿಲ್ಲ. ಕೊಡಲು ಹೋದರೂ  ಸ್ವೀಕರಿಸಲಿಲ್ಲ. ”ನಾನು ಬಂದದ್ದು ಈ ನಾಟಕದ ‘ಭಾಷೆ’ಯನ್ನು ಎಂಜಾಯ್ ಮಾಡೋದಕ್ಕೆ… ಹಾಡುಗಳನ್ನು ಸವಿಯೋದಕ್ಕೆ… ನನ್ನ ಖರ್ಚನ್ನ ಸರಕಾರ ನೋಡಿಕೊಳ್ತದೆ. ಡೋಂಟ್ ವರಿ,” ಅಂತ ಸಂಘಟಕರ ಬೆನ್ನು ತಟ್ಟಿ,”ಒಳ್ಳೆ ಕೆಲಸ ಮಾಡ್ತಾ ಇದ್ದೀರಿ. ಹೀಗೆ ಮುಂದುವರಿಸಿ,” ಅಂದವರೇ ಬೆಳಗಾವಿಯ ಬಸ್ಸು ಹತ್ತಿಬಿಟ್ಟರು.
.
ಅ ಕಾಲಕ್ಕೆ ಹುಬ್ಬಳ್ಳಿಯ ‘ಅಭಿನಯ ಭಾರತಿ’ ತಂಡ 40,000/- ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಿಸಿದ ಈ ನಾಟಕ ಕಂಡದ್ದು ಎರಡೇ ಎರಡು ಪ್ರಯೋಗಗಳನ್ನು. ಆ ಕಾಲದ ಯಾವುದೇ ಒಂದು ಹವ್ಯಾಸಿ ತಂಡಕ್ಕೆ ಇದು ಆರ್ಥಿಕವಾಗಿ ನಿಜಕ್ಕೂ ಒಂದು ದೊಡ್ಡ ಪೆಟ್ಟೇ.
.
ಆದರೆ, ಮುಂದೆ ಕೆಲ ದಿನಗಳಲ್ಲೇ ಹೈದರಾಬಾದ್ ದೂರದರ್ಶನ ಕೇಂದ್ರದವರು ‘ನಂದಭೂಪತಿ’ ತಂಡವನ್ನು ಕರೆಸಿಕೊಂಡು, ಆರು ದಿನಗಳ ಕಾಲ ಈ ನಾಟಕದ ಚಿತ್ರೀಕರಣವನ್ನು ನಡೆಸಿದರು. ಹೀಗಾಗಿ ತಂಡಕ್ಕೆ ಆಗಿದ್ದ ಲುಕ್ಸಾನನ್ನು ಮರೆಯುವಂತಾಯಿತು. ನಂತರದ ದಿನಗಳಲ್ಲಿ ಈ ನಾಟಕ ಆರು ಸಾಪ್ತಾಹಿಕ ಕಂತುಗಳಲ್ಲಿ ಪ್ರಸಾರಗೊಂಡಿತು. ಆಗ ಬೆಂಗಳೂರಲ್ಲಿ ಇನ್ನೂ ದೂರದರ್ಶನದ ಕೇಂದ್ರ ಕಾರ್ಯಾರಂಭ ಮಾಡಿರಲಿಲ್ಲ. ನಾಟಕಗಳಂಥ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಹೈದರಾಬಾದಿನಲ್ಲಿಯೇ ನಿರ್ಮಾಣಗೊಳ್ಳುತ್ತಿದ್ದವು.
ಹೈದರಾಬಾದ್ ದೂರದರ್ಶನ ಕೇಂದ್ರದಲ್ಲಿ ಚಿತ್ರೀಕರಣಗೊಂಡ ಒಂದು ಸನ್ನಿವೇಶದಲ್ಲಿ ಜಯತೀರ್ಥ ಜೋಶಿ ಮತ್ತು ಸಹನಟ
.
ದೂರದರ್ಶನದ ಪ್ರಯೋಗದಲ್ಲಿ ‘ನಂದಭೂಪತಿ’ಯ ಪಾತ್ರದಲ್ಲಿ ಜಯತೀರ್ಥ ಜೋಶಿ, ಶೀಲಾವತಿಯ ಪಾತ್ರದಲ್ಲಿ ಆತನ ಪತ್ನಿ ಸ್ನೇಹಾ, ಮತ್ತು ಹುಚ್ಚಮಲ್ಲನ ಪಾತ್ರದಲ್ಲಿ ನಾನು… ಅಭಿನಯಿಸಿದೆವು.
ಧಾರವಾಡದ ಜಾನಪದ ಗಾಯಕ ಬಸಲಿಂಗಯ್ಯಾ ಹಿರೇಮಠ ಈ ನಾಟಕದ ನಿರೂಪಕನಾಗಿ, ಎಲ್ಲರ ಎದೆಯೊಳಗೆ ಇದರ ಪದಗಳು ಕೂಡುವಂತೆ ಮಾಡಿದರು.
ಹೈದರಾಬಾದ್ ದೂರದರ್ಶನ ಕೇಂದ್ರದಲ್ಲಿ ಚಿತ್ರೀಕರಣ ಮುಗಿದ ದಿನ ‘ಅಭಿನಯ ಭಾರತಿ’ ತಂಡದ ಕಲಾವಿದರು
.
1999ರಲ್ಲಿ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ‘ಶಿವಸಂಚಾರ’ಕ್ಕಾಗಿ ಈ ನಾಟಕವನ್ನು ಧಾರವಾಡದ ಶ್ರೀಮತಿ ವಿಶ್ವೇಶ್ವರಿ ಮತ್ತು ಶ್ರೀ ಬಸಲಿಂಗಯ್ಯಾ ಹಿರೇಮಠ ಜೊತೆಯಾಗಿ ನಿರ್ದೆಶಿಸಿದರು. ಅದರ ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ರಾಜ್ಯದ ಒಳ-ಹೊರಗೆ ನೀಡಿ, ಈ ನಾಟಕ ಎಲ್ಲೆಡೆಯೂ ತಲಪುವಂತೆ ಮಾಡಿದರು. ಎರಡು ವರ್ಷದ ಹಿಂದೆ ಧಾರವಾಡ ರಂಗಾಯಣದ  ‘ಬಹುರೂಪಿ’ ನಾಟಕೋತ್ಸವದಲ್ಲೂ ಹಿರೇಮಠ ದಂಪತಿ ಈ ನಾಟಕವನ್ನು ಧಾರವಾಡದ ಕಲಾವಿದರಿಂದ ಮಾಡಿಸಿದರು.
.
‘ನಂದಭೂಪತಿ’ ಆರಂಭದಲ್ಲಿ ನನಗೆ ತೊಂದರೆ ಕೊಟ್ಟಿರಬಹುದು. ಆದರೆ ಅಂದು ಈ ಶಿಬಿರದ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ ಮೂವರು ಪ್ರತಿಭಾವಂತರು ಇಂದು ಕನ್ನಡ ರಂಗಭೂಮಿಯಲ್ಲಿ ಹೆಸರು ಮಾಡಿರುವುದು ನನಗೆ ಅತ್ಯಂತ ನಲಿವಿನ ಸಂಗತಿ.
.
ಹೌದು. ಶಿಸ್ತಿನ ನಿರ್ದೇಶಕ ಪ್ರಮೋದ ಶಿಗ್ಗಾಂವ್, ಹಾಸ್ಯ ನಾಟಕಗಳನ್ನು ನಿರ್ಮಿಸುತ್ತ  ಮುಂದುವರೆದಿರುವ ಯಶವಂತ ಸರದೇಶಪಾಂಡೆ ಮತ್ತು ಮೈಸೂರಿನ ರಂಗಾಯಣದ ಪ್ರಮುಖ ನಟ ಪ್ರಶಾಂತ ಹಿರೇಮಠ.
.
ಈ  ಮೂವರೂ ಇಂದಿಗೂ ನನ್ನ ನೆನಪುಗಳನ್ನು ತಾಜಾಗೊಳಿಸುತ್ತಿರುತ್ತಾರೆ. ಮತ್ತೆ ಮತ್ತೆ ಹಾಡು ಬರೆಯಿರೆಂದು ನನ್ನನ್ನು ಕಾಡುತ್ತಿರುತ್ತಾರೆ.

‍ಲೇಖಕರು avadhi-sandhyarani

January 20, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. prakash hegde

    ವಾಹ್ !!….
    ಇಂದು ನಮ್ಮ ಕೈ ಸೇರಲಿರುವ ಪುಸ್ತಕದ ಬಗೆಗೆ ಮತ್ತಷ್ಟು ಕುತೂಹಲ ಹುಟ್ಟಿಸಿ ಬಿಡ್ತು…..
    ಇನ್ನೇನು ಕೆಲವೇ ಗಂಟೆಗಳಲ್ಲಿ ನಮ್ಮ ಕೈಸೇರಲಿದೆಯಲ್ಲ..
    ಓದುವ ಹುಮ್ಮಸ್ಸು…
    ನಿಮ್ಮ ಬದುಕಿನ ಅನುಭವಗಳ ಮಾಲೆ ಓದಲು ತುಂಬಾ ಖುಷಿ ಕೊಡುತ್ತಿದೆ….
    ನಿಮಗೆ ಬರೆಯಲು ಅಂಕಣ ಒದಗಿಸಿಕೊಟ್ಟ “ಅವಧಿಗೆ” ಮತ್ತೊಮ್ಮೆ ನಮ್ಮೆಲ್ಲರ ವಂದನೆಗಳು….

    ಪ್ರತಿಕ್ರಿಯೆ
  2. Rekha Nataraj

    ಈ ನಿಮ್ಮ ಅನುಭವಗಳನ್ನು ಓದುವುದೇ ಒಂದು ಆನಂದ, ನಾವು ಕಾಣದ ಕೇಳದ ಲೋಕಕ್ಕೆ ಕೊಂಡೊಯ್ದು, ನಮ್ಮನ್ನು ಅಲ್ಲಿ ಪ್ರತಿಷ್ಟಾಪಿಸಿ ಬಿಡುತ್ತದೆ. ಎಲ್ಲವೂ ನಮ್ಮ ಕಣ್ಮುಂದೆ ನಡೆದಂತೆ ಭಾಸವಾಗುತ್ತದೆ. ನಂದಭೂಪತಿಯ ಆವಾಹನೆ, ಅನಾವರಣಗಳ ಹಿಂದಿನ ಕಥೆ ಬಹಳ ಸ್ವಾರಸ್ಯವಾಗಿವೆ, ನಿಮ್ಮ ಅಪ್ರತಿಮ ಶ್ರಮದ ಬೆಲೆ ಅರಿವಾಗುತ್ತದೆ. ನಿಮ್ಮೆಲ್ಲ ರಂಗದ ಬಳಗದ ಲೋಕವನ್ನು ಪರಿಚಯಿಸಿಕೊಂದ ಹಾಗಾಯ್ತು. ಇನ್ನು ನಿಮ್ಮ ಅವ್ವನಿಗೊಂದು ದೊಡ್ಡ ಸಲಾಂ. ನಾಗಮಂದಲದ ಹಾಡಿನ ಹಿನ್ನೆಲೆಯನ್ತು ಬಹಳ ಚೆನ್ನಾಗಿದೆ. ಎಂದೋ ನೋಡಿದ ದೃಶ್ಯವನ್ನು ಅಷ್ಟು ಚೆನ್ನಾಗಿ ಉಪಯೋಗಿಸಿಕೊಳ್ಳುವುದು ನಿಮ್ಮಂಥವರಿಗೆ ಮಾತ್ರ ಸಾಧ್ಯ.

    ಪ್ರತಿಕ್ರಿಯೆ
  3. ಈಶ್ವರ ಕಿರಣ

    ಆಹಾ, ನಂದಭೂಪತೀ.. ತುಂಬಾ ಚೆನ್ನಾಗಿದೆ ನೆನಪಿನ ಕತೆ. ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ನೆನಪಿನ ಸರಣಿಯ ಈ ಅಧ್ಯಾಯಕ್ಕೂ ಒಳ್ಳೆಯ ಲಿಂಕ್.

    ಪ್ರತಿಕ್ರಿಯೆ
  4. umesh desai

    “ಮನೆ ಮನೆಯಲ್ಲಿ” ನೀವು ಬರೀತಿದ್ರ…????
    ಓಹ್ ಎಂಥಾ ಕಾರ್ಯಕ್ರಮರಿ ಅದು.. ಅದೂ ಕಡೀಕೆ ಅವ ತನ್ನ
    ಹೆಂಡತಿಗೆ ಚಾಷ್ಟೀ ಮಾಡಕೋತ ಆಡುವ ಮಾತು ಇನ್ನೂ ಕಿವ್ಯಾಗ ಅವ..
    ನಂದಭೂಪತಿ ಪುಸ್ತಕದ ಹಿಂದಿನ ರೋಚಕ ಇತಿಹಾಸ ಜುಮ್ ಅನಿಸ್ತು..ಅಂತೂ
    ಒಂದಾನೊಂದು ಕಾಲದಾಗ ಹುಬ್ಬಳ್ಳಿನೂ ನಾಟಕದ ಕೇಂದ್ರ ಆಗಿತ್ತು ಅನ್ನೂದು ತಿಳೀತು..

    ಪ್ರತಿಕ್ರಿಯೆ
  5. Ahalya Ballal

    ಸರ್, ನನ್ ಪಾಲಿಗೆ ಈ ನೆನಪುಗಳ ಸರಣಿಯೇ ಒಳಗಣ್ಣಿನೆದುರು ಅಭಿನೀತಗೊಳ್ಳುವ ಒಂದು ನಾಟಕದ script ತರಹ ಕಾಣಿಸ್ತಿದೆ. ಯಾವುದೋ ಒಂದು ಸನ್ನಿವೇಶಕ್ಕೆ ಅನುಗುಣವಾಗಿಯೋ ಕಥೆಯ ಮುಂದುವರಿಕೆಗಾಗಿಯೋ ಇನ್ನೇನು ಒಂದೆರಡು “ಗೋಪಾಲ ವಾಜಪೇಯಿ” ಸ್ಟೈಲಿನ ಹಾಡುಗಳು ಬರಬಹುದು, ಬಂದೇ ಬರುತ್ತವೆ, ಬಂದಾಗ ನಾನು “ಆಹಾ” ಅಂತೇನೆ…ಹೀಗೆ ಏನೆಲ್ಲ ನಿರೀಕ್ಷೆಗಳು!!
    ನಂದಭೂಪತಿಗೆ ಪರಾಕು!

    ಪ್ರತಿಕ್ರಿಯೆ
  6. hipparagi Siddaram

    ಸರ್, ಆರಂಭದಲ್ಲಿ ಕೃತಿಯೊಂದರ ಜನನವೇ ಕುತೂಹಲಾತ್ಮಕವಾಗಿ, ತ್ರಾಸದಾಯಕವಾಗಿ ತೋರಿದರೂ ಮುಂದಿನ ದಿನಗಳಲ್ಲಿ ‘ನಂದಭೂಪತಿ’ಯಾಗಿ ಬಯಲುಸೀಮೆಯ ಜಾನಪದೆ ಸೊಗಡಿನೊಂದಿಗೆ ಜನಪ್ರಿಯವಾಗುವುದರೊಂದಿಗೆ ಯಶಸ್ವಿಯಾಯಿತಲ್ಲ….ಅದುವೇ ನಿಮ್ಮ ರಂಗಸಾಹಿತ್ಯದ ಪ್ರಖರತೆಗೆ ಸಾಕ್ಷಿ….ಇದೇ 20ರಂದು ಪುಸ್ತಕ ರೂಪದಲ್ಲಿ ಹೊರಬಂದ ‘ನಂದಭೂಪತಿ’ ನಾಡಿನ ಹಲವಾರು ರಂಗತಂಡಗಳಿಂದ ಹೊಸ ರಂಗಸಾಧ್ಯತೆಗಳೊಂದಿಗೆ ನಿರಂತರ ಪ್ರಯೋಗಗೊಳ್ಳಲಿ ಎಂದು ಹಾರೈಸುತ್ತೇನೆ….ನಮಸ್ಕಾರಗಳು !

    ಪ್ರತಿಕ್ರಿಯೆ
  7. ಉಷಾಕಟ್ಟೆಮನೆ

    ನಾಟಕವೊಂದು ಹುಟ್ಟುವ ಮತ್ತು ರಂಗಪ್ರದರ್ಶನಗೊಳ್ಳುವ ಸುದೀರ್ಘ ಹಾದಿ ಯಾವಾಗಲೂ ರೋಚಕವೇ..
    ಬರಹ ಚೆನ್ನಾಗಿದೆ ಸರ್.

    ಪ್ರತಿಕ್ರಿಯೆ
  8. Anuradha.B.Rao

    ನಂದಭೂಪತಿಗೆ ಜಯವಾಗಲಿ .ನಾಟಕದ ಹುಟ್ಟು ,ತಾಲೀಮು ,ಪ್ರದರ್ಶನ ,ಕಣ್ಣೆದುರೇ ನಡೆಯುತ್ತಿದೆಯೇನೂ ಅನ್ನುವ ಹಾಗಿದೆ ನಿಮ್ಮ ಬರಹ. ಹೃತ್ಪೂರ್ವಕ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: