ನಾ ದಾಮೋದರ ಶೆಟ್ಟಿ ಅವರ ‘ಮೇಲೋಗರ’

ದೀಪಕ್ ಜಿ ಕೆ

ಸಂಗ್ರಹ ಯೋಗ್ಯ ಪುಸ್ತಕ ಯಾವುದು, ಅದರ ಲಕ್ಷಣಗಳೇನು ಎಂದೇನಾದರೂ ಕೇಳಿದರೆ ಉತ್ತರಗಳು ಹಲವಾರು. ಆಗಾಗ ಓದಲು ಬಯಸುವ ಅಥವಾ ಆಧಾರಕ್ಕಾಗಿ ಅವಲೋಕಿಸಲು ಬೇಕಾದ ಪುಸ್ತಕ ಎನ್ನಬಹುದು; ಕೆಲವೊಮ್ಮೆ ತಮ್ಮಿಷ್ಟದ ಲೇಖಕರ ಪುಸ್ತಕಗಳನ್ನು ಕೂಡ ಸಂಗ್ರಹಿಸಿಡಬಹುದು; ಮತ್ತೆ ಕೆಲ ಪುಸ್ತಕಗಳು ತಮ್ಮ ವಿಷಯಗಳು, ನೀಡುವ ಮಾಹಿತಿ, ಪ್ರಚೋದಕ ಸಂಗತಿಗಳು ಮತ್ತು ಪ್ರಸ್ತುತತೆಯಿಂದಾಗಿ ಸಂಗ್ರಹಯೋಗ್ಯ ಎನಿಸಿಕೊಳ್ಳುತ್ತದೆ.

ಬಿಡಿ ಲೇಖನಗಳ ಸಂಕಲನವಾಗಿದ್ದೂ ಕೂಡ ಈ ಗುಂಪಿಗೆ ಡಾ. ನಾ.ದಾಮೋದರ ಶೆಟ್ಟಿ ಯವರ ‘ಮೇಲೋಗರ’ ಸೇರುವುದು. ಇಲ್ಲಿ, ವೈವಿಧ್ಯಮಯ ವಿಷಯಗಳ ಬಗ್ಗೆ ಅತ್ಯಂತ ಅಧಿಕಾರಯುಕ್ತವಾಗಿ ನಾ.ದಾ.ರವರು ವಿವರಿಸಿರುವ ಪರಿ ಪ್ರಶಂಸಾರ್ಹ. ಕವಿ ನಿಸಾರರು, ಮುದ್ದಣ, ಕಯ್ಯಾರ ಕಿಞ್ಞಣ್ಣ ರೈ ರವರಂಥವರು ಆಪ್ಯಾಯತೆಯಿಂದ ನಮ್ಮನ್ನು ಆವರಿಸಿಕೊಳ್ಳುತ್ತಾರೆ.

ನಿಸಾರರ ಧಾರ್ಮಿಕ ದ್ವಂದ್ವಗಳನ್ನು ತೋರುವ ಕವನಗಳೊಡನೆ ಅವರ ನಿಷ್ಪಕ್ಷಪಾತವಾದ ಕಾವ್ಯರಚನೆ, ಅವರನ್ನು ಯಾವುದೇ ಧರ್ಮ, ಪಂಥ ಹೊರತಾದ ಪ್ರೀತಿಯ ಕವಿಯನ್ನಾಗಿಸಿದೆ. ಹಾಗೆಯೇ, ಅನೇಕ ಉದಾಹರಣೆಗಳೊಡನೆ, ನಿಸಾರರು ನಂಬಿದ ಕಾವ್ಯಮೌಲ್ಯದ ಸೊಗಡನ್ನು ಲೇಖಕರು ನೀಡುತ್ತಾರೆ.

ಲೇಖಕರ ಅಚ್ಚು ಮೆಚ್ಚಿನ ‘ನಂದಳಿಕೆ ಲಕ್ಷ್ಮೀ ನಾರಣಪ್ಪ’ ಎರಡು ಮುಖ್ಯ ವಿಷಯಗಳಿಗೆ ಗ್ರಾಸವಾಗುತ್ತಾನೆ. ಅವನ ಕೃತಿನಾಮ ‘ಮುದ್ದಣ’ನ ಬಗ್ಗೆ ಒಂದಾದರೆ, ಪ್ರೇಯಸಿ ಮನೋರಮೆ (ಗಮನಿಸಿ: ಹೆಂಡತಿ ‘ಕಮಲೆ’ಯಲ್ಲ) ಮತ್ತೊಮ್ಮೆ ಕನ್ನಡಿಗರ ಮನಕ್ಕೆ ತಾಗುತ್ತಾಳೆ.
ನಾದಾರವರು ಅತ್ಯಂತ ಬದ್ಧತೆಯಿಂದ, ಅಂದಿನ ಘಟನೆಗಳ ವಿವರಗಳನ್ನು ನೀಡುತ್ತಲೇ, ಸಾಂದರ್ಭಿಕ ಸಾಕ್ಷ್ಯ ಸಹಿತ ಈರ್ವರ ವಿಷಯಗಳನ್ನು ಪ್ರಸ್ತುತಪಡಿಸಿರುವ ರೀತಿ ಓದುಗರನ್ನು ಮನ ಸೆಳೆಯುವುದರಲ್ಲಿ ಸಂಶಯವಿಲ್ಲ.

‘ಸಾಹಿತ್ಯವೂ ಪ್ರತಿಭಟನೆಯೂ’ ಲೇಖನ, ಕನ್ನಡದಲ್ಲಿ ಬಂದ ಅನೇಕ ಪ್ರತಿಭಟನೆ ಸಂಬಂಧಿತ ಹೆಜ್ಜೆಗಳನ್ನು- ಪಂಪನಾದಿಯಾಗಿ ಇತ್ತೀಚಿನ ಬಂಡಾಯ ಸಾಹಿತ್ಯದವರೆಗೂ- ಗುರುತಿಸುವ ಪ್ರಯತ್ನ ಮಾಡುತ್ತದೆ. ಇಲ್ಲಿ ನಾ.ದಾ.ರವರು ಪ್ರಮುಖವಾಗಿ ದಲಿತ, ಬಂಡಾಯದ ಅಂಗವಾಗಿ ಆಧುನಿಕ ಸಾಹಿತ್ಯದಲ್ಲಿ ಹೊಕ್ಕ ಪ್ರತಿಭಟನೆಗಳನ್ನು ಗುರುತಿಸುತ್ತಾರೆ. ಹಾಗೆ‌ ಮಾಡುವಾಗ, ಹಿಂದೊಮ್ಮೆ ಪ್ರಬಲವಾಗಿದ್ದ ‘ ಪತ್ರಿಕೋದ್ಯಮ’ ಮತ್ತು ಲಂಕೇಶ್, ಖಾದ್ರಿಶಾಮಣ್ಣ ರಂತಹ ಸಂಪಾದಕರ ಕೊಡುಗೆಯನ್ನು ಬಿಟ್ಟಿದ್ದಾರೆ. ನಮ್ಮ ಸಾಹಿತ್ಯ ಪ್ರಕಾರದಲ್ಲಿ ಪತ್ರಿಕೋದ್ಯಮವನ್ನು ಗಂಭೀರವಾಗಿ ಪರಿಗಣಿಸದಿರುವುದೂ ಕಾರಣವಿರಬಹುದು.

‘ಕೇರಳದಲ್ಲಿ ದಲಿತ ಸಾಹಿತ್ಯ ಹೀಗೇಕೆ?’ ಎಂದು ಪ್ರಶ್ನಿಸುತ್ತಲೇ, ಕಮ್ಯೂನಿಸ್ಟ್ ರ ಸಮಾನತೆಯ ಮುಖವಾಡದ ಕಾರಣದಿಂದಾಗಿ ಇದೊಂದು ಪ್ರಬಲ ಸಾಹಿತ್ಯ ಆಗದೆ ಇದ್ದಿರಬಹುದೆಂಬ ಚರ್ಚೆಯನ್ನು ಹುಟ್ಟು ಹಾಕುತ್ತದೆ. ಹಾಗೆಯೆ ನಮ್ಮ ಕರ್ನಾಟಕದಲ್ಲಿ ಜಾತಿವಾದ ಹೆಚ್ಚಾಗಿದ್ದುದರ ಕಾರಣವೇನಿರಬಹುದೆಂಬ ಚಿಂತನೆಗೂ ಬೀಜ ಬಿತ್ತುತ್ತದೆ. ಒಂದು ಅರ್ಥಪೂರ್ಣ ಸಂವಾದಕ್ಕೆ ಅಥವಾ ವಿಸ್ತೃತವಾದ ವಾಗ್ವಾದಕ್ಕೆ ವಸ್ತುವಾಗಬಲ್ಲ ಲೇಖನವಿದು.

ಮುತ್ತೈದೆಯ ‘ಎಯ್ದೆ’ ಪದದ ಸುತ್ತ ಹೆಣೆದ ಲೇಖನ, ಸಾಹಿತ್ಯ ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಪಾಠವಾಗುವ ಲಕ್ಷಣ ಹೊಂದಿದೆ .

ತೀವ್ರ ಕುತೂಹಲ ಹುಟ್ಟಿಸಿ, ಅನೇಕ ಸಾಧ್ಯತೆಗಳಿಗೆ ತೆರೆದುಕೊಳ್ಳಬಹುದಾಗಿದ್ದ ಬರಹ ‘ಆಧುನಿಕ ಸಾಹಿತ್ಯದಲ್ಲಿ ರೈತಾಪಿ ವರ್ಗ’ ಕೆಲವು ಉಲ್ಲೇಖಗಳಿಗೆ ಮಾತ್ರ ಸೀಮಿತ ಆಗಿದೆ. ಇದಕ್ಕೆ ಲೇಖಕರೇ ಹೇಳುವಂತೆ ಕನ್ನಡ ಸಾಹಿತ್ಯದಲ್ಲಿ , ರೈತರ , ಕೃಷಿಯ ಬಗ್ಗೆ ಪ್ರಬಲವಾಗಿ ಬರೆಯದಿದ್ದುದೂ ಕಾರಣವಿರಬಹುದು. ಇತ್ತೀಚಿಗೆ ಆಗುತ್ತಿರುವ ಕೆಲವು ಬದಲಾವಣೆಗಳು, ತೆರಿಗೆ ಉಳಿಸುವ ಸಲುವಾಗಿ ಹೆಚ್ಚುತ್ತಿರುವ ‘ರಾಜಕೀಯ ರೈತರು’, ಪುಕ್ಕಟೆಯಾಗಿ ನೀಡುವ ಸವಲತ್ತುಗಳು, ಇವೆಲ್ಲಾ ಸಮಾಜದ ಕೋಪಕ್ಕೆ ಕಾರಣವಾಗಿ ಒಂದು ದೊಡ್ಡ ವಿರೋಧವನ್ನು ಕಾಣುವ ಸಾಧ್ಯತೆಗಳು, ಇತ್ಯಾದಿ ಅನೇಕ ಸಂಗತಿಗಳು ರೈತರು/ಕೃಷಿಯ ಬಗ್ಗೆ ಸಾಹಿತ್ಯ ರಚನೆ ಮಾಡುವವರಿಗೆ ವಿಷಯಗಳನ್ನು ಒದಗಿಸಬಲ್ಲವು. ಮುಂದೆ ಆಹಾರ ಸಮಸ್ಯೆ ಉಲ್ಬಣಗೊಂಡು ‘ಲ್ಯಾಬ್ ಫುಡ್’ ಬರುವುದೆಂಬ ಸುದ್ದಿಗಳ ನಡುವೆ ಸಹಜ ಕೃಷಿ ಯ ಬಗೆಗಿನ ಸಾಹಿತ್ಯ ಸಮಾಜದ ದೃಷ್ಟಿಯಿಂದ ಅತಿ ಅಪೇಕ್ಷಿತ.

ಕಾಸರಗೋಡು, ಕರಾವಳಿ ಮೂಲದ ಲೇಖಕರು, ಇಲ್ಲಿ ಕೂಡ ಕೆಲವು ಲೇಖನಗಳನ್ನು ಅಲ್ಲಿಗೆ ಅರ್ಪಿಸಿದ್ದಾರೆ. ಆದರೆ, ಕೇವಲ ಬರೆಯುವುದಕ್ಕಾಗಿ ಬರೆದಿರದ ಲೇಖನಗಳಲ್ಲಿ, ಆ ಭಾಗದಲ್ಲಿ ಆಗುತ್ತಿರುವ ಭಾಷಾ, ಸಾಂಸ್ಕೃತಿಕ ಮತ್ತು ಸಾಮಾಜಿಕ ಬದಲಾವಣೆಗಳನ್ನು ಹಾಗೂ ಆಗಬೇಕಾಗಿರುವ ಕೆಲಸಗಳನ್ನು ಗುರುತಿಸಿರುವುದು ವಿಶೇಷ.

ಹಾಗಾಗಿ, ‘ಮೇಲೋಗರ’ದಲ್ಲಿನ ಎಲ್ಲ 20 ಲೇಖನಗಳು, ಓದಿಸಿಕೊಂಡು ಹೋಗುವುದರ ಜತೆಗೆ, ಭಾಷೆ, ಕೃತಿ, ಸಾಮಾಜಿಕ, ಪ್ರಸ್ತುತ ಮಾಹಿತಿಗಳನ್ನೊಳಗೊಂಡ ಪರಿಪೂರ್ಣ ಭೋಜನ ಆಗಿದೆ. ಇದಕ್ಕಾಗಿ ಸಮಾಜಕ್ಕೆ ಮಿಡಿಯುವ ಹೃದಯವುಳ್ಳ ಡಾ. ನಾ.ದಾಮೋದರ ಶೆಟ್ಟರು ಅಭಿನಂದನಾರ್ಹರು.

ಓದಿಗಾಗಿಯಷ್ಟೇ ಅಲ್ಲದೆ, ಇಲ್ಲಿನ ವಿಷಯ ಮತ್ತು ಮಾಹಿತಿಗಳನ್ನು ಕನ್ನಡದಲ್ಲಿ ಕಡಿಮೆಯಾಗಿರುವ ‘ ಸಂವಾದ’ ಅಥವಾ/ ಮತ್ತು ‘ವಾಗ್ವಾದ’ ಗಳಿಗೆ ಮೂಲವಾಗಿ ಕೂಡ ಬಳಸಿಕೊಳ್ಳಬಹುದು.

ಬೇಕಾದಾಗ, ಭಾಷೆ, ಕವಿ, ಸಾಹಿತ್ಯ, ಸಮಾಜದ ಸಾಧಾರ ಮಾಹಿತಿಯ(reference) ಮೂಲವಾಗಿ ಉಪಯೋಗಿಸಬಹುದು. ಅದಕ್ಕೆಂದೆ ಇದನ್ನು ಸಂಗ್ರಹಯೋಗ್ಯ ಪುಸ್ತಕಗಳ ಸಾಲಿಗೆ ಸೇರಿಸಿದ್ದು.

ಪುಸ್ತಕ: ಮೇಲೋಗರ
ರಚನೆ: ಡಾ. ನಾ.ದಾಮೋದರ ಶೆಟ್ಟಿ
ಪ್ರಕಾಶಕರು: ಸಿವಿಜಿ ಪಬ್ಲಿಕೇಷನ್ಸ್
ಬೆಲೆ: ರೂ 200

‍ಲೇಖಕರು Admin

November 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: