ನಾ ಕಂಡಂತೆ 'ಉಳಿದವರು'

ವಸಂತಕುಮಾರ್ ಕಲ್ಯಾಣಿ


ಅನೇಕ ವರ್ಷಗಳ ಹಿಂದೆ ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿದ್ದ ಕಥೆಯ ವಿಮರ್ಶೆಯೊಂದರಲ್ಲಿ ” ಕಥೆಗೆ ನಿರ್ದಿಷ್ಟ ಚೌಕಟ್ಟಿಲ್ಲ” ಎಂದು ಆಪಾದಿಸಲಾಗಿತ್ತು; ಅದಕ್ಕೆ ಪ್ರತಿಕ್ರಿಯೆಯಾಗಿ ಲೇಖಕಿ, ” ಚೌಕಟ್ಟಿರಲು ಅದೇನು ತಿರುಪತಿ ತಿಮ್ಮಪ್ಪನ ಪಟವೇ” ಎಂದು ಪ್ರಶ್ನಿಸಿದ್ದರು. ಸಿದ್ಧಸೂತ್ರವುಳ್ಳ ಸಿನಿಮಾಗಳನ್ನು ವೀಕ್ಷಿಸುವಾಗ (ಈಗ ಅದಕ್ಕೆ ಆಸಕ್ತಿಯೂ, ವ್ಯವಧಾನವೂ, ಸಮಯವೂ ಇಲ್ಲ ಬಿಡಿ!) ನನಗೂ ಅನೇಕ ಬಾರಿ ಮೇಲಿನಂತೆ ಅನಿಸಿದ್ದಿದೆ. ಬಹುಶಃ ಅದೇ ‘ಉಳಿದವರು ಕಂಡಂತೆ’ಯ ಹೆಗ್ಗಳಿಕೆ. ಚಿತ್ರದ ಅಂತ್ಯವೂ ನೋಡುಗರಲ್ಲಿ ತಳಮಳ, ಸಂಕಟ, ನೆಮ್ಮದಿ, ಸಂತೃಪ್ತಿ ಈ ಯಾವ ನಿರ್ದಿಷ್ಟ ಭಾವನೆಗೂ ಅವಕಾಶವಿಲ್ಲದಂತೆ ನಿಲ್ಲಿಸುತ್ತದೆ. ಒಂದು ರೀತಿಯಲ್ಲಿ ಇದೇ ಸಿನಿಮಾದ ವೈಶಿಷ್ಟ್ಯವೂ ಹೌದು.
ಇಡೀ ಸಿನಿಮಾ ದಕ್ಷಿಣ ಕನ್ನಡದ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಡೆಯುವ ಘಟನೆ ಅಥವಾ ಘಟನೆಗಳ ಸರಮಾಲೆ. ಬಾಲ್ಯದಲ್ಲಿ ಗೆಳೆಯನಿಗಾಗಿ ಕೊಲೆಯೊಂದರಲ್ಲಿ ಭಾಗಿಯಾಗಿ, ರಿಮ್ಯಾಂಡ್ಹೋಂ ಸೇರಿ ಹೊರಬರುವ ವಿಕ್ಷಿಪ್ತ ಮನಸ್ಸಿನ ವ್ಯಕ್ತಿಯೊಬ್ಬನ ಸುತ್ತ ನಡೆಯುವ ಕತೆ. ಇಡೀ ಸಿನಿಮಾದ ವೈಶಿಷ್ಟ್ಯವೇ ಅದರ ಸಹಜತೆ.
ಇಲ್ಲಿಯ ‘ಬಾಸ್’ ಶಂಕರ ಪೂಜಾರಿಯೂ ಸಹ ಬೇರೆಯ ಸಿನಿಮಾಗಳ ಡಾನ್ಗಳಂತೆ ಅಬ್ಬರಿಸದೆ ಸಹಜವಾಗಿರ್ತಾನೆ.
ಅತ್ಯಂತ ಸಹಜ ಅಭಿನಯ, ಸಹಜ ಸಂಭಾಷಣೆ ( ರೀರೆಕಾರ್ಡಿಂಗ್ ಇಲ್ಲದ ಧ್ವನಿಗ್ರಹಣ), ಸುಂದರ ದಕ್ಷಿಣಕನ್ನಡದ ಕರಾವಳಿಯ ದೃಶ್ಯವೈಭವವನ್ನು ಅನಾವಶ್ಯಕವಾಗಿ ತೋರಿಸದ ಸಹಜ ಛಾಯಾಗ್ರಹಣ, ಕೇಳಲು ಮಾತ್ರವಲ್ಲದೆ ನೋಡಲೂ ತಂಪಾಗಿರುವ ಹಾಡುಗಳು, ಕರಾವಳಿಯ ಜನಕ್ಕೆ ಆಪ್ತವಾಗುವ ಮೀನಿನ ಮಾರ್ಕೆಟ್, ಬೋಟುಗಳು, ಗದ್ದೆಯ ನಡುವೆ ಹಾದುಹೋಗುವ ಕಿರುದಾರಿಗಳು, ಹುಲಿವೇಷದ ಕುಣಿತಗಳು, ಎಲ್ಲವೂ ಬೇರೆಯೇ ಲೋಕದ ಅನಾವರಣ ಮಾಡುತ್ತವೆ. ಬದುಕಿಗೆ ಪೂರಕವಾದ ಬೋಟ್ಗಳು, ಬದುಕಿನ ಅಂತ್ಯಕ್ಕೂ ವೇದಿಕೆಯಾಗುವ ದೃಶ್ಯಗಳು ಬದುಕಿನ ವ್ಯಂಗ್ಯಕ್ಕೆ ನಿದರ್ಶನವಾಗಿದೆ. ಕೆಲವೇ ದೃಶ್ಯಗಳಲ್ಲಿ ಬಂದರೂ ಪ್ರೇಮಿಗಳ ಮೌನ ಸಂಭಾಷಣೆ, ಕಣ್ಣ ಪಿಸುಮಾತುಗಳು ಹೃದಯದಲ್ಲೊಂದು ಕ್ಷಣ ನವಿರುಭಾವನೆ ಹುಟ್ಟಿಸುವುದು ಸುಳ್ಳಲ್ಲ. ಆದರೆ ಅದೇ ಸ್ಥಾಯಿಭಾವವಾಗುವುದಿಲ್ಲ. ಇತ್ತೀಚಿನ ನಮ್ಮ ನಾಯಕರು ‘ಟಪ್ಪಾಂಗುಚ್ಚಿ’ ಗೆ ಹಾಕುವ ಕುಣಿತಕ್ಕಿಂತ ಹುಲಿವೇಷದವರೊಟ್ಟಿಗೆ ರಕ್ಷಿತ್ ಶೆಟ್ಟಿಯ ನೃತ್ಯ ಅನನ್ಯ ಅಮೋಘ.
ಇದು ಯಾವುದೇ ಸಿದ್ಧ ಸೂತ್ರಗಳಿರುವ ಕಮರ್ಷಿಯಲ್ ಚಿತ್ರವೂ ಅಲ್ಲ; ಅಥವಾ ಪ್ರಶಸ್ತಿಗಾಗಿಯೇ ಕೆಲವರು ಹೊಸೆಯುವ ” ಕತ್ಲೆ ಕತ್ಲೆ ದೃಶ್ಯ, ಗಂಟೆಗೊಂದು ಸಂಭಾಷಣೆಯ” ಹೊಸಅಲೆಯ ಚಿತ್ರವಲ್ಲ. ನಿರ್ದೇಶನ, ಅಭಿನಯ ಎರಡನ್ನೂ ಯಶಸ್ವಿಯಾಗಿ ನಿಭಾಯಿಸಿರುವ ರಕ್ಷಿತ್ಶೆಟ್ಟಿ, ರಿಷಬ್ ಶೆಟ್ಟಿ, ದಿನೇಶ್ ಮಂಗ್ಳೂರ್ ( ಸಹಜ ಗತ್ತು), ತಾರಾ ( ಮಗನೊಂದಿಗೆ ಪುನರ್ಮಿಲನದ ಸಂದರ್ಭದಲ್ಲಿ ಅಮೋಘ ಅಭಿನಯ), ಅಚ್ಯುತ್ ಕುಮಾರ್, ಬಾಲನಟರು, ಪ್ರೇಮಿಗಳಾಗಿ ಕಿಶೋರ್ – ಯಜ್ಞಾ ಶೆಟ್ಟಿ, ಪತ್ರಕರ್ತೆಯಾಗಿ ಶೀತಲ್ಶೆಟ್ಟಿ, ಸಣ್ಣ ಸಣ್ಣ ಪಾತ್ರಗಳಲ್ಲೂ ಪ್ರಭಾವ ಬೀರುವ ಸಹನಟರು (ಮೀನುಮಾರುವವರೂ, ಹುಲಿವೇಷಧಾರಿಗಳು, ರಿಚ್ಚಿಯ ಭಂಟರೂ), ಸಂಗೀತ ನೀಡಿರುವ ಅಜನೀಶ್ ಲೋಕನಾಥ್, ಛಾಯಾಗ್ರಹಣದ ‘ಪಾಠ’ ಹೇಳಿರುವ ಕರಮ್ ಚಾವ್ಲಾ, ಎಲ್ಲರೂ ‘ಉಳಿದವರು ಕಂಡಂತೆ’ಯ ಯಶಸ್ಸಿಗೆ ಕಾರಣರು.
ಯಾವುದೇ ಪೂರ್ವನಿರೀಕ್ಷೆಯಿಲ್ಲದೆ, ಅಥವಾ ‘ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ’ಯ ಹ್ಯಾಂಗೋವರ್ ಇಲ್ಲದೆ ಚಿತ್ರಮಂದಿರಕ್ಕೆ ಭೇಟಿಯಿತ್ತರೆ, ” ಎದ್ದೇಳು ಮಂಜುನಾಥ”, “ಎದೆಗಾರಿಕೆ”ಯಂತಹ ವಿಶಿಷ್ಟ ಅನುಭವದೊಂದಿಗೆ ಹೊರಬರಬಹುದು. ಇಂತಹಾ ಸಿನಿಮಾಗಳು ಆರ್ಥಿಕವಾಗಿಯೂ ಗೆಲ್ಲಬೇಕು.

‍ಲೇಖಕರು G

April 2, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. lalithasiddabasavaiah

    ಬಹಳ ಖುಷಿಯಾಯ್ತು. ಕನ್ನಡದ ಹುಡುಗರ ಪ್ರಯತ್ನ ಇಷ್ಟು ಚೆನ್ನಾಗಿ ಬರೆಸಿಕೊಂಡಿದೆಯಲ್ಲ ಅದೇ ಒಂದು ಖುಷೀ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: