ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಅಲ್ಲಿದ್ದಿದ್ರೆ..

ಸರೋಜಿನಿ ಪಡಸಲಗಿ

ನಾ ಅಲ್ಲಿದ್ದಿದ್ರೆ,
ತೂಗಾಡೋ ದೋಣಿಯಲಿ ಉಯ್ಯಾಲೆಯಾಡಿ
ಸುರಿವ ಮಳೆಹನಿಗಳ ಮುತ್ತಿನ ಹಾರ ಧರಿಸಿ
ಮರೆತು ಹೋದ ಕಳ್ಳೆಮಳ್ಳೆ ಆಟ ಆಡಿ
ಆ ಸೋನೇ ಧಾರೆಯಲಿ ನಾಟ್ಯವಾಡುತ
ನನ್ನೇ ನಾ ಮರೆಯುತಿದ್ದೆ ಬಲ್ಲೆಯಾ

ನಾ ಅಲ್ಲಿದ್ದಿದ್ರೆ,
ದೋಣಿಯಂಚಿನಿಂದ ನೆಟ್ಟಗೆ ಜಾರುಬಂಡೆಯಾಡಿ
ಸುಳಿದು ಬಳುಕಿ ಹರಿವ ಹೊಳೆ ದಂಡೆಯಂಚು ಸೇರಿ
ಕಾಲೆರಡನೂ ಅಲೆಗಳ ಮಡುವಲಿಳಿ ಬಿಟ್ಟು ನೀರ ಚಿಮ್ಮಿ
ಹೂಮಳೆಯಂತೆ ಸುರಿವ ಸ್ಪಟಿಕ ಮಣಿಗಳ ಮಿಂಚು ನೋಡುತ
ನನ್ನೇ ನಾ ಮರೆಯುತಿದ್ದೆ ಬಲ್ಲೆಯಾ

ನಾ ಅಲ್ಲಿದ್ದಿದ್ರೆ,
ಬಾಗಿ ಕುಲುಕಿ ಒಯ್ಯಾರ ತೋರಿ ಸರಿದು ಬೆಳಕು ಚೆಲ್ಲುವ
ಆ ಮಿರುಗುವ ರೇಷ್ಮೆ ರಿಬ್ಬನ್ ಎತ್ತಿ ಕೊಂಡೋಡಿ
ನನ್ನ ಹಾರಾಡುವ ಮುಂಗುರುಳ ಮೆಲ್ಲಗೆ ಸರಿಸಿ
ಎತ್ತಿ ಕಟ್ಟಿ
ಮೇಲೊಂದು ಕಾಡಹೂ ಮೊಗ್ಗು ಸಿಗಿಸಿ ನಕ್ಕು ನಲಿದು
ನನ್ನೇ ನಾ ಮರೆಯುತಿದ್ದೆ ಬಲ್ಲೆಯಾ

ನಾ ಅಲ್ಲಿದ್ದಿದ್ರೆ,
ಮೆತ್ತಗೆ ಸರಿದು ಜಾರಿ ಆ ಪುಟ್ಟ ಗುಡ್ಡದ ಮಡಿಲು ಸೇರಿ
ಅಲ್ಲಿ ಎಸೆವ ಹಸಿರು ಮಣಿಗಳ ನನ್ನ ಮುಡಿಯ ಹೂ ಸುತ್ತ ಪೋಣಿಸಿ
ಸುರುಳಿ ಸುರುಳಿ ಕುರುಳು ಹಾರಿಸಿ ವಾರೆ ನೋಟ ಬೀರುತ
ತೊನೆವ ಬಳ್ಳಿ ನಾಚಿ ನಿಲ್ಲೋ ತೆರದಿ ಬಳುಕಿ ಹೆಜ್ಜೆ ಹಾಕುತ
ನನ್ನೇ ನಾ ಮರೆಯುತಿದ್ದೆ ಬಲ್ಲೆಯಾ

ನಾ ಅಲ್ಲಿದ್ದಿದ್ರೆ,
ಮೆಲ್ಲ ಮೆಲ್ಲನೆ ಆ ಪುಟ್ಟ ಹಸಿರು ಗುಡ್ಡ ಬಳಸಿ ಎದೆಗೊರಗಿ
ಮೇಲೆ ಮೇಲೆ ಹತ್ತಿ ಅದರ ನೆತ್ತಿ ಮೇಲೆ ಠಾವು ಹುಡುಕಿ
ಕಾಲ್ ಮೇಲೆ ಕಾಲ್ಹಾಕಿ ನಾನೇ ಆ ಲೋಕದ ಸಾಮ್ರಾಜ್ಞಿ ಯಾಗಿ
ಗತ್ತು ಬಿಂಕ ಬಿಗುಮಾನ ತೋರಿ ನನ್ನ ರಾಜ್ಯ ಅಲ್ಲಿ ಕಟ್ಟಿ
ನನ್ನೇ ನಾ ಮರೆಯುತಿದ್ದೆ ಬಲ್ಲೆಯಾ

ನಾ ಅಲ್ಲಿದ್ದಿದ್ರೆ,
ಬಿಂಕು ಬಿಗುಮಾನ ಒಂದು ಗಳಿಗೆ ಗಾಳಿಗತೂರಿ
ಅತ್ತಿತ್ತ ಕತ್ತು ವಾಲಿಸಿ ದೂರ ದೂರ ದಿಟ್ಟಿ ಸರಿಸಿ
ಕಿವಿದೆರೆದು ನಿಶ್ಯಬ್ದ ದಲಿ ಹಕ್ಕಿ ಗಾನ ಆಲಿಸಿ
ಆ ಅಲೌಕಿಕ ಶ್ರುತಿಗೆ ಎನ್ನ ಎದೆ ತುಂಬಿದ ಶ್ರುತಿ ಸೇರಿಸಿ
ನನ್ನೇ ನಾ ಮರೆಯುತಿದ್ದೆ ಬಲ್ಲೆಯಾ

ನಾ ಅಲ್ಲಿದ್ದಿದ್ರೆ,
ಮರುಳೇ ಎಲ್ಲಿದ್ದಿದ್ರೆ ನಕ್ಕು ಕೇಳಿದ ಪ್ರಶ್ನೆಯೊಂದು
ಮಾರ್ದನಿಸೆ
ಜರ್ರನೇ ಜಾರಿ ಗುಡ್ಡದ ನೆತ್ತಿಯಿಂದ ನನ್ನ ಸಾಮ್ರಾಜ್ಞಿ ಪೀಠದಿಂದ
ಅತ್ತ ಇತ್ತ ಕಣ್ಣನೋಟ ಬೀರಿ ಹುಡುಕಿ ಕಂಡೆ ನನ್ನ
ಇಲ್ಲೇ ಈ ಲೋಕದ ಗೊಂದಲದ ಗೂಡಿನಲ್ಲಿ ಗದ್ದಲದ ಸಾಮ್ರಾಜ್ಯ ದಲಿ
ಕಣ್ಣು ಹೊಸಕಿ ಹುಡುಕಿ ಹುಡುಕಿ ಆ ನನ್ನ ಕನಸಿನ ಲೋಕವ
ನನ್ನೇ ನಾ ಮರೆತು ಹೋದೆ ಯಾವುದೋ ಸುಳಿಯಲಿ
ಎಲ್ಲಿರುವೆ ನಾ ಅರಸುತಿರುವೆ ಆ ದೆಸೆ ದಿಕ್ಕು ನೀ ಬಲ್ಲೆಯಾ

‍ಲೇಖಕರು Avadhi Admin

30 May, 2019

1 Comment

  1. Sarojini Padasalgi

    ಧನ್ಯವಾದಗಳು ಅವಧಿ,.
    ಸರೋಜಿನಿ ಪಡಸಲಗಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading