ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಾಶ ಎನ್ನುವುದನ್ನು ನಾಷ ಎಂದು ಬರೆದರೆ ಯಾಕೆ ತಪ್ಪು?!’

ಕನ್ನಡವೆನ್ನಲು ಭಯವೇಕೆ?

– ಗುರು ಬಾಳಿಗಾ


ನನ್ನ ಮಾತೃಭಾಷೆ ಕೊಂಕಣಿ. ಆದರೂ ನಾನು ಹುಟ್ಟಿದ ಐದನೇ ವರ್ಷದಾರಭ್ಯ ಉಸಿರಾಡಿದ್ದೂ ಕನ್ನಡದಲ್ಲಿಯೇ. ಕೊಂಕಣಿ ಭಾಷೆಯಲ್ಲಿ ಸೀರಿಯಸ್ಸಾದ ಸಾಹಿತ್ಯವಿದೆ ಅನ್ನುವುದು ನನಗೆ ತಿಳಿದದ್ದೂ ಇತ್ತೀಚಿನ ಐದು ವರ್ಷಗಳಲ್ಲಿ. ನಮಗೆ ಭಾಷೆಯೆಂದರೆ ಒಳಗೆಲ್ಲಾ ಹಲವಾರು ಗೋಡೆಗಳು. ಜಾತಿ, ಲಿಪಿ, ಧರ್ಮ, ಪ್ರದೇಶ, ಹತ್ತು ಹಲವು. ಅದೇ ಕೊಂಕಣಿಯ ಅನನ್ಯತೆ. ಇರಲಿ. ನನ್ನ ಸಮಸ್ಯೆ ಅದಲ್ಲ. ನನಗೊಬ್ಬ ನಾಲ್ಕು ವರ್ಷದ ಮಗ. ಅಂದರೆ ನಮ್ಮಿಬ್ಬರಿಗೆ. ಇದುವರೆಗೆ ನಾನು ಅವನ ಓದು ಬರಹಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿದ್ದಿಲ್ಲ. ಅದು ಅವಳದೇ ಖಾತೆಯಾದುದರಿಂದ ಅಷ್ಟಕ್ಕೆ ಅವನು ಅವಳದೇ ಮಗ. ನಾವಿರುವುದು ಮಂಗಳೂರಲ್ಲಿ. ಮನೆಯಲ್ಲಿ ಕೊಂಕಣಿ, ಶಾಲೆಯಲ್ಲಿ ಇಂಗ್ಲೀಶ್. ಹಿಂದಿಗೆ ಡಬ್ ಮಾಡಿದ ಕಾರ್ಟೂನ್‌ಗಳೆಲ್ಲಾ ಅದಾಗಲೇ ಅವನ ಹಿಂದಿಯನ್ನು ಗಟ್ಟಿಗೊಳಿಸಿವೆ. ಎಪ್ರಿಲ್ ರಜೆಯಲ್ಲಿ ಅವನು ಕಳೆಯುವ ಅಜ್ಜಿಯ ಮನೆಯ ಸುತ್ತಮುತ್ತಲಿನ ಓರಗೆಯವರೆಲ್ಲ್ಲ ತುಳುಭಾಷಿಕರು. ಹಾಗಾಗಿ ತುಳುವಿನ ಸಾಕಷ್ಟು ತುಂಟ ಮಾತುಗಳನ್ನು ಕಲಿತುಕೊಂಡಿದ್ದಾನೆ. ಕನ್ನಡ ಅವನ ಕಿವಿಗೆ ಬೀಳುವುದು ಕೇವಲ ಎರಡನೇ ಭಾಷಾ ವಿಷಯ ಕನ್ನಡದ ತರಗತಿಯಲ್ಲಿ ಮಾತ್ರ. ಹಾಗೆಂದು ಅವನಿಗೆ ಕನ್ನಡ ಮಾತನಾಡಲು ಬರುವುದಿಲ್ಲವೇನೆಂದಲ್ಲ. ಅವನು ನಮ್ಮ ದಕ್ಷಿಣಗನ್ನಡವನ್ನು ಸರಾಗವಾಗಿ ಮಾತನಾಡುತ್ತಾನೆ.

ಅದೊಂದು ಸಂಜೆ ನಾನು ಮನೆಗೆ ಬಂದಾಗ ನನ್ನ ಬದುಕನ್ನು ಬದಲಿಸಿಬಿಡುವ ಸನ್ನಿವೇಶವೊಂದು ಎದುರಾಯಿತು. ಬೇರೆಲ್ಲಾ ವಿಷಯಗಳಲ್ಲಿ ಟ್ಯೂಶನ್ ಇತ್ಯಾದಿ ವಿಷೇಶ ಪ್ರಯತ್ನವಿಲ್ಲದೇ ಮಾರ್ಯಾದೆಯ ಅಂಕಗಳಿಸುವ ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬ ಕನ್ನಡದ ಉಕ್ತಲೇಖನದಲ್ಲಿ ಸೊನ್ನೆ ಅಂಕಗಳಿಸಿದ ಸಂಭ್ರಮದ ಸನ್ನಿವೇಶವದು. ಸಂಸದೀಯ ನಡಾವಳಿಗಳ ಬಳಿಕ ನನ್ನ ಮಗನಿಗೆ ಕನ್ನಡ ಕಲಿಸುವ ಹೊಣೆಗಾರಿಕೆಯ ಸಚಿವಸ್ಥಾನ ನನ್ನ ಪಾಲಿಗೆ ಲಭಿಸಿತು. ಅಯ್ಯೋ ಅದೇನ್ಮಹಾ! ಕನ್ನಡವನ್ನು ಅರೆದು ಕುಡಿದು ಅರಗಿಸಿಕೊಂಡಿರುವ ನನಗೆ ಅದೇನು ದೊಡ್ಡ ಸಮಸ್ಯೆಯಲ್ಲ ಎನ್ನುವ ಅಹಂಕಾರದಿಂದಲೇ ಆ ಹೊಣೆಯನ್ನು ನಾನು ಹೊತ್ತುಕೊಂಡೆ. ಮುಂದಿನ ಎರಡು ತಿಂಗಳುಗಳಲ್ಲಿ ನಾನು ಈ ನಿಟ್ಟಿನಲ್ಲಿ ಕಂಡುಕೊಂಡಿರುವ ಹಾಗೂ ನನ್ನ ಅಹಂಕಾರವನ್ನು ನುಚ್ಚು ನೂರಾಗಿಸಿರುವ ಪರಮ ಸತ್ಯಗಳನ್ನು ತಮ್ಮ ಮುಂದಿಡಲು ನಾನು ಬಯಸುತ್ತೇನೆ. ಇದನ್ನು ಓದಿದ ಬಳಿಕ ಎಂತಹ ದಡ್ಡರಪ್ಪಾ ಎಂದು ನೀವಂದುಕೊಂಡರೂ ಸರಿಯೇ.

೧. ನನ್ನ ವಿದ್ಯಾರ್ಥಿಗೆ ಕನ್ನಡದ ಎಲ್ಲಾ ಸ್ವರಗಳ ಮತ್ತು ವ್ಯಂಜನಗಳ ಪರಿಚಯವಿತ್ತು. ಈ ಹಿಂದಿನ ತರಗತಿಗಳಲ್ಲಿ ಬುದ್ಧಿಯನ್ನು ಸ್ವಿಚ್ ಆಫ಼್ ಮಾಡಿ ಕಾಪಿ ಬರೆದ ಪರಿಣಾಮದಿಂದ ಅಕ್ಷರಗಳೇನೊ ಪರಿಚಯವಿದ್ದವು. ಆದರೆ ಓದಲು ಹೇಳಿದರೆ ತಾರೇಂ ಜಮೀನ್ ಪರ್ ಪುನರಾವರ್ತನೆ. ಯಾವ ಉಚ್ಛಾರಕ್ಕೆ ಯಾವ ಅಕ್ಷರ ಬರೆಯಬೇಕು ಮತ್ತು ಯಾವ ಅಕ್ಷರಕ್ಕೆ ಯಾವ ಉಚ್ಛಾರ ಓದಬೇಕು ಎಂದು ಅವನೊಳಗೆ ದಾಖಲಾಗಿರಲಿಲ್ಲ. (ಕಿವಿಗೆ ಬೀಳುವ ಕನ್ನಡ ಭಾಷೆಯ ಪ್ರಮಾಣವೇ ಪ್ರಶ್ನಾರ್ಹವಾದರೆ ಏನು ಮಾಡೋಣ?).

೨. ಮಹಾಪ್ರಾಣ, ಅಲ್ಪಪ್ರಾಣ ಮತ್ತು ಒತ್ತಕ್ಷರಗಳ ಬಗ್ಗೆ ಗೊಂದಲ. ಉದಾಹರಣೆಗೆ: ಉದ-ಉಧ-ಉದ್ದ-ಉದ್ಧ. ಈ ನಾಲ್ಕು ಪದಗಳ ದ ಅಕ್ಷರಗಳಲ್ಲಿನ ವ್ಯತ್ಯಾಸ ವಿದ್ಯಾರ್ಥಿಗೆ ಅರಿವಾಗುತ್ತಿರಲಿಲ್ಲ. ಈ ಹಂತದಲ್ಲಿ ಆ ಪದಮಾದರಿಗಳ ಉಚ್ಛಾರವೇ ಅವನೊಳಗೆ ದಾಖಲಾಗಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂತು. ಇಂತಹ ಪದಮಾದರಿಗಳ ಯಾದಿಯನ್ನೇ ತಯಾರಿಸಿ ಮೊದಲಿಗೆ ಉಚ್ಛಾರಗಳನ್ನೇ ಕಲಿಸಬೇಕಾಯಿತು. ಆ ಬಳಿಕ ಅವುಗಳನ್ನು ಉಚ್ಛರಿಸುತ್ತಾ ಬರೆಯುವ ಪದ್ಧತಿಯನ್ನು ನಾವು ಅಳವಡಿಸಿಕೊಂಡೆವು. ಈ ವಿಧಾನದಿಂದ ೮೫-೯೦ ಪ್ರತಿಶತ ಯಶಸ್ಸು ದೊರೆಯಿತು. ಮೇಲಿನ ಸಮಸ್ಯೆಯನ್ನು ಎಲ್ಲಾ ಸಜಾತೀಯ ಒತ್ತಕ್ಷರಗಳಿಗೆ ಸಂಬಂಧಿಸಿ ನಾವು ಎದುರಿಸಿದೆವು. (ಶಂಕರಾಚಾರ್ಯರ ನಹಿನಹಿ ರಕ್ಷತಿ ಢುಕ್ರುಂಕರಣೆ ಬಗ್ಗೆ ನನಗೆ ಕೊಂಚ ಆಕ್ಷೇಪವಿದೆ. ಕೊನೆಗೂ ಢುಕ್ರುಂಕರಣವೇ ನಮ್ಮ ಸಹಾಯಕ್ಕೆ ಬಂತು).

೪. ಸತಿತು-ಸತ್ತಿತು-ಸತೀತು-ಸತ್ತೀತು-ಸತ್ತಿತ್ತು-ಸತ್ಥಿತು-ಸತಿತ್ಥು… ಮುಂತಾಗಿ ಒಂದೊಂದೇ ಪದಗಳನ್ನು ಬರೆದ ಇಸ್ಪೀಟುಗಳನ್ನು ಮಾಡಿ ಒಂದೊಂದನ್ನೇ ಎದುರಿಗೆ ಇಟ್ಟು ಜಗ್ಲಿಂಗ್ ಮಾಡುವ ಆಟ ತ-ಥಕಾರದ ಒತ್ತಕ್ಷರದ ಸಮಸ್ಯೆಯನ್ನು ಬಹು ಮಟ್ಟಿಗೆ ನಿವಾರಿಸಿತು. ಈ ಆಟ ರಂಜಕವೂ ಆಗಿದ್ದರಿಂದ ಕಲಿಕೆಯನ್ನು ಮೋಜಾಗಿಸುವ ವಿಧಾನವನ್ನು ನಾನು ಅರಿತುಕೊಂಡೆ.

೩. ಮೇಲಿನ ಮಾದರಿಯನ್ನು ಶ ಮತ್ತು ಷ ಅಕ್ಷರಗಳಿಗೆ ಅಳವಡಿಸುವಲ್ಲಿ ನಾನು ಸೋತೆ. ಅವನಿಗೆ ಶಂಖದಂತೆ ಸುರುಳಿಸುತ್ತುವ ಅಕ್ಷರಕ್ಕಿಂತ ಪ ಬರೆದು ಅದಕ್ಕೆ ಪೈಪು ಎಳೆಯುವ ಷ ಬಹಳ ಇಷ್ಟ. ಹಾಗಾಗಿ ನಾಶ ಎನ್ನುವುದನ್ನು ನಾಷ ಎಂದು ಬರೆದರೆ ಯಾಕೆ ತಪ್ಪು ಎನ್ನುವ ಅವನ ಪ್ರಶ್ನೆಗೆ ನನ್ನಲ್ಲಿ ಇಂದಿಗೂ ಉತ್ತರವಿಲ್ಲ. ನಾನು ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಸ-ಶ-ಷ ಗಳ ನಡುವೆ ವ್ಯತ್ಯಾಸ ತಿಳಿಯದ ನನ್ನ ಸಹಪಾಠಿ ಅಬೂಬಕ್ಕರನನ್ನು ಎದೆ ಸೀಳಿದ್ರೆ ಮೂರಕ್ಷರ ಬರಲ್ಲ ಅಂತ ಬಯ್ಯುತ್ತಿದ್ದ ಸೀತಾರಾಮ ಮಾಸ್ಟರ ನೆನಪಾಯಿತು.

೫. ದೀರ್ಘಗಳ ಗೊಂದಲ: ತೆ-ತೇ-ತ್ತೆ-ತ್ತೇ, ತೊ-ತೋ-ತೂ-ತ್ತೊ-ತ್ತೋ, ಕಾ-ಕ್ಕಾ ಇದೊಂದು ಹೈಬ್ರಿಡ್ ಸಮಸ್ಯೆ. ಇಲ್ಲಿ ದೀರ್ಘಗಳೂ ಒತ್ತಕ್ಷರಗಳೂ ಸೇರಿಕೊಂಡು ವಿದ್ಯಾರ್ಥಿಯನ್ನು ಕಂಗೆಡಿಸುತ್ತಿದ್ದವು. ಬಾಣದ ಗುರುತುಗಳನ್ನು ಬಳಸಿ ಅಕ್ಷರದ ಉಚ್ಛಾರವನ್ನು ಯಾವ ದಿಕ್ಕಿಗೆ (ಮೇಲಕ್ಕೆ, ಮುಂದಕ್ಕೆ ಮತ್ತು ಕೆಳಕ್ಕೆ) ಮತ್ತು ಎಷ್ಟು ಪ್ರಮಾಣ (ಹೃಸ್ವಕ್ಕೆ ೧ ದೀರ್ಘಕ್ಕೆ ೨)ದಲ್ಲಿ ಮಾಡಬೇಕು ಎನ್ನುವುದನ್ನು ಅಭ್ಯಾಸ ಮಾಡಿಸಲಾಯಿತು. ಈ ವಿಧಾನ ಬಹುಮಟ್ಟಿಗೆ ಪರಿಣಾಮಕಾರಿಯಾಯಿತು.

೬. ಸೈ, ಸ್ರ, ಸೃ, ಸ್ಮ ಮತ್ತು ಸ್ಯ ಅಡಿ ಒತ್ತುಗಳ ಗೊಂದಲ. ಯಾವುದಕ್ಕೆ ಯಾವುದನ್ನು ಬರೆಯಬೇಕು ಎನ್ನುವ ಸಮಸ್ಯೆ. ರ ಮತ್ತು ಋಕಾರಗಳ ಒತ್ತಕ್ಷರಗಳ ಉಚ್ಛಾರದ ಶುದ್ಧತೆಯನ್ನು ಹೆಗ್ಗಳಿಸಿಕೊಂಡು ಮೈಸೂರಿಗರನ್ನು ನಾವು ದಕ್ಷಿಣ ಕನ್ನಡಿಗರು ಅವಹೇಳನ ಮಾಡುತ್ತಿದ್ದದು ನನಗೆ ನೆನಪಾಯಿತು. ಮೈಸೂರಿಗರೇ ನನ್ನನ್ನು ದಯವಿಟ್ಟು ಕ್ಷಮಿಸಿ. ಹೃದಯವನ್ನು ಹ್ರುದಯವೆಂದೇ ಉಚ್ಛರಿಸಿದರೆ ಹೃ ಮತ್ತು ಹ್ರದ ಒತ್ತಕ್ಷರಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಮನಗಾಣಿಸಬಹುದು ಎಂದು ನನಗೆ ಜ್ಞಾನೋದಯವಾಯಿತು.

೭. ಕ ಮತ್ತು ಕಾ ಗಳು ಕಾ ಮತ್ತು ಕಾಽ ಅಲ್ಲ ಎಂದು ನನ್ನ ಸಹೋದ್ಯೋಗಿ ಭಾಷಾ ತಜ್ಞೆ ಡಾ. ವಾರಿಜಾರೊಡನೆ ವಾದಿಸುತ್ತಿದ್ದ ನನಗೆ ಎಲ್ಲೋ ಒಂದು ಕಡೆ ಅವರು ಸರಿ ಇರಬಹುದು ಎನ್ನುವ ಸಂಶಯ ಉಂಟಾಯಿತು. ವಿವರಣೆ: ಕನ್ನಡದ ಅಕಾರವನ್ನು ಮಿಡ್ ಸೆಂಟ್ರಲ್ ಸ್ವರ (ಶ್ವ) ಆಗಿಯೇ ಉಚ್ಛರಿಸುತ್ತಿದ್ದ ನನಗೆ ಅ ಮತ್ತು ಆ ಸ್ವರಾಕ್ಷರಗಳಲ್ಲಿ ಕೇವಲ ಲೆಂಗ್ತ್ (ದೀರ್ಘ) ಮಾತ್ರ ವ್ಯತ್ಯಾಸ ಎನ್ನುವುದು ಅರಗಿಸಿಕೊಳ್ಳಲಾಗದ ಮಾತಾಗಿತ್ತು. (ಡಾ. ವಾರಿಜಾರವರ ಪ್ರಕಾರ ‘ಅ’ಕಾರ ಲೊವರ್ ಸೆಂಟ್ರಲ್ ಸ್ವರ. ‘ಆ’ಕಾರಕ್ಕೂ ಅದೇ ಸ್ಥಾನ ಆದರೆ ದೀರ್ಘ), ಉಕ್ತಲೇಖನ ನೀಡುವಾಗ ನಾನು ನೀಡಿದ ಅರಸ ಎಂಬ ಪದವನ್ನು ಅರಸಾ ಎಂದು ನನ್ನ ವಿದ್ಯಾರ್ಥಿಯು ಬರೆದಾಗ ಮಾತ್ರ ಡಾ.ವಾರಿಜಾರವರೊಂದಿಗೆ ವಾದಿಸಿದ್ದು ನೆನಪಾಯಿತು.

ನಾನು ಭಾಷಾ ವಿದ್ವಾಂಸನಲ್ಲ. ಕನ್ನಡ ಪಂಡಿತನೂ ಅಲ್ಲ. ಸ್ವಂತ ಮಗನಿಗೆ ತಪ್ಪಿಲ್ಲದೇ ಕನ್ನಡವನ್ನು ಬರೆಯಲು ಸಹಾಯ ಮಾಡಬೇಕೆನ್ನುವ ಕಾಳಜಿಯಲ್ಲಿರುವ ಒಬ್ಬ ಕೊಂಕನ್ನಡಿಗ ನಾನು. ಅವನಿಗೆ ಕನ್ನಡ ಮೂರನೇ ಭಾಷೆ. ಇಂಗ್ಲೀಶ್ ಭಾಷೆಯ ಆಲ್ಫಾಬೆಟ್ ವಿಧಾನ ಮತ್ತು ಕನ್ನಡದ ಆಲ್ಫಾಸಿಲೇಬರಿ ವಿಧಾನಕ್ಕೂ ಇರುವ ವ್ಯತ್ಯಾಸವನ್ನು ಅವನಿಗೆ ನಾನು ಮನಗಾಣಿಸಿಕೊಡಬೇಕು. ಇದು ನನ್ನ ಸಮಸ್ಯೆ ಮತ್ತು ಪ್ರಯತ್ನ. ಇಂಟರ್‌ನೆಟ್‌ನಲ್ಲಿ ಹುಡುಕಾಡಿದಾಗ ಬೆಂಗಳೂರಿನ ಪ್ರಾಮಿಸ್ ಫೌಂಡೇಶನ್‌ನ ಸೊನಾಲಿ ನಾಗ್ ಎನ್ನುವ ವಿದ್ವಾಂಸರು ನಾಲ್ಕು-ಐದನೇ ತರಗತಿಯ ಮಕ್ಕಳಲ್ಲಿ ಕನ್ನಡ ಕಲಿಕೆಯಲ್ಲಿ ಈ ಮೇಲಿನ ರೀತಿಯ ಸಮಸ್ಯೆಯನ್ನು ಗುರುತಿಸಿದ್ದಾರೆ ಎಂದು ತಿಳಿಯಿತು. ಜೊತೆಗೆ ಕನ್ನಡ ನಾಡಿನಲ್ಲಿ ನಾವಿಬ್ಬರಷ್ಟೇ ದಡ್ಡರಲ್ಲ ಎಂದು ತಿಳಿದು ಸಮಾಧಾನವಾಯಿತು. ಸೊನಾಲಿ ನಾಗ್ ರವರು ಕನ್ನಡ ಕಲಿಕಾ ಕೋಶ ಎಂಬ ಕನ್ನಡ ಕಲಿಕೆಯ ವಿಧಾನವನ್ನು ರೂಪಿಸಿದ್ದಾರೆ. ಕನ್ನಡ ಅಕ್ಷರಗಳ ಚಿಲಿಪಿಲಿ ಚೀಲ ಎಂಬ ಫ಼್ಲಾಶ್ ಕಾರ್ಡ್ ಕಿಟ್ ಒಂದನ್ನು ರಚಿಸಿದ್ದಾರೆ. ಇನ್ನೊಂದು ಸುದ್ದಿಯಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಈ ಸಂಶೋಧನೆಯನ್ನು ಕಡೆಗಣಿಸಿದೆ ಎಂದೂ ಓದಿದೆ. ಶಿಕ್ಷಣ ಇಲಾಖೆಯು ರೂಪಿಸಿದ ಕನ್ನಡ ಕಲಿನಲಿಯ ಕೆಲವೊಂದು ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿದ್ದರೂ ಒತ್ತಕ್ಷರಗಳನ್ನು ಕಲಿಸುವ ಪಾಠಗಳಿರುವ ಪುಸ್ತಕಗಳು ಅಲ್ಲಿ ಡೌನ್‌ಲೋಡ್‌ಗೆ ಲಭ್ಯವಿಲ್ಲ. ನಮ್ಮ ಅವಿರತ ಅಧ್ಯಯನ ಜಾರಿಯಲ್ಲಿದೆ. ಅವನನ್ನು ಕನ್ನಡ ಸಮೇತವಾಗಿ ಮುಂದಿನ ತರಗತಿಗೆ ದೂಡುವುದು ನನ್ನ ತತ್ಕಾಲದ ಟೆನ್ಶನ್ನು.

ವಿ.ಸೂ.: ಕೊಂಕಣಿಗೆ ಕನ್ನಡ ಲಿಪಿಯನ್ನೇ ಪ್ರಧಾನಲಿಪಿಯಾಗಿಸುವಲ್ಲಿ ಕನ್ನಡಿಗರೂ ಬೆಂಬಲಿಸಬೇಕು ಎಂದು ಭಾಷಾ ವಿದ್ವಾಂಸರೊಬ್ಬರು ಮೊನ್ನೆ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದು ವರದಿಯಾಗಿದೆ. ನನಗಂತೂ ನಾವೆಲ್ಲ, ಕನ್ನಡಿಗರೂ ಸೇರಿದಂತೆ ಮತ್ತೆ ಮೌಖಿಕ ಪರಂಪರೆಗೆ ಮರಳುತ್ತಿದ್ದೇವೆ ಎಂದು ಅನಿಸುತ್ತಿದೆ.

 

‍ಲೇಖಕರು avadhi

19 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading