ಕವಯತ್ರಿ ಪ್ರತಿಭಾ ನಂದಕುಮಾರ ಅವರ
‘ನಾವು ಹುಡುಗಿಯರೇ ಹೀಗೆ’ ಕವಿತೆ ಓದಿದ ಮೇಲೆ

ಅನಿಲ್ ಗುನ್ನಾಪೂರ
ಖರೇ ಆದ ನೋಡು ದೋಸ್ತ
ನಾವು ಹುಡುಗರೇ ಹೀಗೆ….
ಮೊದಲ ಪ್ರೀತಿಯ ನೆನಪು ಮಾಸುವದೊರೊಳಗೆ
ಹೊಸ ಹೃದಯ ಅರಸಿ ಹೊರಡುತ್ತೇವೆ
ದಿಕ್ಕೇ ಇರದ ದಾರಿಗೆ
ಮತ್ತು
ಕುಡಿಯದಿದ್ದರೂ ಹೋಗುವೆವು ಆಗೊಮ್ಮೆ ಈಗೊಮ್ಮೆ ಬಾರಿಗೆ;
ಅವಳೊಂದಿಗಿನ ಮಧುರ ಕ್ಷಣಗಳು
ಇವಳೆದರು
ಅಳೆದು-ತೂಗಿ ಸುರಿದು ಹಗುರಾಗಿ
ಸತ್ಯ ಹರಿಶ್ಚಂದ್ರನ ಮಿತ್ರನಾಗಲು ಹಂಬಲಿಸುತ್ತೆವೆ..
ಇದ್ದಲ್ಲೇ ಇದ್ದ ಗೋಡೆಗಡಿಯಾರದ ಗೊಡವೆಗೆ ಹೋಗದೆ
ಮೈಮರೆತು ಕಾಲಚಕ್ರದ ಸುಳಿಯಲ್ಲಿ ಸಿಲುಕಿ
ಎಡವಟ್ಟುಗಳು; ಬಯಲಾದ ಗುಟ್ಟುಗಳು ಎಲ್ಲವು ರಟ್ಟಾದ ಬಳಿಕ
ಕೈಕೈ ಹಿಚುಕಿಕೊಳ್ಳುತ್ತಾ…
ಹೊಟ್ಟೆಪಾಡಿನ ನೆಪ ಹೇಳಿ
ಕಟ್ಟುಪಾಡಿಗೆ ಜೋತು ಬಿದ್ದು
ಸುಳ್ಳಿನ ಮೂಟೆಗಳು ಇಳಿಸಿ
ಭಾರವಾದ ಹೆಜ್ಜೆಗಳಲಿ ದಾರಿ ಬದಲಿಸುತ್ತೇವೆ
ಅಮ್ಮನ ಪ್ರೀತಿಗೆ ಅಪ್ಪನ ರೀತಿಗೆ ಹೆದರಿ
ಜವಾಬ್ದಾರಿ ಹೊರುವ ಹೇಸರಗತ್ತೆಯಾಗಲೆಂಬಂತೆ;
ತಲೆಬಾಗಿ
ಮುಗ್ಧನ ಸೋಗಿನಲ್ಲಿ ಊರೂರು ಸುತ್ತುತ್ತೇವೆ
ಅವಳು ಬರುತ್ತಾಳೆ
ತಲೆತುಂಬ ಹೂಮುಡಿದು, ತಟ್ಟೆಯಲ್ಲಿ ಟೀ ತಂದಿಟ್ಟು
ನಾಚುತ್ತಲೇ ತಲೆಯೆತ್ತಿ ನೋಡಿದಾಗ
ಮನದೊಳಗೆ ಬೇಡವೆಂದರೂ ಬರುತ್ತದೆ
ಪಾಪ! ಅವನೆದುರು
ಅವಳೂ ಹೀಗೆ ನಿಂತಿರಬಹುದಲ್ಲ!
ಒಂದು ದಿನ
ಕೆರೆಯುವುದಕ್ಕೂ ಪುರಸೊತ್ತಿಲ್ಲದೇ ಬದುಕಿನ ಬಂಡಿ ಓಡಿಸುವಾಗ
ಅವಳು ಎದುರಾಗುತ್ತಾಳೆ
ಹೇಗಿದ್ದಿಯಾ? ಅಂದರೆ
“ನಮ್ಮನ್ನೆಲ್ಲ ಮರೆತು ಬಿಡ್ತೀರಲ್ಲ”
ಎಂದು
ಕಣ್ಣಲ್ಲಿ ಕಣ್ಣಿಟ್ಟು ನೋಡಿ ಉತ್ತರವಿಲ್ಲದ ಪ್ರಶ್ನೆ ಹಾಕುತ್ತಾಳೆ
ಹೇಳಬೇಕಾದ ಮಾತು ಹೇಳದೆ ತೊದಲುವಾಗ
ಗಂಡನ ಕೈ ಹಿಡಿದು ಬಹುದೂರ ಹೋಗಿರುತ್ತಾಳೆ…
ತಿರುಗಿ ನೋಡುತ್ತಾಳೆ ಎಂದು ಕಾಯುತ್ತಾ ಕೂತು ಬಿಡುತ್ತೇವೆ
ನಾವು ಹುಡುಗರೇ ಹೀಗೆ…





🙂 good one! liked it.
ಧನ್ಯವಾದಗಳು ಸರ್
ಹೇಳಬೇಕಾದನ್ನು ನುಂಗಿ,
ಮನಸಲ್ಲಿ ಮಂಡಿಗೆ ತಿನ್ನುವ
ನಾವು ಹುಡುಗರೇ ಹೀಗೆ !
ಬೇಡವೆಂದರೂ ಬರುವ ಪೋಲಿ ಕನಸುಗಳ
ಜಾಡಿಸಿ ಒದೆಯಲು ಮನಸಿಲ್ಲದ
ನಾವು ಹುಡುಗರೇ ಹೀಗೆ !
ಅವಳ ನೆನಪಿನ ಮಳೆ-ಚಳಿಯಲ್ಲಿ
ಹೃದಯಕ್ಕೆ ಕ್ಯಾನ್ಸರ್ ಕೌದಿ ಹೊಚ್ಚುವ
ನಾವು ಹುಡುಗರೇ ಹೀಗೆ !
ಕವಿತೆ ಇಷ್ಟ ಆಯಿತು ಕಣ್ರಿ…..ಮತ್ತೆ ಮತ್ತೆ ಬರೆಯುತ್ತಿರಿ.
ಧನ್ಯವಾದಗಳು.
Wonderful. Liked it very much!!
Superb
ಸೂಪರ್
ತುಂಬಾ ಚನ್ನಾಗಿದೆ ಸರ್