ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಾವು ದಿಕ್ಕುತಪ್ಪಿಸಿದ ಬುಡಕಟ್ಟುಗಳು’ – ಜಿ ಪಿ ಬಸವರಾಜು


ಜಿ.ಪಿ.ಬಸವರಾಜು

ಅವರ ಮನೆಗಳ ರೀತಿಯೇ ಬೇರೆ; ಅವರ ಹಾಡಿಗಳ ವಿನ್ಯಾಸವೇ ಬೇರೆ; ಅವರ ನಂಬಿಕೆಗಳು, ಬದುಕಿನ ರೀತಿನೀತಿ, ರಿವಾಜುಗಳು, ದೇವರು ಎಲ್ಲವೂ ಬೇರೆ. ಅವರ ಕೃಷಿ, ಬೇಟೆ, ನಡೆದಾಡುವ ದಾರಿಗಳು ಎಲ್ಲವೂ ಬೇರೆ. ಅವೆಲ್ಲವೂ ನಮಗೆ ಹೊಸವೇ. ಆದರೆ ಅವರು ಸಾವಿರಾರು ವರ್ಷಗಳಿಂದ ಹಾಗೆಯೇ ಬದುಕಿದ್ದಾರೆ; ಅಲ್ಲಿಯೇ ಬದುಕಿದ್ದಾರೆ. ಕಾಡಿನ ನಡುವೆ, ಪ್ರಾಣಿಪಕ್ಷಿಗಳ ನಡುವೆ; ಬೆಟ್ಟಗುಡ್ಡಗಳ ನಡುವೆ, ನದಿ ತೊರೆಗಳ ನಡುವೆ; ಬೆಂಕಿ, ಬಿಸಿಲು, ಮಳೆ, ಗಾಳಿ, ಭೀಕರ ಬರಗಾಲ ಎಲ್ಲವನ್ನೂ ಅವರು ಅಲ್ಲಿಯೇ ಎದುರಿಸಿದ್ದಾರೆ. ಆನೆಗಳ ಮಧ್ಯೆ, ಹುಲಿ ಚಿರತೆ, ಕಿರುಗಳ ನಡುವೆ, ವಿಷಪೂರಿತ ಹಾವುಗಳ ನಡುವೆ ಅವರು ಹಗಲು ರಾತ್ರಿಗಳನ್ನು ದಾಟಿದ್ದಾರೆ. ಅವರ ಸ್ವರ್ಗ, ನರಕ ಎಲ್ಲವೂ ಅಲ್ಲಿಯೇ. ಅವರು ಅಲ್ಲಿಂದ ಕಾಲ್ತೆಗೆಯಲಾರರು. ಅಲ್ಲಿ ಅವರ ದೇವರುಗಳಿವೆ; ಸತ್ತವರ ಆತ್ಮಗಳು ಇರುವುದೂ ಅಲ್ಲಿಯೇ. ಅವರ ಕುಲಗಳ ಮೂಲ ಪುರುಷರು ಇರುವುದು ಅಲ್ಲಿಯೇ. ಆಗಾಗ ಈ ಆತ್ಮಗಳು, ಆದಿ ಅಯ್ಯಗಳು ಹಾಡಿಗೆ ಬರುವುದು ಉಂಟು. ತಮ್ಮ ಜನರಿಗೆ ಎಚ್ಚರಿಕೆ ಕೊಡುವುದು, ಕಷ್ಟ ಸುಖ ಹಂಚಿಕೊಳ್ಳುವುದು, ಬರುವ ದಿನಗಳ ಬಗ್ಗೆ, ಮಳೆಬೆಳೆ ರೋಗರುಜಿನಗಳ ಬಗ್ಗೆ ಹೇಳುವುದೂ ಉಂಟು.
ಇಲ್ಲಿಯೇ ಅವರು ಕೃಷಿ ಮಾಡಿದ್ದಾರೆ; ಬೇಟೆಯಾಡಿದ್ದಾರೆ; ಜೇನು ತೆಗೆದಿದ್ದಾರೆ; ಗೆಡ್ಡೆಗೆಣಸುಗಳನ್ನು ಹೆಕ್ಕಿದ್ದಾರೆ. ಇಲ್ಲಿಯೇ ಕಾಡುಪ್ರಾಣಿಗಳು ಇದ್ದರೂ ಅವುಗಳ ಹಾದಿ ಅವಕ್ಕೆ; ಇವರ ದಾರಿ ಇವರಿಗೆ. ಇವರಿರುವ ಕಡೆ ಕಾಡುಗಳಿಗೆ ಬೆಂಕಿಬೀಳುವುದಿಲ್ಲ; ಕಳ್ಳಸಾಗಣೆದಾರರು ಸುಲಭವಾಗಿ ಮರಗಳನ್ನು ಕಡಿದು ಸಾಗಿಸಲಾರರು. ಇವರು ಕೃಷಿ ಮಾಡುವ ರೀತಿ ಅರಣ್ಯಕ್ಕೆ ಧಕ್ಕೆ ತರುವುದಿಲ್ಲ. ಭೂಮಿಯ ಸತ್ವವನ್ನು ಕಳೆದು ಹಾಕುವುದಿಲ್ಲ. ಅರಣ್ಯ ಸಂಪತ್ತನ್ನು ಇವರು ಬಳಸುತ್ತಾರೆ; ಆದರೆ ದೋಚುವುದಿಲ್ಲ; ಅದನ್ನು ನಾಶಮಾಡುವುದಿಲ್ಲ. ಗೆಡ್ಡೆಗೆಣಸುಗಳನ್ನು ತೆಗೆದರೂ ಅವು ಮತ್ತೆ ಬೆಳೆಯುವಂತೆ ನೋಡಿಕೊಳ್ಳುತ್ತಾರೆ.
ಇದು ಭಾರತದ ಕಾಡುಗಳಲ್ಲಿ, ಗುಡ್ಡಬೆಟ್ಟಗಳಲ್ಲಿ, ದ್ವೀಪಗಳಲ್ಲಿ ಬದುಕುತ್ತಿರುವ ಬಹುಪಾಲು ಬುಡಕಟ್ಟುಗಳ ಜೀವನ ಚಿತ್ರ. ಈ ಚಿತ್ರ ಒಂದಿಷ್ಟು ರಮ್ಯವಾಗಿ ಇರುವುದು ನಿಜ. ಈ ಬುಡಕಟ್ಟುಗಳಲ್ಲಿ ಬದಲಾವಣೆಯೇ ಆಗಿಲ್ಲ ಎಂಬ ಭಾವನೆಯಿಂದ ಕಟ್ಟಿಕೊಡುವ ಚಿತ್ರ ಇದು. ಈ ಬುಡಕಟ್ಟುಗಳಲ್ಲೀಗ ಬಿರುಗಾಳಿ ಬೀಸಿರುವುದು ನಿಜ. ಹೊರಗಿನ ಬಿರುಗಾಳಿಯಂತೆ ಒಳಗಿನ ಬಿರುಗಾಳಿಯೂ ಇವರ ಬದುಕಿನ ಚಿತ್ರವನ್ನು ಏರುಪೇರು ಮಾಡಿದೆ. ಪುನರ್ವಸತಿಯ ಹೆಸರಿನಲ್ಲಿ, ಮುಖ್ಯವಾಹಿನಿಗೆ ತರುವ ಹೆಸರಿನಲ್ಲಿ, ಸ್ವಾತಂತ್ರ್ಯ ಭಾರತದ ಸೌಲಭ್ಯಗಳನ್ನು ಮುಟ್ಟಿಸುವ ನೆಪದಲ್ಲಿ, ಆಧುನಿಕ ಬದುಕಿಗೆ ಇವರನ್ನು ಒಗ್ಗಿಸುವ ಹುನ್ನಾರದಲ್ಲಿ ಹೀಗೆ ಹಲವಾರು ಹೆಸರುಗಳಿಂದ ಈ ಬುಡಕಟ್ಟುಗಳ ಮೇಲೆ ಕದಾಳಿಕಿಯೇ ನಡೆದಿದೆ. ಆಧುನಿಕ ವಿದ್ಯಾಭ್ಯಾಸದ, ಆಧುನಿಕ ಸವಲತ್ತುಗಳ ಬೆನ್ನುಹತ್ತಿದ ಹೊಸ ತಲೆಮಾರು, ಆಧುನಿಕ ಜಗತ್ತು ಅರ್ಥವಾಗದೆ ಕಂಗೆಟ್ಟಿದೆ. ಕಾಡಿನ ಹೊರಗೆ ಸರ್ಕಾರ ಕಟ್ಟಿಸಿಕೊಡು ಸಾಲುಮನೆಗಳು ಇವರಿಗೆ ಜೈಲುಗಳಂತೆ ಕಾಣಿಸುತ್ತಿವೆ; ಆಧುನಿಕ ಜಗತ್ತಿನ ಶಾಲೆಗಳಲ್ಲಿ ಆಡುವ ಭಾಷೆಯೇ ಈ ಮಕ್ಕಳಿಗೆ ತಿಳಿಯುವುದಿಲ್ಲ; ಇನ್ನು ಅಲ್ಲಿ ಕಲಿಸಿಕೊಡುವ ಕವಿದ್ಯೆಕಿಯ ಮುಖ ಮುಸುಡಿಯೂ ಇವರಿಗೆ ಅರ್ಥವಾಗುವುದಿಲ್ಲ. ಯಾವ ಹಕ್ಕಿ ಹೇಗೆ ಕೂಗುತ್ತದೆ; ಆನೆ ಬರುವ ಜಾಡು ಯಾವುದು, ಹುಲಿ ಚಿರತೆಗಳು ಎಲ್ಲಿರುತ್ತವೆ, ಜೇನು ತೆಗೆಯುವುದು ಹೇಗೆ, ಆನೆ ಪಳಗಿಸುವುದು ಹೇಗೆ, ಮೀನು ಹಿಡಿಯುವುದು ಹೇಗೆ, ಗಾಯವಾದರೆ ಯಾವ ಗಿಡದ ರಸವನ್ನು ಹಿಂಡಬೇಕು ಇತ್ಯಾದಿ ಅಪಾರ ಜ್ಞಾನವನ್ನೇ ತುಂಬಿಕೊಂಡಿರುವ ಈ ಮಕ್ಕಳಿಗೆ ಅಕ್ಷರ ಲೋಕ ದಿಕ್ಕುತಪ್ಪಿಸುತ್ತದೆ. ಆಧುನಿಕ ಶಾಲೆಗಳ ಇತರ ಮಕ್ಕಳು, ಅಧ್ಯಾಪಕರು, ಅಲ್ಲಿನ ವಾತಾವರಣ ಎಲ್ಲವೂ ಇವರಲ್ಲಿ ದೊಡ್ಡ ಗೊಂದಲವನ್ನು ಹುಟ್ಟಿಸುತ್ತವೆ.

ಸರ್ಕಾರದ ಸಾಲುಮನೆಗಳಿಗೆ ಬಂದಿರುವ ಬುಡಕಟ್ಟು ಕುಟುಂಬಗಳಾದರೂ ಹೇಗಿವೆ? ಕಾಡಲ್ಲಿ ನೆಲೆ ಇಲ್ಲ; ಇಲ್ಲಿ ಅವರು ಸಲ್ಲುವುದಿಲ್ಲ. ಸರ್ಕಾರ ಕೊಡುವ ರೇಷನ್ ಅವರಿಗೆ ರುಚಿಸದು; ದುಡಿಯುವ ವಿಧಾನವೂ ಬೇರೆ. ಅನೇಕ ಕಡೆಗಳಲ್ಲಿ ಇವರು ಪುನರ್ವಸತಿಯ ನೆಲೆಗಳಿಗೆ ಬಂದು ಜೀತದಾಳುಗಳಾಗಿದ್ದಾರೆ. ಆಧುನಿಕ ವಿದ್ಯೆಯನ್ನು ತಮ್ಮ ಮಕ್ಕಳಿಗೆ ಕೊಡಿಸಬೇಕೆಂದು ಪಟ್ಟು ಹಿಡಿದರೂ, ಎಸ್ಎಸ್ಎಲ್ಸಿ ತಲುಪುವ ಮಕ್ಕಳ ಸಂಖ್ಯೆಯೇ ತುಂಬ ಕಡಿಮೆ. ಆಧುನಿಕ ವಿದ್ಯೆ, ಆಧುನಿಕ ಸೌಲಭ್ಯ, ಕಾಡಿನ ಹೊರಗಿರುವ ಜಗತ್ತು ಇವರನ್ನು ದಿಕ್ಕುತಪ್ಪಿಸಿರುವುದಂತೂ ನಿಜ. ಈ ಸ್ಥಿತಿ ಹೀಗೆಯೇ ಮುಂದುವರಿಯಬೇಕೇ?

2

ಆದಿವಾಸಿ, ವನವಾಸಿ, ಗಿರಿವಾಸಿ, ಮೂಲನಿವಾಸಿ, ಬುಡಕಟ್ಟು ಇತ್ಯಾದಿ ಅನೇಕ ಹೆಸರುಗಳಲ್ಲಿ ಕರೆಯುವ ಈ ಪುಟ್ಟ ಪುಟ್ಟ ಬುಡಕಟ್ಟು ಸಮುದಾಯಗಳೆಲ್ಲ ದಿಕ್ಕೆಟ್ಟು ನಿಂತಿವೆ. ಈ ಸಮುದಾಯಗಳಿಗೆ ಈವರೆಗೂ ಸಿಕ್ಕಬೇಕಾದ ಕನ್ಯಾಯಕಿ ಎನ್ನುವುದು ಸಿಕ್ಕಿಲ್ಲ. ಬ್ರಿಟಿಷರ ಆಳ್ವಿಕೆಯನ್ನು ಕೊನೆಗೊಳಿಸಿ ನಮ್ಮದೇ ಪ್ರಜಾತಂತ್ರವನ್ನು ರೂಪಿಸಿಕೊಂಡು ಆರೂವರೆ ದಶಕಗಳು ಕಳೆದಿವೆ. ಈ ಉದ್ದದ ನಡಿಗೆಯಲ್ಲಿ ನಾವಿನ್ನೂ ಅನೇಕ ಸಂಗತಿಗಳನ್ನು ಸರಿಯಾದ ಬೆಳಕಿನಲ್ಲಿ ನೋಡಿಯೇ ಇಲ್ಲ. ಈ ಕಾರಣಕ್ಕಾಗಿಯೇ ಇವತ್ತಿಗೂ ಅನೇಕ ಸಮುದಾಯಗಳು ತಮ್ಮ ನ್ಯಾಯಯುತ ಪಾಲನ್ನು ಪಡೆಯಲಾಗಿಲ್ಲ; ತಮ್ಮ ಸಹಜ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಎನ್ನುವುದು ಈ ಮೂಲನಿವಾಸಿಗಳಿಗೆ ಬಂಧನವಾಗಿಯೇ ಪರಿಣಮಿಸಿದೆ.
ಭಾರತದ ಜನಸಂಖ್ಯೆಯಲ್ಲಿ ಈ ಬುಡಕಟ್ಟು ಸಮುದಾಯಗಳ ಸಂಖ್ಯೆ ಚಿಕ್ಕದೇನೂ ಅಲ್ಲ. ಭಾರತದ ಒಟ್ಟು ಜನಸಂಖ್ಯೆಯ ಶೇ 8.2 ರಷ್ಟು ಅಂದರೆ ಸುಮಾರು 15 ಕೋಟಿಯಷ್ಟು ಬುಡಕಟ್ಟು ಜನರಿದ್ದರೂ ಇನ್ನೂ ಇವದ ಧ್ವನಿ ಸರಿಯಾಗಿ ಕೇಳಿಯೇ ಇಲ್ಲ. ಕೇಳಿಸಿಕೊಳ್ಳುವವರೂ ಇಲ್ಲ. ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶ, ಗುಜರಾತ್, ರಾಜಸ್ತಾನ, ಜಾರ್ಖಂಡ, ಚತ್ತೀಸಗಢ, ಆಂದ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ರಾಜ್ಯಗಳಲಿರುವ ಬುಡಕಟ್ಟು ಜನಾಂಗದವರ ಗಾತ್ರ ತುಂಬಾ ದೊಡ್ಡದು. ಭಾರತದ ಬುಡಕಟ್ಟು ಜನಾಂಗದ ಒಟ್ಟು ಸಂಖ್ಯೆಯನ್ನು ಗಮನಿಸಿದರೆ ಈ ರಾಜ್ಯಗಳಲ್ಲಿರುವ ಬುಡಕಟ್ಟುಗಳ ಜನರ ಸಂಖ್ಯೆ ಶೇ 83.2 ರಷ್ಟು.
ತಮ್ಮ ಭಾಷೆ, ಬದುಕಿನ ರೀತಿ ನೀತಿ, ಉಡುಗೆ ತೊಡುಗೆ, ಹಾಡು ಕುಣಿತ, ತಾವು ನಂಬಿಕೊಂಡ ಬಂದ ವಗಳು, ನಂಬಿಕೆಗಳು, ಮೌಲ್ಯಗಳು ಇತ್ಯಾದಿ ನೂರಾರು ಸಂಗತಿಗಳನ್ನು ಉಳಿಸಿಕೊಳ್ಳಲು ಈ ಬುಡಕಟ್ಟುಗಳು ಇವತ್ತಿಗೂ ಹೆಣಗುತ್ತಿವೆ. ಸರಳವಾಗಿ, ಸಹಜವಾಗಿ ತಮ್ಮ ಪಾಡಿಗೆ ತಾವಿದ್ದ ಈ ಬುಡಕಟ್ಟು ಜನರನ್ನು ಹಾಗೆಯೇ ಇರಲು ನಾವು ಬಿಟ್ಟಿಲ್ಲ. ಅಷ್ಟೇಕೆ ಸಾವಿರಾರು ವರ್ಷಗಳಿಂದ ತಮ್ಮ ಉಸಿರಿನೊಂದಿಗೇ ಉಳಿದುಕೊಂಡು ಬಂದಿದ್ದ ತಮ್ಮ ಹಕ್ಕುಗಳನ್ನೂ ಉಳಿಸಿಕೊಳ್ಳಲು ಸಾಧ್ಯವಾಗದಂಥ ಬೆಳವಣಿಗೆಗಳನ್ನು ನಾವು ರೂಪಿಸಿದ್ದೇವೆ.
ಇನ್ನೂ ನಾಗರಿಕ ಜಗತ್ತಿಗೆ, ನಾವೆಲ್ಲರೂ ಹೆಮ್ಮೆಯಿಂದ ಹೇಳುವ ಮುಖ್ಯವಾಹಿನಿಕಿಗೆ ಬರದೆ ಈ ಬುಡಕಟ್ಟುಗಳ ಅನೇಕ ಸಮುದಾಯಗಳು ದೂರವೇ ಉಳಿದಿವೆ. ಕಾಡುಗಳಲ್ಲಿ, ಗುಡ್ಡಬೆಟ್ಟಗಳಲ್ಲಿ, ದ್ವೀಪಗಳಲ್ಲಿ ಬಾಳಿ ಬದುಕಿ ಬಂದಿದ್ದ ಈ ಸಮುದಾಯಗಳು ಇನ್ನೂ ಅಲ್ಲಿಯೇ ಉಳಿದಿವೆ; ಅಲ್ಲಿಯೇ ಉಳಿಯಲು ಬಯಸುತ್ತವೆ. ಆದರೆ ಆಧುನಿಕ ಜಗತ್ತಿನ ವಿದ್ಯಮಾನಗಳು ಅಲ್ಲಿರಲು ಅವರಿಗೆ ಅವಕಾಶವನ್ನೇ ಕೊಡುತ್ತಿಲ್ಲ. ಅವು ಅಲ್ಲಿಂದ ಕಾಲ್ತೆಗೆಯುವಂತೆ ಒತ್ತಡವನ್ನು ಹೇರಲಾಗುತ್ತಿದೆ. ಕಕಾಡುಗಳು ಈ ಮೂಲನಿವಾಸಿಗಳಿಂದ ನಾಶವಾಗುತ್ತಿವೆಕಿ ಎಂಬ ಆರೋಪವನ್ನು ಅವರ ಮೇಲೆ ಹೊರಿಸಲಾಗುತ್ತಿದೆ; ಅವರ ಕೃಷಿ, ಬೇಟೆ, ಕಾಡಿನ ಸಂಪತ್ತಿನ ಬಳಕೆ ಇತ್ಯಾದಿ ಎಲ್ಲವೂ ಕಾಡಿನ, ಪಶು ಪಕ್ಷಿಗಳ ನಾಶಕ್ಕೆ ಕಾರಣವಾಗುತ್ತಿದೆ ಎಂದು ನಾವೆಲ್ಲ ದೂರುತ್ತಲೇ ಇದ್ದೇವೆ.
ಈ ಆದಿವಾಸಿಗಳ ನಡುವೆ ಸ್ವಯಂಸೇವಾ ಸಂಸ್ಥೆಗಳು ಅಲ್ಪಸ್ವಲ್ಪ ಕೆಲಸ ಮಾಡಿರುವುದು ನಿಜ. ಅವರಲ್ಲಿ ಸ್ವಲ್ಪಮಟ್ಟಿನ ಎಚ್ಚರ ಮೂಡಿಸಿರುವುದು, ಅವರ ಹಕ್ಕಿಗಾಗಿ ಒಂದಿಷ್ಟು ಹೋರಾಟವನ್ನು ರೂಪಿಸಿರುವುದು ಹೌದು. ಆದರೆ ಬುಡಕಟ್ಟು ಸಮುದಾಯಗಳನ್ನು ತಮ್ಮ ಸ್ವಾರ್ಥಕ್ಕಾಗಿ ಒಂದು ಸಂಪನ್ಮೂಲದಂತೆ ಬಳಸಿಕೊಂಡಿರುವುದೂ ಅಷ್ಟೇ ನಿಜ. ಇಂಥ ವಸ್ತುಸ್ಥಿತಿಯಲ್ಲಿ, ಈ ಸಮುದಾಯಗಳ ಒಳಗಿನಿಂದಲೇ ಬರುತ್ತಿರುವ ಪ್ರಜ್ಞಾವಂತರು ತಮ್ಮ ಬುಡಕಟ್ಟುಗಳ ಬಿಡುಗಡೆಯ ಹಾದಿಯನ್ನು ತಾವೇ ಕಂಡುಕೊಳ್ಳಬೇಕು. ಅದಿಲ್ಲದೆ ಬೇರೆ ದಾರಿಯೇ ಇಲ್ಲ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2006ರ ಅರಣ್ಯ ಕಾಯಿದೆಯೇನೂ ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ಉಳಿಸಿಕೊಡುವ ದಿಕ್ಕಿನ ಕಡೆಗೆ ಮುಖಮಾಡಿದೆ. ಸಾವಿರಾರು ವರ್ಷಗಳಿಂದ ತಾವು ಬದುಕಿಬಂದ ಅರಣ್ಯಗಳಲ್ಲೇ ವಾಸಿಸುವ ಹಕ್ಕು, ಅರಣ್ಯಭೂಮಿ ಮತ್ತು ಇತರ ಸಂಪನ್ಮೂಲಗಳ ಬಳಕೆಯ ಹಕ್ಕು ಇತ್ಯಾದಿ ಹಕ್ಕುಗಳನ್ನು ಈ ಕಾಯ್ದೆ ಕೊಡುತ್ತದೆ. ಆದರೆ ಈ ಕಾಯ್ದೆಯನ್ನು ಸರ್ಕಾರದ ಆಡಳಿತ ಯಂತ್ರ ತನಗೆ ಬೇಕಾದಂತೆ ಗ್ರಹಿಸಿ ಜಾರಿಗೆ ತರುವ ರೀತಿಯೇ ವಿಚಿತ್ರವಾಗಿರುತ್ತದೆ. ಅಲ್ಲದೆ 1927ರಲ್ಲಿ ರೂಪಿತಗೊಂಡ, ಭಾರತೀಯ ಅರಣ್ಯ ಕಾಯಿದೆ, 1972 ರಲ್ಲಿ ಜಾರಿಗೆ ಬಂದ ವನ್ಯಜೀವಿ ರಕ್ಷಣಾ ಕಾಯ್ದೆಗಳು ಬುಡಕಟ್ಟು ಸಮುದಾಯಗಳನ್ನು ಅರಣ್ಯದಲ್ಲಿರಲು ಬಿಡುವುದಿಲ್ಲ. ಈ ಕಾಯ್ದೆಗಳನ್ನು ಬಳಸಿಕೊಂಡು ಯಾವುದೇ ಅರಣ್ಯ ಪ್ರದೇಶವನ್ನು ಮೀಸಲು ಅರಣ್ಯ ಎಂದು ಹೇಳಿಬಿಡಬಹುದು; ಹಾಗೆಯೇ ಯಾವುದೇ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಕರೆದುಬಿಡಬಹುದು. ಅಂಥ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯಗಳಿಗೆ ಜಾಗ ಇರುವುದು ಕಷ್ಟ.
ಬುಡಕಟ್ಟು ಸಮುದಾಯಗಳು ನಿಜಕ್ಕೂ ಕಷ್ಟದಲ್ಲಿವೆ.
ಬುಡಕಟ್ಟು ಸಮುದಾಯಗಳನ್ನು ನಾವು ನಮ್ಮ ಅಪೇಕ್ಷೆಗೆ ತಕ್ಕಂತೆ ಬಳಸಿಕೊಳ್ಳಲು ನೋಡುತ್ತಿದ್ದೇವೆ. ಅವರ ಹಾಡು, ಕುಣಿತ, ಕಲೆ, ಭಾಷೆ, ಸಂಸ್ಕೃತಿ, ಉಡುಗೆ ತೊಡುಗೆಗಳು ಉಳಿಯಬೇಕೆಂದು ಹೇಳುತ್ತೇವೆ.
ಇದೆಲ್ಲ ಸಾಧ್ಯವಾಗುವುದು ಈ ಬುಡಕಟ್ಟು ಸಮುದಾಯಗಳು ತಮ್ಮ ಹಕ್ಕುಗಳನ್ನು ಪಡೆದುಕೊಂಡಾಗ.
(ಸೌಜನ್ಯ: ಸಂಯುಕ್ತ ಕರ್ನಾಟಕ )
 
 

‍ಲೇಖಕರು G

10 March, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading