ನಾಳೆ ಅಮರೇಂದ್ರರ ಹೊಸ ಕೃತಿಗಳ ಬಿಡುಗಡೆ

ಕಥಾಪ್ರಕಾರವನ್ನು ಅಮರೇಂದ್ರ ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಈ ಸಂಕಲನದ ಕತೆಗಳು ಮತ್ತು ನಡೆಸಿರುವ ಪ್ರಯೋಗಗಳೇ ಸಾಕ್ಷ್ಯ ನುಡಿಯುತ್ತವೆ. ಮಾಸ್ತಿಯವರಿಂದ ಹಿಡಿದು ಸಮಕಾಲೀನ ಕತೆಗಾರರ ತನಕ ಕನ್ನಡ ಕಥಾಲೋಕವು ಹೊಸದೆನಿಸುವ ತಂತ್ರ ಮತ್ತು ಶೈಲಿಗಳ ಆನ್ವೇಷಣೆಯಲ್ಲಿ ಸದಾ ತೊಡಗಿಕೊಂಡಿದೆ. ಆ ಆನ್ವೇಷಣೆಯ ಸಾರ್ಥಕ ಮುಂದುವರಿಕೆಯಾಗಿ ಅಮರೇಂದ್ರರ ಈ ಕತೆಗಳಿವೆ.
-ಎಂ.ಎಸ್. ಆಶಾದೇವಿ

ವಸ್ತುವಿನ ವೈವಿಧ್ಯ, ಅವುಗಳ ನಿರೂಪಣೆ ಮತ್ತು ಶೋಧದ ಗಾಂಭೀರ‍್ಯ ಹಾಗೂ ಬದಲಾದ ಕಾಲವನ್ನು ಎದುರಾಗುವ ಹೊಸತನಗಳ ಕಾರಣಕ್ಕೆ ‘ಬಣ್ಣದ ನೆರಳು’ ಕೃತಿ ಕನ್ನಡದ ಕಥಾಲೋಕಕ್ಕೆ ಹೊಸ ಸೇರ‍್ಪಡೆಯಾಗಿದೆ. ಕನ್ನಡದ ಸಣ್ಣಕತೆಗಳಲ್ಲಿ ತೀವ್ರ ಆಸಕ್ತಿಯುಳ್ಳವರು ಓದಲೇಬೇಕಾದ ಕೃತಿ.
-ರಂಗನಾಥ ಕಂಟನಕುಂಟೆ

ಈ ಸಂಕಲನದ ಕತೆಗಳು ಬರೆಯದೇ ಇರಲಾಗದ, ಮರೆತೂ ಇರಲಾಗದ ಸಂಕಟ ಹಾಗೂ ತಾಕಲಾಟದಿಂದಾಗಿ ಹುಟ್ಟಿರುವ ಕತೆಗಳು. ಇದೇ ಕಾರಣಕ್ಕಾಗಿ ಇವು ನಮ್ಮನ್ನು ತೀವ್ರವಾಗಿ ಕಾಡುವ ಕತೆಗಳು ಕೂಡ ಹೌದು. ಕತೆಗಾರ ಅಮರೇಂದ್ರರನ್ನೂ ಬದಿಗೆ ಸರಿಸಿ ಈ ಕಥೆಗಳೊಳಗಿನ ಪಾತ್ರಗಳು, ಸಂದರ್ಭಗಳು ನಮ್ಮೊಂದಿಗೆ ಮಾತಿಗೆ ಇಳಿಯುತ್ತವೆ. ಇಲ್ಲಿನ ಕತೆಗಳು ಲೋಕದ ಹಲವು ಸಂಗತಿಗಳಿಗೆ ಧ್ವನಿಯಾಗುತ್ತ, ಆ ಸಂಗತಿಗಳಿಗೆ ಸಹಜವಾಗಿ ದಕ್ಕಬೇಕಾದ ಜೀವಪರ ಆಯಾಮಗಳೆಡೆಗೆ ವಿಸ್ತರಿಸಿಕೊಳ್ಳುತ್ತವೆ. ಆದ್ದರಿಂದ ಇವು ಬದುಕಿನ ಹೊಸ ದರ್ಶನಗಳಿಗಾಗಿ ಮತ್ತೆ ಮತ್ತೆ ಓದಬೇಕಾದ ಕತೆಗಳಾಗಿವೆ.
-ಡಾ. ರಾಗಂ

ಹೂ ಆಯುವ ಪುಟ್ಟ ದೇವತೆ ಮತ್ತೆ ಅಲ್ಲಿಯೇ ಇದ್ದಳು. ಕಾಲು ಚಾಚಿ ಕುಳಿತುಕೊಂಡು ಲಂಗದ ಬಟ್ಟೆಯಲ್ಲಿ ತುಂಬಿಕೊಂಡ ಹೂವುಗಳನ್ನು ನಿಧಾನವಾಗಿ ಮಗುಚುತ್ತಿದ್ದಳು. ಕಾಲಿನ ಸಪ್ಪಳ ಮಾಡಿದೆ. ನಿಧಾನವಾಗಿ ತಲೆಯೆತ್ತಿದಳು. ಅವಳ ಕಣ್ಣಿನಿಂದ ಹೂಗಳು ಉದುರಲಾರಂಭಿಸಿದವು. ಅವಳು ಅದನ್ನು ಲಂಗದಲ್ಲಿ ತುಂಬುತ್ತ ನೆಲದ ಮೇಲೆಲ್ಲ ಹರಡುತ್ತ ‘ಹೂ ಕಟ್ಟಬೇಕು ದಾರ ಇದೆಯಾ?’ ಎಂದಳು. ‘ಅಯ್ಯೋ ದಾರ ಇಲ್ಲವಲ್ಲ. ಮಾಸ್ಕ್ ಇದೆ. ಬೇಕೂಂದ್ರೆ ಅದರ ದಾರ ಹರಿದು ಕೊಡ್ತೇನೆ’ ಎಂದೆ. ‘ಥೂ ಅದು ಬೇಡ’ ಎಂದು ಮುಖ ಸಿಂಡರಿಸಿದಳು. ‘ಮತ್ತೇನು ಬೇಕು?’ ಎಂದೆ. ‘ನಿನ್ನ ಮೈಯ ನರ ಕೊಡು. ನಿನ್ನ ಕರುಳು ಕೊಡು. ಹೂ ಪೋಣಿಸ್ತೀನಿ’ ಎಂದಳು. ‘ಅಷ್ಟೇ ತಾನೇ ನಾನು ರೆಡಿ’ ಎಂದೆ. ‘ಹೌದಾ ಕೊಡು ಹಾಗಾದರೆ’ ಎನ್ನುತ್ತ ಕೈ ಚಾಚಿದಳು. ಕೊಡುವ ಉತ್ಸಾಹವನ್ನೇನೋ ತೋರಿದ್ದೆ. ಆದರೆ ನರ ಕೊಡುವುದು ಹೇಗೆ ಕರುಳು ಕೀಳುವುದು ಹೇಗೆ ಎಂದು ಗೊಂದಲವಾಯಿತು. ನಾನು ಗೊಂದಲದಲ್ಲಿದ್ದಾಗಲೇ ಅವಳಿದ್ದ ಜಾಗದಲ್ಲಿ ಏನೋ ಸದ್ದಾಯಿತು. ನೋಡ ನೋಡುತ್ತಿದ್ದಂತೆಯೇ ಅಲ್ಲಿದ್ದ ಹೂಗಳೆಲ್ಲ ಕಣ್ಮರೆಯಾಗಿ ಅವಳು ಮಾತ್ರ ಉಳಿದಳು. ಮರುಕ್ಷಣವೇ ಹೂವಿನ ಗುಪ್ಪೆಯಿದ್ದ ಜಾಗದಲ್ಲಿ ಅವಳೇ ಒಂದು ಹೂವಾಗಿ ಮೂಡಿ ಗಾಳಿಯಲ್ಲಿ ತೇಲುತ್ತ ತೇಲುತ್ತ ಸಾಗಿ ರಸ್ತೆಯಂಚಿಗೆ ತಲುಪಿ ತಿರುವಿಗೆ ಹೊರಳಿ ತಟಕ್ಕನೆ ಕಣ್ಮರೆಯಾದಳು.
-(ಪುಟ್ಟ ದೇವತೆಯ ಪಾರಿವಾಳ- ಕತೆಯಿಂದ ಆಯ್ದಭಾಗ)

‍ಲೇಖಕರು avadhi

July 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: