ನಿನ್ನ ಮುಗ್ದತೆ ಎಷ್ಟೊಂದು ಕ್ರೂರಿ!
– ಶ್ರೀನಿವಾಸ ಎಂ
1
ಕೆಲವೊಮ್ಮೆ ವಿಷಾದ,
ನಿನ್ನ ಮುಗ್ದತೆ ಎಷ್ಟೊಂದು ಕ್ರೂರಿ!
ವಾಸ್ತವದ ಉರಿಯ ಮುಚ್ಚಿಟ್ಟು
ಭ್ರಮೆಯ ಬೆಳದಿಂಗಳ ರಾಶಿ!
2
ನಿನ್ನ ನಾಳೆಗಳಿಗೆ ಅದೆಷ್ಟು ಬಣ್ಣಗಳ ಸ್ನಾನ
ಕ್ಷಣದ ಕಷ್ಟ ಮೆರೆಸುವ ಕಹಿ ಗುಳಿಗೆಗಳು!
ಕತ್ತಲು ಕಳೆದರೆ ಮತ್ತದೇ ನೋವು,
ದಿನವ ಮರೆತು ನಾಳಿನ ಬಗ್ಗೆ ಚಡಪಡಿಕೆ!

3
ದಿನಾ ಅದೇ ಹೆಣಗಾಟ,
ವಾಸ್ತವ ಅರಗಿಸಿಕೊಳ್ಳಲಾಗದ ಅಸಹಾಯಕತೆ!
ಸತ್ಯದ ಶಿಲುಬೆಯ ಭಯ,
ಆಪ್ತವಾಗುವುದು ಬರೀ ಹಗಲುಗನಸುಗಳು!
4
ಒಂದಿಷ್ಟು ಕ್ರೋಧ, ಸಿಟ್ಟು,
ಅವನೆದರು ಎದುರು ಎಲ್ಲವೂ ಠುಸ್,
ಕ್ಷಣಗಳುರುಳಿದರೆ ಮತ್ತದೇ ಕನಸುಗಳು-ನೋವು
ದಿನ-ವರ್ಷಗಳುರುಳಿದರೂ ಅದೇ ಬೇಡಿ!
5
ನಾಳೆಗಳಿಲ್ಲದ ಕ್ಯಾಲೆಂಡರ್ಗಾಗಿ ಹುಡುಕಾಟ,
ದಿನವ ಕೈಯಲ್ಲಿ ಹಿಡಿದಿಡುವ ತವಕ.
ಮತ್ತೆ ಮತ್ತೆ ಮುತ್ತುತ್ತವೆ ಹಗಲುಗನಸುಗಳು,
ಸೋತ ಜೀವಕ್ಕೆ ಮತ್ತೆ ನಾಳಿನ ಹಂಗು!





ತುಂಬಾನೇ ಇಷ್ಟವಾಯಿತು…
Chennagide