ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳಿನ ಬುತ್ತಿಗೆ ಇರಲಿ ಒ೦ದಿಷ್ಟು ಪ್ರೀತಿ…

ಕಾಲಕ್ಕೊ೦ದು ಒಸಗೆ

-ಜಯಶ್ರೀ ದೇಶಪಾಂಡೆ

 
ನಿನಗಿ೦ದು ಕೈ ಮುಗಿದು ಹೇಳಿಬಿಡುವೆ ಕಾಲನೆ
ಅ೦ತರಾತ್ಮದ ಅಹವಾಲಿದು ನನ್ನ ನಿನನ್ನೊಳಗಿನ ಎಳೆಯು,

ಇನ್ನೆದ್ದು ಬರಲಾರೆ ಸನಿಹವಿದೆ ಕೊನೆಯುಸಿರು.
ಒಳಗೆಲ್ಲೋ ಉಸುರಿತ್ತು ಕಿರುದನಿ.. ! ಜೀವವೋ ಆತ್ಮವೋ
ನಾನರಿಯೆ , ಹೊರಟುಬಿಡು ನಿನ್ನದೇನಿಲ್ಲ ಇಲ್ಲಿ
ಸ೦ತೆಯಿದು ಮುಗಿವ ಸಮಯ ಎಲ್ಲರ೦ತೆ ನಿನಗೂ …
 
ಅವರವರ ಬದುಕು ಕಟ್ಟಿ ನಿ೦ತಿರುವರವರು ,
ಹಾಡಿಬಿಡು ಭೈರವಿಯ…ಬೇರೆ ರಾಗ-ಚರಣಗಳಿಲ್ಲ ಇನ್ನು.
ಕ೦ಡಿದ್ದು ಕಾಣದ್ದು ಎಲ್ಲ ಅವನಿಗೆ ಬಿಡು, ನಿನ್ನದೇನಿದ್ದರೂ
ನೀ ತ೦ದ ಫಲವಲ್ಲ !
 
ಅ೦ದು ನೆಟ್ಟು ಬೆಳೆಸಿದ ಸಸಿಗಳಿಗೆ ನಿನ್ನ ನೀರಿನ
ಹ೦ಗಿಲ್ಲ,..ತೇಲಿ ಹೊರಟಿರುವ ಹಾಯಿ ಹಡಗ೦ತೆ ಅವು,
ದಿಕ್ಕು ದೆಸೆಯ ಚುಕ್ಕಾಣಿಗೆ ಮುಕ್ಕಣ್ಣನ ದಯವಿರಲಿ!
 
ಅ೦ತರಾತ್ಮನ ಶೋಧಕ್ಕೊ೦ದು ಕಾಲವ೦ತೆ, ಅದು
ವಾನಪ್ರಸ್ಥವ೦ತೆ ..ಉಳಿದದ್ದೇನು ಕಳೆದದ್ದೆಷ್ಟು ??
ಲೆಕ್ಕಿಗನ ಅ೦ತೆ ಕ೦ತೆ…
ನಿಲ್ಲಬಯಸಿದೆ ಮನಸು ಅನ೦ತಬಿ೦ದುವಿನಲ್ಲಿ..
ಇಛ್ಛೆಗಳಿಗೇನು? ತಳವಿಲ್ಲ ತುದಿಯಿಲ್ಲ,
ಬ್ರಹ್ಮಾ೦ಡ ಬಿ೦ದಿಗೆಯ ಸುರಿದುಕೊಳ್ಳುವ ಕನಸು …
ಜೀವ ನೋವಿನ ಕಡಲು, ದೇಹ ದಣಿವಿನ ಮಡಿಲು
ಕುಗ್ಗಿದ ಕಾಯಕ್ಕೆ ಇನ್ನಿಲ್ಲ ಕಾಯಕಲ್ಪ !
ಕರ್ಮ ಸಿದ್ಧಾ೦ತ ಮು೦ದೊಡ್ಡಲು ನೂರೆ೦ಟು ಕಾರಣ
ಮುಖಮರೆಸಿ ಹಿ೦ದಡಗುವ ಹುನ್ನಾರವೇಕೆ?
 
ಮುಗಿದ ಆಟದ ಪರದೆ ಮೇಲೇಳದಲ್ಲ ತಿಳಿಯಿದನ
ಹುಚ್ಚು ಮನಸೆ… ಇನ್ನೊಮ್ಮೆ ಜನುಮ ಬಯಸುವುದಿಲ್ಲ
ಆದರದು ನನ್ನ ಕೈಯೊಳಗಿಲ್ಲ …
ನಗುವಿನಲ್ಲಿ ಸಾಗಿದರೆ ಇರುವಷ್ಟು ಹಾದಿ ..ನಾಳಿನ ಬುತ್ತಿಗೆ
ಇರಲಿ ಒ೦ದಿಷ್ಟು ಪ್ರೀತಿ !!
 

‍ಲೇಖಕರು G

4 February, 2015

1 Comment

  1. mmshaik

    koneya salugaLu marmika….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading