ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನ್ಯಾಕೆ ಮಾಡಲಿ ಧ್ಯಾನ?

ರವಿ ಸಿದ್ಲಿಪುರ
ಸುಳ್ಳು ಹೇಳಿಲ್ಲ,
ಮೋಸ ಮಾಡಿಲ್ಲ,
ಕಳ್ಳತನ ಅಂದ್ರೆ
ಏನೂಂತ ಗೊತ್ತಿಲ್ಲ!
ಇವುಗಳನ್ನು ಮಾಡದ
ಮೇಲೆ, ನಾನ್ಯಾಕೆ
ಮಾಡಲಿ ಧ್ಯಾನ?
ಮದುವೆಯಾಗಿ
ಹೆಂಡತಿ ಬಿಟ್ಟಿಲ್ಲ,
ಮನೆ, ಮಕ್ಕಳು
ಅಂಥ ರೋಸಿ ಹೋಗಿಲ್ಲ,
ತಾಯಿತಂದೆಯರನ್ನೂ
ದೂರ ಇಟ್ಟಿಲ್ಲ,
ಅವರನ್ನು ಮಾತಾಡಿಸಲು
ಹೋಗುವಾಗ ಕ್ಯಾಮಾರಾ
ತಗೊಂಡು ಹೋಗಲ್ಲ,
ಹೀಗಿರುವಾಗ, ನಾನ್ಯಾಕೆ
ಮಾಡಲಿ ಧ್ಯಾನ?
ಕಲಿಸುವಾಗ
ಧರ್ಮ, ಜಾತಿ, ಲಿಂಗಗಳನು
ನೋಡಲ್ಲ,
ಯಾರನ್ನೂ ಯಾವುದರ
ಮೇಲೂ ಎತ್ತಿಕಟ್ಟಿಲ್ಲ,
ಪ್ರತಿ ವಿಚಾರಗಳು
ಬಹುತ್ವವನ್ನೇ ಉಸಿರಾಡುತ್ತಿರುವಾಗ,
ನಾನ್ಯಾಕೆ ಮಾಡಲಿ ಧ್ಯಾನ?
ಕಂಡಕಂಡ ದೇವಾಲಯಗಳ
ಸುತ್ತಿಲ್ಲ,
ಪವಿತ್ರ ನದಿಗಳಲ್ಲಿ
ಮಿಂದಿಲ್ಲ,
ಗುರುಸ್ವಾಮಿಗಳ
ಪಾದಗಳಿಗೆ
ದೀರ್ಘದಂಡ ಹೊಡೆದಿಲ್ಲ,
ನನ್ನ ಪಾಲಿನ
ಕೆಲಸವನ್ನು ನಿಷ್ಠೆಯಿಂದ
ಮಾಡುತ್ತಿರುವಾಗ,
ನಾನ್ಯಾಕೆ ಮಾಡಲಿ ಧ್ಯಾನ?

ಲೋಕ ಕಲ್ಯಾಣಕ್ಕಾಗಿ
ಸಕಲವನ್ನೂ
ತೊರೆದು, ಶುದ್ದುಳ್ಳವರು
ಮಾಡಲಿ ಧ್ಯಾನ!
ಮನಸ್ಸು ಲೌಕಿಕದ
ಭೋಗ, ಆಸೆ, ತೃಷೆಗಳನ್ನು
ಬಯಸುವಾಗ
ಅವುಗಳನ್ನು ಮುಚ್ಚಿಟ್ಟುಕೊಂಡು,
ನಾನ್ಯಾಕೆ ಮಾಡಲಿ ಧ್ಯಾನ?
ಒಂದಿಷ್ಟು ಓದು,
ನೋವಿಗೆ ಮಿಡಿವ
ಹೃದಯವಿರುವಾಗ,
ಬಲವಿರುವವರೆಗೂ
ಬಂದ ಕಾರ್ಯ ಮುಗಿಸುವ
ದಾರಿ ಕಣ್ಣೆದುರಿಗೆ ಇರುವಾಗ,
ನಾನ್ಯಾಕೆ ಮಾಡಲಿ ಧ್ಯಾನ?
ಕಣ್ಣೆದುರಿಗಿನ ಯುವಸಮಾಜ
ಕತ್ತಲ ಹರಸಿ
ನಡೆವುದನ್ನು ತಿಳಿದೂ,
ನನ್ನ ಒಳಗನ್ನು
ಪರಿಶುದ್ಧ ಮಾಡಿಕೊಳ್ಳಲು
ನಾನ್ಯಾಕೆ ಸೇರಿಕೊಳ್ಳಲಿ
ಗುಹೆ?
ಬಾಳಿನ ಜವಾಬ್ದಾರಿಗಳಿರುವಾಗ
ನಾನ್ಯಾಕೆ
ಮಾಡಲಿ ಧ್ಯಾನ?

‍ಲೇಖಕರು Avadhi Admin

22 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading