‘ಗೀರು‘ ಕೈಗೆತ್ತಿಕೊಳ್ಳಿ.. ಪರವಶರಾಗುವ ಸರದಿ ನಿಮ್ಮದು

ವ್ಯವಸ್ಥೆಯ ಅನೇಕ ಮುಖಗಳನ್ನು ಅನಾವರಣಗೊಳಿಸುವ ‘ಗೀರು’

ಸ್ಮಿತಾ ಅಮೃತರಾಜ್, ಸಂಪಾಜೆ

ನೋಡ ನೋಡುತ್ತಿದ್ದಂತೆಯೇ ಬಿರ ಬಿರನೆ ಬೆಳೆದು ಗಟ್ಟಿಯಾಗಿ ಬೇರನಿಳಿಸಿ ಕಥಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿದ ಹುಡುಗಿ ಕಥೆಗಾರ್ತಿ ದೀಪ್ತಿ ಭದ್ರಾವತಿ.

ದೀಪ್ತಿ ಅಂದಾಕ್ಷಣ ತಟ್ಟನೆ ನೆನಪಾಗುವುದೇ ಕಥೆ. ಯಾವುದೇ ಕಥಾಸ್ಪರ್ಧೆಯಿರಲಿ ಬಹುಮಾನಿತರ ಪಟ್ಟಿಯಲ್ಲಿ ದೀಪ್ತಿಯ ಹೆಸರಿಲ್ಲ ಅಂತಾದರೆ ಸಾಹಿತ್ಯಾಸಕ್ತರಿಗೆ ಗಲಿಬಿಲಿ ಉಂಟಾಗಿ ಕುತೂಹಲದಿಂದ ನೋಡುವ ಒಂದು ವಾತಾವರಣ ನಿರ್ಮಾಣ ಆಗಿದೆಯೆಂದರೆ ಇದು ಹೆಚ್ಚುಗಾರಿಕೆಯಲ್ಲ. ಇದರ ಹಿಂದೆ ಬರಹದ ಬಗೆಗಿನ ಅವರ ಅಪಾರ ಬದ್ಧತೆ ಮತ್ತು ಏನನ್ನೋ ಹೊಸತನ್ನು ಕೊಡಬೇಕೆನ್ನುವ ಆಕೆಯ ಕ್ರಿಯಾಶೀಲತೆ ಕೆಲಸ ಮಾಡಿದೆಯೆಂಬುದು ಅಲ್ಲಗಳೆಯಲಾಗದ ಸತ್ಯ. ಈ ಕಾರಣಗಳಿಂದಲೇ ದೀಪ್ತಿಯ ಕತೆಗಳು ಸಾಹಿತ್ಯ ಲೋಕದಲ್ಲಿ ಒಂದು ಹೊಸ ಭರವಸೆಯನ್ನು ಮೂಡಿಸಿದ್ದು.

ಇಲ್ಲಿ ತನಕ ನಾನು ನೋಡಿಯೇ ಇರದ ದೀಪ್ತಿ ಆಕೆಯ ಕತೆಗಳ ಮೂಲಕ ಆಪ್ತರಾದವರು. ಕವಿತೆ ನನ್ನ ಮಾಧ್ಯಮ ಅಲ್ಲ ಅನ್ನಿಸಿ ಕವಿತೆಯ ಬಗಲಿಗೆ ಜೋತು ಬಿದ್ದೆ ಅಂತ ಹೇಳಿಕೊಳ್ಳುವ ಆಕೆ ಕತೆ ಕಟ್ಟಿದ್ದಷ್ಟೇ ಸಲೀಸಾಗಿ ಕಾಡುವ ಕವಿತೆಗಳನ್ನೂ ಹೆಣೆಯ ಬಲ್ಲಳು ಎನ್ನುವುದೇ ಖುಷಿ ಮತ್ತು ಅಚ್ಚರಿದಾಯಕ ಸಂಗತಿ. ಅಲ್ಲಲ್ಲಿ ಬಿಡಿ ಬಿಡಿಯಾಗಿ ದೀಪ್ತಿಯ ಕತೆಗಳನ್ನು ಓದಿಕೊಂಡು ಅವರ ಕತೆ ಕಟ್ಟುವ ಕೌಶಲ್ಯಕ್ಕೆ ಬೆರಗಾಗಿರುವ ನನಗೆ ಈಗ ಅವರ ಇಡೀ ಕಥಾಗುಚ್ಚವನ್ನು ಒಂದೇ ಗುಕ್ಕಿಗೆ ಓದುವ ಅವಕಾಶ.

ದೀಪ್ತಿಯ ಕತೆಗಳ ಬಗ್ಗೆ ಹೇಳಬೇಕೆಂದರೆ ದೀಪ್ತಿ ಹುಟ್ಟು ಕತೆಗಾರ್ತಿ. ಜೀವನದಲ್ಲಿ ಘಟಿಸುವ ಅದೆಷ್ಟೋ ದಿಗಿಲು ಹುಟ್ಟಿಸುವ ನೈಜ ಸಂಗತಿಗಳನ್ನು ಕೇಳಿಯೋ, ತಿಳಿದೋ, ಸೂಕ್ಷ್ಮವಾಗಿ ಅವಲೋಕಿಸಿ ಪರಕಾಯ ಪ್ರವೇಶ ಮಾಡಿಯೋ ಕತೆಗಳ ಮೂಲಕ ಅಷ್ಟೇ ಸಹಜವಾಗಿ ಅನಾವರಣಗೊಳಿಸುವುದರಲ್ಲಿ ಸಿದ್ಧಹಸ್ತರು.

ಹಾಗಾಗಿ ಆಕೆಯ ಕತೆಗಳಲ್ಲಿ ಪ್ರಾಮಾಣಿಕ ಅಭಿವ್ಯಕ್ತಿ ಇರುವುದರಿಂದಲೇ ಕತೆ ನಮ್ಮ ಮನಸಿನಾಳಕ್ಕೆ ಇಳಿದು ನಮ್ಮ ಆಸುಪಾಸಿನ ಇಂತಹ ಅನುಭವಗಳು ನಮ್ಮ ಮುಂದೆ ಕತೆಯ ಪಾತ್ರಗಳಾಗಿ ಸಂಚರಿಸತೊಡಗುವುದು. ಸ್ತ್ರೀ ಸಂವೇದನೆಯೇ ದೀಪ್ತಿಯ ಕತೆಗಳ ಮೂಲ ದ್ರವ್ಯ. ತಾನೊಬ್ಬ ಆರೋಗ್ಯ ಕೇಂದ್ರದ ಉದ್ಯೋಗಿಯಾಗಿರುವ ಕಾರಣವೇ ಇಲ್ಲಿನ ಹೆಚ್ಚಿನ ಕತೆಗಳು ಆಸ್ಪತ್ರೆಯ ಆವರಣದಲ್ಲಿಯೇ ಹುಟ್ಟಿಕೊಳ್ಳುತ್ತವೆ. ವ್ಯವಸ್ಥೆಯ ಹುದಲಿನಲ್ಲಿ ಸಿಕ್ಕಿ ಪಡಿಪಾಟಲು ಪಡುವ ಹೆಣ್ಣುಜೀವಗಳ ನಾಡಿ ಮಿಡಿತವನ್ನು ಬಲು ಸೂಕ್ಷ್ಮವಾಗಿ ಹಿಡಿದಿಡುತ್ತಾ, ಯಾವುದೇ ಅಬ್ಬರ ಘೋಷಣೆಯಿಲ್ಲದೆ ಒಂದು ತಣ್ಣಗಿನ ಪ್ರತಿಭಟನೆಯನ್ನ ಪ್ರತೀ ಕತೆಗಳ ಮೂಲಕವೂ ಕಟ್ಟಿ ಕೊಡುತ್ತಾರೆ. ಆದರೆ ಅದು ಅಷ್ಟೇ ತೀವ್ರವಾಗಿ ಪರಿಣಾಮ ಬೀರುವುದನ್ನ ಹೆಚ್ಚು ಸದ್ದು ಮಾಡದೆ ಹೇಳಿ, ಓದುಗನೊಳಗೊಂದು ಸಂಚಲನ ಎಬ್ಬಿಸುವಂತೆ ಮಾಡುವುದೇ ಇಲ್ಲಿನ ಕತೆಗಳ ಗೆಲುವು.

ಇಲ್ಲಿ ಬರುವ ಪ್ರತೀ ಕಥಾನಾಯಕಿಯರು ಚೌಕಟ್ಟಿನೊಳಗಿದ್ದುಕೊಂಡೇ ಯಾರ ಅರಿವಿಗೂ ಬಾರದೆ ಚೌಕಟ್ಟನ್ನು ಮೀರುತ್ತಾ, ಎಲ್ಲಾ ಪ್ರತಿರೋದದ ನಡುವೆಯೂ ತನ್ನತನವನ್ನು ಕಾಯ್ದುಕೊಂಡು ಬದುಕುತ್ತಾರೆಂಬುದೇ ಇಲ್ಲಿನ ಕತೆಗಳ ವೈಶಿಷ್ಟ್ಯ. ಹಾಗಾಗಿ ಇಲ್ಲಿನ ಕತೆಗಳು ಭರವಸೆಯನ್ನು ಕಟ್ಟಿಕೊಡಬಲ್ಲವು. ಒಂದೊಳ್ಳೆ ಸಾಹಿತ್ಯದ ಉದ್ಧೇಶವೂ ಇದೇ ತಾನೇ. ಇನ್ನು ಇಲ್ಲಿನ ಕತೆಗಳಲ್ಲಿ ವ್ಯವಸ್ಥೆಯ ಕುರಿತಾದ ಒಂದು ರೀತಿಯ ವಿಡಂಬನೆಯಿದೆ. ಜಾಗತೀಕರಣದ ಭರಾಟೆಯಲ್ಲಿ ಕಾನ್ವೆಂಟ್ ಶಾಲೆಗಳು ಹುಟ್ಟು ಹಾಕುವ ಇಂಗ್ಲಿಷ್ ಮೋಹದ ಹಿಂದೆ ಬಿದ್ದು ಬಲಿಪಶುವಾಗುವ ಜನತೆಯ ಕುರಿತಾದ ಸಾಮಾಜಿಕ ಕಾಳಜಿಯಿದೆ. ನೆರಳಿನಾಚೆ ಕತೆಯ ಸುತ್ತ ಹೆಣೆದುಕೊಳ್ಳುವ ಜಾಗೃತ ಪರಿಸರ ಪ್ರಜ್ಞೆಯಿದೆ. ಒಂದು ಕತೆಯ ಮೂಲಕ ಕೌಟುಂಬಿಕ, ಸಾಮಾಜಿಕ, ರಾಜಕೀಯ ಹೀಗೆ ವ್ಯವಸ್ಥೆಯ ಅನೇಕ ಮುಖಗಳನ್ನು ತೋರಿಸುವುದೇ ದೀಪ್ತಿಯ ಕತೆಗಳ ಗಟ್ಟಿತನಕ್ಕೆ ಸಾಕ್ಷಿ.

ಒಟ್ಟಾರೆಯಾಗಿ ವಿಭಿನ್ನವಾದ ಕಥನ ಕ್ರಮ, ಯಾರ ಊಹೆಗೂ ನಿಲುಕದ ಒಂದು ವಿಸ್ಮಯ ಹುಟ್ಟಿಸುವ ಕತೆಯ ಅಂತ್ಯ, ಮುದಗೊಳಿಸುವ ಭಾಷೆ, ಎಲ್ಲಕ್ಕಿಂತ ಹೆಚ್ಚಾಗಿ ಪ್ರತೀ ಕತೆ ಓದಿದ ಮೇಲೂ ಬೇರೇನೂ ಓದಲಾರೆ ಅನ್ನುವಂತಹ ಒಂದು ದಿಗ್ಭ್ರಮೆ ಮತ್ತು ಹೊಸತೊಂದು ಲೋಕವನ್ನು ತೆರೆದಿಡುವುದರಿಂದಲೇ ಇವತ್ತು ದೀಪ್ತಿ ಭದ್ರಾವತಿಯವರ ‘ ಗೀರು ‘ ಕಥಾಸಂಕಲನ ಕನ್ನಡ ಕಥಾಲೋಕದಲ್ಲಿ ತೀರಾ ಮಹತ್ವದ್ದಾಗಿದೆ. ಇದು ಉತ್ಪ್ರೇಕ್ಷೆಯಲ್ಲ. ‘ಗೀರು ‘ ಕೈಗೆತ್ತಿಕೊಳ್ಳಿ. ಪರವಶರಾಗುವ ಸರದಿ ನಿಮ್ಮದು.

‍ಲೇಖಕರು avadhi

May 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ಕಲಾ ಚಿದಾನಂದ

    ವಿಮರ್ಶೆ ಆಪ್ತವಾಯಿತು ಸ್ಮಿತಾ..ಕಥೆಗಳನ್ನು ಓದಬೇಕಿದೆ.

    ಪ್ರತಿಕ್ರಿಯೆ
  2. Vasundhara k m

    Wow.. ಎಷ್ಟು ಚೆಂದ ಬರೆದಿದ್ದೀರಿ ಸ್ಮಿತಾ..! ಅಪರಿಚಿತರಾಗಿರುವ ದೀಪ್ತಿ ನಿಮ್ಮಿಂದ ಪರಿಚಿತರಾದರು ಹಾಗೆಯೇ ಆಪ್ತರೂ ಆದರು. ಪುಸ್ತಕ ಓದಲೇಬೇಕೆನಿಸುವಂತೆ ಬರೆದಿದ್ದೀರಿ. ನಿಮಗೆ ಹಾಗೂ ದೀಪ್ತಿಯವರಿಗೆ ಶುಭಾಶಯಗಳು…

    ಪ್ರತಿಕ್ರಿಯೆ
  3. ಸಂಗೀತ ರವಿರಾಜ್

    ತುಂಬ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ ಸ್ಮಿತ

    ಪ್ರತಿಕ್ರಿಯೆ
  4. Shobha Hirekai

    ತುಂಬಾ ಚೆನ್ನಾಗಿ ಪುಸ್ತಕ ಪರಿಚಯಿಸಿದ್ದೀರಿ. ” ಗೀರು” ಓದಬೇಕೆನ್ನುವ ಹಂಬಲ ಹೆಚ್ಚಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: