ಕಾಮನಂತರಂಗ
-ಎಂ ವಿ ಶಶಿಭೂಷಣ ರಾಜು
ಭಸ್ಮವಾದಮೇಲೆ ಪ್ರೀತಿ ಎಲ್ಲಿ
ಯಾವ ದೇಹವ ಹೊಕ್ಕು
ಹೊಸ ವಸ್ತ್ರವೊಂದನು ನೇಯುವುದೋ
ಒಂದು ಅಕಾರ ಕೊಡಲು
ಅನಂಗನಾವತಾರ ತಾಳಿದಮೇಲೆ
ಮೋಡಗಳೇ ಮೇಲು ಎನಿಸಿದೆ
ಆಗಸವೆಲ್ಲಾ ಆವರಿಸಿ
ನನ್ನಂತೆ ಕಂಬಿನಿ ಕಾರುತ್ತದೆ
ಗಾಳಿಯೂ ರೂಪವಾಗಿ ದೃಶ್ಯವಾಗುತ್ತಿದೆ
ದೇಹವ ತಟ್ಟಲು ದೇಹವೆಲ್ಲಿ
ಹಾಯಿ ಹೋಗುತ್ತೇನೆ ಕ್ಷ ಕಿರಣಗಳಂತೆ
ಪುಳಕಗೊಂಡಿದ್ದು ಮನಸೋ, ದೇಹವೋ
ನೆತ್ತರ ಚಿಮ್ಮುವ ಸುಖಿಸದ,
ಇನ್ನೊಂದು ದೇಹವ ಸೃಷ್ಟಿಸದ
ಅಂಗವೂನ
ಅವಳಿಗೆ, ಸರಿರಾತ್ರಿ ಕಿಬ್ಬೊಟ್ಟೆ ನೋವು
ನೆತ್ತರ ಕಾಲುವೆಗೆ ಅಣೆಕಟ್ಟೆ ಕಟ್ಟುವವರಾರು
ಭಾದೆ ದೇಹವಿದ್ದರೇನೇ,
ಆದರೆ ಮನಸು ಹೂವಾಗಬಹುದು
ಮೊನ್ನೆ ಎರಡನೇ ಮಗನ ಹುಟ್ಟುಹಬ್ಬ
ತುಂಬು ಕುಟುಂಬ, ಶಿವನದು
ಪಲವತ್ತಾದ ನನ್ನ ಭೂಮಿಗೆ
ಬೀಜ ಬಿತ್ತುವುದು ಹೇಗೆ
ಕಂಬನಿ ರತಿಯದು
ನೋವು ನನ್ನದು
ಗೌರಿಯ ಬೆವರಿಗೆ ಜೀವ ಕೊಟ್ಟವ
ನನ್ನ ಬೂದಿಗೇಕೆ
ನೀರ ಸುರಿದ, ಮೈಗೆಲ್ಲ ಸವರಿ ಖಾಲಿ ಮಾಡಿ ಬಿಟ್ಟನೇಕೆ
ಕಣ್ಣಿಗೆ ಕಾಣದ ಗಾಳಿಯಾದೆನೇ
ಜುವ್ ಎಂದು ಸುಂಟರಗಾಳಿಯಂತೆ
ಸುಳಿದರೂ ನಿನ್ನನೆತ್ತಿ ಮುತ್ತಿಡಲಾರೆ
ನೀನೊಂದು ಸಲ ಎಡವಿದರೂ
ನನ ತೊಳ ಹಿಡಯಲಾಗದೇ ರತಿ, ನನ್ನ ಸಖಿ
ತೆಕ್ಕೆಯಲಿ ತೆಗೆದುಕೊಳ್ಳಲಾರದೆ ಸುತ್ತ ಸುಳಿದು
ಮುಂಗುರುಳ ಚೆಲ್ಲುವುದ ನೋಡಿ
ಬೆರಗಾಗುವುದೇ ಸಂತಸವಾಯಿತೇ?
ಎಲ್ಲರಿಗೂ ಕಾಮಾಗ್ನಿ ಹುಟ್ಟಿಸುವ ನನಗೆಲ್ಲಿಯದು
ಕಾಮ
ನಾನು
ದೇಹವಿಲ್ಲದ ಆತ್ಮದಂತೆ
ಜಗದುದ್ಧಾರಕೆ ಹೊರಟು
ನಾನೇ ಕಳೆದುಹೋದೆ
ಕಳೆದುಕೊಂಡೆ
ರತಿಯ ಕಂಬನಿಯ
ಒರೆಸಲಾಗದೆ
ಕಂಬನಿ ಮಿಡಿಯಲಾಗದೆ, ಒಂಟಿಯಾಗಿ
ಮಿಡುಕಾಡುವುದೊಂದೇ ಕರ್ಮ
ಅವಳು ಹುಚ್ಚಿಯಾಗಿ
ಉತ್ತರಕ್ಕೆ ಹೊರಟಿದ್ದ ನೋಡ
ನಿಂತಿದ್ದು
ಮರೆಯಲಾಗುವುದೇ?






0 Comments