ನಾನೂ ಸೈಕಲ್ ಕಲಿತೆ..

– ಭಾರತಿ ಹೆಗಡೆ

ಆಗ ನಾನು ೮ನೇ ತರಗತಿಯ ಪರೀಕ್ಷೆ ಮುಗಿಸಿ ಬೇಸಿಗೆ ರಜೆಯಲ್ಲಿದ್ದೆ. ಅಷ್ಟೊತ್ತಿಗೆ ಅಣ್ಣ ಎಸೆಸ್ಸೆಲ್ಸಿ ಮುಗಿಸಿ ಕಾಲೇಜಿಗೆ ಹೋಗುವವನಿದ್ದ. ಕಾಲೇಜಿಗೆ ಹೋಗಲು ದೂರವಾಗುತ್ತದೆ, ಹಾಗಾಗಿ ನಂಗೊಂದು ಸೈಕಲ್ ಬೇಕು ಎಂಬ ಬೇಡಿಕೆಯನ್ನು ಆಗಲೇ ಅಮ್ಮನ ಬಳಿ ಇಟ್ಟಿದ್ದ. ಅದನ್ನು ಅಪ್ಪನಿಗೆ ಹೇಳಿ ಸ್ಯಾಂಕ್ಷನ್ ಮಾಡಿಸುವುದು ಅಮ್ಮನ ಗುರುತರವಾದ ಜವಾಬ್ದಾರಿಗಳಲ್ಲೊಂದಾಗಿತ್ತು. ಆಗೆಲ್ಲ ಗಂಡುಹುಡುಗರೆಂದರೆ ಅವರಿಗೊಂದು ಸೈಕಲ್ ಕೊಡಿಸಲೇಬೇಕೆಂಬುದು ಕಡ್ಡಾಯಗಳಲ್ಲೊಂದಾಗಿತ್ತು. ಹುಡುಗಿಯರಾದರೆ ಎಷ್ಟು ದೂರಾದರೂ ನಡೆದೇ ಹೋಗುತ್ತಿದ್ದರು.

ಅಮ್ಮ ಅಪ್ಪನಿಗೆ ಹೇಳಿ ಸೈಕಲ್ ಕೊಳ್ಳುವುದಕ್ಕೆ ಒಪ್ಪಿಗೆ ನೀಡಿಯೂ ಆಯಿತು. ಅಷ್ಟೊತ್ತಿಗಾಗಲೇ ಅಣ್ಣ ಅವರಿವರ ಸೈಕಲ್ ಪಡೆದು ಓಡಿಸುತ್ತಿದ್ದ. ಸಿದ್ದಾಪುರದಲ್ಲಿ ನಮ್ಮ ಬಳಗದಲ್ಲಿ ಮೊದಲು ಸೈಕಲ್ ಕೊಂಡದ್ದು ನನ್ನ ಮಾವನ ಮಗ ಒಡ್ಡಿನಗದ್ದೆ ಗಣಪತಿ. ಅವನು ಪ್ರತಿದಿವಸ ಹಾಲು ಮಾರಲು ಒಡ್ಡಿನಗದ್ದೆಯಿಂದ ೨ ಮೈಲಿ ದೂರದಿಂದ ಸೈಕಲ್ ಏರಿ ಸಿದ್ದಾಪುರಕ್ಕೆ ಬರುತ್ತಿದ್ದ. ಅವನ ಸೈಕಲ್ ತಗೊಂಡು ಅಣ್ಣನೂ ನೆಹರೂ ಮೈದಾನ, ಸಿಆರ್‌ಹಾಲ್ ಮೈದಾನ, ಸಿದ್ದಾಪುರದ ಬೀದಿಗಳಲ್ಲೆಲ್ಲ ಸೈಕಲ್ ಹೊಡೆಯುತ್ತಿದ್ದರೆ ನನಗೆ ಹೊಟ್ಟೆಯಲ್ಲಿ ಕಲಸಿದಂತಾಗುತ್ತಿತ್ತು.

ಅದರಲ್ಲೂ ಅವರು ಒಂದೇ ಪೆಡೆಲ್ ತುಳಿದು ಸೈಕಲ್ ಹೊಡೆಯುವುದು, ಹ್ಯಾಂಡಲ್ ಬಿಟ್ಟುಕೊಂಡು ಒಳ್ಳೆ ವಿಮಾನದ ರೆಕ್ಕೆಯ ಹಾಗೆ ಎರಡೂ ಕೈ ಬಿಟ್ಗಂಡು ಸೈಕಲ್ ಹೊಡೆಯುವುದು, ಸ್ಪೀಡಾಗಿ ಓಡಿಸುವುದು, ಅದೆಂಥ ಮಜಾ. ನಂಗೂ ಹಾಗೇ ಹೋಗಬೇಕು ಎಂಬುದು ಒಂದಾದರೆ, ಅಣ್ಣ ಏನೇ ಮಾಡಿದರೂ ಅದನ್ನು ನಾನೂ ಮಾಡಬೇಕು ಎಂಬುದಿನ್ನೊಂದು. ಅವ ಸೈಕಲ್ ಕಲಿತರೆ ನಾನೂ ಸೈಕಲ್ ಕಲಿಯಲೇಬೇಕು, ಅವನು ಈಜು, ಮರ ಹತ್ತುವುದು, ಕಬಡ್ಡಿ ಆಡುವುದು, ಕವನ ಬರೆಯುವುದು, ಭಾಷಣ ಮಾಡುವುದು ಇವನ್ನೆಲ್ಲ ಮಾಡುತ್ತಿದ್ದರೆ ಇವಿಷ್ಟನ್ನೂ ನಾನೂ ಮಾಡಬೇಕೆಂಬ ಹಠ ನನ್ನಲ್ಲಿ ಮೊಳೆಯುತ್ತಿತ್ತು.

ಆದರೆ ಈ ಸೈಕಲ್ ಓಡಿಸಲು ನಾನು ಕಲಿಲೇಬೇಕೆಂಬ ಹಠಕ್ಕೆ ಇನ್ನೂ ಒಂದು ಕಾರಣವಿತ್ತು. ಅದೆಂದರೆ ಆಗ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಶುಭಮಂಗಳ’ ಸಿನಿಮಾ ಬಂದಿತ್ತು. ಅದರಲ್ಲಿ ಆರತಿ ಪ್ಯಾಂಟು ಶರ್ಟು ಹಾಕ್ಕೊಂಡು, ಎರಡು ಜಡೆ ಹಾಕಿ ಸ್ಟೈಲಾಗಿ ಸೈಕಲ್ ಮೇಲೆ ಬರುತ್ತಿದ್ದರೆ ನಾನೂ ಹೀಗೇ ಬರಬೇಕು ಎಂಬುದು ಎಷ್ಟು ಅನಿಸಿತ್ತೆಂದರೆ ಯಾವತ್ತಾದರೂ ನಾನೂ ಇವಳ ಹಾಗೆಯೇ ಪ್ಯಾಂಟ್ ಶರ್ಟ್ ಧರಿಸಿ ಸೈಕಲ್ ಮೇಲೆ ಬರಲೇಬೇಕು ಎಂಬುದಾಗಿ.

ಸೈಕಲ್ ಕಲೀಬೇಕು ಎಂಬ ಆಸೆ ಇದ್ದುದೇನೋ ನಿಜ. ಆದರೆ ಸೈಕಲ್ ಎಲ್ಲಿದೆ? ಅಣ್ಣನ ಸೈಕಲ್ ಮುಟ್ಟುವ ಹಾಗೇ ಇರಲಿಲ್ಲ. ಮುಟ್ಟಿದರೆ ಅದು ಹಾಳಾಗಿ ಬಿಡುತ್ತದೆಂದು ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದ. ಇನ್ನೊಂದೆಂದರೆ ಆಗ ಸಿದ್ದಾಪುರದಲ್ಲಿ ಯಾರೂ ಮಹಿಳೆಯರು ಅಷ್ಟಾಗಿ ಸೈಕಲ್ ಹೊಡೆಯುತ್ತಿರಲಿಲ್ಲ. ಒಬ್ಬ ಹುಡುಗಿಯೂ ನಮಗಿಂತ ಮೊದಲು ಸೈಕಲ್ ಓಡಿಸಿದ್ದನ್ನು ನಾನು ನೋಡಿರಲಿಲ್ಲ. ಜೊತೆಗೆ ಲೇಡೀಸ್ ಸೈಕಲ್ ಎಂಬುದೇ ಸಿದ್ದಾಪುರದಲ್ಲಿ ಇರಲಿಲ್ಲ, ಈ ಜೆಂಟ್ಸ್ ಸೈಕಲನ್ನೇ ಹುಡುಗಿಯರೂ ಹೊಡೀಬೇಕಾಗಿತ್ತು. ಹಾಗಾಗಿ ಆಗ ಸೈಕಲ್ ಕಲೀತೇನೆ ಎಂದ ಕೂಡಲೇ ಮನೆಯಲ್ಲಿ ಯುದ್ಧದ ರೀತಿ ರಂಪ ಶುರುವಾಗಿಬಿಟ್ಟಿತು. ಹೆಣ್ಣುಮಕ್ಕಳು ಸೈಕಲ್ ಕಲೀತ್ವಾ ಎಂದು ಅಮ್ಮ ಬೈದಳು. ಯಾರೇನೇ ಹೇಳಿದರೂ ವಿಮಾನದ ರೆಕ್ಕೆ ಹಾಗೆ ಎರಡೂ ಕೈಬಿಟ್ಟುಕೊಂಡು ಸೈಕಲ್ ಓಡಿಸಿದ ಅಣ್ಣ, ಪ್ರತಿದಿವಸ ರಾಕೆಟ್ ವೇಗದಲ್ಲಿ ಸೈಕಲ್ ಓಡಿಸುತ್ತಿದ್ದ ಗಣಪತಿ, ಎರಡು ಜಡೆ ಹಾಕಿಕೊಂಡು ಪ್ಯಾಂಟು ಶರ್ಟು ಧರಿಸಿ ಸೈಕಲ್ ಓಡಿಸಿದ ಶುಭಮಂಗಳದ ಆರತಿ ಎಲ್ಲರೂ ಕಣ್ಣ ಮುಂದೆ ಬಂದು ಸೈಕಲ್ ಕಲಿಯುವ ಆಸೆ ನನ್ನಲ್ಲಿ ಗಟ್ಟಿಯಾಗತೊಡಗಿತು.

ಒಂದಿನ ಸಿದ್ದಾಪುರದಿಂದ ಎರಡು ಕಿ.ಮೀ. ದೂರದಲ್ಲಿರುವ ನನ್ನ ಮಾವನ ಮನೆ ಒಡ್ಡಿನಗದ್ದೆಗೆ ಹೋದೆ. “ನಂಗೆ ಸೈಕಲ್ ಹೊಡೆಯೋದು ಹೇಳ್ಕೊಡೋ’ ಎಂದು ಮಾವನ ಮಗ ಗಣಪತಿಯನ್ನು ಗುಟ್ಟಾಗಿ ಕೇಳಿಕೊಂಡೆ. ಅವರ ಮನೆ ಎದುರಿಗಿನ ಅಂಗಳ, ಹಿಂಬದಿಯ ಹಿತ್ತಲೇ ನಮಗೆ ಕಲಿಯುವ ಜಾಗ. ಆ ಹೊತ್ತಿಗೆ ಅಣ್ಣನೂ ಇದ್ದನೆಂಬ ನೆನಪು. ಇಬ್ಬರೂ ನನ್ನ ಸೀಟ್‌ಮೇಲೆ ಕೂರಿಸಿ ಹಿಂದಿರುವ ಕ್ಯಾರಿಯರ್‌ನ್ನು ಹಿಡಿದುಕೊಳ್ಳುತ್ತೇವೆ ನೀನು ಪೆಡಲ್ ತುಳಿ ಎಂದರು. ಭಯಭಯದಿಂದಲೇ ಹತ್ತಿ ಕುಳಿತು ಪೆಡೆಲ್ ತುಳಿಯುತ್ತಿದ್ದಹಾಗೆ ಮುಂದಕ್ಕೇನೋ ಸೈಕಲ್ ಹೋಯಿತು, ಸ್ವಲ್ಪ ದೂರ ಹೋದಮೇಲೆ ಹಿಂದಿರುಗಿ ನೋಡಿದರೆ ಇಬ್ಬರೂ ಇಲ್ಲ,. ಹೆದರಿಕೆಯಾಗಿ ಒಂದು ಬಿದಿರು ಮಟ್ಟಿಗೆ ಹೋಗಿ ಸೈಕಲ್ ಸಮೇತಬಿದ್ದೆ. ಕೈ, ಕಾಲೆಲ್ಲ ತರಚಿಕೊಂಡವು. ಇವರಿಬ್ಬರೂ ಹೋ ಎಂದು ನಗುತ್ತಿದ್ದರೆ ನಂಗೆ ಸಿಟ್ಟು ನೆತ್ತಿಗೇರಿ, “ನಾ ಕಲತೇ ಕಲೀತಿ, ಅದೆಂಥ ಮಾಡತ್ರೋ ಮಾಡಕ್ಯಳಿ ನಿಂಗ’ ಎಂದು ಸವಾಲು ಹಾಕಿದೆ.

ಆಗ ಇಬ್ಬರೂ ಸಮಾಧಾನಿಸುವಂತೆ, “ಮೊದ್ಲು ಒಳಪೆಡ್ಲು ಹೊಡಿಯೋದು ಕಲಿ, ಕಡೀಗೆ ಪಡೆಲ್ ಹೊಡೆಯೋದು ಕಲಿಯವು’ ಎಂದರು. ಈ ಹುಡುಗರಿಬ್ಬರಿಗೆ ಇಷ್ಟು ಬೇಗ ಸೈಕಲ್ ಹೊಡೆಯಲು ಬರೋದಾದ್ರೆ ನಂಗ್ಯಾಕೆ ಬರೋದಿಲ್ಲ ಎಂಬುದೊಂದೇ ಪ್ರಶ್ನೆ ನನ್ನ ಕಾಡಿತು. ಅವತ್ತು ರಾತ್ರಿಯೆಲ್ಲ ಸೈಕಲ್‌ನದೇ ಕನಸು.

ಮಾರನೇ ದಿನ ಮನೆಗೆ ಬಂದವಳು ಸೀದಾ ಬಾಡಿಗೆ ಸೈಕಲ್ ಅಂಗಡಿಗೆ ಹೋದೆ. ಒಂದು ತಾಸಿಗೆ ನಾಕಾಣೆಯೋ, ಎಂಟಾಣೆಯೋ ಇತ್ತು. ದುಡುಕೊಟ್ಟು ಸೈಕಲ್ ತಂದು, ಇವರು ಹೇಳುವಂತೆ ನಿಧಾನಕ್ಕೆ ಒಳಪೆಡಲು ಹೊಡೆಯೋದು ಕಲಿತೆ. ಅಷ್ಟೊತ್ತಿಗೆ ಅಕ್ಕಪಕ್ಕದ ಹೆಣ್ಣುಹುಡುಗೀರೆಲ್ಲ ನಾ ಒಳಪೆಡಲು ಹೊಡಿಯೋ ಕಸರತ್ತು ನೋಡುತ್ತ ನಿಲ್ಲುತ್ತಿದ್ದರು ಅವರವರ ಮನೆಯ ಅಂಗಳದಲ್ಲಿ ಮತ್ತು ಜಗುಲಿಯ ಕಿಟಕಿಯ ಹಿಂದೆ.
ಎದುರಿಗಿನ ಸಿ.ಆರ್.ಹಾಲ್ ಮೈದಾನದಲ್ಲಿ ಸೈಕಲ್ ಒಳಪೆಡಲು ಹೊಡೆಯಲು ಶುರುಮಾಡಿದೆ.

ಒಂದೆರೆಡು ದಿನಗಳಾದ ಮೇಲೆ ನನಗೆ ಸಾತ್ ನೀಡಿದವಳು ಪಕ್ಕದ ಮನೆಯಲ್ಲಿ ಬಾಡಿಗೆಗೆ ರೂಂ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದ ತಾರುಗೋಡು ಪ್ರೇಮಾ. ಇಬ್ಬರೂ ಸೇರಿ ಪ್ರಾಕ್ಟೀಸು ಮಾಡುವಾಗಲೆಲ್ಲ ಒಂದಷ್ಟು ಹುಡುಗರು ಬಂದು ಚುಡಾಯಿಸುತ್ತಿದ್ದರು. ಅವರಿಗೂ ಒಂದಷ್ಟು ಬೈದುಕೊಂಡೇ ನಮ್ಮ ಪ್ರಾಕ್ಟೀಸು ಸಾಗಿತು. ಅಂತೂ ಇಂತೂ ನಂಗೆ ಒಳಪೆಡಲು ಹೊಡೆಯಲು ಬಂದುಬಿಟ್ಟಿತು. ಪ್ರೇಮಾಗಿನ್ನೂ ಬಂದಿರಲಿಲ್ಲ. ಅವತ್ತಿನ ಖುಷಿ ಹೇಳತೀರದ್ದದು, ಸೀದಾ ಪ್ರೇಮಾನ ರೂಮಿಗೆ ಹೋಗಿ, “ಎಂಗೆ ಒಳಪೆಡಲು ಹೊಡ್ಯಲು ಬಂತೇ’ ಎಂದೆ. ಮಾರನೇ ದಿನ ಬೆಳಗಾಗೋದನ್ನೇ ಕಾಯುತ್ತಿದ್ದೆ. ಬೆಳಗ್ಗೆ ತಿಂಡಿ ಒಂದು ತಿಂದಕಂಡು ಸೀದ ಬಾಡಿಗೆ ಸೈಕಲ್ ಅಂಗಡಿಗೆ ಓಡಿದೆ. ಸೈಕಲ್ ತಗಂಡು ಒಳಪೆಡಲು ಹೊಡೆಯೋದನ್ನು ಪ್ರೇಮಂಗೆ ಮತ್ತು ಇತರ ಹುಡುಗೀರಿಗೆಲ್ಲ ತೋರಿಸಿಬಿಡಬೇಕೆಂಬ ತವಕ.

ಒಂದು ಗಿಡ್ಡ ಸ್ಕರ್ಟ್, ಮೇಲೊಂದು ಬ್ಲೌಸ್ ಹಾಕಿಕೊಂಡ ನನ್ನ ಸೈಕಲ್ ಸವಾರಿ ಹೊರಟಿತು ಸಿದ್ದಾಪುರದ ನಮ್ಮನೆಯ ಎದುರಿಗಿನ ಬೀದಿಯಲ್ಲಿ. ಪ್ರೇಮ ಮತ್ತು ಅಕ್ಕಪಕ್ಕದ ಮನೆಯ ಹುಡುಗಿಯರೆಲ್ಲ ಬಂದು ನೋಡತೊಡಗಿದರು ಯಾವುದೋ ಒಂದು ಕೌತುಕವೇ ರಸ್ತೆಯಲ್ಲಿ ನಡೆಯುತ್ತಿರುವಂತೆ. ನಂಗೋ ಯಾರಿಗೂ ಬಾರದ್ದು ನಂಗೆ ಬಂದುಬಿಟ್ಟಿದೆ ಎಂಬ ಗರ್ವ. ಅದಕ್ಕೇ ಒಳಪೆಡಲು ತುಳಿಯುತ್ತ ಎದುರಿಗೆ ರಸ್ತೆ ನೋಡುವುದರ ಬದಲು ಪಕ್ಕಕ್ಕೆ ತಿರುಗಿ ಈ ಪ್ರೇಮಾ ಮತ್ತು ಸಂಗಡಿಗರನ್ನು ನೋಡುತ್ತ ಗರ್ವದಿಂದ ಸೈಕಲ್ ತುಳಿದೆ. ರಸ್ತೆ ನೋಡದೇ ಎಲ್ಲೋ ನೋಡಿದ್ದರ ಪರಿಣಾಮ, ನನ್ನ ಸೈಕಲ್ ರಸ್ತೆ ಪಕ್ಕದಲ್ಲಿರೋ ಒಂದು ಕೊಡ್ಲು, ಅದರೊಳಗಿದ್ದ ಬೂದಿ ಗುಪ್ಪೆಗೆ ಹೋಗಿ ಬಿದ್ದು, ಮೈತುಂಬ ಬೂದಿ ಮೆತ್ತಿಕೊಂಡಿತು, ಮಲ್ಲಂಡೆ (ಮೊಣಕಾಲು) ಕೆತ್ತಿ ರಕ್ತ ಬರತೊಡಗಿತು.

ತಕ್ಷಣ ಎದ್ದು ನಂಗೇನಾಯಿತು ಅನ್ನೋದಕ್ಕಿಂತ ಸೈಕಲ್ಲಿಗೇನಾಯ್ತು ಎಂದು ನೋಡಿಕೊಂಡೆ. ಬಾಡಿಗೆಗೆ ತಂದ ಸೈಕಲ್ಲದು, ಯಾವುದಾದರೂ ಪಾರ್ಟ್ ಮುರಿದು ಹೋದರೆ ಎಂಬ ಭಯ. ಸದ್ಯ, ಏನೂ ಆಗಿರಲಿಲ್ಲ. ಕೈಕಾಲಿನ ಉರಿಯನ್ನೂ ಲೆಕ್ಕಿಸದೆ ಸೈಕಲನ್ನು ರಸ್ತೆಗೆ ತಂದು ನಿಲ್ಲಿಸಿದೆ. ನನ್ನ ಅವಸ್ಥೆಯನ್ನು ನೋಡಿ ಪ್ರೇಮಾ ಸೇರಿದಂತೆ ಎಲ್ಲರೂ ನಗುತ್ತಿದ್ದರು. ಮುಖ, ಮೈ, ತಲೆ ಎಲ್ಲ ಬೂದಿ ಮುಚ್ಚಿದ ನನ್ನ ನೋಡುತ್ತಿದ್ದಂತೆ ಸೈಕಲ್ ಅಂಗಡಿಯವನಿಗೆ ತಿಳಿದುಹೋಯಿತು, “ಬೂದಿಗುಪ್ಪೇಲಿ ಬಿದ್ದೀ… ಅದಿಕ್ಕೆ ಹೇಳದು, ಯಾರು ಯಾವುದನ್ನು ಕಲೀಬೇಕೋ ಅದನ್ನೇ ಕಲೀಬೇಕು’ ಎಂದು ಹಂಗಿಸಿದ. ಅವನ ಹಂಗಿಸಿದ್ದು, ಪ್ರೇಮಾ ಮತ್ತಿತರ ಗೆಳತಿಯರೆಲ್ಲ ನಕ್ಕಿದ್ದು ಎಲ್ಲವೂ ನೆನಪಾಗಿ ಮತ್ತೂ ಸಿಟ್ಟು ಬಂದು ಏನಾದ್ರಾಗಲಿ, ಈ ಸೈಕಲ್ ಓಡಿಸುವುದನ್ನು ಕಲಿಯಲೇ ಬೇಕೆಂಬ ಹಠಕ್ಕೆ ಬಿದ್ದೆ.

ಅವತ್ತು ಅಜ್ಜನ ಮನೆಯಿಂದ ನನ್ನ ಮಾವ ಬಂದವನು “ಸೈಕಲ್ ಕಲಿಯೋವಾಗ ಕೆಳಕ್ಕೆ ಬಿದ್ದು ಮಲ್ಲಂಡೆ ಕೆತ್ತಿಕ್ಯಂಡು ಹೊರ್ತೂವ ಸೈಕಲ್ ಬತ್ತಲ್ಲೆ ತಿಳ್ಕಾ’ ಎಂದು ಟಿಪ್ಸ್ ನೀಡಿದ. ಓಹೋ, ನಾ ಬಿದ್ದದ್ದೇನು ದೊಡ್ಡದಲ್ಲ ಬಿಡು ಎಂದುಕೊಂಡೆ.

“ಅಲ್ಲ, ಆ ‘ವಸಂತ ಗೀತ’ ಸಿನಿಮಾದಲ್ಲಿ ರಾಜಕುಮಾರ ಹೇಳಿಕೊಟ್ರೆ ಆ ಗಾಯತ್ರಿ ಎಷ್ಟು ಬೇಗ ಕಲಿತುಬಿಡ್ಚು. ಒಂದು ದಿವಸಕ್ಕೇ ಸೈಕಲ್ ಹೊಡೀತೂ…’ಎಂದು ಕಿಚಾಯ್ಸಿದ ಗಣಪತಿ.
“ಹೌದಾ, ಅದು ಸಿನಿಮಾ ಮತ್ತು ರಾಜಕುಮಾರನ ಹಂಗೇಯ ನೀನೂ ಎಂಗೆ ಕಲ್ಸಿಕೊಡಕಾಗಿತ್ತಾ..’ ಎಂದು ಜೋರು ಮಾಡಿ ಎದ್ದು ಹೋದೆ.
“ಎಂತಕ್ಕಾದ್ರೂ ಈ ಸೈಕಲ್ ಕಲಿಯೋ ಹುಚ್ಚು ಬಂತಾ ಇದಕ್ಕೆ ಮಾರಾಯ’ ಎಂದು ಅಮ್ಮ ತಲೆ ಚಚ್ಚಿಕೊಂಡಳು.
ಆಗ ಅಣ್ಣ ಕಾಲೇಜಿಗೆ ದಿನಾ ಸೈಕಲ್ ಮೇಲೆ ಹೋಗಿಬಂದು ಮಾಡುತ್ತಿದ್ದ. ನಾನೂ ಕಾಲೇಜಿಗೆ ಹೋಗುವಷ್ಟರಲ್ಲಿ ಸೈಕಲ್ ಕಲಿತು ಕಾಲೇಜಿಗೆ ಹೋಗಲೇ ಬೇಕು ಎಂದು ಪಣತೊಟ್ಟಿದ್ದೆ.

ಹೀಗೆ ದಿನಾ ಪ್ರಾಕ್ಟೀಸ್ ಮಾಡಿ, ಮಾಡಿ ಅಂತೂ ಸೈಕಲ್ ಓಡಿಸುವುದನ್ನು ಕಲಿತೇ ಬಿಟ್ಟೆ. ಅಬ್ಬಾ, ಅವತ್ತು ರಾತ್ರಿ ಮಲಗಿದಾಗಲೂ ಸೈಕಲ್ ಓಡಿಸುತ್ತಿರುವಷ್ಟೇ ಹಗುರವಾಗುತ್ತಿದ್ದೆ. ಮೊದಲ ಬಾರಿ ಈಜು ಕಲಿತಿದ್ದು ಮತ್ತು ಮೊದಲ ಬಾರಿ ಸೈಕಲ್ ಕಲಿತಾಗ ಎರಡೂ ಸಲ ನಂಗೆ ರಾತ್ರಿ ಇಷ್ಟೇ ಹಗುರಾಗಿದ್ದ ನೆನಪಿದೆ. ಗಾಳಿಯಲ್ಲಿ ತೇಲಿದಂಥ ಅನುಭವ.

ಮಾರನೇ ದಿನದಿಂದ ಪ್ರತಿದಿವಸ ಸೈಕಲ್ ಪ್ರಾಕ್ಟೀಸು. ಆಗ ನನ್ನೊಂದಿಗೆ ಪಕ್ಕದ ಮನೆಯ ಮಮತಕ್ಕ, ಪ್ರೇಮಾ, ಸುಧಾ, ರೇಖಾ ಸೇರಿ ಒಂದಿಷ್ಟು ಹುಡುಗಿಯರು ಸೇರಿಕೊಂಡರು. ಒಮ್ಮೆಯಿನ್ನೂ ನೆನಪಿದೆ. ಬಾಲಿಕೊಪ್ಪಕ್ಕೆ ಹೋಗುವ ರಸ್ತೆಯಲ್ಲಿ ಸ್ವಲ್ಪ ಏರು ಇದೆ. ಅಲ್ಲಿ ಸೈಕಲ್ ಹತ್ತಿಸುವುದು ಸ್ವಲ್ಪ ಕಷ್ಟ. ಅದಕ್ಕೆ ಅಲ್ಲಿ ಬಲವಾಗಿ ಪೆಡೆಲ್ ತುಳಿದು ಸೈಕಲ್ ಏರಿಸುತ್ತಿದ್ದೆ. ನನ್ನ ಪೆಡೆಲ್ ತುಳಿಯುವ ಗತಿಗನುಗುಣವಾಗಿ ಒಂದಿಬ್ಬರು ಪಡ್ಡೆ ಹುಡುಗರು ಊಂ…ಊಂ…ಎಂದು ಉಚ್ಚರಿಸಿ ಗೇಲಿ ಮಾಡುತ್ತಿದ್ದರು.

ಒಮ್ಮೆ ನನ್ನ ಅಮ್ಮಮ್ಮ ನಮ್ಮನೆಗೆ ಬಂದಿದ್ದಳು. ಅವಳ ಬಳಿ ಅಮ್ಮ, “ನೋಡು ಅಮ್ಮಾ, ಸೈಕಲ್ ಹೊಡೀತ ಇವ, ಗಂಡುಹುಡಗ್ರ ಹಾಡು’ ಎಂದು ಪುಕಾರು ಮಾಡಿದಳು. ಅಮ್ಮಮ್ಮನೂ, “ಅಲ್ದೇ, ಹುಡುಗ್ರ ಹಂಗೆ ಸೈಕಲ್ ಹೊಡೀತ್ಯಲೇ, ನಾಚಿಕೆ ಆಗತಿಲ್ಯನೇ’ ಎಂದು ಬೈದಳು. ನನ್ನ ದೊಡ್ಡಮ್ಮ, “ಸಿದ್ದಾಪುರ ಪ್ಯಾಟೇಲಿ ಸೈಕಲ್ ಹೊಡೀತ್ಲಡ ಇವ’ ಎಂದು ಅಜ್ಜನ ಮನೆಯ ಸಮಾರಂಭವೊಂದರಲ್ಲಿ ಭಯಂಕರ ಸುದ್ದಿ ಮಾಡಿದ್ದಳು. ಯಾರೇನೇ ಹೇಳಿದ್ರು ನನ್ನ ಸೈಕಲ್ ಪಯಣ ಮಾತ್ರ ನಿಲ್ಲಿಸಲಿಲ್ಲ.

ಒಮ್ಮೆ ಅಜ್ಜ ಬಂದಾಗ, ಅವನ ಮುಂದೆ ಸೈಕಲ್ ಹೊಡೆದು ತೋರಿಸಿದ್ದೆ. ಅಜ್ಜ ಅಣ್ಣನಬಳಿ “ನೋಡಿದ್ಯನಾ ಸುಬ್ಬಮ್ಮನ್ನಾ… ಹ್ಯಾಂಗೆ ಸೈಕಲ್ ಹೊಡೀತಾ ಹೇಳಿ’ ಎಂದು ಹೆಮ್ಮೆಯಿಂದ ಹೇಳಿದ್ದು ಇನ್ನೂ ನೆನಪಿದೆ. (ಆಗ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿ ತುಂಬಾ ಫೇಮಸ್ ಆಗಿತ್ತು. ಅದನ್ನು ಓದಿದ ಮೇಲೆ ಅಜ್ಜ ನಂಗೆ ಸುಬ್ಬಮ್ಮ ಹೆಗ್ಗಡತಿ ಎಂದು ಹೆಸರಿಟ್ಟಿದ್ದ. ಅವನೆಂದೂ ನಂಗೆ ಹೆಸರು ಹಿಡಿದು ಕರೆಯಲೇ ಇಲ್ಲ. ಕಡೇವರೆಗೂ ಸುಬ್ಬಮ್ಮ ಎಂದೇ ಕರೆಯುತ್ತಿದ್ದ.)

ಕೆಲವು ದಿವಸಗಳ ನಂತರ ದೀಪಾವಳಿ ಹಬ್ಬಕ್ಕೆ ಅಜ್ಜನ ಮನೆಗೆ ಹೋಗಿದ್ದೆ. ಅಲ್ಲಿ ಮಾವನ ಸೈಕಲ್ ಇತ್ತು. ನನ್ನ ಮಾವನ ಮಗನಿಗೆ ಸೈಕಲ್ ಓಡಿಸಲು ಬರುತ್ತಿರಲಿಲ್ಲ. ಅದಕ್ಕೆ ಅಜ್ಜ, “ಸುಬ್ಬಮ್ಮನ್ನ ನೋಡೋ, ಸಿದ್ದಾಪುರ ಪ್ಯಾಟೇಲಿ ಹ್ಯಾಂಗೆ ಸೈಕಲ್ ಹೊಡೀತ ಗೊತ್ತಿದ್ದನು, ಗಂಡ್ಸು ನೀನು, ನಿಂಗೆ ಸೈಕಲ್ ಬಿಡಲೆ ಬತ್ತಿಲ್ಯನಾ’ ಎಂದು ಹಂಗಿಸಿ ಹೇಳಿದಾಗ ಒಳಗೊಳಗೇ ಅದೆಂಥದ್ದೋ ಖುಷಿ ನಂಗೆ. ಯಾರೂ ಸಾಧಿಸಲಾರದ್ದನ್ನು ನೇನೇನೋ ಸಾಧಿಸಿಬಿಟ್ಟೆ ಎಂದು.

ಅದರಲ್ಲೂ ಅದುವರೆಗೆ ಸೈಕಲ್ ಓಡಿಸುವ ಕುರಿತು ಎಲ್ಲರೂ ನನ್ನ ಬೈದವರೇ. ಇವನಾದ್ರೂ ನನ್ನ ಬೆಂಬಲಕ್ಕಿದ್ದಾನಲ್ಲ ಎಂಬೊಂದು ಸಮಾಧಾನ. ಅದಕ್ಕೆ ಮಾವನ ಸೈಕಲ್ ಅನ್ನು ಅಂಗಳದ ತುಂಬೆಲ್ಲ ಓಡಿಸಿದ್ದೇ ಓಡಿಸಿದ್ದು. ದೀಪಾವಳಿ ಹಬ್ಬದ ಮಾರನೇ ದಿನ ಹಬ್ಬ ಹಾಡುವವರು ಬರುತ್ತಿದ್ದರು, ನಾನವತ್ತು ಅಜ್ಜನ ಮನೆಯ ರಸ್ತೆಯಲ್ಲಿ ಸೈಕಲ್ ಹೊಡೆದುಕೊಂಡು ಹೋಗುತ್ತಿದ್ದರೆ, ಈ ಹಬ್ಬ ಹಾಡುವವರೆಲ್ಲ ಸಾಲಾಗಿ ನಿಂತು ನೋಡಿದ್ದು ಇನ್ನೂ ನೆನಪಿನಲ್ಲಿದೆ.

ನಂತರ ನಾನು ಎಸ್ಸೆಸ್ಸೆಲ್ಸಿಗೆ ಬರುವಷ್ಟರಲ್ಲಿ ಅಲ್ಲಲ್ಲಿ ಸೈಕಲ್ ಓಡಿಸುವ ಹುಡುಗಿಯರು ಕಂಡು ಬಂದರು. ಆದರೆ ಯಾರೊಬ್ಬರೂ ಹೈಸ್ಕೂಲಿಗೆ ಕಾಲೇಜಿಗೆ ತರುತ್ತಿರಲಿಲ್ಲ. ಹೀಗೇ ಪುರುಸೊತ್ತಿದ್ದಾಗ ಖಯಾಲಿಗಾಗಿ ಓಡಿಸುತ್ತಿದ್ದರು ಅಷ್ಟೇ. ಎಸ್‌ಎಸ್‌ಎಲ್ಸಿ ಪರೀಕ್ಷೆಗೆ ನಮ್ಮನ್ನೆಲ್ಲ ಸಿದ್ದಾಪುರದಿಂದ ೨ ಕಿ.ಮೀ. ದೂರದಲ್ಲಿರುವ ಕಾಲೇಜಿಗೆ ಹಾಕಿದ್ದರು. ಪಕ್ಕದ ಮನೆಯ ರೇಖಾ ಮತ್ತು ನಾನೂ ಇಬ್ಬರೂ ಪರೀಕ್ಷೆಗೆ ಸೈಕಲ್ ಮೇಲೆ ಹೋಗೋಣ ಎಂದು ಮಾತಾಡಿಕೊಂಡೆವು.

ಮುಂಚಿನ ದಿವಸ ಸಂಜೆ ಪ್ರಾಕ್ಟೀಸಿಗೆಂದು ಅಣ್ಣನ ಸೈಕಲ್‌ನ್ನು ತೆಗೆದುಕೊಂಡು ಹೋದೆ. ಸೈಕಲ್ ಹೊಡೆಯೋಕೆ ಬರುತ್ತಿತ್ತು. ಆದರೆ ಎದುರಿಗೆ ಯಾವುದಾದರೂ ವಾಹನ ಬಂದ್ರೆ ಸೈಡ್ ಕೊಡೋಕೆ ನಂಗೆ ಬರುತ್ತಿರಲಿಲ್ಲ. ಸೈಕಲ್ ಓಡಿಸುತ್ತಾ ಸ್ವಲ್ಪದೂರ ಹೋಗಿರಬಹುದು, ಎದುರಿಗೆ ಒಂದು ಕೆಂಪು ಬಸ್ಸು ಬರುತ್ತಿತ್ತು. ಆ ಬಸ್ಸು ಒಂಥರ ನನ್ನೇ ನುಂಗೋಕೆ ಬರುತ್ತಿರುವ ಹಾಗನಿಸಿ, ನಂಗೀಗ ಸೈಡ್ ಕೊಡಲು ಬರುವುದಿಲ್ಲವೆಂದು ಭಯವಾಗಿ ಕಿರುಚಿ ನಿಂತುಬಿಟ್ಟೆ. ಈ ಭಯ ಇಟ್ಟುಕೊಂಡು ಪರೀಕ್ಷೆಗೆ ಹೋಗುವುದು ಬೇಡವೆಂದು ನಡೆದೇ ಹೋಗಿ ಪರೀಕ್ಷೆ ಬರೆದು ಬಂದೆ.

ಒಟ್ಟಿನಲ್ಲಿ ಸಿದ್ದಾಪುರದಲ್ಲಿ ಸೈಕಲ್ ಕಲಿತು ಓಡಿಸಿದ ಮೊದಲ ಗ್ಯಾಂಗು ನಮ್ಮದೇ ಇರಬಹುದು. ನಮಗಿಂತಲೂ ಮುಂಚೆ ಸೈಕಲ್ ಓಡಿಸಿದ ಹುಡುಗಿಯರನ್ನು ನಾನು ನೋಡಿರಲಿಲ್ಲ. ಆ ಗ್ಯಾಂಗಲ್ಲಿ ಪ್ರೇಮಾ, ಮಮತಕ್ಕ, ರೇಖಾ ಎಲ್ಲ ಇದ್ದರು.

ಇಷ್ಟೆಲ್ಲ ಆಗಿ ಸಿದ್ದಾಪುರದಲ್ಲಿ ಅಣ್ಣನ ಕಾಲೇಜು ಮುಗಿದ ಮೇಲೆ ಸೈಕಲ್ ಮೂಲೆಗೆ ಸೇರಿತು. ಆದರೆ ನಾನು ಕಾಲೇಜಿಗೆ ಹೋಗುವ ಹೊತ್ತಿಗೆ ನನಗೆ ಸೈಕಲ್ಲೂ ಇಲ್ಲ ಎಂತದೂ ಇಲ್ಲ, ಕಾಲೇಜಿಗೆ ನಡೆದೇ ಹೋಗಿ ಡಿಗ್ರಿ ಮುಗಿಸಿದೆ.

‍ಲೇಖಕರು avadhi

April 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: